ನೀವು ಅಹಿಂದ ಲೀಡರ್‌ ಆಗಿದ್ದರೆ ಎಲ್ಲಿ ಬೇಕಾದರೂ ಗೆಲ್ಲಬಹುದಿತ್ತು. ನಿಮ್ಮ ಮಗ ಬಿಟ್ಟ ಕ್ಷೇತ್ರವನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ? ಇದು ಅಹಿಂದವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಟಾಂಗ್‌ ನೀಡಿದ್ದಾರೆ.

 ಬೆಂಗಳೂರು : ನೀವು ಅಹಿಂದ ಲೀಡರ್‌ ಆಗಿದ್ದರೆ ಎಲ್ಲಿ ಬೇಕಾದರೂ ಗೆಲ್ಲಬಹುದಿತ್ತು. ನಿಮ್ಮ ಮಗ ಬಿಟ್ಟ ಕ್ಷೇತ್ರವನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ? ಇದು ಅಹಿಂದವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಟಾಂಗ್‌ ನೀಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರು ಜ.25ರಂದು ಮೈಸೂರಿನಲ್ಲಿ ಅಹಿಂದ ಸಮಾವೇಶ ಮಾಡುತ್ತಿದ್ದಾರೆ. ನಾವು ಜ.23ರಂದ ಹಾಸನದಲ್ಲಿ ಒಂದು ಸಮಾವೇಶ ಮಾಡುತ್ತೇವೆ. ಈ ಅಹಿಂದ ವ್ಯಾಖ್ಯಾನ ಮಾಡಲು ನಾನು ತಡವರಿಸುತ್ತೇನೆ. ಅದನ್ನು ವಿವರಿಸುವುದು ಕಷ್ಟ ಎಂದರು.

ಈ ದೇಶದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಹೆಣ್ಣು ಮಕ್ಕಳಿಗೆ ಮೀಸಲಾತಿ ಕೊಟ್ಟವರು ಯಾರು? ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಟ್ಟವರು ಯಾರು? ಆರು ರೆಸಿಡೆನ್ಶಿಯಲ್‌ ಸ್ಕೂಲ್‌ ಕೊಟ್ಟವರು ಯಾರು? ನಾನು ಬಿಟ್ಟ ಬಳಿಕ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿದ್ದರು. ಬಳಿಕ ಆ ಸ್ಕೂಲ್‌ಗಳ ಕಥೆ ಏನಾಯಿತು? ನಾಯಕ ಸಮುದಾಯಕ್ಕೆ ಮೀಸಲಾತಿ ತಂದವರು ಯಾರು ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯರನ್ನು ಗುರುತಿಸಿದ್ದು ಯಾರು?:

ಸಿದ್ಧರಾಮಯ್ಯ ಅವರನ್ನು ಗುರುತಿಸಿದ್ದು ನಾನು ಎಂದು ಹೇಳಲ್ಲ. ಅವರೇ ಹೇಳಿಕೊಳ್ಳಲಿ. ಅದನ್ನು ಅವರಿಗೆ ಬಿಡುತ್ತೇನೆ. ನಮ್ಮ ಬಗ್ಗೆ ಅವರು ಕಠಿಣವಾಗಿ ಮಾತನಾಡಲಿ. ಅವರ ಮೊದಲ ಮಗ ತೀರಿಕೊಂಡಾಗ ಅವರ ಮನೆಗೆ ಹೋಗಿದ್ದೆ. ಡಾಕ್ಟರ್‌ ಆಗಿದ್ದ ಎರಡನೇ ಮಗನನ್ನು ರಾಜಕೀಯಕ್ಕೆ ತನ್ನಿ ಹೇಳಿದ್ದೆ. ಈ ಇಳಿವಯಸ್ಸಿನಲ್ಲೂ ಎಷ್ಟು ದುಡುತ್ತೀರಿ ಸಾರ್‌ ಎಂದು ಅವರು ಕೇಳಿದರು. ನಿಮ್ಮಂತವರು ಹೊರಗೆ ಹೋದ ಮೇಲೆ ಪಕ್ಷ ಉಳಿಸಲು ದುಡಿಯುತ್ತಿದ್ದೇನೆ ಎಂದಿದ್ದೆ ಎಂದರು.

