ಮುಂಬೈ ಮೇಯರ್‌ ಹುದ್ದೆ ಅವಧಿ ಹಂಚಿಕೆಗೆ ಸೇನೆ ಸದಸ್ಯರ ಪಟ್ಟು

KannadaprabhaNewsNetwork |  
Published : Jan 18, 2026, 02:00 AM IST
shivasena

ಸಾರಾಂಶ

3 ದಶಕಗಳ ಬಳಿಕ ಉದ್ಧವ್ ಠಾಕ್ರೆಯಿಂದ ಬೃಹನ್ಮುಂಬೈ ಪಾಲಿಕೆ ವಶಪಡಿಸಿಕೊಂಡ ಬೆನ್ನಲ್ಲೇ, ಇದೀಗ ಮೇಯರ್‌ ಹುದ್ದೆಗಾಗಿ ಬಿಜೆಪಿ ಮತ್ತು ಶಿವಸೇನೆ ನಡುವೆ ಕಿತ್ತಾಟ ಆರಂಭವಾಗಿದೆ.    89 ಸ್ಥಾನ ಗೆದ್ದು  ಬಿಜೆಪಿ ಸಹಜವಾಗಿಯೇ ಮೊದಲ ಬಾರಿ ಮೇಯರ್‌ ಹುದ್ದೆ ಅಲಂಕರಿಸಲು ಸಜ್ಜಾಗಿದೆ.

ಮುಂಬೈ: 3 ದಶಕಗಳ ಬಳಿಕ ಉದ್ಧವ್ ಠಾಕ್ರೆಯಿಂದ ಬೃಹನ್ಮುಂಬೈ ಪಾಲಿಕೆ ವಶಪಡಿಸಿಕೊಂಡ ಬೆನ್ನಲ್ಲೇ, ಇದೀಗ ಮೇಯರ್‌ ಹುದ್ದೆಗಾಗಿ ಬಿಜೆಪಿ ಮತ್ತು ಶಿವಸೇನೆ ನಡುವೆ ಕಿತ್ತಾಟ ಆರಂಭವಾಗಿದೆ.

ಬೃಹನ್ಮುಂಬೈ ಪಾಲಿಕೆಯಲ್ಲಿ 89 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಸಹಜವಾಗಿಯೇ ಮೊದಲ ಬಾರಿ ಮೇಯರ್‌ ಹುದ್ದೆ ಅಲಂಕರಿಸಲು ಸಜ್ಜಾಗಿದೆ. ಆದರೆ ಪಾಲಿಕೆಯಲ್ಲಿ ಅಧಿಕಾರಿ ಹಿಡಿಯಲು ತಾವು ಕೂಡಾ ಕಾರಣವಾಗಿರುವ ಕಾರಣ, ಮೇಯರ್‌ ಹುದ್ದೆಯನ್ನು ಎರಡೂ ಪಕ್ಷಗಳು ಎರಡೂವರೆ ವರ್ಷದ ಅವಧಿಗೆ ಹಂಚಿಕೊಳ್ಳಬೇಕು ಎಂದು ಶಿಂಧೆ ಬಣದ ಶಿವಸೇನೆ ಸದಸ್ಯರು ಪಟ್ಟುಹಿಡಿದಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಬಗ್ಗೆ ಶಿಂಧೆ ಮೇಲೂ ಬಲವಾದ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಧಿಕಾರಕ್ಕೆ ಬಂದ ಮರುದಿನವೇ ಮಹಾಯುತಿ ಒಕ್ಕೂಟದಲ್ಲಿ ಅಧಿಕಾರಕ್ಕಾಗಿ ಸಣ್ಣ ಜಟಾಪಟಿ ಆರಂಭವಾದಂತೆ ಆಗಿದೆ.

ಮುಂಬೈ ಪಾಲಿಕೆಯ ಶಿವಸೇನೆ ಸದಸ್ಯರು ಹೋಟೆಲ್‌ಗೆ ಶಿಫ್ಟ್‌!

ಮುಂಬೈ: ಬೃಹನ್ಮುಂಬೈ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟ ಬೆನ್ನಲ್ಲೇ ರೆಸಾರ್ಟ್‌ ರಾಜಕೀಯ ಆರಂಭವಾಗಿದೆ. ಕಿಂಗ್‌ ಮೇಕರ್‌ ಆಗಿ ಹೊರಹೊಮ್ಮಿರುವ ಶಿವಸೇನೆ ನಾಯಕ ಏಕನಾಥ್‌ ಶಿಂಧೆ ತಮ್ಮ ಪಕ್ಷದ ಚುನಾಯಿತ ಪ್ರತಿನಿಧಿಗಳನ್ನೆಲ್ಲ ಪಂಚತಾರಾ ಹೋಟೆಲ್‌ಗೆ ಸ್ಥಳಾಂತರಿಸಿದ್ದಾರೆ.

