;Resize=(412,232))
ವಿಧಾನಸಭೆ : ರಾಜ್ಯದಲ್ಲಿ 2014-15 ರಿಂದ 2022-23ರವರೆಗಿನ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (ಐಪಿಡಿಎಸ್) ಅನುಷ್ಠಾನ ಅವಧಿಯಲ್ಲಿ ಕೇಂದ್ರ ಇಂಧನ ಇಲಾಖೆ ಅನುಮೋದಿಸಿದ್ದ ಮೊತ್ತಕ್ಕಿಂತ ವಿದ್ಯುತ್ ಸರಬರಾಜು ಕಂಪೆನಿಗಳು (ಎಸ್ಕಾಂಗಳು) 110.89 ಕೋಟಿ ರು. ಅಧಿಕ ವೆಚ್ಚ ಮಾಡಿರುವುದು ಸಿಎಜಿ ವರದಿಯಲ್ಲಿ ಬಹಿರಂಗಗೊಂಡಿದೆ.
ಗುರುವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳ ಪರವಾಗಿ ಸಚಿವ ಕೃಷ್ಣಬೈರೇಗೌಡ, ‘ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (ಐಪಿಡಿಎಸ್) ಅನುಷ್ಠಾನದ ಮೇಲಿನ’ ಭಾರತದ ಲೆಕ್ಕ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧಕರ ವರದಿ ಮಂಡಿಸಿದರು.
ವರದಿಯಲ್ಲಿ ಮುಖ್ಯವಾಗಿ ಕೇಂದ್ರ ಖರೀದಿ ದರಗಳಲ್ಲಿ ಸರಕು ಸಾಮಗ್ರಿ ಖರೀದಿಸದೇ ಇದ್ದ ಕಾರಣ 38.52 ಕೋಟಿ ರು. ಹಾಗೂ ದಾಖಲೆಗಳನ್ನು ಸಲ್ಲಿಸಲು ವಿಳಂಬ ಮಾಡಿದ್ದರಿಂದ ಸಾಲದ ಮೇಲೆ 5.45 ಕೋಟಿ ರು. ಹೆಚ್ಚುವರಿ ಬಡ್ಡಿ ಪಾವತಿ ಮಾಡಿರುವುದು ಪತ್ತೆಯಾಗಿದೆ.
2014-15 ರಿಂದ 2022-23ರ ಅವಧಿಯಲ್ಲಿ ಬೆಸ್ಕಾಂ, ಸೆಸ್ಕ್, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂಗಳು ಅನುಮೋದಿತ ವೆಚ್ಚಕ್ಕಿಂತ ಹೆಚ್ಚು ಖರ್ಚು ಮಾಡಿದ್ದೂ ಅಲ್ಲದೆ, ಫೀಡರ್‌ಗಳಿಗೆ ಮೀಟರ್ ಗಳನ್ನು ಅಳವಡಿಸುವ ಕಾಮಗಾರಿ ವಿಳಂಬದಿಂದ 12.80 ಕೋಟಿ ರು. ಅನುದಾನ ಪಡೆಯುವ ಅವಕಾಶ ತಪ್ಪಿ ಹೋಗಿದೆ. ಹೀಗಾಗಿ ಯೋಜನಾ ವೆಚ್ಚದ ಶೇ.15 ರಷ್ಟು ಹೆಚ್ಚುವರಿ ಅನುದಾನವನ್ನು ಕಳೆದುಕೊಂಡಿವೆ ಎಂದು ಹೇಳಲಾಗಿದೆ.
