;Resize=(412,232))
ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಉತ್ತೇಜಿಸಲು ರಾಜ್ಯದ ಹಲವೆಡೆ ಕ್ರೀಡಾಂಗಣ ನಿರ್ಮಾಣ ಮಾಡಲು ಹಾಗೂ ಹಾಲಿ ಇರುವ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸಲು ಬಜೆಟ್‌ನಲ್ಲಿ ಕೋಟ್ಯಂತರ ರುಪಾಯಿ ಅನುದಾನ ಪ್ರಕಟಿಸಿದ್ದಾರೆ. ಜತೆಗೆ ಕ್ರೀಡೆಯಲ್ಲಿ ಮ್ಯಾರಥಾನ್ ಆಯೋಜಿಸಲು ಸಶಕ್ತ ಕರ್ನಾಟಕ ಯೋಜನೆಯನ್ನು ಘೋಷಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಕ್ರೀಡಾಪಟುಗಳಿಗೆ ಉತ್ತಮ ಕ್ರೀಡಾ ವಿಜ್ಞಾನ ಸೇವೆಗಳನ್ನು ಒದಗಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಕಲಬುರಗಿಯಲ್ಲಿ ಆಧುನಿಕ ಕ್ರೀಡಾ ವಿಜ್ಞಾನ ಕೇಂದ್ರ ಆರಂಭಿಸಲಾಗುವುದು. ಕೋಲಾರದ ಬಂಗಾರಪೇಟೆ, ವಿಜಯಪುರದ ಮುದ್ದೇಬಿಹಾಳ, ಬಾಗಲಕೊಟೆಯ ಗುಳೇದಗುಡ್ಡ, ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ, ಕೊಪ್ಪಳದ ಕುಕನೂರು ಮತ್ತು ರಾಯಚೂರಿನ ಮಸ್ಕಿಯಲ್ಲಿ ತಲಾ ₹2 ಕೋಟಿ ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣಗಳನ್ನು ನಿರ್ಮಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಅಲ್ಲದೆ, ತುಮಕೂರಿನಲ್ಲಿ ಕ್ರೀಡಾಮೂಲ ಸೌಕರ್ಯಗಳನ್ನು ₹3 ಕೋಟಿಗಳ ವೆಚ್ಚದಲ್ಲಿ ಉನ್ನತೀಕರಿಸಲಾಗುವುದು. ವಿಜಯನಗರ ಜಿಲ್ಲೆಯಲ್ಲಿರುವ ಕ್ರೀಡಾಂಗಣವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ) ಅನುದಾನದಲ್ಲಿ ಮೇಲ್ದರ್ಜೆಗೇರಿಸಲಾಗುವುದು. ಮಕ್ಕಳ ಕ್ರೀಡಾ ಪ್ರತಿಭೆ ಪ್ರೋತ್ಸಾಹಿಸಲು ವಿರಾಜಪೇಟೆಯಲ್ಲಿ ಸುಸಜ್ಜಿತ ಕ್ರೀಡಾ ತರಬೇತಿ ವಸತಿ ನಿಲಯ ನಿರ್ಮಿಸಲಾಗುವುದು. ಕುಸ್ತಿ ಪಟುಗಳನ್ನು ಪ್ರೋತ್ಸಾಹಿಸಲು ಬೆಳಗಾವಿಯ ಬೆಳಗುಂದಿಯಲ್ಲಿ ನೂತನ ‘ಕುಸ್ತಿ ಅಖಾಡ’ ನಿರ್ಮಿಸಲಾಗವುದು ಬಜೆಟ್‌ನಲ್ಲಿ ಸಿಎಂ ಪ್ರಕಟಿಸಿದ್ದಾರೆ.
‘ಸಶಕ್ತ ಕರ್ನಾಟಕʼ ಎಂಬ ನೂತನ ಕಾರ್ಯಕ್ರಮವನ್ನು ಪರಿಚಯಿಸಿರುವ ಸಿಎಂ, ಈ ಕಾರ್ಯಕ್ರಮದಡಿ ತಲಾ ₹10 ಲಕ್ಷ ವೆಚ್ಚದಲ್ಲಿ ಬೆಳಗಾವಿ, ಗೋಕರ್ಣ, ಚಿತ್ರದುರ್ಗ, ಹಂಪಿಯಲ್ಲಿ ರಾಷ್ಟ್ರಮಟ್ಟದ ಮ್ಯಾರಥಾನ್‌ಗಳನ್ನು ಆಯೋಜಿಸಲಾಗುವುದು. ಇದರೊಂದಿಗೆ ಪ್ರಸಿದ್ಧ ಕ್ರೀಡಾಪಟುಗಳ ಹೆಸರಿನಲ್ಲಿ 10 ಜಿಲ್ಲಾ ಕೇಂದ್ರಗಳಲ್ಲಿ ತಲಾ ನಾಲ್ಕು ಲಕ್ಷ ರು. ವೆಚ್ಚದಲ್ಲಿ ಜಿಲ್ಲಾ ಮಟ್ಟದ ಮ್ಯಾರಥಾನ್‌ಗಳನ್ನು ಆಯೋಜನೆ ಮಾಡಲಾಗುವುದು. ಸೈಕ್ಲಿಂಗ್ ಕ್ರೀಡೆಗೆ ಉತ್ತೇಜಿಸಲು ಮೈಸೂರಿನಲ್ಲಿರುವ ದಟ್ಟಗಳ್ಳಿಯಲ್ಲಿ ಗುರುತಿಸಲಾದ ಜಾಗದಲ್ಲಿ ಆಧುನಿಕ ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಿಸಲಾಗುವುದು. ಬೆಂಗಳೂರಿನ ಹೆಸರಘಟ್ಟ ಕೆರೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಕಯಾಕಿಂಗ್, ಕ್ಯಾನೋಯಿಂಗ್ ಎಕ್ಸೆಲೆನ್ಸ್ ಕೇಂದ್ರವನ್ನು ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
ಕಲಬುರಗಿಯಲ್ಲಿ ಆಧುನಿಕ ಕ್ರೀಡಾ ವಿಜ್ಞಾನ ಕೇಂದ್ರ ಆರಂಭ
6 ತಾಲೂಕುಗಳಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ತಲಾ 12 ಕೋಟಿ
‘ಸಶಕ್ತ ಕರ್ನಾಟಕʼ ಎಂಬ ಕಾರ್ಯಕ್ರಮದಡಿ ರಾಷ್ಟ್ರಮಟ್ಟದ ಮ್ಯಾರಥಾನ್ ಆಯೋಜನೆ
ಮೈಸೂರಿನಲ್ಲಿರುವ ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಾಣ
ಬೆಂಗಳೂರಿನ ಹೆಸರಘಟ್ಟ ಕೆರೆಯಲ್ಲಿ ಕಯಾಕಿಂಗ್, ಕ್ಯಾನೋಯಿಂಗ್ ಎಕ್ಸೆಲೆನ್ಸ್ ಕೇಂದ್ರ ಸ್ಥಾಪನೆ