ಯಾದಗಿರಿ : ಆರ್‌ಎಸ್‌ಎಸ್ ಗೀತೆ ಹಾಡಿದ ಕೂಡಲೇ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿಯವರು ಮುಖ್ಯಮಂತ್ರಿ ಮಾಡುತ್ತಾರೆ ಎನ್ನುವುದಾದರೆ ನಾನು ಹಾಗೂ ನಮ್ಮ ಶಾಸಕರು ಸಹ ಹಾಡುತ್ತಾರೆ, ನಮ್ಮನ್ನು ಸಿಎಂ ಮಾಡುತ್ತಾರೆಯೇ? ಎಂದು ಸಚಿವ ಸತೀಶ ಜಾರಕಿಹೊಳಿ ವ್ಯಂಗವಾಡಿದ್ದಾರೆ.
ಸದನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆರ್‌ಎಸ್‌ಎಸ್ ಪ್ರಾರ್ಥನಾ ಗೀತೆ ‘ನಮಸ್ತೇ ಸದಾ ವತ್ಸಲೇ’ ಹಾಡಿರುವ ವಿಚಾರವಾಗಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ್ ಯಾಕೆ ಹಾಗೆ ಹೇಳಿದ್ದಾರೆ ? ಏನು ಹೇಳಿದ್ದಾರೆ? ಎನ್ನುವ ಬಗ್ಗೆ ಅವರೇ ಸ್ಪಷ್ಟೀಕರಣ ಕೊಡಬೇಕು. ಆರೆಸ್ಸೆಸ್ ಗೀತೆ ಹಾಡಿದಾಕ್ಷಣ ಡಿಕೆಶಿ ಬಿಜೆಪಿ ಪರವಾಗಿ ಅಂತ ಹೇಗೆ ಹೇಳುತ್ತೀರಾ? ಎಂದರು.
ಮಾಜಿ ಸಚಿವ ಕೆ.ಎನ್.ರಾಜಣ್ಣ ವಜಾ ಆಗಿರೋ ವಿಷಯವೇ ಬೇರೆ, ಡಿಕೆಶಿ ಆರೆಸ್ಸೆಸ್ ಗೀತೆ ಹಾಡಿದ್ದೇ ಬೇರೆ. ನನಗೂ ಆರೆಸ್ಸೆಸ್ ಗೀತೆ ಪರಿಚಯವಿದೆ ಹಾಡಬೇಕು ಅಂತೇನಿಲ್ಲ. ಆರೆಸ್ಸೆಸ್ ಗೀತೆ ಹಾಡಿದ ಕೂಡಲೇ ಡಿಕೆಶಿಗೆ ಬಿಜೆಪಿಯವರು ಸಿಎಂ ಮಾಡುತ್ತಾರೆ ಎಂದರೆ ನನ್ನ ಜತೆಗೆ ನಮ್ಮ ಶಾಸಕರು ಹಾಡುತ್ತಾರೆ ಎಂದು ಹೇಳಿದರು.
ಡಿಕೆಶಿ ಸಂಸ್ಕೃತ ಎಕ್ಸಪರ್ಟ್:
ಒಂದು ಪಕ್ಷದ ಬಗ್ಗೆ 24 ತಾಸು ವಿರೋಧ ಮಾಡಬೇಕು ಅಂತ ಏನಿಲ್ಲ. ಸಂದರ್ಭಕ್ಕೆ ಅನುಗುಣವಾಗಿ ಇರಬೇಕು. ಗೀತೆ ಹಾಡಿದ ತಕ್ಷಣ ಡಿಕೆಶಿ ಅವರು ಬಿಜೆಪಿಗೆ ಹೋಗುತ್ತಾರೆ ಎಂಬ ಸಂಶಯ ಪಡುವುದು ಸರಿಯಲ್ಲ. ನಮ್ಮ ಅಧ್ಯಕ್ಷರು ಸಂಸ್ಕೃತದ ಬಗ್ಗೆ ಎಕ್ಸಪರ್ಟ್, ಅದಕ್ಕೆ ಕಲಿತಿದ್ದಾರೆ. ಕಲಿಯೋದು ತಪ್ಪಿಲ್ಲ, ಕೌಂಟರ್ ಪಾರ್ಟ್ ಕಲಿತಿರಬೇಕು ಎಂದು ಹೇಳಿದರು.
ರಾಹುಲ್ ಗಾಂಧಿ ರಿವೇಂಜ್ ಪಾಲಿಟಿಕ್ಸ್ ಮಾಡಲ್ಲ:
ಇನ್ನು ಬಿ.ಎಲ್.ಸಂತೋಷ್ ಅವರಿಗೆ ಬೈದಿದ್ದಕ್ಕೆ ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಪ್ರಕರಣ ದಾಖಲಾಗಿತ್ತು. ಆ ಕಾರಣಕ್ಕೆ ಅರೆಸ್ಟ್ ಮಾಡಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಬೈದರೆ ಅವರು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾರೆ, ರಾಹುಲ್ ಗಾಂಧಿ ಅವರು ರಿವೇಂಜ್ ಪಾಲಿಟಿಕ್ಸ್ ಮಾಡಲ್ಲ ಎಂದು ಟಾಂಗ್ ನೀಡಿದರು.