ಬೆಂಗಳೂರು ವಾಹನ ದಟ್ಟಣೆ ಬಗ್ಗೆ ಸಮಾಜವಾದಿ ಸಂಸದ ರಾಜೀವ್ ರಾಯ್ ಅಸಮಾಧಾನ

KannadaprabhaNewsNetwork |  
Published : Dec 02, 2025, 04:00 AM ISTUpdated : Dec 02, 2025, 06:03 AM IST
Bengaluru Traffic Rajeev Rai

ಸಾರಾಂಶ

ನಗರದ ಸಂಚಾರ ದಟ್ಟಣೆ ಮತ್ತು ಸಂಚಾರ ಪೊಲೀಸರ ಬಗ್ಗೆ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರಾಯ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾನುವಾರ ನಗರಕ್ಕೆ ಭೇಟಿ ನೀಡಿದ್ದ ಸಂಸದ ರಾಜೀವ್ ರಾಯ್ ಅವರು, ರಾಜಕುಮಾರ್ ಸಮಾಧಿ ರಸ್ತೆಯಲ್ಲಿ ಒಂದು ತಾಸು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಒದ್ದಾಡಿದ್ದಾರೆ.

  ಬೆಂಗಳೂರು :  ನಗರದ ಸಂಚಾರ ದಟ್ಟಣೆ ಮತ್ತು ಸಂಚಾರ ಪೊಲೀಸರ ಬಗ್ಗೆ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರಾಯ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾನುವಾರ ನಗರಕ್ಕೆ ಭೇಟಿ ನೀಡಿದ್ದ ಸಂಸದ ರಾಜೀವ್ ರಾಯ್ ಅವರು, ರಾಜಕುಮಾರ್ ಸಮಾಧಿ ರಸ್ತೆಯಲ್ಲಿ ಒಂದು ತಾಸು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಒದ್ದಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಗರ ಪೊಲೀಸ್‌ ಆಯುಕ್ತ ಮತ್ತು ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತರಿಗೆ ಟ್ಯಾಗ್ ಮಾಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?:

‘ಮಾನ್ಯ ಮುಖ್ಯಮಂತ್ರಿಯವರೆ, ಕ್ಷಮಿಸಿ, ನಿಮ್ಮಲ್ಲಿ ಟ್ರಾಫಿಕ್ ನಿರ್ವಹಣೆಗೆ ಅತಿ ಕೆಟ್ಟ ವ್ಯವಸ್ಥೆಯಿದೆ. ಟ್ರಾಫಿಕ್ ಪೊಲೀಸರು ಕೂಡ ಬೇಜವಾಬ್ದಾರಿಯುತ, ನಿಷ್ಪ್ರಯೋಜಕರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಜತೆಗೆ, ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಗೈರಿನ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿರುವ ಅವರು, ‘ರಸ್ತೆಯುದ್ದಕ್ಕೂ ಯಾವೊಬ್ಬ ಟ್ರಾಫಿಕ್ ಪೊಲೀಸರೂ ನನಗೆ ಕಾಣಸಿಗಲಿಲ್ಲ. ಕೊನೆಪಕ್ಷ ಯಾರೊಬ್ಬರು ದೂರವಾಣಿ ಕರೆಯನ್ನೂ ಸ್ವೀಕರಿಸಿಲ್ಲ ಎಂದು ಅಧಿಕಾರಿಗಳಿಗೆ ಕರೆ ಮಾಡಿರುವ ಬಗ್ಗೆ ಸ್ಕ್ರೀನ್ ಶಾಟ್ ಅನ್ನು ಕೂಡ ಹಂಚಿಕೊಂಡಿದ್ದಾರೆ.

ಗಂಟೆಗಳ ಕಾಲ ರಾಜಕುಮಾರ್ ಸಮಾಧಿ ರಸ್ತೆಯಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿದ್ದೆವು. ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಪ್ರಯಾಣಿಸಬೇಕಿತ್ತು. ಆದರೆ ಅತಿಯಾದ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ವಿಮಾನ ಹೊರಡುವ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ತಲುಪುವುದು ಕಷ್ಟವಾಗಿದೆ. ಇದರಿಂದಾಗಿ ವಿಮಾನ ತಪ್ಪಲಿದೆ. ಈ ಸುಂದರ ನಗರದ ಹೆಸರನ್ನು ಹಾಳು ಮಾಡಲು ಈ ಅಸಮರ್ಥ ಅಧಿಕಾರಿಗಳೇ ಸಾಕು. ನಿಸ್ಸಂದೇಹವಾಗಿ ಈಗ ಬೆಂಗಳೂರು ಸಂಚಾರ ಅತ್ಯಂತ ಕುಖ್ಯಾತ ಸಂಚಾರ ಎಂಬ ಖ್ಯಾತಿಯನ್ನು ಗಳಿಸಿದೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸಂಸದ ರಾಜೀವ್ ರಾಯ್‌ ಅವರು ನಗರ ಸಂಚಾರ ದಟ್ಟಣೆಯ ಬಗ್ಗೆ ಪೋಸ್ಟ್‌ ಮಾಡಿದ ನಂತರ, ನಗರದ ರಸ್ತೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗಳು ಶುರುವಾಗಿದೆ. ಇತ್ತೀಚೆಗಷ್ಟೇ ನಗರದ ರಸ್ತೆ ಸಮಸ್ಯೆ ಹಾಗೂ ಟ್ರಾಫಿಕ್ ಕುರಿತು ಹಲವು ಉದ್ಯಮಿಗಳು ಧ್ವನಿ ಎತ್ತಿದ್ದರು.

ತಿರುಗೇಟು ನೀಡಿದ ಡಿಸಿಎಂ:

ರಾಜೀವ್ ರಾಯ್‌ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಾನು ದೆಹಲಿಯಲ್ಲಿ ಆ ಸಂಸದರನ್ನು ಭೇಟಿಯಾಗುತ್ತೇನೆ. ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಟ್ರಾಫಿಕ್ ನಿರ್ವಹಣೆಯನ್ನು ಅವರಿಗೆ ತೋರಿಸುತ್ತೇನೆ. ನಂತರ ಅವರಿಗೂ ಕೂಡ ಟ್ಯಾಗ್‌ ಮಾಡುತ್ತೇನೆ ಎಂದು ಹೇಳಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಪತ್ರಿಕಾ ವಿತರಕರಿಗೆ ಪರಿಹಾರ ಒದಗಿಸಲು ಆಗ್ರಹ: ಬಸವೇಶ್ವರನಗರ ಸಂಘದ ಉದ್ಘಾಟನೆ
ಬೆಂಗಳೂರಿನ ಐದು ಪಾಲಿಕೆಗಳು ಒಂದೇ ವರ್ಷದಲ್ಲಿ ದಿವಾಳಿ ಆಗುತ್ತವೆ: ಎನ್‌.ಆರ್‌.ರಮೇಶ್‌