ಕೋಗಿಲು ಬಡಾವಣೆಯ ಸಂತ್ರಸ್ತ 12 ಕುಟುಂಬಕ್ಕೆ ಮನೆ ಹಂಚಿದ ರಾಜ್ಯ ಸರ್ಕಾರ

KannadaprabhaNewsNetwork |  
Published : Mar 19, 2026, 03:30 AM ISTUpdated : Mar 19, 2026, 04:20 AM IST
Kogilu

ಸಾರಾಂಶ

ಒತ್ತುವರಿ ಆರೋಪದ ಮೇಲೆ ತೆರವಾದ ಕೋಗಿಲು ಬಡಾವಣೆಯ ಸಂತ್ರಸ್ತರ ಪೈಕಿ 12 ಕುಟುಂಬ ಸೇರಿದಂತೆ ಒಟ್ಟು 30 ಮಂದಿಗೆ ವಸತಿ ಸಚಿವ ಜಮೀರ್ ಅಹಮದ್‌ಖಾನ್‌ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಬುಧವಾರ ಹಕ್ಕುಪತ್ರ ವಿತರಿಸಿದ್ದಾರೆ.

 ಬೆಂಗಳೂರು :  ಒತ್ತುವರಿ ಆರೋಪದ ಮೇಲೆ ತೆರವಾದ ಕೋಗಿಲು ಬಡಾವಣೆಯ ಸಂತ್ರಸ್ತರ ಪೈಕಿ 12 ಕುಟುಂಬ ಸೇರಿದಂತೆ ಒಟ್ಟು 30 ಮಂದಿಗೆ ವಸತಿ ಸಚಿವ ಜಮೀರ್ ಅಹಮದ್‌ಖಾನ್‌ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಬುಧವಾರ ಹಕ್ಕುಪತ್ರ ವಿತರಿಸಿದ್ದಾರೆ.

ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದ ಮುಖ್ಯಮಂತ್ರಿ ಅವರ 1 ಲಕ್ಷ ವಸತಿ ಯೋಜನೆಯಡಿ ನೇರವಾಗಿ ಅರ್ಜಿ ಸಲ್ಲಿಸಿದ್ದ 18 ಮಂದಿ ಹಾಗೂ ಕೋಗಿಲು ನಿರಾಶ್ರಿತರಾದ 12 ಮಂದಿಗೆ ಹಕ್ಕುಪತ್ರ ವಿತರಿಸಲಾಯಿತು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹಮದ್‌ಖಾನ್‌, ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದ ಕೋಗಿಲು ಬಂಡೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನೆಲೆಸಿದ್ದ 165 ಕುಟುಂಬಗಳನ್ನು ತೆರವುಗೊಳಿಸಲಾಗಿತ್ತು. ಅವರಲ್ಲಿ ಅರ್ಹರಿಗೆ ವಸತಿ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಲಾಗಿತ್ತು.

165 ಕುಟುಂಬಗಳಲ್ಲಿ 61 ಕುಟುಂಬ ಮಾತ್ರ ಮನೆ ಪಡೆಯಲು ಅರ್ಹರಾಗಿದ್ದಾರೆ. ಈ ಪೈಕಿ ಈವರೆಗೆ 12 ಮಂದಿ ಮಾತ್ರ ದಾಖಲೆ ಸಲ್ಲಿಸಿದ್ದು ಅವರಿಗೆ ಬುಧವಾರ ಹಕ್ಕುಪತ್ರ ನೀಡಲಾಗಿದೆ ಎಂದು ಹೇಳಿದರು. 

104 ಕುಟುಂಬ ಯಾಕೆ ಅರ್ಹರಲ್ಲ?:

ಉಳಿದ 104 ಕುಟುಂಬ ಯಾಕೆ ಅರ್ಹರಲ್ಲ ಎಂಬ ಬಗ್ಗೆಯೂ ವಿವರಣೆ ನೀಡಿದ ಜಮೀರ್‌, 165 ಕುಟುಂಬಗಳ ಪೈಕಿ 61 ಕುಟುಂಬ ಅರ್ಹತೆ ಪಡೆದಿದ್ದು, 104 ಕುಟುಂಬ ಅರ್ಹತೆ ಪಡೆದಿಲ್ಲ. ಏಕೆಂದರೆ ಇದರಲ್ಲಿ 30 ಕುಟುಂಬ ಬೆಂಗಳೂರಿನಲ್ಲಿ ಕನಿಷ್ಠ 5 ವರ್ಷ ನೆಲೆಸಿರಬೇಕೆಂಬ ಅರ್ಹತೆ ಪೂರೈಸಿರಲಿಲ್ಲ. 8 ಕುಟುಂಬ ಎರಡೆರಡು ಅರ್ಜಿ ಸಲ್ಲಿಸಿದ್ದರಿಂದ ತಿರಸ್ಕರಿಸಲಾಗಿದೆ. ಉಳಿದ 9 ಕುಟುಂಬ ಬೆಂಗಳೂರು ವ್ಯಾಪ್ತಿಯಲ್ಲಿ ನೆಲೆಸಿಲ್ಲ. 12 ಕುಟುಂಬಗಳು ದಾಖಲಾತಿ ಸಲ್ಲಿಸಿಲ್ಲ. 8 ಅರ್ಜಿಗಳ ಅರ್ಜಿದಾರರು ಬೆಂಗಳೂರಿನಿಂದ ಹೊರಗಿನ ವಾಸದ ದಾಖಲೆ ನೀಡಿದ್ದು, 16 ಕುಟುಂಬ ದಾಖಲೆಯೇ ನೀಡಿಲ್ಲ. 20 ಕುಟುಂಬಗಳು ರಾಜ್ಯದ ಹೊರಗಿನವರಾಗಿದ್ದಾರೆ ಎಂದು ಹೇಳಿದರು.