25 ವರ್ಷಗಳ ಬಳಿಕ ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ, ಶಿಂಧೆ ಮೈತ್ರಿ ಶಿವಸೇನೆ ಠಾಕ್ರೆಯಿಂದ ಅಧಿಕಾರ ಕಸಿದುಕೊಂಡರೂ ಯಾವ ಪಕ್ಷಕ್ಕೂ ಬಹುಮತ ದೊರೆತಿಲ್ಲ. ಹೀಗಾಗಿ ವಿಪಕ್ಷಗಳಿಂದ ಕುದುರೆ ವ್ಯಾಪಾರದ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ. ಹೀಗಾಗಿ ರೆಸಾರ್ಟ್‌ಗೆ ಚುನಾಯಿತ ಸದಸ್ಯರನ್ನು ಸ್ಥಳಾಂತರಿಸಿದ್ದಾರೆ ಎನ್ನಲಾಗಿದೆ.ಬಿಜೆಪಿಯನ್ನು ಹೇಗಾದರೂ ಮಾಡಿ ಅಧಿಕಾರದಿಂದ ದೂರವಿಡಬೇಕು ಎನ್ನುವ ಕಾರಣಕ್ಕೆ ವಿಪಕ್ಷಗಳೆಲ್ಲವೂ ಒಂದಾಗುವ ಸಾಧ್ಯತೆಯಿದೆ. ಆ ರೀತಿಯಾದರೆ ಬಲ 106ಕ್ಕೆ ಏರಿಕೆಯಾಗಲಿದೆ. ಸರಳ ಬಹುಮತಕ್ಕೆ 8 ಸ್ಥಾನಗಳಷ್ಟೇ ಕಡಿಮೆ. ಅದನ್ನು ಸೆಳೆಯಲು ವಿಪಕ್ಷಗಳಿಗಿರುವ ಆಯ್ಕೆ ಶಿಂಧೆ ಬಣದ ಚುನಾಯಿತ ಸದಸ್ಯರು. ಆ ರೀತಿ ಆಗಕೂಡದು ಎನ್ನುವ ಕಾರಣಕ್ಕೆ ರೆಸಾರ್ಟ್‌ ರಾಜಕಾರಣದ ಮೊರೆ ಹೋಗಿರುವ ಸಾಧ್ಯತೆಯಿದೆ.

ಮತ್ತೊಂದೆಡೆ ಮೇಯರ್‌ ಹುದ್ದೆ ಅವಧಿ ಹಂಚಿಕೊಳ್ಳುವ ಬಗ್ಗೆ ಬಿಜೆಪಿ ಮೇಲೆ ಒತ್ತಡ ಹೇರಲು ಮತ್ತು ಈ ಬಗ್ಗೆ ಬಿಜೆಪಿಯೊಂದಿಗೆ ಚೌಕಾಸಿ ನಡೆಸುವುದಕ್ಕೆ ಶಿಂಧೆ ಈ ರಾಜಕೀಯ ಚಾಣಾಕ್ಷತೆ ತೋರಿದ್ದಾರೆ ಎನ್ನಲಾಗಿದೆ.

ಯುದ್ಧ ಇನ್ನೂ ಮುಗಿದಿಲ್ಲ: ರಾಜ್ ಠಾಕ್ರೆ 

ಮುಂಬೈ: ಮಹಾರಾಷ್ಟ್ರದ ನಗರ ಪಾಲಿಕೆಗಳ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಮೊದಲ ಬಾರಿ ಪ್ರತಿಕ್ರಿಯಿಸಿರುವ ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ, ‘ಯುದ್ಧ ಇನ್ನೂ ಮುಗಿದಿಲ್ಲ. ಮರಾಠಿಗರಿಗಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ’ ಎಂದಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿರುವ ರಾಜ್ ಠಾಕ್ರೆ, ‘ಈ ಚುನಾವಣೆ ಸುಲಭದ್ದಾಗಿರಲಿಲ್ಲ. ಶಿವಶಕ್ತಿ ಮತ್ತು ಅಪಾರ ಹಣಬಲ, ಅಧಿಕಾರಬಲದ ನಡುವಿನ ಹೋರಾಟ ಇದಾಗಿತ್ತು. ಎಲ್ಲಿ ತಪ್ಪಾಯಿತು ಎಂಬುದನ್ನು ಅವಲೋಕಿಸುತ್ತೇವೆ. ಯುದ್ಧ ಇನ್ನೂ ಮುಗಿದಿಲ್ಲ. ಮರಾಠಿಗರಿಗಾಗಿ, ಮರಾಠಿ ಭಾಷೆಗಾಗಿ, ಮರಾಠಿ ಗುರುತಿಗಾಗಿ ಮತ್ತು ಸಮೃದ್ಧ ಮಹಾರಾಷ್ಟ್ರಕ್ಕಾಗಿ ತಮ್ಮ ಹೋರಾಟ ಮುಂದುವರಿಯುತ್ತದೆ’ ಎಂದು ಬರೆದುಕೊಂಡಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸರ್ಕಾರದ ಒಳ್ಳೆ ಯೋಜನೆ ಪರವಾಗಿ ಫಲಾನುಭವಿಗಳು ನಿಲ್ಲಬೇಕು: ಸಿಎಂ ಸಿದ್ದರಾಮಯ್ಯ
ವಿಕಸಿತ ಭಾರತದ ಸಂಕಲ್ಪಕ್ಕೆ ''ರಾಮ್ ಜಿ'' ಶಕ್ತಿ