ಇದೇ ವೇಳೆ, ಒಳಮೀಸಲಾತಿ ಯಾವ ಸಮುದಾಯಕ್ಕೆ ಎಷ್ಟು ಹೋಗಿದೆ? ಫ್ಯಾಕ್ಟ್‌ ಆ್ಯಂಡ್‌ ಫಿಗರ್ಸ್‌ ಇಡಿ. ತಾವು 16 ಬಜೆಟ್‌ ಮಂಡಿಸಿದ್ದೀರಲ್ಲಾ, ಅದರ ಚರ್ಚೆ ಮಾಡೋಣವಾ ಎಂದು ಸಿದ್ದರಾಮಯ್ಯಗೆ ಸವಾಲನ್ನೂ ಹಾಕಿದರು ದೇವೇಗೌಡ.

ಅಹಿಂದ ಲೀಡರ್ ಎಲ್ಲಿ ನಿಂತರೂ ಗೆಲ್ಲಬೇಕಿತ್ತು:

ಹಿಂದೆ ನೀವು ಬಾದಾಮಿ, ಕೋಲಾರ, ಮೈಸೂರು ಎಲ್ಲಿಂದ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಒಂದು ವರ್ಷ ಚರ್ಚೆಯಾಯಿತು. ಹುಬ್ಬಳ್ಳಿ ಅಹಿಂದ ಸಮಾವೇಶದಲ್ಲಿ ಆರ್‌.ಎಲ್‌.ಜಾಲಪ್ಪ ಮತ್ತು ತೇಜಸ್ವಿನಿ ನನ್ನನ್ನು ಹರಾಜು ಹಾಕಿದರು. ಅದೆಲ್ಲಾ ಆದ ಮೇಲೆ ನೀವು ಅಹಿಂದ ಲೀಡರ್‌ ತಾನೇ. ನನಗೆ ಶಕ್ತಿ ಇಲ್ಲ. ನಾನು ರಾಮನಗರಕ್ಕೆ ಬಂದೆ. ನಾನು ಅಹಿಂದ ಲೀಡರ್‌ ಅಲ್ಲ. ರಾಮನಗರ ಒಕ್ಕಲಿಗರ ಕ್ಷೇತ್ರ. ಹೊಳೆನರಸೀಪುರದಲ್ಲಿ ಕುರುಬರನ್ನು ಎಂಎಲ್ಸಿ ಮಾಡಿದೆ. ಮೈಸೂರಿನಲ್ಲಿ ಚಿಕ್ಕಮಾದುನ ಎಂಎಲ್ಸಿ ಮಾಡಿದೆ. ಆದರೆ, ನೀವು ಒಂದು ಕ್ಷೇತ್ರ ಹುಡುಕಲು ಎಷ್ಟು ಚರ್ಚೆ ನಡೆಯಿತು. ನೀವು ಅಹಿಂದ ಲೀಡರ್‌ ಆಗಿದ್ದರೆ ಎಲ್ಲಿ ಬೇಕಾದರೂ ಗೆಲ್ಲಬಹುದಿತ್ತು ಎಂದು ಕಾಲೆಳೆದರು.