ವಸತಿ ವ್ಯವಸ್ಥೆ ಪಡೆಯಲು 61 ಮಂದಿ ಮಾತ್ರ ಅರ್ಹರಿದ್ದು, ಅವರಲ್ಲಿ ಇದೀಗ 12 ಮಂದಿ ಮಾತ್ರ ದಾಖಲೆ ಸಲ್ಲಿಸಿದ್ದಾರೆ. ಉಳಿದವರು ಅರ್ಹರಿದ್ದರೂ ಅರ್ಜಿಯನ್ನೇ ಸಲ್ಲಿಸಿಲ್ಲ. ಈಗ ಹಕ್ಕುಪತ್ರ ನೀಡುತ್ತಿರುವುದರಿಂದ ಉಳಿದವರಿಗೂ ವಿಶ್ವಾಸ ಬಂದು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

12.20 ಲಕ್ಷ ರು. ಮೌಲ್ಯದ ಫ್ಲ್ಯಾಟ್‌ ಆಗಿದ್ದು, ಫಲಾನುಭವಿಯು 50 ಸಾವಿರ ಠೇವಣಿ ಇಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ 1.5 ಲಕ್ಷ ರು. ಸಬ್ಸಿಡಿ ನೀಡುತ್ತದೆ. ಬಿಬಿಎಂಪಿಯಿಂದ 5 ಲಕ್ಷ ರು. ನೀಡಲಿದ್ದು, ಉಳಿದ ಮೊತ್ತವನ್ನು ನಾವೇ ಬ್ಯಾಂಕ್‌ನಿಂದ ಸಾಲ ಕೊಡಿಸುತ್ತೇವೆ ಎಂದು ಜಮೀರ್‌ ಅಹ್ಮದ್‌ ಖಾನ್‌ ಭರಸೆ ನೀಡಿದರು.

ಬೈಯಪ್ಪನಹಳ್ಳಿಯಲ್ಲಿ 1187 ಫ್ಲ್ಯಾಟ್‌ ಲಭ್ಯ:

ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಕೋಗಿಲು ಸಂತ್ರಸ್ತರಿಗೆ 12 ಮಂದಿಗೆ ಮನೆ ನೀಡುತ್ತಿದ್ದೇವೆ. ಬ್ಯಾಟರಾಯನಪುರದ ಬೈಯಪ್ಪನಹಳ್ಳಿಯಲ್ಲಿ ಒಟ್ಟು 1187 ಫ್ಲ್ಯಾಟ್‌ ಲಭ್ಯವಿದ್ದು, ಸ್ಥಳೀಯ ಕೋಟಾದಡಿ 594 ಲಭ್ಯವಿವೆ. ಇವುಗಳ ಪೈಕಿ 189 ಹಂಚಿಕೆಗೆ ಸಿದ್ಧವಾಗಿದ್ದು, ದಾಖಲೆ ನೀಡಿರುವ 18 ಮಂದಿಗೆ ಇಂದು ಹಂಚಿಕೆ ಮಾಡುತ್ತಿದ್ದೇವೆ. ಕೋಗಿಲು ಸಂತ್ರಸ್ತರು 12 ಹಾಗೂ ಉಳಿದವರು 18 ಮಂದಿ ಸೇರಿ 30 ಮಂದಿಗೆ ಫ್ಲ್ಯಾಟ್ ನೀಡಿದ್ದೇವೆ ಎಂದರು.

ವಸತಿ ಇಲಾಖೆ ಕಾರ್ಯದರ್ಶಿ ಮೋಹನ್ ರಾಜ್, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಪರಶುರಾಮ್ ಶಿನ್ನಾಳ್ಕರ್, ಜಿ.ಎಂ.ಪರಶುರಾಮ್ ಗೌಡ ಉಪಸ್ಥಿತರಿದ್ದರು. 

ಬಾಂಗ್ಲಾದವರಿಗಲ್ಲ ಅನ್ಯ ರಾಜ್ಯದವರಿಗೂ ಇಲ್ಲ:

ಬಾಂಗ್ಲಾದೇಶದವರಿಗೆ ಮನೆ ನೀಡುತ್ತಿದ್ದಾರೆ ಎಂದು ಬಿಜೆಪಿಯವರು ಟೀಕಿಸಿದ್ದರು. ಬಾಂಗ್ಲಾದೇಶದವರಿಗೆ ಅಲ್ಲ ಹೊರ ರಾಜ್ಯದವರಿಗೂ ಸಹ ಒಬ್ಬರಿಗೂ ನೀಡಿಲ್ಲ. ಎಲ್ಲರ ವಿಳಾಸ, ದಾಖಲೆ ಪರಿಶೀಲಿಸಿಯೇ ಅರ್ಹರನ್ನು ಅಂತಿಮಗೊಳಿಸಿದ್ದೇವೆ. ಬೆಂಗಳೂರಿನ ಹೊರಗಿನವರಿಗೆ ಯಾರಿಗೂ ನೀಡಿಲ್ಲ. ಅಷ್ಟೇಕೆ ಕಲಬುರಗಿ, ಹುಬ್ಬಳ್ಳಿ, ರಾಯಚೂರು ಅವರಿಗೂ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಶಾಸಕರ ಎಲ್ಲ ಪ್ರಶ್ನೆಗೆ ಉತ್ತರಿಸಿ: ಸಚಿವರಿಗೆ ಸಿಎಂ ಸಿದ್ದು ಸೂಚನೆ
ಸಂಪುಟ ಪುನಾರಚನೆಗೆ ಹೆಚ್ಚಿದ ಶಾಸಕರ ಒತ್ತಡ