;Resize=(412,232))
ವಿಧಾನಸಭೆ : ರಾಜ್ಯ ಸರ್ಕಾರವು ಕೇಂದ್ರ ಹಾಗೂ ರಾಜಭವನದ ನಡುವಿನ ದೂರವಾಣಿ ಕದ್ದಾಲಿಕೆ ಮಾಡಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಸದನದಲ್ಲಿ ಗದ್ದಲ ಸೃಷ್ಟಿಸಿದ್ದು, ದೆಹಲಿಯಿಂದ ರಾಜ್ಯಪಾಲರಿಗೆ ಕರೆ ಬಂದಿದೆ ಎಂದಿರುವ ಸಚಿವ ಎಚ್.ಕೆ.ಪಾಟೀಲ್ ಅವರ ಕ್ಷಮೆಯಾಚನೆಗೆ ಪಟ್ಟು ಹಿಡಿದ ಘಟನೆ ಬುಧವಾರ ಸದನದಲ್ಲಿ ನಡೆದಿದೆ.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಬಗ್ಗೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು, ಕಾಂಗ್ರೆಸ್ ಸದಸ್ಯರು ರಾಜ್ಯಪಾಲರಿಗೆ ಅವಮಾನ ಮಾಡಿದ್ದಾರೆ. ಇದಕ್ಕೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಎಚ್.ಕೆ.ಪಾಟೀಲ್, ‘ರಾಜ್ಯಪಾಲರಿಗೆ ದೆಹಲಿಯಿಂದ ಫೋನ್ ಮಾಡಿಸಿ, ಮಾಡಿಸಿ ಭಾಷಣದಿಂದ ಅರ್ಧಕ್ಕೆ ಹೋಗುವಂತೆ ಮಾಡಲಾಗಿದೆ’ ಎಂದು ಗಂಭೀರ ಆರೋಪ ಮಾಡಿದರು. ಇದಕ್ಕೆ ದನಿಗೂಡಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಕೇಶವ ಕೃಪಾ ಹಾಗೂ ದೆಹಲಿಯಿಂದ ರಾಜ್ಯಪಾಲರಿಗೆ ಕರೆ ಬಂದಿದೆ ಎಂದು ದೂರಿದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಆರ್.ಅಶೋಕ್, ‘ರಾಜಭವನ ಹಾಗೂ ದೆಹಲಿ ನಡುವೆ ದೂರವಾಣಿ ಸಂಭಾಷಣೆ ನಡೆದಿದ್ದರೆ ಅದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಹೇಗೆ ಗೊತ್ತಾಯಿತು? ರಾಜ್ಯ ಸರ್ಕಾರ ಟೆಲಿಫೋನ್ ಕದ್ದಾಲಿಕೆ ಮಾಡಿದೆ’ ಎಂದು ಆರೋಪಿಸಿದರು.
ಪ್ರಕರಣದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರೇ ಅಪರಾಧಿ. ಅವರು ಕ್ಷಮೆಯಾಚನೆ ಮಾಡಬೇಕು ಎಂದು ಅಶೋಕ್ ಪಟ್ಟು ಹಿಡಿದರು.
ಆಗ ಎಚ್.ಕೆ. ಪಾಟೀಲ್, ‘ನಾನು ಅಪರಾಧಿ ಅಲ್ಲ, ಆಪಾದನೆ ಮಾಡಿದ್ದೇನೆ ಅಷ್ಟೇ. ಸದನ ಆರಂಭವಾದ ದಿನವೇ ದೆಹಲಿಯಿಂದ ರಾಜ್ಯಪಾಲರಿಗೆ ಕರೆ ಬಂದಿದೆ ಎಂದು ಹೇಳಿದ್ದೆ. ಕೇಂದ್ರ ಗೃಹ ಸಚಿವರು ಈವರೆಗೆ ಯಾವುದೇ ದೂರವಾಣಿ ಮಾತುಕತೆ ನಡೆದಿಲ್ಲ ಎಂದು ಯಾಕೆ ಸ್ಪಷ್ಟನೆ ನೀಡಲಿಲ್ಲ? ಎಂದು ಪ್ರಶ್ನಿಸಿದರು.
ಮಾತು ಮುಂದುವರೆಸಿದ ಆರ್. ಅಶೋಕ್, ದೂರವಾಣಿ ಕದ್ದಾಲಿಕೆಯಿಂದ ಸರ್ಕಾರಗಳೇ ಬಿದ್ದು ಹೋಗಿವೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಸದನದಲ್ಲಿ ಇಂತಹ ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ. ಕೂಡಲೇ ಆಧಾರ ಒದಗಿಸಬೇಕು ಇಲ್ಲದಿದ್ದರೆ ಕ್ಷಮೆ ಕೋರಬೇಕು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಸದನಕ್ಕೇ ಅಗೌರವ ಎಂಬಂತಾಗಿದೆ ಎಂದು ವಾಗ್ದಾಳಿ ನಡೆಸಿದರು.ಬಿಜೆಪಿಯ ಸುನಿಲ್‌ಕುಮಾರ್, ಎಸ್. ಸುರೇಶ್‌ಕುಮಾರ್, ಬಿ.ವೈ. ವಿಜಯೇಂದ್ರ ದನಿಗೂಡಿಸಿದ್ದರಿಂದ ತೀವ್ರ ಗದ್ದಲ ಸೃಷ್ಟಿಯಾಯಿತು.
ನಮ್ಮ ಸರ್ಕಾರ ದೂರವಾಣಿ ಕದ್ದಾಲಿಸಿಲ್ಲ-ಸಿಎಂ:
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದು, ನಮ್ಮ ಸರ್ಕಾರ ಯಾವುದೇ ದೂರವಾಣಿ ಕದ್ದಾಲಿಸಿಲ್ಲ. ಕೇಂದ್ರದಿಂದ ಕರೆ ಬಂದಿರಬಹುದು. ಇದನ್ನು ವಿನಾಕಾರಣ ವಿವಾದ ಮಾಡಲಾಗುತ್ತಿದೆ. ಮೊದಲು ರಾಜ್ಯಪಾಲರ ನಡೆ ಬಗ್ಗೆ ಮಾತನಾಡಿ ಎಂದು ಹೇಳಿದರು.
ಆ ಬಳಿಕವೂ ಗದ್ದಲ ಮುಂದುವರೆದಿದ್ದರಿಂದ ಸ್ಪೀಕರ್ ಅವರು, ಭೋಜನ ವಿರಾಮದ ಬಳಿಕ ಸದನ ಸೇರುವಂತೆ ಮುಂದೂಡಿದರು.