24,300 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅಸ್ತು : ಸಿದ್ದರಾಮಯ್ಯ

Published : Dec 10, 2025, 05:07 AM IST
CM Siddaramaiah

ಸಾರಾಂಶ

 ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ರಾಜ್ಯದಲ್ಲಿ ಒಟ್ಟು 2,84,881 ಸರ್ಕಾರಿ ಹಾಗೂ ಅರೆ ಸರ್ಕಾರಿ ಹುದ್ದೆಗಳು ಖಾಲಿಯಿವೆ. ಪ್ರಸ್ತುತ 24,300 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಮಂಜೂರಾತಿ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸಭೆ : ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡ ಸೇರಿದಂತೆ ವಿವಿಧೆಡೆ ಇತ್ತೀಚೆಗೆ ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ರಾಜ್ಯದಲ್ಲಿ ಒಟ್ಟು 2,84,881 ಸರ್ಕಾರಿ ಹಾಗೂ ಅರೆ ಸರ್ಕಾರಿ ಹುದ್ದೆಗಳು ಖಾಲಿಯಿವೆ. ಪ್ರಸ್ತುತ 24,300 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಮಂಜೂರಾತಿ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬಿಜೆಪಿ ಉಚ್ಚಾಟಿತ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿರುವ ಸಿದ್ದರಾಮಯ್ಯ ಅವರು ಇಲಾಖಾವಾರು ಖಾಲಿ ಹುದ್ದೆಗಳ ವಿವರ ಹಾಗೂ ಭರ್ತಿ ಮಾಡುತ್ತಿರುವ ಹುದ್ದೆಗಳ ವಿವರ ನೀಡಿದ್ದಾರೆ.

ರಾಜ್ಯದಲ್ಲಿ ಒಟ್ಟು 2,84,881 ಸರ್ಕಾರಿ ಹಾಗೂ ಅರೆ ಸರ್ಕಾರಿ ಹುದ್ದೆ ಖಾಲಿ ಇವೆ. ಈ ಪೈಕಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಲ್ಲಿ 79,696, ಆರೋಗ್ಯ ಇಲಾಖೆಯಲ್ಲಿ 37,572, ಒಳಾಡಳಿತ ಇಲಾಖೆಯಲ್ಲಿ 28,188, ಉನ್ನತ ಶಿಕ್ಷಣ 13,599, ಪಶುಸಂಗೋಪನೆ 11,020, ಕಂದಾಯ 10,867, ಆರ್ಥಿಕ ಇಲಾಖೆಯಲ್ಲಿ 7668, ಕಾನೂನು ಇಲಾಖೆಯಲ್ಲಿ 7659, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ 4792, ಗ್ರಾಮೀಣಾಭಿವೃದ್ಧಿ ಇಲಾಖೆ 10,504, ಪರಿಶಿಷ್ಟ ಜಾತಿಗಳ ಕಲ್ಯಾಣ 9,646, ಪರಿಶಿಷ್ಟ ಪಂಗಡಗಳ ಕಲ್ಯಾಣ 2,435, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಜೀವನೋಪಾಯ 4,010, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 3,391 ಹುದ್ದೆ ಖಾಲಿಯಿವೆ ಎಂದು ಹೇಳಿದ್ದಾರೆ.

24,300 ಹುದ್ದೆ ಭರ್ತಿಗೆ ಮಂಜೂರಾತಿ:

ಪ್ರಸ್ತುತ ಸಾರಿಗೆ ಇಲಾಖೆಯ 6,847 ಹುದ್ದೆ, ಇಂಧನ ಇಲಾಖೆಯ 2,400, ಆರ್ಥಿಕ ಇಲಾಖೆಯ 2,243, ಆರೋಗ್ಯ ಇಲಾಖೆಯ 1,725, ಕಂದಾಯ ಇಲಾಖೆಯ 1,350, ಕೃಷಿ ಇಲಾಖೆಯ 553, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ 5,267, ಪರಿಶಿಷ್ಟ ಜಾತಿಗಳ ಕಲ್ಯಾಣ ಇಲಾಖೆಯ 892, ಒಳಾಡಳಿತ ಇಲಾಖೆಯ 557, ವೈದ್ಯಕೀಯ ಶಿಕ್ಷಣ ಇಲಾಖೆಯ 333, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ 200, ನಗರಾಭಿವೃದ್ಧಿ ಇಲಾಖೆಯ 185, ಸಹಕಾರ ಇಲಾಖೆಯ 180 ಹುದ್ದೆ ಸೇರಿ ಒಟ್ಟು 24,300 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಮಂಜೂರಾತಿ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದ್ದಾರೆ.

ಯಾವ ಇಲಾಖೆಯ ಎಷ್ಟು ಹುದ್ದೆ ಭರ್ತಿ?

ಸಾರಿಗೆ 6,847

ಇಂಧನ 2,400

ಹಣಕಾಸು 2,243

ಆರೋಗ್ಯ 1,725

ಕಂದಾಯ 1,350

ಕೃಷಿ 557

ವೈದ್ಯ 333

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಡಾ। ಯತೀಂದ್ರ ವಿರುದ್ಧ ಡಿಕೆಶಿ ಬಣ ಮತ್ತೆ ಬಾಣ
ಮತ್ತೆ ಟಿಪ್ಪು ಜಯಂತಿ ವಿವಾದ ಭುಗಿಲು