ಇನ್ನೊಂದು ವರ್ಷದವರೆಗೂ ಚಾಮುಂಡೇಶ್ವರಿ ಆಶೀರ್ವಾದ ಇರಲಿ : ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ!

KannadaprabhaNewsNetwork |  
Published : Oct 04, 2024, 01:01 AM ISTUpdated : Oct 04, 2024, 03:43 AM IST
ಸಿದ್ದರಾಮಯ್ಯನವರಿಂದ ಪುಷ್ಪಾರ್ಚನೆ | Kannada Prabha

ಸಾರಾಂಶ

ಇನ್ನೊಂದು ವರ್ಷದವರೆಗೂ ನಾಡದೇವತೆ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಇರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅವರು ‘ಒಂದು ವರ್ಷ’ ಎಂದು ಹೇಳಿರುವುದು ನಾನಾ ರೀತಿಯ ರಾಜಕೀಯ ವಿಶ್ಲೇಷಣೆಗಳಿಗೆ ಕಾರಣವಾಗಿದೆ.

 ಮೈಸೂರು : ಇನ್ನೊಂದು ವರ್ಷದವರೆಗೂ ನಾಡದೇವತೆ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಇರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅವರು ‘ಒಂದು ವರ್ಷ’ ಎಂದು ಹೇಳಿರುವುದು ನಾನಾ ರೀತಿಯ ರಾಜಕೀಯ ವಿಶ್ಲೇಷಣೆಗಳಿಗೆ ಕಾರಣವಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದೆ. ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌, ಸಿಎಂ ರಾಜೀನಾಮೆಗೆ ಪಟ್ಟು ಹಿಡಿದಿವೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಗುರುವಾರ ಬೆಳಗ್ಗೆ ಮೈಸೂರು ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ, ಪೂಜೆ ಸಲ್ಲಿಸಿ, ದೇವಿಯನ್ನು ಪ್ರಾರ್ಥಿಸಿದ ಸಿದ್ದರಾಮಯ್ಯ, ಜನರ ಆಶೀರ್ವಾದದಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ಈ ನಾಡಿನ ಜನರ ಬೆಂಬಲ ಇರುವವರೆಗೂ ನಾನೇ ಸಿಎಂ ಆಗಿರುತ್ತೇನೆ. ಇನ್ನೊಂದು ವರ್ಷದವರೆಗೂ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ನನ್ನ ಮೆಲೆ ಇರಲಿ ಎಂದು ಪ್ರಾರ್ಥಿಸಿದರು.

ಹಂ.ಪ.ನಾಗರಾಜಯ್ಯ ಅವರು ಮೌಲ್ಯಯುತ ಭಾಷಣ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸರಕಾರಗಳನ್ನು ವಾಮ ಮಾರ್ಗಗಳಲ್ಲಿ ಕಿತ್ತು ಹಾಕುವುದು ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದ್ದು, ಪ್ರಜಾಪ್ರಭುತ್ವ ಇನ್ನಷ್ಟು ಬಲಪಡಿಸಬೇಕು ಎಂದಿರುವುದು ಔಚಿತ್ಯಪೂರ್ಣವಾಗಿದೆ ಎಂದರು.

ಜನರ ಆಶೀರ್ವಾದದಿಂದ ನಾವು ಆಡಳಿತಕ್ಕೆ ಬಂದಿದ್ದೇವೆ. 5 ವರ್ಷಗಳ ಕಾಲ ರಾಜ್ಯದ ಜನತೆ ನಮಗೆ ಅವಕಾಶ ಕೊಟ್ಟಿದ್ದಾರೆ. ಈಗಲೂ ಎಷ್ಟೇ ತೊಡಕುಗಳು ಎದುರಾದರೂ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಮೇಲಿದೆ. ಐದು ವರ್ಷಗಳ ಕಾಲ ನಾವು ಆಡಳಿತ ಮಾಡಿಯೇ ಮಾಡುತ್ತೇವೆ ಎಂದು ಹೇಳಿದರು.

ಸತ್ಯಕ್ಕೆ ಯಾವತ್ತೂ ಜಯ ದೊರೆಯುತ್ತದೆ. ಈ ರಾಜ್ಯದ ಜನರ ಆಶೀರ್ವಾದ ಈ ಸರ್ಕಾರದ ಮೇಲೆ ಇರುವ ತನಕ ಯಾರಿಗೂ ಏನೂ ಮಾಡಲು ಸಾಧ್ಯವಿಲ್ಲ. ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿದ್ದೇನೆ. ಮೂರು ಬಾರಿ ಸೋತಿದ್ದೇನೆ. ಅದೇ ರೀತಿ ವರುಣದಿಂದ ಮೂರು ಬಾರಿ, ಬಾದಾಮಿಯಿಂದ ಒಂದು ಬಾರಿ, ಒಟ್ಟು 9 ಬಾರಿ ಗೆದ್ದಿದ್ದೇನೆ. ಚಾಮುಂಡೇಶ್ವರಿ ತಾಯಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ. ಇಲ್ಲಿಯವರೆಗೆ ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದರೆ ಇಷ್ಟು ದೀರ್ಘಕಾಲ ರಾಜಕಾರಣದಲ್ಲಿ ಇರಲು ಸಾಧ್ಯವಿರಲಿಲ್ಲ ಎಂದರು.

ನನಗೆ ನ್ಯಾಯಾಲಯಗಳಲ್ಲಿ ನಂಬಿಕೆಯಿದೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವ ಪ್ರಯತ್ನ ಮಾಡುತ್ತಿದ್ದೇವೆ. ಗಾಂಧೀಜಿ ಅವರು ಹೇಳಿದಂತೆ ಎಲ್ಲಾ ನ್ಯಾಯಾಲಯಗಳಿಗಿಂತ ಮಿಗಿಲಾದುದು ಆತ್ಮಸಾಕ್ಷಿ. ಆತ್ಮಸಾಕ್ಷಿಗೆ ತಕ್ಕಂತೆ ನಡೆದಿದ್ದೇನೆ ಎಂಬ ದೃಢ ನಂಬಿಕೆ ಇದೆ ಎಂದರು.-----

ಜನಬೆಂಬಲ ಇರೋವರೆಗೂ ನಾನೇ ಸಿಎಂ ಆಗಿರುತ್ತೇನೆ

ಜನರ ಆಶೀರ್ವಾದದಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ಈ ನಾಡಿನ ಜನರ ಬೆಂಬಲ ಇರುವವರೆಗೂ ನಾನೇ ಸಿಎಂ ಆಗಿರುತ್ತೇನೆ. 5 ವರ್ಷಗಳ ಕಾಲ ರಾಜ್ಯದ ಜನತೆ ನಮಗೆ ಅವಕಾಶ ಕೊಟ್ಟಿದ್ದಾರೆ. ಏನೇ ತೊಡಕು ಎದುರಾದರೂ 5 ವರ್ಷಗಳ ಕಾಲ ನಾವು ಆಡಳಿತ ಮಾಡಿಯೇ ಮಾಡುತ್ತೇವೆ.

- ಸಿದ್ದರಾಮಯ್ಯ ಮುಖ್ಯಮಂತ್ರಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಪತ್ರಕರ್ತರು ಹೆದರದೆ ಕರ್ತವ್ಯ ನಿರ್ವಹಿಸಿ: ಬಸವರಾಜ ಹೊರಟ್ಟಿ
ಸಂವಿಧಾನದ ಕುರಿತು ಜಾಗೃತಿ ಮೂಡಿಸಿ: ಸತೀಶ್ ಜಾರಕಿಹೊಳಿ