ಪಿಎಂಎ ವೆಚ್ಚ 6.87 ಕೋಟಿ ರು. ಸೇರಿ ಒಟ್ಟು 1,378.44 ಕೋಟಿ ರು. ಯೋಜನಾ ವೆಚ್ಚದ ಐಪಿಡಿಎಸ್ ಕಾಮಗಾರಿಗಳನ್ನು ಕೈಗೊಳ್ಳಲು ವಿದ್ಯುತ್ ಸರಬರಾಜು ಕಂಪನಿಗಳಿಗೆ ಕೇಂದ್ರ ಇಂಧನ ಇಲಾಖೆ ಅನುಮೋದಿಸಿತ್ತು. ಗುತ್ತಿಗೆದಾರರಿಗೆ 1,721.19 ಕೋಟಿ ರು. ಕಾಮಗಾರಿಯನ್ನು ಕೊಡಲಾಗಿತ್ತು. ಕೊನೆಗೆ ಎಸ್ಕಾಂಗಳು 1,489.33 ಕೋಟಿ ರು. ವೆಚ್ಚ ಭರಿಸಿದ್ದು, ಅನುಮೋದಿತ ವೆಚ್ಚಕ್ಕಿಂತ 110.89 ಕೋಟಿ ರು. ಹೆಚ್ಚುವರಿಯಾಗಿ ಖರ್ಚು ಮಾಡಿದಂತಾಗಿದೆ.
ಶೇ.60ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರದ ಬಂಡವಾಳ ಅನುದಾನಗಳಿಂದ ಭರಿಸಬೇಕಿತ್ತು. ಆದರೆ, ಬೆಸ್ಕಾಂ ಶೇ.51 ರಷ್ಟನ್ನು ಮಾತ್ರ ಅನುದಾನದಿಂದ ಭರಿಸಿದ್ದು, ಶೇ.13.3 ರಷ್ಟನ್ನು ಸ್ವಂತ ಹಣಕಾಸಿನಿಂದ ಭರಿಸಿದೆ. ಉಳಿದ ಶೇ.35.4 ರಷ್ಟನ್ನು ಭರಿಸಲು ಸಾಲ ಮಾಡಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸೌರ ಫಲಕ ಅಳವಡಿಕೆ, ಮೀಟರ್ ಅಳವಡಿಕೆ, ಉಪ-ಪ್ರಸರಣ ಮತ್ತು ವಿತರಣಾ ಜಾಲದ ಅಭಿವೃದ್ಧಿಯಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಕೇಂದ್ರ ಇಂಧನ ಇಲಾಖೆಯು ಐಪಿಡಿಎಸ್ ಅನ್ನು ಪರಿಚಯಿಸಿತು. ಜತೆಗೆ 66 ಕೆ.ವಿ., 33 ಕೆ.ವಿ. ಮತ್ತು 11 ಕೆ.ವಿ. ಮಾರ್ಗಗಳ ಜತೆಯಲ್ಲಿ ಹೊಸ ಉಪಕೇಂದ್ರಗಳ ನಿರ್ಮಾಣ, ಹೈಟೆನ್ಷನ್ ವಿದ್ಯುತ್ ಮಾರ್ಗಗಳ ನಿರ್ಮಾಣ, ವಿದ್ಯುತ್ ಕಳ್ಳತನ ತಪ್ಪಿಸಲು ಏರಿಯಲ್ ಬಂಚ್ಡ್ ಕೇಬಲ್ ಅಳವಡಿಕೆ ಸೇರಿ ಇನ್ನಿತರ ಕಾಮಗಾರಿಗಳನ್ನೂ ಕೈಗೊಳ್ಳಲು ಅವಕಾಶ ಕಲ್ಪಿಸಿತ್ತು.
ಇದಕ್ಕಾಗಿ ಒಟ್ಟಾರೆ ವೆಚ್ಚದ ಶೇ.60 ರಷ್ಟನ್ನು ಕೇಂದ್ರದ ಸರ್ಕಾರದ ಬಂಡವಾಳ ಅನುದಾನ, ಶೇ.30 ರಷ್ಟನ್ನು ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲ ಹಾಗೂ ಶೇ.10 ರಷ್ಟನ್ನು ಸ್ವಂತ ಹಣಕಾಸಿನಿಂದ ಭರಿಸುವ ಅವಕಾಶ ಕೊಟ್ಟಿದೆ. ಅಲ್ಲದೆ, ಕಾಮಗಾರಿಯ ಪ್ರಗತಿ ಆಧರಿಸಿ ವಿಸ್ತೃತ ಯೋಜನಾ ವರದಿಯ ಶೇ.15 ರಷ್ಟು ಹೆಚ್ಚುವರಿ ಅನುದಾನ ಪಡೆಯಲೂ ಅವಕಾಶವಿದೆ ಎಂದು ಹೇಳಲಾಗಿತ್ತು.