₹3000 ಕೋಟಿ ವೆಚ್ಚದಲ್ಲಿ 450 ಕಿ.ಮೀ ರಸ್ತೆಗಳಿಗೆ ವೈಟ್ ಟಾಪಿಂಗ್: ಸಚಿವ ಕೃಷ್ಣ ಬೈರೇಗೌಡ

KannadaprabhaNewsNetwork |  
Published : Jun 23, 2026, 04:00 AM IST
Krishna Byregowda

ಸಾರಾಂಶ

ನಗರದ ವಿವಿಧೆಡೆ ಹೊಸದಾಗಿ 450 ಕಿ.ಮೀ ಉದ್ದದ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಸಮಗ್ರ ಯೋಜನಾ ವರದಿ ಸಿದ್ಧವಾಗಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

 ಬೆಂಗಳೂರು :  ನಗರದ ವಿವಿಧೆಡೆ ಹೊಸದಾಗಿ 450 ಕಿ.ಮೀ ಉದ್ದದ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಸಮಗ್ರ ಯೋಜನಾ ವರದಿ ಸಿದ್ಧವಾಗಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಬೆಂಗಳೂರು ಸ್ಮಾರ್ಟ್‌ ಇನ್‌ಪ್ರಾಸ್ಟ್ರಕ್ಚರ್ ಲಿಮಿಟೆಡ್‌ (ಬಿ ಸ್ಮೈಲ್) ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಸೋಮವಾರ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಟ್ ಟಾಪಿಂಗ್ ಮಾಡಲು ನಗರದ ಅನೇಕ ರಸ್ತೆಗಳನ್ನು ಆಯ್ಕೆಮಾಡಿ ಈಗಾಗಲೇ ಸಮೀಕ್ಷೆ ನಡೆಸಲಾಗಿದೆ ಎಂದರು.

ಈ ಹಿಂದೆ ಕೈಗೆತ್ತಿಕೊಂಡಿದ್ದ 196 ಕಿ.ಮೀ ರಸ್ತೆಗಳ ವೈಟ್ ಟಾಪಿಂಗ್ ಯೋಜನೆ ಪೂರ್ಣಗೊಂಡಿದೆ. ಹೊಸದಾಗಿ 126 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದ್ದು, ಅದರಲ್ಲಿ 58 ಕಿ.ಮೀ. ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳಿಗೆ ವೇಗ ನೀಡಿ ಮುಂದಿನ 6 ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಗುತ್ತಿಗೆದಾರರಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ, ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದೇನೆ ಎಂದರು.

ಸುರಕ್ಷತಾ ಕ್ರಮಗಳನ್ನು ಪಾಲಿಸಿ: 

ವೈಟ್ ಟಾಪಿಂಗ್ ಕಾಮಗಾರಿ ನಡೆಯುವ ಎಲ್ಲ ಸ್ಥಳಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಕಾಮಗಾರಿ ನಡೆಯುವ ಪ್ರದೇಶಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ರಸ್ತೆ ಬದಿಯಲ್ಲಿ ಸಾಮಗ್ರಿಗಳನ್ನು ರಾಶಿ ಮಾಡುವುದು, ಜೆಲ್ಲಿ ಹಾಕಿ ಹಾಗೆಯೇ ಬಿಡುವುದು ಹಾಗೂ ರಸ್ತೆ ಅಗೆದು ನಿರ್ಲಕ್ಷ್ಯ ವಹಿಸುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ನಾಗರಿಕರು, ಸವಾರರಿಗೆ ತೊಂದರೆ ಆಗುತ್ತದೆ. ಕಾಲ ಮಿತಿಯಲ್ಲಿ ಕೆಲಸ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.

ಹೊರ ವರ್ತುಲ ರಸ್ತೆ ಮರುವಿನ್ಯಾಸ:  

ಹೊರ ವರ್ತುಲ ರಸ್ತೆಯ ಮರುವಿನ್ಯಾಸಕ್ಕಾಗಿ 450 ಕೋಟಿ ರು. ವೆಚ್ಚದ ಸಮಗ್ರ ಯೋಜನೆ ರೂಪಿಸಲಾಗಿದೆ. ಮೆಟ್ರೋ ಕಾಮಗಾರಿಯೊಂದಿಗೆ ಈ ಯೋಜನೆಯನ್ನು ಏಕಕಾಲದಲ್ಲಿ ಆರಂಭಿಸಿದರೆ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಚಾರಿ ಪೊಲೀಸರೊಂದಿಗೆ ಚರ್ಚಿಸಿ ಸೂಕ್ತ ಸಮಯದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಬಿಸ್ಮೈಲ್ ತಾಂತ್ರಿಕ ನಿರ್ದೇಶಕ ಪ್ರಹ್ಲಾದ್ ಹಾಜರಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

12 ವರ್ಷ ಬಳಿಕ ಜರ್ಮನಿ ನಾಕೌಟ್‌ ಪ್ರವೇಶ
ದೇಣಿಗೆ ಅಕ್ರಮ : ಅಯೋಧ್ಯೆ ಬಿಟ್ಟು ಹೋಗದಂತೆ ರಾಮ ಮಂದಿರ ಸಿಬ್ಬಂದಿಗೆ ಸೂಚನೆ