ದೇವೇಗೌಡರು ಮೂಲೆಯಲ್ಲಿ ಕೂತ ಎಂದು ಲೆಕ್ಕ ಹಾಕಿದ್ದರು. ಏನೇನೋ ಮಾಡುತ್ತಾರೆ, ಮತ್ತೇನಾದರೂ ಮಾಡಿ ಬಿಟ್ಟಾರೋ ಎಂದು ಎಂದು ಗಟ್ಟಿ ಮಾಡಿಕೊಳ್ಳಲು ಮೈಸೂರಿನಲ್ಲಿ ಅಹಿಂದ ಸಮಾವೇಶ ಮಾಡಲು ಹೊರಟ್ಟಿದ್ದಾರೆ ಎಂದು ಮೈಸೂರು ಅಹಿಂದ ಸಮಾವೇಶದ ಬಗ್ಗೆ ವ್ಯಂಗ್ಯವಾಡಿದರು.

ಮಹಾರಾಷ್ಟ್ರದಲ್ಲಿ ಐದು ಸ್ಥಾನ ಗೆಲುವು:

ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಜೆಡಿಎಸ್‌ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಮ್ಮ ಪಕ್ಷದ ಹುಡುಗರು ಐದು ಸ್ಥಾನ ಗೆದ್ದಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ನಮ್ಮ ಪಕ್ಷದ ಕಚೇರಿಯ ಹಳೇ ಬಾಡಿಗೆ ರದ್ದು ಮಾಡಿ ಕೆಲ ಗೊಂದಲ ಬಗೆಹರಿಸಿದ್ದಾರೆ. ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲ್ಲೆಲ್ಲಿ ನಮ್ಮ ಪಕ್ಷಕ್ಕೆ ಗೆಲ್ಲುವ ಶಕ್ತಿ ಇದೆಯೋ ಅಲ್ಲಿ ಸೀಟು ಕೊಂಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ. ಇನ್ನು ಕೇರಳದಲ್ಲಿ ನಮ್ಮ ಪಕ್ಷದ ನಾಯಕರ ಮನವಿ ಮೇರೆಗೆ ಎಡಪಕ್ಷಗಳೊಂದಿಗೆ ಚುನಾವಣೆ ಎದುರಿಸಲು ಪತ್ರ ನೀಡಿದ್ದೇನೆ ಎಂದು ಹೇಳಿದರು.

ನರೇಗಾ ಯೋಜನೆ ಹೆಸರಿನಲ್ಲಿ ಮಹಾತ್ಮ ಗಾಂಧಿ ಹೆಸರು ಕೈ ಬಿಟ್ಟ ವಿಚಾರವಾಗಿ ಈಗಾಗಲೇ ನಾನು ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದೇನೆ. ಹಿಂದಿನ ಕಾಂಗ್ರೆಸ್‌ ಚುನಾವಣಾ ಪ್ರಚಾರಗಳಲ್ಲಿ ಗಾಂಧಿ ಫೋಟೋ ಬಳಸಿರುವ ಪೋಸ್ಟರ್ ತಂದು ತೋರಿಸಿದರೆ ನನ್ನ ಹೇಳಿಕೆ ವಾಪಸ್ ಪಡೆಯುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನೀರಾವರಿ ಬಗ್ಗೆ ಲಘುವಾಗಿ ಮಾತನಾಡಲ್ಲ:

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ನೀರಾವರಿ ಕುರಿತು ಬರೆದಿರುವ ನೀರಿನ ಹೆಜ್ಜೆ ಎಂಬ ಪುಸ್ತಕ ಕಳುಹಿಸಿಕೊಟ್ಟಿದ್ದಾರೆ. ಆ ಪುಸ್ತಕವನ್ನು ಎಲ್ಲರೂ ಓದಿ. ನೀರಾವರಿ ವಿಚಾರದಲ್ಲಿ ದೇವೇಗೌಡರ ಪಾತ್ರವೇನು ಎಂಬುದನ್ನು ನೀವೇ ವಿಮರ್ಶೆ ಮಾಡಿ. ಅವರು ಏನೇ ಬರೆಯಲಿ. ನನ್ನ ಹೋರಾಟದ ಬಗ್ಗೆ ಜನ ತಿಳಿದುಕೊಂಡಿದ್ದಾರೆ. ಹೀಗಾಗಿ ನಾನು ನೀರಾವರಿ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ. ನೀರಾವರಿ ಬಿಕ್ಕಟ್ಟು ಎದುರಾದಾಗ ಇದೇ ಸಿದ್ದರಾಮಯ್ಯ ನಮ್ಮ ಮನೆಗೆ ಬಂದು ಕರೆದರು. ನಮ್ಮಿಬ್ಬರ ನಡುವೆ ಏನೇ ವ್ಯತ್ಯಾಸಗಳಿದ್ದರೂ ಕರೆದಾಗ ತಕರಾರು ಮಾಡಲಿಲ್ಲ. ನನ್ನ ಕೈಲಾದ ಸಹಕಾರ ಕೊಟ್ಟಿದ್ದೇನೆ. ಈ ವಿಚಾರವಾಗಿ ಮುಂದೆ ಕರೆದರೂ ಹೋಗುತ್ತೇನೆ ಎಂದು ಎಚ್‌.ಡಿ.ದೇವೇಗೌಡರು ಹೇಳಿದರು.

