ಮೋದಿ ಆಡಳಿತದಲ್ಲಿ ಸಬ್ ಕಾ ಸತ್ಯಾನಾಶ್ ಆಗಿದೆ: ಡಾ. ಖರ್ಗೆ

ಸಾರಾಂಶ

ತಮ್ಮ ಅಳಿಯ ರಾಧಾಕೃಷ್ಣ ದೊಡ್ಮನಿ ಕಣದಲ್ಲಿರುವ ಕಲಬುರಗಿ ಲೋಕಸಬೆ ಕ್ಷೇತ್ರದಲ್ಲಿ ಖರ್ಗೆ 4ನೇ ಸುತ್ತಿನ ಪ್ರಚಾರಕ್ಕೆ ಆಗಮಿಸಿ ವಾಡಿ ಹಾಗೂ ಕಮಲಾಪುರದಲ್ಲಿ ಬಿರುಸಿನ ಪ್ರಚಾರ ನಡೆಸಿ ಕಾಂಗ್ರೆಸ್‌ ಕೈ ಬಲಪಡಿಸುವಂತೆ ಜನರಲ್ಲಿ ಮನವಿ ಮಾಡಿದರು.

ವಾಡಿ :  ತಮ್ಮ ಅಳಿಯ ರಾಧಾಕೃಷ್ಣ ದೊಡ್ಮನಿ ಕಣದಲ್ಲಿರುವ ಕಲಬುರಗಿ ಲೋಕಸಬೆ ಕ್ಷೇತ್ರದಲ್ಲಿ ಖರ್ಗೆ 4ನೇ ಸುತ್ತಿನ ಪ್ರಚಾರಕ್ಕೆ ಆಗಮಿಸಿ ವಾಡಿ ಹಾಗೂ ಕಮಲಾಪುರದಲ್ಲಿ ಬಿರುಸಿನ ಪ್ರಚಾರ ನಡೆಸಿ ಕಾಂಗ್ರೆಸ್‌ ಕೈ ಬಲಪಡಿಸುವಂತೆ ಜನರಲ್ಲಿ ಮನವಿ ಮಾಡಿದರು.

ವಾಡಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಬಿಜೆಪಿ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ದೇಶದ ಯುವಕರು, ರೈತರು ಹಾಗೂ ಬಡವರು ಸಂಕಷ್ಟದಲ್ಲಿದ್ದಾರೆ. ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಆದರೂ ಪ್ರಧಾನಿ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಿದ್ದಾರೆ. ಇದು ಸಬ್ ಕಾ ಸಾಥ್ ಸಬ್ ಕಾ ಸತ್ಯಾನಾಶ್ ಆಗಿದೆ ಎಂದರು.

ಯುವಕರಿಗೆ ಉದ್ಯೋಗ ಒದಗಿಸಲು ಸರ್ಕಾರ ವಿಫಲವಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ಈಡೇರಿಲ್ಲ. ದಿನಬಳಕೆ‌ ವಸ್ತುಗಳು ಹಾಗೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಗಗನಕ್ಕೇರಿದೆ. ರೈತರು ಬಳಸುವ ರಸಗೊಬ್ಬರ ಬೆಲೆ ಏರುತ್ತಲೇ ಇದೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕಿದ್ದ ಮೋದಿ ಬರೀ ಸುಳ್ಳು ಹೇಳಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ ಎರಡು ಸಲ ಬಿಜೆಪಿಗೆ ಹಾಗೂ ಮೋದಿಗೆ ಓಟು ಹಾಕಿ ತಪ್ಪು ಮಾಡಿದ್ದೀರಿ. ಈಗ ಮತ್ತೆ ಅಂತಹ ತಪ್ಪು ಮಾಡಿದರೆ ನೀವು ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಎಚ್ಚರಿಸಿದರು.

ದೇಶದ‌ ಸ್ವಾತಂತ್ರಕ್ಕಾಗಿ ಕಾಂಗ್ರೆಸ್ ಬಲಿದಾನ:  ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಬಲಿದಾನ ಮಾಡಿದೆ. ಸ್ವಾತಂತ್ರ್ಯ ನಂತರ ಪ್ರಜಾತಂತ್ರವನ್ನು‌ ಪರಿಚಯಿಸಿದೆ. ಮೋದಿ ಹುಟ್ಟುವ ಮೊದಲೇ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೂ ದೇಶಕ್ಕಾಗಿ ಕಾಂಗ್ರೆಸ್ ಏನು ಮಾಡಿದೆ ಎಂದು ಮೋದಿ ಕೇಳುತ್ತಾರೆ. ಮೋದಿ ಅವರೇ ಈ ದೇಶದ ಸ್ವಾತಂತ್ರ್ಯಕ್ಕಾಗಿ ನಿಮ್ಮ ಮನೆಯಲ್ಲಿ ಯಾರಾದರೂ ಬಲಿದಾನ ಮಾಡಿದ್ದಾರ? ರಾಮ್ ನಾಮ್ ಸತ್ಯ ಹೈ ಅಂದಿದ್ದಾರ? ಎಂದು ಪ್ರಶ್ನಿಸಿದರು.

