17ನೇ ಬಜೆಟ್‌ಗೆ ಸಿದ್ದರಾಮಯ್ಯ ಸಿದ್ಧತೆ : 10 ಇಲಾಖೆ ಸಭೆ

Published : Feb 06, 2026, 06:00 AM IST
Siddaramaiah

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಇಡೀ ದಿನ ಗೃಹ ಇಲಾಖೆ ಸೇರಿ ವಿವಿಧ ಹತ್ತು ಇಲಾಖೆಗಳ ಸಚಿವರು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಬಜೆಟ್‌ ಪೂರ್ವಭಾವಿ ಚರ್ಚೆ ನಡೆಸಿದರು. ಇದರೊಂದಿಗೆ ತಮ್ಮ ದಾಖಲೆಯ 17ನೇ ಬಜೆಟ್‌ ಮಂಡನೆಗೆ ಅಧಿಕೃತ ತಯಾರಿ ಆರಂಭಿಸಿದರು.

  ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಇಡೀ ದಿನ ಗೃಹ ಇಲಾಖೆ ಸೇರಿ ವಿವಿಧ ಹತ್ತು ಇಲಾಖೆಗಳ ಸಚಿವರು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಬಜೆಟ್‌ ಪೂರ್ವಭಾವಿ ಚರ್ಚೆ ನಡೆಸಿದರು. ಇದರೊಂದಿಗೆ ತಮ್ಮ ದಾಖಲೆಯ 17ನೇ ಬಜೆಟ್‌ ಮಂಡನೆಗೆ ಅಧಿಕೃತ ತಯಾರಿ ಆರಂಭಿಸಿದರು.

ನಗರದ ರೇಸ್‌ಕೋರ್ಸ್‌ ರಸ್ತೆಯ ಶಕ್ತಿ ಭವನದಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 5.30ರವರೆಗೂ ವಿವಿಧ ಇಲಾಖೆಗಳ ಸಚಿವರು ಮತ್ತು ಉನ್ನತ ಅಧಿಕಾರಿಗಳೊಂದಿಗೆ 2026-27ನೇ ಸಾಲಿನ ಆಯವ್ಯಯದ ಪೂರ್ವಭಾವಿ ಚರ್ಚೆ ನಡೆಸಿದರು. ಈ ವೇಳೆ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹಾಗೂ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ಮೊದಲಿಗೆ ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ್‌ ಖಂಡ್ರೆ ಹಾಗೂ ಆ ಇಲಾಖೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಚರ್ಚೆ ನಡೆಸಿದರು. ನಂತರ ಕಾನೂನು ಮತ್ತು ಸಂಸದೀಯ ಇಲಾಖೆ, ಪ್ರವಾಸೋದ್ಯಮ, ತೋಟಗಾರಿಕೆ, ಗಣಿ ಮತ್ತು ಭೂ ವಿಜ್ಞಾನ, ಕಾರ್ಮಿಕ, ಒಳಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ, ಕೊನೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಸಭೆ ನಡೆಸಿದರು.

ಅನುದಾನ ಬೇಡಿಕೆ

ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌, ಗಣಿ, ಭೂ ವಿಜ್ಞಾನ ಮತ್ತು ತೋಟಗಾರಿಕಾ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರು ತಮ್ಮ ಇಲಾಖಾ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಇಲಾಖಾವಾರು ಹಾಲಿ ಇರುವ ಯೋಜನೆಗಳಿಗೆ ಅಗತ್ಯ ಅನುದಾನ, ಯಾವೆಲ್ಲಾ ಹೊಸ ಕಾರ್ಯಕ್ರಮಗಳನ್ನು ತರಲು ಆಲೋಚಿಸಲಾಗಿದೆ. ಬೇಕಿರುವ ಅನುದಾನವೆಷ್ಟು ಎನ್ನುವ ಬಗ್ಗೆ ಬೇಡಿಕೆಗಳನ್ನು ಇಟ್ಟರು. ಇದರ ಜೊತೆಗೆ ಮುಖ್ಯಮಂತ್ರಿ ಅವರು ಕಳೆದ ಬಜೆಟ್‌ನಲ್ಲಿ ತಮ್ಮ ಇಲಾಖೆಗೆ ಘೋಷಿಸಿದ್ದ ಯಾವೆಲ್ಲಾ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ, ಇನ್ನೆಷ್ಟು ಬಾಕಿ ಇವೆ ಎಂದು ಮಾಹಿತಿ ಪಡೆದು ಉಳಿದ ಯೋಜನೆಗಳ ಅನುಷ್ಠಾನಕ್ಕೆ ಆದಷ್ಟು ಬೇಗ ಕ್ರಮ ವಹಿಸುವಂತೆಯೂ ಸೂಚಿಸಿದರು ಎಂದು ತಿಳಿದು ಬಂದಿದೆ.

ಇಂದು ಯಾವ್ಯಾವ ಇಲಾಖೆ ಸಭೆ?

ಶುಕ್ರವಾರವೂ ವಿವಿಧ ಇಲಾಖೆಗಳ ಪೂರ್ವಭಾವಿ ಸಭೆ ಮುಂದುವರೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ 6.30ರವರೆಗೆ ಪರಿಶಿಷ್ಟ ವರ್ಗಗಳ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಮೂಲಸೌಕರ್ಯ ಇಲಾಖೆ, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವರು, ಅಧಿಕಾರಿಗಳೊಂದಿಗೆ ಬಜೆಟ್‌ ಕುರಿತು ಪೂರ್ವಭಾವಿ ಚರ್ಚೆ ನಡೆಸಲಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನಾಯಕತ್ವ ಗೊಂದಲ ಇತ್ಯರ್ಥಕ್ಕೆ ಕಾಂಗ್ರೆಸ್‌ ಶಾಸಕರಿಂದ ಒತ್ತಡ
ದೇಶದ ಸಂಸದೀಯ ಇತಿಹಾಸದಲ್ಲೇ ಕಂಡುಕೇಳರಿಯದ ಸಂಗತಿ : ಪ್ರಧಾನಿ ಮೋದಿ ಮೇಲೆ ಹಲ್ಲೆಗೆ ಯತ್ನ?