;Resize=(412,232))
ನವದೆಹಲಿ : ಕೇಂದ್ರ ಸಂಪುಟ ವಿಸ್ತರಣೆ, ಪುನಾರಚನೆ ಗುಸುಗುಸು ನಡುವೆಯೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಸಭೆ ನಡೆಸಿದ್ದಾರೆ.
2 ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ ಅವರು ಕೂಡಾ ರಾಷ್ಟ್ರಪತಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅದರ ಬೆನ್ನಲ್ಲೇ ಶಾ ಕೂಡ ಸಭೆ ನಡೆಸಿರುವುದು, ಶೀಘ್ರ ಸಂಪುಟ ಪುನಾರಚನೆಯಾಗುವ ವದಂತಿಗೆ ಪುಷ್ಟಿ ನೀಡಿದೆ.
ಸಭೆಯ ಫೋಟೋಗಳನ್ನು ಹಂಚಿಕೊಂಡಿರುವ ರಾಷ್ಟ್ರಪತಿಗಳ ಕಚೇರಿ, ‘ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು’ ಎಂದು ಟ್ವೀಟ್ ಮಾಡಿದೆ.
ಇತ್ತೀಚೆಗೆ ಕೆಲವು ಕೇಂದ್ರದ ಸಚಿವರನ್ನು ಪಕ್ಷದ ಕರ್ತವ್ಯಗಳಿಗೆ ನಿಯೋಜಿಸಲಾಗಿತ್ತು. ಕೇಂದ್ರ ಸಚಿವರಾದ ಜಾರ್ಜ್ ಕುರಿಯನ್ ಹಾಗೂ ರಣವೀತ್ ಸಿಂಗ್ ಅವರನ್ನು ರಾಜ್ಯಸಭೆಗೆ ಪುನಃ ನಾಮನಿರ್ದೇಶನ ಮಾಡಿರಲಿಲ್ಲ. ಈ ಮಧ್ಯೆ ಕುರಿಯನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ವಿದ್ಯಮಾನಗಳು ಸಂಪುಟ ಪುನಾರಚನೆ ಚರ್ಚೆಗೆ ನಾಂದಿ ಹಾಡಿವೆ.
ಈ ಬಾರಿ ಸಂಪುಟ ವಿಸ್ತರಣೆ, ಪುನಾರಚನೆ ವೇಳೆ ಮುಂಬರುವ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಆ ರಾಜ್ಯಗಳ ಸಂಸದರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಸಾಧ್ಯತೆಯಿದೆ. ಹೆಚ್ಚಿನ ಸಾಧನೆ ತೋರದವರನ್ನು ಕೈಬಿಡುವ ಸಾಧ್ಯತೆಯೂ ಇದೆ.