ಸಚಿವ ನಾಗೇಂದ್ರಗೆ ಹೊರರಾಜ್ಯ ಪ್ರಯಾಣಕ್ಕಿದ್ದ ನಿರ್ಬಂಧ ತೆರವು

Published : Aug 11, 2026, 05:27 AM IST
B Nagendra

ಸಾರಾಂಶ

ಸದ್ಯ ಸಂಪುಟ ಸಚಿವರಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆ ವಾಲ್ಮೀಕಿ ನಿಗಮ ಪ್ರಕರಣದ ಆರೋಪಿ ಸಚಿವ ಬಿ.ನಾಗೇಂದ್ರ ವಿರುದ್ಧದ ನಿರ್ಬಂಧ ತೆಗೆದುಹಾಕಿರುವ ಹೈಕೋರ್ಟ್‌, ಅವರು ದೇಶಾದ್ಯಂತ ಸಂಚರಿಸಲು ಅನುಮತಿ ನೀಡಿ ಆದೇಶ ಮಾಡಿದೆ.

ಬೆಂಗಳೂರು : ವಾಲ್ಮೀಕಿ ನಿಗಮ ಪ್ರಕರಣದ ಆರೋಪಿ ಸಚಿವ ಬಿ.ನಾಗೇಂದ್ರ ವಿರುದ್ಧದ ನಿರ್ಬಂಧ ತೆಗೆದುಹಾಕಿರುವ ಹೈಕೋರ್ಟ್‌, ಅವರು ದೇಶಾದ್ಯಂತ ಸಂಚರಿಸಲು ಅನುಮತಿ ನೀಡಿ ಆದೇಶ ಮಾಡಿದೆ.

ಪ್ರಕರಣದಲ್ಲಿ ಬಿ.ನಾಗೇಂದ್ರ ಅವರಿಗೆ ಜಾಮೀನು ಮಂಜೂರು ಮಾಡಿದ ಸಂದರ್ಭದಲ್ಲಿ ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ರಾಜ್ಯಬಿಟ್ಟು ತೆರಳುವಂತಿಲ್ಲ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತು ವಿಧಿಸಿತ್ತು. ಸದ್ಯ ಸಂಪುಟ ಸಚಿವರಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಅಧಿಕೃತ ಕರ್ತವ್ಯ ನಿರ್ವಹಣೆಗಾಗಿ ರಾಜ್ಯಬಿಟ್ಟು ಹೊರಗೆ ಪ್ರಯಾಣಿಸಬೇಕಾಗುತ್ತದೆ. ಹಾಗಾಗಿ, ರಾಜ್ಯಬಿಟ್ಟು ತೆರಳುವಂತಿಲ್ಲ ಎಂಬ ಷರತ್ತು ಸಡಿಲಿಸಬೇಕು. ದೆಹಲಿಗೆ ಪ್ರಯಾಣಿಸಲು ಅನುಮತಿ ನೀಡಬೇಕು ಎಂದು ಕೋರಿ ನಾಗೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ ಸಚಿವ ನಾಗೇಂದ್ರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಷರತ್ತಿಗೆ ತಡೆಯಾಜ್ಞೆ

