ನ್ಯಾ.ನಾಗಮೋಹನ್ ದಾಸ್ ವರದಿ ತಿರಸ್ಕರಿಸುವಂತೆ ಬಲಗೈ ಜಾತಿಗಳ ಒಕ್ಕೂಟ ಆಗ್ರಹ

KannadaprabhaNewsNetwork |  
Published : Mar 26, 2026, 03:45 AM ISTUpdated : Mar 26, 2026, 04:14 AM IST
Protest

ಸಾರಾಂಶ

ನ್ಯಾ.ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸಿ, ಹಳೇ ಮೀಸಲಾತಿ ನಿಯಮಗಳ ಅನ್ವಯ ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

 ಬೆಂಗಳೂರು :  ನ್ಯಾ.ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸಿ, ಹಳೇ ಮೀಸಲಾತಿ ನಿಯಮಗಳ ಅನ್ವಯ ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಬಸ್‌ಗಳಲ್ಲಿ ಆಗಮಿಸಿದ್ದ ಸಾವಿರಾರು ಜನರು ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿದ್ದರು.

ನಮ್ಮ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ಮಾಡಿ ಅನ್ಯಾಯ ಮಾಡಿರುವ ವರದಿಯನ್ನು ತಿರಸ್ಕರಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದಲ್ಲಿರುವ ಸಮುದಾಯದ ಮೂವರು ಸಚಿವರ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಖಂಡರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ರಾಜ್ಯದಲ್ಲಿ 60 ಲಕ್ಷಕ್ಕೂ ಹೆಚ್ಚು ಜನರು ಇರುವ ಸಮುದಾಯವನ್ನು ನ್ಯಾ. ನಾಗಮೋಹನ್ ದಾಸ್ ವರದಿಯಲ್ಲಿ ಛಿದ್ರ ಛಿದ್ರ ಮಾಡಿ ಕುಗ್ಗಿಸುವ ಕೆಲಸ ಮಾಡಲಾಗಿದೆ. ಈ ರೀತಿ ಮಾಡಲು ಕಾರಣ ಏನು? ಎಂಬುದನ್ನು ಅವರೇ ವಿವರಿಸಬೇಕು. ಈ ವಿಚಾರವಾಗಿ ನಾವು ನ್ಯಾಯಾಲಯದಲ್ಲಿ ಕಾನೂನಾತ್ಮಕವಾಗಿ ಹೋರಾಡುತ್ತೇವೆ. ಈಗಾಗಲೇ ಆರು ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.

ಅಲೆಮಾರಿಗಳಿಗೆ, ಸಿಳ್ಳೆಕ್ಯಾತರು, ಬುಡುಬುಡುಕೆಯವರು ಸೇರಿದಂತೆ ಅನೇಕ ಸಣ್ಣ ಸಮುದಾಯಗಳ ಜನರು ಪಂಚಾಯಿತಿ ಸದಸ್ಯರೂ ಆಗಿಲ್ಲ. ಅವರಿಗೆ ವರದಿಯಿಂದ ಅನ್ಯಾಯವಾಗಿದೆ. ನಾವು ಯಾರ ಹಕ್ಕುಗಳನ್ನು ಕಿತ್ತುಕೊಂಡಿಲ್ಲ. ಜೇನು ನೊಣಗಳಂತೆ ಒಟ್ಟಾಗಿ ಇದ್ದೆವು. ಒಬ್ಬರಿಗೊಬ್ಬರು ಹಂಚಿಕೊಂಡಿದ್ದವರು ಇಂದು ಒಬ್ಬರ ಮುಖ ಮತ್ತೊಬ್ಬರು ನೋಡಲು ಸಿದ್ದರಿಲ್ಲ. ಜೇನುಗೂಡಿಗೆ ಕಲ್ಲು ಹೊಡೆದವರು ಮುಂದಿನ ದಿನಗಳಲ್ಲಿ ಬೆಲೆತೆರಬೇಕಾಗುತ್ತದೆ. ನ್ಯಾಯದ ಹೆಸರಿನಲ್ಲಿ ಒಳ ಮೀಸಲಾತಿ ಮೂಲಕ ಸಮಾಜವನ್ನು ಒಡೆಯಬಾರದು ಎಂದು ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಸಮಾವೇಶ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ

ಬಲಗೈ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಸಿದ್ದಯ್ಯ ಮಾತನಾಡಿ, ಸುಪ್ರೀಂಕೋರ್ಟ್ ಆದೇಶದಂತೆ ಆಯೋಗ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿದ್ದರೆ ಈ ಸಮಾವೇಶ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಎಲ್ಲಾ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗದಿರುವ ಬಗ್ಗೆ ಖಚಿತವಾಗಿ ಅಂಕಿ-ಅಂಶಗಳ ಆಧಾರದ ನ್ಯಾಯಯುತವಾಗಿ ಒಳ ಮೀಸಲಾತಿ ವರ್ಗೀಕರಣ ಮಾಡಬೇಕು. ರಾಜಕೀಯ ಕಾರಣಕ್ಕೆ ಮನಸ್ಸಿಗೆ ಬಂದಂತೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ, ವರದಿಯಲ್ಲಿ ಅದು ಪಾಲನೆಯಾಗಿಲ್ಲ ಎಂದರು.

ಒಕ್ಕೂಟದ ಮುಖಂಡ ಚಂದ್ರಶೇಖರಯ್ಯ ಮಾತನಾಡಿ, ಸಮೀಕ್ಷೆ ವೇಳೆ ಸಮುದಾಯ ಭವನಗಳಲ್ಲಿ ಕುಳಿತು ಲೆಕ್ಕವನ್ನು ಹಾಕಲಾಗಿದೆ. ಸಮುದಾಯಗಳನ್ನು ನಿರ್ದಿಷ್ಟವಾಗಿ ಲೆಕ್ಕ ಹಾಕದೇ ಅಂದಾಜು ಸಂಖ್ಯೆಯನ್ನು ನಮೂದಿಸಲಾಗಿದೆ. ಶಾಲೆ ಬಿಟ್ಟ ಮಕ್ಕಳ ಸಂಖ್ಯೆಯಲ್ಲೂ ಕಡಿಮೆ ನಮೂದಿಸಲಾಗಿದೆ. ಈ ರೀತಿ ಅನೇಕ ಲೋಪ ದೋಷಗಳು ಆಯೋಗದ ವರದಿಯಲ್ಲಿವೆ ಎಂದು ಹೇಳಿದರು.

ಬಲಗೈ ಸಮುದಾಯದ ಸ್ವಾಮೀಜಿಗಳು, ರಾಜಕೀಯ ಮತ್ತು ವಿವಿಧ ವಲಯಗಳ ಮುಖಂಡರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು. 

ಸಾಧಕ ಬಾಧಕಗಳ ಬಗ್ಗೆ ವಿಸ್ತೃತ ಚರ್ಚೆ: ಸಚಿವ ಎಂ.ಬಿ. ಪಾಟೀಲ್

ಒಳ ಮೀಸಲಾತಿ ಸಂಬಂಧಿಸಿದಂತೆ ರಾಜ್ಯ ಸರಕಾರವು ಸಂಬಂಧಿಸಿದ ಎಲ್ಲಾ ಒಳಪಂಗಡಗಳ ಹಿತಾಸಕ್ತಿಯನ್ನೂ ಪರಿಗಣನೆಗೆ ತೆಗೆದುಕೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ ಪ್ರತಿಯೊಂದು ಸಾಧಕ ಬಾಧಕಗಳನ್ನು ವಿಸ್ತೃತವಾಗಿ ಚರ್ಚಿಸಲಾಗುವುದು. ನಂತರ ಎಲ್ಲರಿಗೂ ನ್ಯಾಯ ಸಿಗುವಂತಹ ಸೂತ್ರವನ್ನು ರೂಪಿಸಲಾಗುವುದು ಎಂದು ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೊಂದಿಗೆ ಪ್ರತಿಭಟನಾ ಸ್ಥಳಕ್ಕೆ ತೆರಳಿದ ಸಚಿವರು, ಮನವಿ ಪತ್ರ ಸ್ವೀಕರಿಸಿ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

25 ವರ್ಷದ ಭೂಸ್ವಾಧೀನ ಕಾನೂನು ಸಮರದಲ್ಲಿ ಎಪಿಎಂಸಿಗೆ ಜಯ
ಕಡುವಿನಕಟ್ಟೆ ಗ್ರಾಮದಲ್ಲಿ ಕೈ ನಾಯಕರು ಕಮಲಕ್ಕೆ