ರಾಯಚೂರು : ರಾಜ್ಯ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ, ಇದೆಲ್ಲಾ ಊಹಾಪೋಹ. ಸಿದ್ದರಾಮಯ್ಯ ಅವರೇ 5 ವರ್ಷವೂ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರಾಜ್ಯ ಸರ್ಕಾರದಲ್ಲಿ ನವೆಂಬರ್‌ನಲ್ಲಿ ಕ್ರಾಂತಿಯಾಗಲಿದೆ, ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎನ್ನುವ ಕುರಿತಂತೆ ಕೇಳಿ ಬರುತ್ತಿರುವ ಮಾತುಗಳು ಕೇವಲ ಉಹಾಪೋಹ. ಈ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಏನು ಮಾತುಕತೆ ನಡೆದಿದೆ ಎನ್ನುವುದರ ಕುರಿತು ಯಾರಿಗೂ ಗೊತ್ತಿಲ್ಲ. ಊಹಾಪೋಹದ ಆಧಾರದ ಮೇಲೆಯೇ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನನಗೆ ತಿಳಿದಿರುವ ಹಾಗೆ ಅಧಿಕಾರ ಹಂಚಿಕೆಯ ಚರ್ಚೆಯೇ ಆಗಿಲ್ಲ. ನಮ್ಮ ಪಕ್ಷದಲ್ಲಿ ಸಾಕಷ್ಟು ಹಿರಿಯರು ಸಿಎಂ ಪದವಿಗೆ ಅರ್ಹರಾಗಿದ್ದಾರೆ. ಅದಕ್ಕಾಗಿ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಡಿಸೆಂಬರ್‌ನಲ್ಲಿ ಸಂಪುಟ ವಿಸ್ತರಣೆ ಸಾಧ್ಯತೆ:
ಮುಂದಿನ ಡಿಸೆಂಬರ್‌ನಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುವ ಸಾಧ್ಯತೆಗಳಿವೆ. ಸಂಪುಟ ಪುನಾರಚನೆ ಬಗ್ಗೆ ಈಗಾಗಲೇ ಕೆಲ ಹಿರಿಯ ಸಚಿವರು ಹೇಳಿಕೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬಹುಶಃ ಡಿಸೆಂಬರ್‌ನಲ್ಲಿ ಸಂಪುಟ ವಿಸ್ತರಣೆ ಆಗುತ್ತೆ ಎಂದು ಅವರು ಹೇಳಿದರು.
ಇನ್ನು, ಎಲ್ಲಿಯವರೆಗೆ ಸಿದ್ದರಾಮಯ್ಯ ಅವರು ಸಿಎಂ ಆಗಿರುತ್ತಾರೆಯೋ, ಅಲ್ಲಿಯವರೆಗೆ ಯತೀಂದ್ರ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವುದಿಲ್ಲ ಎನ್ನುವುದರ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ಈಗಾಗಲೇ ಸಿಎಂ ಸ್ಪಷ್ಟೀಕರಣ ನೀಡಿದ್ದಾರೆ ಎಂದರು.