ಸಂವಿಧಾನ ಬದಲಾವಣೆಯ ಹುನ್ನಾರ:  ಸಂವಿಧಾನವನ್ನು ಬದಲಿಸುವ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಹುನ್ನಾರವನ್ನು ಜನರಿಗೆ ಮನವರಿಕೆ ಮಾಡಿದ ಖರ್ಗೆ, ದೇಶದ 140 ಕೋಟಿ ಜನರಿಗೆ ಅನ್ವಯವಾಗುವಂತ ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದಾರೆ. ಈ ಬಗ್ಗೆ ಬಿಜೆಪಿಯ ಅನಂತಕುಮಾರ ಹೆಗಡೆ ಹಾಗೂ ಉತ್ತರಪ್ರದೇಶದ ಸಂಸದರು ಹೇಳಿಕೆ ನೀಡಿದ್ದಾರೆ. ಆದರೆ, ಮೋದಿ ಸಂವಿಧಾನ ಬದಲಿಸುವುದಿಲ್ಲ ಎನ್ನುತ್ತಾರೆ.ಜನರ ಅಭಿಪ್ರಾಯ ಏನಿರುತ್ತದೆ ಎಂದು ಪರೀಕ್ಷಿಸಲು ಅವರು ಹಾಗೆ ಮಾಡುತ್ತಾರೆ. ಜನರು ಪ್ರತಿರೋಧ ಮಾಡಿದರೆ ಉಲ್ಟಾ ಹೊಡೆಯುತ್ತಾರೆ. ದೇಶದಲ್ಲಿ ಒಮ್ಮೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಹೋದರೆ ನಿಮಗೆ ಏನು ಸಿಗುವುದಿಲ್ಲ. ಅದಕ್ಕೆ ನೀವು ಅವಕಾಶ ನೀಡಬೇಡಿ ಎಂದು ಎಚ್ಚರಿಸಿದರು.

ಸಬ್ ಸೇ ಬುರಾ ದಿನ್:  ಮೋದಿ ಬರೀ ಸುಳ್ಳು ಹೇಳುತ್ತಾರೆ. ಹಾಗಾಗಿ, ಅವರನ್ನು ಸುಳ್ಳಿನ ಸರದಾರ ಎಂದು ಹೆಸರಿಟ್ಟಿದ್ದೇನೆ. ಪ್ರತಿಯೊಬ್ಬರಿಗೆ 15 ಲಕ್ಷ ಹಣ, ಪ್ರತಿವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದರು. ಯಾವ ಮಾತುಗಳನ್ನು ಈಡೇರಿಸಿಲ್ಲ. ಆದರೂ ಅಚ್ಚೇ ದಿನ್ ಲಾಯೇಂಗೆ ಎಂದು ಹೇಳುತ್ತಾರೆ. ಆದರೆ, ಇವು ಸಬ್ ಸೆ ಬುರಾ ದಿನ್. ಮೋದಿ ನಿನ್ನ ಅಚ್ಚೇ ದಿನ್ ನೀನೆ ಇಟ್ಟುಕೊಳ್ಳಪ್ಪ, ಮೊದಲಿನ ದಿನ ಕೊಟ್ಟುಬಿಡು ಎಂದು ವ್ಯಂಗ್ಯವಾಡಿದರು.

ಮೋದಿ ಹಠಾವೋ ದೇಶ್ ಬಚಾವೋ:  ಮೋದಿ ದೇಶದ ಆಸ್ತಿಗಳನ್ನು ಮಾರುತ್ತಿದ್ದಾರೆ. ಅವರು ಮಾರುವ ಆಸ್ತಿಗಳನ್ನು ಅಂಬಾನಿ ಹಾಗೂ ಅದಾನಿ ಕೊಂಡುಕೊಳ್ಳುತ್ತಿದ್ದಾರೆ.‌ ದೇಶವನ್ನು ಮಾರುವ ಮೋದಿಯನ್ನು ನೀವು ಸೋಲಿಸಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿ, ಸಭಿಕರೊಂದಿಗೆ ಮೋದಿ ಹಠಾವ್ ದೇಶ್ ಬಜಾವ್ ಎಂದು ಘೋಷಣೆ ಕೂಗಿದರು.

ವೇದಿಕೆಯ ಮೇಲೆ ಸಚಿವರಾದ ಪ್ರಿಯಾಂಕ್ ಖರ್ಗೆ, ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ್, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು, ಮಹೆಬೂಬ್ ಸಾಹೇಬ್, ಭೀಮಣ್ಣ ಸಾಲಿ, ಶಿವಾನಂದ್ ಪಾಟೀಲ್, ರಮೇಶ್ ಮರಗೋಳ, ಮುಕ್ತಾರ್ ಪಟೇಲ್, ನಾಗರೆಡ್ಡಿ ಪಾಟೀಲ್ ಕರದಾಳ, ಟೋಪಣ್ಣ, ರೇವು ನಾಯಕ ಬೆಳಮಗಿ ಸೇರಿದಂತೆ ಹಲವರಿದ್ದರು.

Share this article