;Resize=(412,232))
ಕೋಲ್ಕತಾ : ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಬಂಡೆದ್ದು, ತಮ್ಮದೇ ಮೂಲ ಟಿಎಂಸಿ ಬಣ ಎಂದು ಘೋಷಿಸಿಕೊಂಡಿರುವ ಋತಬ್ರತ ಬ್ಯಾನರ್ಜಿ ನೇತೃತ್ವದ ಶಾಸಕರ ಬಣ ಇದೀಗ ಅರೂಪ್ ರಾಯ್‌ರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಈ ಮೂಲಕ, ಟಿಎಂಸಿ ಮುಖ್ಯಸ್ಥ ಹುದ್ದೆಯಿಂದ ಮಮತಾ ಬ್ಯಾನರ್ಜಿ ಅವರನ್ನು ಕಿತ್ತೆಸೆದು ಸಡ್ಡು ಹೊಡೆದಿದೆ.
ಇದರೊಂದಿಗೆ ವಿಧಾನಸಭೆಯಲ್ಲಿ 60ಕ್ಕೂ ಹೆಚ್ಚು ಶಾಸಕರ ಬಂಡಾಯದಿಂದ ಆರಂಭವಾಗಿ, ಬಳಿಕ 19 ಸಂಸದರ ಬಂಡಾಯಕ್ಕೂ ಸಾಕ್ಷಿಯಾಗಿದ್ದ ಟಿಎಂಸಿಯಲ್ಲಿ ಇದೀಗ ಸಂಘಟನೆ ಮೇಲಿನ ಹಿಡಿತದ ಯುದ್ಧಕ್ಕೆ ಮುನ್ನುಡಿ ಬರೆಯಲಾಗಿದೆ. ಇದು ಮಮತಾ ಬ್ಯಾನರ್ಜಿ ಅವರ ಸುದೀರ್ಘ ರಾಜಕೀಯ ಇತಿಹಾಸದಲ್ಲೇ ಅತಿದೊಡ್ಡ ಸವಾಲು ಎಂದು ಬಣ್ಣಿಸಲಾಗಿದೆ.
ಸೋಮವಾರ ಇಲ್ಲಿ ವಿಶೇಷ ಅಧಿವೇಶನ ಹೆಸರಲ್ಲಿ ಸಭೆ ಸೇರಿದ್ದ ಬಂಡಾಯ ಶಾಸಕರು, ಅರೂಪ್ ರಾಯ್ ಅವರನ್ನು ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಜೊತೆಗೆ ಮಾಜಿ ಸಚಿವ ಅರೂಪ್ ಬಿಸ್ವಾಸ್, ಶಾಸಕರಾದ ಫಿರ್ಹದ್ ಖಾನ್, ರಥಿನ್ ಘೋಷ್, ಸಬೀನಾ ಯಾಸ್ಮಿನ್ ಅವರನ್ನು ಉಪಾಧ್ಯಕ್ಷರಾಗಿ, ಋತಬ್ರತಾ ಬ್ಯಾನರ್ಜಿ, ಜಾವೇದ್ ಖಾನ್ ಮತ್ತು ಸಂದೀಪನ್ ಸಾಹಾ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಅಖ್ರುಝಮ್ಮಾನ್ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಗಿದೆ.
ಸಭೆಯ ಬಳಿಕ ಮಾತನಾಡಿದ ಋತಬ್ರತ ಬ್ಯಾನರ್ಜಿ, ‘ಟಿಎಂಸಿ ನಾಯಕರು ಮತ್ತು ಸದಸ್ಯರ ವಿಶೇಷ ಅಧಿವೇಶನದಲ್ಲಿ ಅರುಪ್ ರಾಯ್ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪಕ್ಷದ ಸಂವಿಧಾನದಂತೆ ಇಂದಿನ ಸಭೆ ಆಯೋಜಿಸಲಾಗಿತ್ತು. ಇಂದಿನ ಸಭೆಯ ನಿರ್ಧಾರಗಳನ್ನು ಶೀಘ್ರವೇ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಲಾಗುವುದು. ಇಲ್ಲಿ ಯಾವುದು ಸತ್ಯ ಯಾವುದು ಅಸತ್ಯ ಎಂಬುದು ಪ್ರಶ್ನೆಯಲ್ಲ. ನಾವೇ ನಿಜವಾದ ಟಿಎಂಸಿ. ನಮ್ಮ ನಿರ್ಧಾರವನ್ನು ಆಯೋಗಕ್ಕೆ ತಿಳಿಸುತ್ತೇವೆ ಮುಂದಿನ ನಿರ್ಧಾರ ಚುನಾವಣಾ ಆಯೋಗಕ್ಕೆ ಬಿಟ್ಟಿದ್ದು’ ಎಂದು ಹೇಳಿದರು.
ಇದೇ ವೇಳೆ ಶೀಘ್ರವೇ ಪಕ್ಷದ ವಿವಿಧ ಹಂತಗಳ ನಾಯಕರ ನೇಮಕಾತಿ ನಡೆಯಲಿದೆ. ಒಂದು ವೇಳೆ ಮಮತಾ ಬ್ಯಾನರ್ಜಿ ಅವರು ಮುಖ್ಯ ಸಲಹೆಗಾರರಾಗಿ ಆಗಮಿಸುವುದಾದರೆ ಅವರಿಗೆ ಪೂರ್ಣ ಸ್ವಾಗತವಿರಲಿದೆ’ ಎಂದು ಋತಬ್ರತಾಹೇಳಿದ್ದಾರೆ.
- 60 ಶಾಸಕರ ಬೆಂಬಲದೊಂದಿಗೆ ಅಸೆಂಬ್ಲಿ ವಿಪಕ್ಷ ನಾಯಕ ಹುದ್ದೆ ಗಿಟ್ಟಿಸಿದ್ದರು
- ನಿನ್ನೆ ಬಂಡಾಯ ಶಾಸಕರ, ನಾಯಕರು ಸಭೆ ಸೇರಿ ಮತ್ತಷ್ಟು ಕಠಿಣ ನಡೆ
- ಪಕ್ಷದ ಅಧ್ಯಕ್ಷ ಹುದ್ದೆಯಿಂದ ಮಮತಾ ವಜಾ, ಅಭಿಷೇಕ್ ಬ್ಯಾನರ್ಜಿ ಸಸ್ಪೆಂಡ್
- ಶಾಸಕ ಆರೂಪ್ ರಾಯ್‌ಗೆ ಈಗ ಬಂಡಾಯ ಟಿಎಂಸಿ ಬಣದ ಅಧ್ಯಕ್ಷ ಹುದ್ದೆ
- ತಮ್ಮದೇ ಆದ ಬಂಡಾಯ ಟಿಎಂಸಿ ಪಕ್ಷದ ಸ್ವರೂಪ ರಚಿಸಿಕೊಂಡ ಋತಬ್ರತ