ಕೇರಳದ ರಾಜಧಾನಿ ತಿರುವನಂತಪುರ ನಗರಾಡಳಿತದ ಇತಿಹಾಸದಲ್ಲಿ ಬಿಜೆಪಿ ಹೊಸ ದಾಖಲೆ ಬರೆದಿದೆ. ನಾಲ್ಕೂವರೆ ದಶಕದಿಂದ ಎಡಪಂಥೀಯರ ಕೋಟೆಯಾಗಿದ್ದ ತಿರುವನಂತಪುರ ಕಾರ್ಪೊರೇಷನ್‌ನ ಮೇಯರ್‌ ಗದ್ದುಗೆ ಇದೇ ಮೊದಲ ಬಾರಿಗೆ ಕೇಸರಿ ಪಕ್ಷದ ಪಾಲಾಗಿದೆ.

ತಿರುವನಂತಪುರ: ಕೇರಳದ ರಾಜಧಾನಿ ತಿರುವನಂತಪುರ ನಗರಾಡಳಿತದ ಇತಿಹಾಸದಲ್ಲಿ ಬಿಜೆಪಿ ಹೊಸ ದಾಖಲೆ ಬರೆದಿದೆ. ನಾಲ್ಕೂವರೆ ದಶಕದಿಂದ ಎಡಪಂಥೀಯರ ಕೋಟೆಯಾಗಿದ್ದ ತಿರುವನಂತಪುರ ಕಾರ್ಪೊರೇಷನ್‌ನ ಮೇಯರ್‌ ಗದ್ದುಗೆ ಇದೇ ಮೊದಲ ಬಾರಿಗೆ ಕೇಸರಿ ಪಕ್ಷದ ಪಾಲಾಗಿದೆ.

ಬಿಜೆಪಿಯ ವಿ.ವಿ.ರಾಜೇಶ್‌ (49) ಅವರು ಮೇಯರ್‌ ಆಗಿ ಶುಕ್ರವಾರ ಆಯ್ಕೆಯಾದರು. ಈ ಮೂಲಕ ಕೇರಳ ರಾಜಕೀಯ ಇತಿಹಾಸದಲ್ಲಿ ಬಿಜೆಪಿ ಪಾಲಿಗೆ ಹೊಸ ಇತಿಹಾಸ ಬರೆದರು.

ಮೇಯರ್‌ ಚುನಾವಣೆಯಲ್ಲಿ ರಾಜೇಶ್‌ 51 ಮತ ಪಡೆದರೆ, ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಅಭ್ಯರ್ಥಿ ಆರ್‌.ಪಿ.ಶಿವಾಜಿ 29 ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಅಭ್ಯರ್ಥಿ ಕೆ.ಎಸ್‌.ಶಬರಿನಾಥನ್‌ ಅವರು 19 ಮತ ಗಳಿಸಿದರು. ಒಬ್ಬ ಸ್ವತಂತ್ರ ಅಭ್ಯರ್ಥಿ ಮತದಾನದಿಂದ ದೂರ ಉಳಿದರು. ಈ ಮೂಲಕ ಬಿಜೆಪಿ ಸುಲಭವಾಗಿ ಅಧಿಕಾರದ ಗದ್ದುಗೆ ಹಿಡಿಯಿತು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಹಾಗೂ ರಾಜ್ಯ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

ಮೊದಲ ಬಾರಿ ಗೆದ್ದಿದ್ದ ಬಿಜೆಪಿ:

ಡಿ.9ರಂದು ತಿರುವನಂತಪುರ ಪಾಲಿಕೆಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 50, ಸಿಪಿಎಂ ನೇತೃತ್ವದ ಎಲ್‌ಡಿಎಫ್‌ 29, ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ನಿಂದ 19, ಇಬ್ಬರು ಪಕ್ಷೇತರರಾಗಿ ಗೆದ್ದು ಬಂದಿದ್ದರು. 101 ಸಂಖ್ಯಾ ಬಲದ ಕಾರ್ಪೊರೇಷನ್‌ನಲ್ಲಿ ಬಿಜೆಪಿಗೆ ಬಹುಮತ ಸಾಬೀತುಪಡಿಸಲು 1 ಸ್ಥಾನದ ಅಗತ್ಯವಿತ್ತು. ಈ ಮಧ್ಯೆ ಇಬ್ಬರು ಸ್ವತಂತ್ರ ಅಭ್ಯರ್ಥಿಗಳಲ್ಲಿ ಒಬ್ಬರಾದ ಪಿ.ರಾಧಾಕೃಷ್ಣನ್‌ ಅವರನ್ನು ಗುರುವಾರ ರಾತ್ರಿ ಸುದೀರ್ಘ ಮಾತುಕತೆಯ ಬಳಿಕ ಸೆಳೆಯುವಲ್ಲಿ ಬಿಜೆಪಿ ತನ್ನ ಸಂಖ್ಯಾಬಲವನ್ನು 51ಕ್ಕೆ ಹೆಚ್ಚಿಸಿಕೊಂಡಿತ್ತು.

ಶ್ರೀಕಲಾಗೆ ನಿರಾಸೆ:

ಮೇಯರ್‌ ಸ್ಥಾನಕ್ಕೆ ಸಂಬಂಧಿಸಿ ರಾಜೇಶ್ ಹಾಗೂ ಮಾಜಿ ಡಿಜಿಪಿ ಆರ್‌.ಶ್ರೀಕಲಾ ನಡುವೆ ತೀವ್ರ ಪೈಪೋಟಿ ಇತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಅವರು ಎರಡು ಬಾರಿ ದಿಲ್ಲಿಗೆ ತೆರಳಿ ವರಿಷ್ಠರ ಜತೆ ಮಾತುಕತೆ ನಡೆಸಿದ್ದರು. ಆರೆಸ್ಸೆಸ್‌ನ ಬೆಂಬಲ, ಹೆಚ್ಚಿನವರು ರಾಜೇಶ್ ಪರ ಒಲವು ತೋರಿದ ಹಿನ್ನೆಲೆಯಲ್ಲಿ ಅವರನ್ನೇ ಅಂತಿಮವಾಗಿ ಮೇಯರ್‌ ಅಭ್ಯರ್ಥಿಯಾಗಿ ಘೋಷಿಸಲಾಯಿತು. ಇನ್ನು ಆಶಾನಾಥ್‌ ಅವರು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.