;Resize=(412,232))
ಸುವರ್ಣ ವಿಧಾನಸೌಧ : ಬಿಜೆಪಿ ಅವರು ಮಹಿಳಾ ವಿರೋಧಿಗಳು. ಹೀಗಾಗಿಯೇ ಶಕ್ತಿ, ಗೃಹಲಕ್ಷ್ಮಿಯಂತಹ ಮಹಿಳೆಯರಿಗೆ ಅನುಕೂಲವಾಗುವ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನಿಗಮಗಳಿಗೆ ಸರ್ಕಾರದಿಂದ ಅನುದಾನ ಪಾವತಿ ಬಾಕಿ ಉಳಿದಿರುವುದು ನಿಜ. ಅದನ್ನು ಸರ್ಕಾರ ಹಂತಹಂತವಾಗಿ ನಿಗಮಗಳಿಗೆ ನೀಡಲಿದೆ.
ಬಿಜೆಪಿ 2023ರಲ್ಲಿ ಅಧಿಕಾರ ಬಿಟ್ಟಾಗ ಸಾರಿಗೆ ನಿಗಮಗಳ ಮೇಲೆ ₹4 ಸಾವಿರ ಕೋಟಿ ಸಾಲದ ಹೊರೆ ಉಳಿಸಲಾಗಿತ್ತು. ಸಾರಿಗೆ ನೌಕರರಿಗೆ ವೇತನ ಹೆಚ್ಚಿಸುತ್ತೇವೆಂದು ವೇತನ ಬಾಕಿ ಉಳಿಸಿ ಹೋಗಿದ್ದಾರೆ. ಅವುಗಳ ಬಗ್ಗೆಯೂ ಬಿಜೆಪಿ ನಾಯಕರು ಮಾತನಾಡಬೇಕು. ಆದರೆ, ಮಹಿಳೆಯರಿಗೆ ಅನುಕೂಲವಾಗುವ ಶಕ್ತಿ, ಗೃಹಲಕ್ಷ್ಮಿ ಯೋಜನೆಗಳ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದ 4 ಸಾರಿಗೆ ನಿಗಮಗಳಿಗೆ ₹2,400 ಕೋಟಿ ವೆಚ್ಚದಲ್ಲಿ 5,800 ಬಸ್ ಖರೀದಿ ಮಾಡಲಾಗಿದೆ. ಇದೀಗ ₹1 ಸಾವಿರ ಕೋಟಿ ವೆಚ್ಚದಲ್ಲಿ 2 ಸಾವಿರ ಬಸ್‌ಗಳ ಖರೀದಿಗೆ ಸರ್ಕಾರ ಅನುಮೋದನೆ ನೀಡಿದೆ. 10 ಸಾವಿರ ಸಿಬ್ಬಂದಿ ನೇಮಕಾತಿ ಮಾಡಲಾಗಿದೆ. ಪಿಎಫ್ ಬಾಕಿ ಸೇರಿದಂತೆ ಬಿಜೆಪಿ ಸರ್ಕಾರ ಬಾಕಿ ಉಳಿಸಿದ್ದ ಸಾಲಗಳನ್ನು ತೀರಿಸಲು ₹2 ಸಾವಿರ ಕೋಟಿ ಬ್ಯಾಂಕ್ ಗ್ಯಾರಂಟಿ ನೀಡಿದೆ ಇದೆಲ್ಲ ಬಿಜೆಪಿ ಅವರಿಗೆ ಕಾಣಿಸುವುದಿಲ್ಲ ಎಂದರು.