ಇಂದು ಸಂಸದೆ ಸುಮಲತಾ ಅಂಬರೀಶ್‌ ಸಭೆ : ನಿರ್ಧಾರ ಕುತೂಹಲ..!

KannadaprabhaNewsNetwork |  
Published : Apr 03, 2024, 01:36 AM ISTUpdated : Apr 03, 2024, 04:59 AM IST
Sumalatha Ambareesh

ಸಾರಾಂಶ

 ಸುಮಲತಾ ಪಾಲಿಗೆ ಕಾಂಗ್ರೆಸ್‌ ಬಾಗಿಲು ಮುಚ್ಚಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಗೆಲುವು ಕಷ್ಟವಾಗಬಹುದೆಂಬ ಅಭಿಪ್ರಾಯದೊಂದಿಗೆ ಮೈತ್ರಿಧರ್ಮ ಪಾಲಿಸುವುದೇ  ಸೂಕ್ತ ಎಂದು ಗಂಭೀರವಾಗಿ ಆಲೋಚಿಸಿದ್ದಾರೆ ಎಂದು ತಿಳಿದುಬಂದಿದೆ.

  ಮಂಡ್ಯ :  ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಟಿಕೆಟ್‌ ವಂಚಿತರಾಗಿರುವ ಸಂಸದೆ ಸುಮಲತಾ ಅಂಬರೀಶ್‌ ಬುಧವಾರ ನಗರದಲ್ಲಿ ಬೆಂಬಲಿಗರು, ಕಾರ್ಯಕರ್ತರು, ಹಿತೈಷಿಗಳ ಸಭೆ ಕರೆದಿದ್ದಾರೆ. ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳಲಿರುವ ಸಭೆ ಮಹತ್ವವನ್ನು ಪಡೆದುಕೊಂಡಿದ್ದು, ತೀವ್ರ ಕುತೂಹಲ ಕೆರಳಿಸಿದೆ.

ಬಿಜೆಪಿ-ಜೆಡಿಎಸ್‌ ಮೈತ್ರಿ ಕಾರಣದಿಂದ ಸಂಸದೆ ಸುಮಲತಾ ಅವರಿಗೆ ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೈತಪ್ಪಿದೆ. ಜೆಡಿಎಸ್‌ಗೆ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದರಿಂದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅಖಾಡ ಪ್ರವೇಶಿಸಿದ್ದಾರೆ. ಇದರಿಂದ ತೀವ್ರ ನಿರಾಸೆಗೊಳಗಾಗಿರುವ ಸುಮಲತಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಂಡ್ಯ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 

ಬಿಜೆಪಿ ಹೈಕಮಾಂಡ್‌ ಕೂಡ ಮುಂದಿನ ದಿನಗಳಲ್ಲಿ ರಾಜಕೀಯ ಸ್ಥಾನ-ಮಾನ ನೀಡುವ ಭರವಸೆಯನ್ನೂ ನೀಡಿದೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಸುಮಲತಾ ಸಮಾಧಾನಗೊಂಡಂವರಂತೆ ಕಂಡುಬಂದಿದ್ದಾರೆ. ಭವಿಷ್ಯದ ರಾಜಕೀಯದ ಹಿತದೃಷ್ಟಿ ಹಾಗೂ ಪುತ್ರ ಅಭಿಷೇಕ್‌ ಅಂಬರೀಶ್‌ಗೆ ಜಿಲ್ಲೆಯಲ್ಲಿ ರಾಜಕೀಯ ನೆಲೆ ದೊರಕಿಸುವ ಅನಿವಾರ್ಯತೆ ಇರುವುದರಿಂದ ಸುಮಲತಾ ಅಂಬರೀಶ್‌ ಚುನಾವಣೆಗೆ ಸ್ಪರ್ಧಿಸುವ ದುಡುಕಿನ ನಿರ್ಧಾರ ಮಾಡುವುದಿಲ್ಲ. ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಬೆಂಬಲಕ್ಕೆ ನಿಲ್ಲುವುದರೊಂದಿಗೆ ಮೈತ್ರಿಧರ್ಮ ಪಾಲಿಸುವುದಕ್ಕೆ ಮಾನಸಿಕವಾಗಿ ನಿರ್ಧರಿಸಿದ್ದಾರೆ ಎಂಬ ಮಾತುಗಳು ಬೆಂಬಲಿಗರ ವಲಯದಲ್ಲಿ ಕೇಳಿಬರುತ್ತಿವೆ.