ಅರ್ಜಿ ವಿಚಾರಣೆ ನೆಡಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಅರ್ಜಿದಾರರು ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ರಾಜ್ಯಬಿಟ್ಟು ತೆರಳುವಂತಿಲ್ಲ ಎಂದು ವಿಶೇಷ ನ್ಯಾಯಾಲಯ ವಿಧಿಸಿದ್ದ ಷರತ್ತಿಗೆ ತಡೆಯಾಜ್ಞೆ ನೀಡಿತು. ನಾಗೇಂದ್ರ ಅವರು ದೇಶದಾದ್ಯಂತ ಮಾತ್ರ ಪ್ರಯಾಣಿಸಬಹುದು. ಆದರೆ, ಹೊರದೇಶಕ್ಕೆ ಪ್ರಯಾಣಿಸುವಂತಿಲ್ಲ ಎಂದು ಆದೇಶ ಮಾಡಿದೆ. ನಂತರ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಸೂಚಿಸಿ ವಿಚಾರಣೆಯನ್ನು ಆ.12ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬಿ.ನಾಗೇಂದ್ರ ಅವರು ರಾಜ್ಯ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಸಚಿವರಾಗಿರುವ ಹಿನ್ನೆಲೆಯಲ್ಲಿ ತಮ್ಮ ಅಧಿಕೃತ ಕರ್ತವ್ಯ ನಿರ್ವಹಣೆ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಮೀರಿ ಪ್ರಯಾಣಿಸಬೇಕಾಗುತ್ತದೆ. ಅವರನ್ನು ಸಂಪುಟಕ್ಕೆ ಸೇರಿರುವ ಮೊದಲೇ, ರಾಜ್ಯಬಿಟ್ಟು ಹೊರಗೆ ಪ್ರಯಾಣಿಸುವಂತಿಲ್ಲ ಎಂಬುದಾಗಿ ಷರತ್ತು ವಿಧಿಸಲಾಗಿತ್ತು. ಆ ಷರತ್ತನ್ನು ಸಡಿಲಿಸಬೇಕು ಎಂದು ಕೋರಿದರು.

ದೇಶ ಬಿಟ್ಟು ಹೋಗುವಂತಿಲ್ಲ:

ಈ ವಾದ ಪರಿಗಣಿಸಿದ ನ್ಯಾಯಪೀಠ, ಸದ್ಯ ನಾಗೇಂದ್ರ ಅವರು ರಾಜ್ಯ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಸಚಿವರಾಗಿರುವ ಹಿನ್ನೆಲೆಯಲ್ಲಿ ಈ ಷರತ್ತು ನಿಸ್ಸಂದೇಹವಾಗಿ ನಾಗೇಂದ್ರ ಸ್ಥಾನಕ್ಕೆ ಮಾತ್ರವಲ್ಲದೆ, ಅವರ ಅಧಿಕೃತ ಕರ್ತವ್ಯಗಳ ನಿರ್ವಹಣೆಗೂ ಧಕ್ಕೆ ಉಂಟು ಮಾಡಲಿದೆ. ಈ ದೃಷ್ಟಿಯಲ್ಲಿ ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ರಾಜ್ಯವನ್ನು ಬಿಟ್ಟು ಹೊರಹೋಗುವಂತಿಲ್ಲ ಎಂಬುದಾಗಿ ವಿಧಿಸಲಾದ ಷರತ್ತು ಸಮರ್ಥನೀಯವಲ್ಲ. ಆದ್ದರಿಂದ ಈ ಷರತ್ತಿಗೆ ತಡೆಯಾಜ್ಞೆ ನೀಡಲಾಗುತ್ತಿದೆ. ಹಾಗಂತ ನಾಗೇಂದ್ರ ಅವರು ರಾಷ್ಟ್ರದ ಗಡಿ ಮೀರಿ ಪ್ರಯಾಣಿಸಬಹುದು ಎಂದು ಅರ್ಥವಲ್ಲ. ಅವರು ದೇಶದೊಳಗೆ ಮಾತ್ರ ಪ್ರಯಾಣಿಸಬೇಕು ಎಂದು ಆದೇಶಿಸಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಹಂಗಾಮಿ ಸಭಾಪತಿ ಆಗಿ ಪುಟ್ಟಣ್ಣ ನೇಮಕ : ಗೌರ್‍ನರ್‌
ಪಾದಯಾತ್ರೆಯಿಂದ ದೂರ ಇದ್ದದ್ದಕ್ಕೆ ರಾಜಕೀಯ ಕಾರಣವಿಲ್ಲ : ವಿಜಯೇಂದ್ರ