ಬಿಜೆಪಿ-ಜೆಡಿಎಸ್‌ ನನ್ನನ್ನು ಟಾರ್ಗೆಟ್‌ ಮಾಡ್ತಿವೆ: ಅವರ ಎಲ್ಲ ಹಗರಣಗಳನ್ನ ಸಮಾವೇಶದಲ್ಲಿ ಬಿಚ್ಚಿಡುತ್ತೇನೆ- ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Aug 08, 2024, 01:45 AM ISTUpdated : Aug 08, 2024, 04:34 AM IST
1 | Kannada Prabha

ಸಾರಾಂಶ

ಆಪರೇಷನ್‌ ಕಮಲದ ಮೂಲಕ ಸರ್ಕಾರ ಬೀಳಿಸಲು ವಿಫಲರಾದ ಹಿನ್ನೆಲೆಯಲ್ಲಿ ಇದೀಗ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅದು ಯಾವತ್ತೂ ಯಶಸ್ವಿಯಾಗುವುದಿಲ್ಲ. ಇವರ ಸುಳ್ಳುಗಳಿಗೆ ನಾನು ಹೆದರುವುದಿಲ್ಲ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.

  ಮೈಸೂರು : ಆಪರೇಷನ್‌ ಕಮಲದ ಮೂಲಕ ಸರ್ಕಾರ ಬೀಳಿಸಲು ವಿಫಲರಾದ ಹಿನ್ನೆಲೆಯಲ್ಲಿ ಇದೀಗ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅದು ಯಾವತ್ತೂ ಯಶಸ್ವಿಯಾಗುವುದಿಲ್ಲ. ಇವರ ಸುಳ್ಳುಗಳಿಗೆ ನಾನು ಹೆದರುವುದಿಲ್ಲ. ಬಿಜೆಪಿ-ಜೆಡಿಎಸ್ ಸರ್ಕಾರದ ಅವಧಿಯ ಎಲ್ಲ ಹಗರಣಗಳನ್ನು ಶುಕ್ರವಾರ ಮೈಸೂರಿನಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶದಲ್ಲಿ ಬಿಚ್ಚಿಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್-ಬಿಜೆಪಿಯವರು ಏನೆಲ್ಲ ಹಗರಣಗಳನ್ನು ಮಾಡಿದ್ದಾರೆ. ಎಲ್ಲವನ್ನೂ ಸಂಪೂರ್ಣವಾಗಿ ಸಮಾವೇಶದಲ್ಲಿ ತೆರೆದಿಡುತ್ತೇನೆ. ಅದನ್ನೆಲ್ಲ ಹೇಳಲೆಂದೇ ಬುಧವಾರ ಮಾಧ್ಯಮಗೋಷ್ಠಿ ಕರೆದಿದ್ದೆ. ಆದರೆ ಮನಸ್ಸು ಬದಲಾಯಿಸಿ ಸಮಾವೇಶದಲ್ಲಿ ಎಲ್ಲವನ್ನೂ ಹೇಳಲು ಸುದ್ದಿಗೋಷ್ಠಿ ರದ್ದು ಮಾಡಿದ್ದೇನೆ ಎಂದರು.

ನನ್ನ ಪತ್ನಿ ಬದಲಿ ನಿವೇಶನಕ್ಕೆ ಮುಡಾಗೆ ಅರ್ಜಿ ಕೊಟ್ಟಾಗ ನಾನು ಮುಖ್ಯಮಂತ್ರಿ ಆಗಿದ್ದೆ. ನಾನು ಸಿಎಂ ಆಗಿರುವ ತನಕ ಬದಲಿ ನಿವೇಶನ ಕೊಡಬೇಡಿ ಎಂದಿದ್ದೆ. ಪ್ರಭಾವ ಬಳಸುವುದಿದ್ದರೆ ಅಂದೇ ಬಳಸುತ್ತಿದ್ದೆ. ಭೂಮಿ ಕೊಡಲು ಹೇಳುತ್ತಿದ್ದೆ. ಮುಖ್ಯಮಂತ್ರಿಯಾಗಿ ಅದನ್ನು ಕೊಡಲು ಆಗುತ್ತಿರಲಿಲ್ವ?. ನನ್ನ ಪತ್ನಿ ಮತ್ತೆ 2021ರಲ್ಲಿ ಅರ್ಜಿ ಹಾಕಿದ್ದು, ಬಿಜೆಪಿ ಸರ್ಕಾರ ಕಾನೂನಾತ್ಮಕವಾಗಿ ಭೂಮಿ ನೀಡಿದೆ ಎಂದರು.

ರಾಜ್ಯಪಾಲರಿಂದ ನನಗೆ ಬಂದಿರುವುದು ಒಂದೇ ನೋಟಿಸ್. ಅದಕ್ಕೆ ನಾನು ಈಗಾಗಲೇ ಉತ್ತರ ಕೊಟ್ಟಿದ್ದೇನೆ. ಸಚಿವ ಸಂಪುಟದಿಂದಲೂ ಉತ್ತರ ನೀಡಲಾಗಿದೆ. ಕಾನೂನಾತ್ಮಕವಾಗಿ ರಾಜ್ಯಪಾಲರು ಅದನ್ನು ಒಪ್ಪಿಕೊಳ್ಳಬೇಕು. ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

ಈ ವಯಸ್ಸಲ್ಲಿ ಯಡಿಯೂರಪ್ಪಗೆ ಇದೆಲ್ಲಾ ಬೇಕಿತ್ತಾ?: 

ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಯಡಿಯೂರಪ್ಪ ಆಗ್ರಹಕ್ಕೆ ಕಿಡಿ ಕಾರಿದ ಸಿಎಂ, ಅವರ ಮೇಲೆ ಪೋಕ್ಸೋ ಕೇಸ್‌ ಇದೆ, ಅವರಿಗೆ ನನ್ನ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ನ್ಯಾಯಾಲಯದ ದಯೆಯಿಂದ ಅವರು ಬದುಕಿದ್ದಾರೆ. ಇಲ್ಲವಾದರೆ ಜೈಲಲ್ಲಿ ಇರಬೇಕಿತ್ತು. 82 ವರ್ಷ ವಯಸ್ಸಿನಲ್ಲಿ ಅವರಿಗೆ ಇದೆಲ್ಲ ಬೇಕಿತ್ತಾ?. ಯಡಿಯೂರಪ್ಪ ರಾಜಕೀಯ ಜೀವನದಿಂದ ನಿವೃತ್ತಿಯಾಗಬೇಕಿತ್ತು ಎಂದು ಹರಿಹಾಯ್ದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