ಹಳೆಯ ಕಹಿ ನೆನಪುಗಳನ್ನು ಮರೆತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸುಮಲತಾ ಅವರ ಬೆಂಬಲ ಕೋರುವುದರೊಂದಿಗೆ ಸ್ನೇಹದ ರಾಜಕಾರಣ ಬಯಸಿದ್ದಾರೆ. ಸುಮಲತಾ ಪಾಲಿಗೆ ಕಾಂಗ್ರೆಸ್‌ ಬಾಗಿಲು ಮುಚ್ಚಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಗೆಲುವು ಕಷ್ಟವಾಗಬಹುದೆಂಬ ಅಭಿಪ್ರಾಯದೊಂದಿಗೆ ಮೈತ್ರಿಧರ್ಮ ಪಾಲಿಸುವುದೇ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಸೂಕ್ತ ಎಂದು ಗಂಭೀರವಾಗಿ ಆಲೋಚಿಸಿದ್ದಾರೆ ಎಂದು ತಿಳಿದುಬಂದಿದೆ.

ಬುಧವಾರ ಬೆಳಗ್ಗೆ 10ಕ್ಕೆ ನಗರದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಸಂಸದೆ ಸುಮಲತಾ ಅಂಬರೀಶ್‌ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸಭೆಗೆ ಆಗಮಿಸಲಿದ್ದಾರೆ. ನಟ ದರ್ಶನ್‌ ಮತ್ತು ಅಭಿಷೇಕ್‌ ಅಂಬರೀಶ್‌ ಕೂಡ ಸಭೆಯಲ್ಲಿ ಪಾಲ್ಗೊಳ್ಳುವರು. ಸಂಸದೆಯಾಗಿ ಐದು ವರ್ಷಗಳ ಕಾಲ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಸಾಕ್ಷ್ಯಚಿತ್ರವನ್ನು ದರ್ಶನ್‌ ಇದೇ ಸಮಯದಲ್ಲಿ ಬಿಡುಗಡೆ ಮಾಡುವರು.

ಸ್ವಾಭಿಮಾನಿ ಜನರಿಗೆ ಸುಮಲತಾ ಸಂದೇಶ

ನನ್ನ ಸ್ವಾಭಿಮಾನಿ ಮಂಡ್ಯದ ಬಂಧುಗಳೆ..,

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಾನು ಕಳೆದ ಬಾರಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ, ಈ ಕ್ಷೇತ್ರದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಸಲದ ಲೋಕಸಭೆ ಚುನಾವಣೆಯೂ ಅದಕ್ಕೆ ಹೊರತಾಗಿಲ್ಲ. ಈಗಾಗಲೇ ರಾಜಕೀಯ ಪಲ್ಲಟಕ್ಕೆ ಮಂಡ್ಯ ಕ್ಷೇತ್ರ ಸಾಕ್ಷಿಯಾಗಿದೆ.

ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ನನ್ನ ನಿಲುವಿಗಾಗಿ ಅನೇಕರು ಕಾಯುತ್ತಿದ್ದಾರೆ. ಈಗಾಗಲೇ ಆ ಕುರಿತಂತೆ ಗಂಭೀರ ಚಿಂತನೆ ಕೂಡ ಮಾಡಲಾಗಿದೆ. ನಿಮ್ಮೆಲ್ಲರ ನೆಚ್ಚಿನ ರೆಬಲ್ ಸ್ಟಾರ್ ಅಂಬರೀಶ್ ಅವರಾಗಲಿ, ನಾನಾಗಲಿ ನಮ್ಮ ಕುಟುಂಬವಾಗಲಿ ಯಾವತ್ತಿಗೂ ಅಧಿಕಾರಕ್ಕೆ ಅಂಟಿಕೊಂಡು ಕೂತವರಲ್ಲ. ಮಂಡ್ಯಗಾಗಿ, ನನ್ನ ಮಂಡ್ಯದ ಸ್ವಾಭಿಮಾನಿಗಳ ಸೇವೆಗೆ ಯಾವತ್ತಿಗೂ ನಾವು ಬದ್ಧ. ಹಾಗಾಗಿಯೇ ಏನೇ ನಿರ್ಧಾರ ತಗೆದುಕೊಂಡರೂ ನಿಮ್ಮೊಂದಿಗೆ ಚರ್ಚಿಸಿಯೇ ಮುಂದುವರೆಯುವೆ ಎಂದು ಹೇಳಿದ್ದೇನೆ.

ನಿಮ್ಮ ಭಾವನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಲು ನಿಮ್ಮ ಸಮಯವನ್ನು ನನಗೆ ಕೊಟ್ಟು ಮನೆವರೆಗೂ ಬಂದಿದ್ದೀರಿ. ಕೆಲವರು ತಾವು ಇದ್ದಲ್ಲೇ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದೀರಿ. ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ದೊಡ್ಡದು. ಯಾವತ್ತೂ ಅದು ಹಾಗೆಯೇ ಇರಲಿ ಎಂದು ಆಶಿಸುವೆ.

ನಾಳೆ (ಏಪ್ರಿಲ್ 3) ಬೆಳಗ್ಗೆ 10 ಗಂಟೆಗೆ ಕಾಳಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ದೇವಸ್ಥಾನದ ಆವರಣದಲ್ಲೇ ನನ್ನ ಮತ್ತು ನಿಮ್ಮೆಲ್ಲರ ನಿಲುವನ್ನು ಸ್ಪಷ್ಟ ಪಡಿಸುವ ಹಾಗೂ ಮಂಡ್ಯ ಲೋಕಸಭೆ ಚುನಾವಣೆ ಕುರಿತಂತೆ ನನ್ನ ನಿರ್ಧಾರವನ್ನು ನಿಮ್ಮೆಲ್ಲರ ಮುಂದೆಯೇ ಪ್ರಕಟಿಸುತ್ತಿದ್ದೇನೆ. ಅಂದು ನಮ್ಮೊಂದಿಗೆ ನಮ್ಮೆಲ್ಲರ ಪ್ರೀತಿಯ ದರ್ಶನ್, ಅಭಿಷೇಕ್ ಅಂಬರೀಶ್ ಇರಲಿದ್ದಾರೆ. ತಮ್ಮ ಸಲಹೆ ಮತ್ತು ಸೂಚನೆ ಹಾಗೂ ಭಾವನೆಗಳಿಗೆ ಯಾವತ್ತೂ ನಾನು ನೋವು ತರಲಾರೆ. ನಿಮ್ಮ ನಡೆಯೇ ನನ್ನದೂ ಆಗಿರಲಿದೆ.

ಬನ್ನಿ, ಜೊತೆಯಾಗಿ ಮಂಡ್ಯವನ್ನು ಮತ್ತಷ್ಟು ಅಭಿವೃದ್ಧಿ ಪಡಿಸೋಣ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಪರಂ ಸಿಎಂ ಆಗಲಿ : 25ಕ್ಕೂ ಹೆಚ್ಚು ಮಠಾಧೀಶರ ಆಗ್ರಹ
ಎಸ್ಕಾಂಗಳಿಂದ ₹110 ಕೋಟಿ ಹೆಚ್ಚುವರಿ ವೆಚ್ಚ : ಸಿಎಜಿ ವರದಿ