ಚರ್ಚ್‌ ಮೇಲಿನ ದಾಳಿ ಖಂಡನೀಯ

ಚರ್ಚ್‌ಗಳ ಮೇಲೆ ನಡೆದಿರುವ ದಾಳಿ ಹೇಯವಾದದ್ದು. ಆ ರೀತಿಯ ಘಟನೆ ಆಗಬಾರದು. ಇದನ್ನು ಖಂಡಿಸಬೇಕು. ಈ ದೇಶದಲ್ಲಿ ಹಲವು ಧರ್ಮಗಳಿವೆ. ಬರೀ ಹಿಂದೂಗಳು ಅಥವಾ ಮುಸ್ಲಿಂರಷ್ಟೇ ಅಲ್ಲ. ಕ್ರಿಶ್ಚಿಯನ್‌, ಪಾರ್ಸಿಗಳು, ಜೈನರು, ಸಿಖ್‌, ಬೌದ್ಧರೂ ಇದ್ದಾರೆ. ಯಾವುದೇ ಸರ್ಕಾರ ಇರಲಿ. ಇಂತಹ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ದೇಶದ ಪ್ರಧಾನಿ ಚರ್ಚ್‌ಗೆ ಹೋಗಿ ಪ್ರಾರ್ಥನೆ ಮಾಡಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಎಚ್‌.ಡಿ.ದೇವೇಗೌಡ ಆಗ್ರಹಿಸಿದರು.

ಶಾಮನೂರು ಕೊಡುಗೈ ದಾನಿ

ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮತ್ತು ನನ್ನದು 50 ವರ್ಷಗಳ ಸ್ನೇಹ. ನಾನು ಹೇಳಿದ ಕೆಲಸಗಳನ್ನು ಚಾಚೂತಪ್ಪದೆ ಮಾಡುತ್ತಿದ್ದರು. ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಶಿವಶಂಕರಪ್ಪ ಸಂಭಾವಿತ ವ್ಯಕ್ತಿಯಾಗಿದ್ದರು. ಕೊಡಗೈ ದಾನಿಯಾಗಿದ್ದರು. ಅವರು ತೀರಿಕೊಂಡಾಗ ನಾನು ದೆಹಲಿಯಲ್ಲಿದ್ದೆ. ಬರುವುದಕ್ಕೆ ಆಗಲಿಲ್ಲ. ಅವರ ಕುಟುಂಬಕ್ಕೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ದೇವೇಗೌಡರು ದೇವರಲ್ಲಿ ಪ್ರಾರ್ಥಿಸಿದರು.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಜ.18ರಂದು ಬೆಂಗಳೂರು, ಜ.23ರಂದು ಹಾಸನ ಮತ್ತು ಜು.24ರಂದು ಬಾಗಲಕೋಟೆಯಲ್ಲಿ ಜೆಡಿಎಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.

-ಎಚ್‌.ಡಿ.ದೇವೇಗೌಡ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ.