ಫಾರಿನ್‌ನಿಂದ ಮರಳಿದ ಸ್ಟಿಂಗ್‌ ಕೃಪಾ ಆಳ್ವಗೆ ಪೊಲೀಸ್‌ ಗ್ರಿಲ್‌ - 4 ತಾಸು ವಿಚಾರಣೆ

Published : Nov 10, 2026, 07:25 AM IST
Kripa Alva Expelled From Congress

ಸಾರಾಂಶ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಎನ್ನಲಾದ ಸ್ಟಿಂಗ್‌ ಆಪರೇಷನ್ ವಿಡಿಯೋ ಪ್ರಕರಣ ಸಂಬಂಧ ಕಾಂಗ್ರೆಸ್‌ನ ಉಚ್ಚಾಟಿತ ಮುಖಂಡೆ ಹಾಗೂ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆಯೂ ಆದ ಕೃಪಾ ಆಳ್ವ ಸೋಮವಾರ ಸಿಸಿಬಿ ಸೈಬರ್‌ ಕ್ರೈಂ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು.

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಎನ್ನಲಾದ ಸ್ಟಿಂಗ್‌ ಆಪರೇಷನ್ ವಿಡಿಯೋ ಪ್ರಕರಣ ಸಂಬಂಧ ಕಾಂಗ್ರೆಸ್‌ನ ಉಚ್ಚಾಟಿತ ಮುಖಂಡೆ ಹಾಗೂ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆಯೂ ಆದ ಕೃಪಾ ಆಳ್ವ ಸೋಮವಾರ ಸಿಸಿಬಿ ಸೈಬರ್‌ ಕ್ರೈಂ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು.

ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿರುವ ಸೈಬರ್‌ ಕ್ರೈಂ ಠಾಣೆಗೆ ಆಗಮಿಸಿದ ಕೃಪಾ ಅವರನ್ನು ತನಿಖಾಧಿಕಾರಿ ಎಸಿಪಿ ರವಿ ಅವರು ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಈ ವೇಳೆ, ಯಾವ ಉದ್ದೇಶಕ್ಕಾಗಿ ಸ್ಟಿಂಗ್ ಆಪರೇಷನ್‌ ವಿಡಿಯೋ ಮಾಡಲಾಗಿತ್ತು? ಇದರಲ್ಲಿ ಬೇರೆಯವರ ಪಾತ್ರವೇನು? ನಿಮ್ಮ ಜತೆ ಆ ದಿನ ಯಾರ್‍ಯಾರು ಇದ್ದರು? ವಿಡಿಯೋವನ್ನು ಎಲ್ಲಿ ಮಾಡಲಾಗಿತ್ತು? ಹೀಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಕೃಪಾ ಅವರ ಹೇಳಿಕೆಯನ್ನು ವಿಡಿಯೋ ರೆಕಾರ್ಡ್‌ ಕೂಡ ಮಾಡಿಕೊಳ್ಳಲಾಗಿದೆ.

ರೆಕಾರ್ಡ್‌ ಬಗ್ಗೆ ಮಾಹಿತಿ ಇಲ್ಲ:

ಖಾಸಗಿ ಸುದ್ದಿವಾಹಿನಿಯ ಪತ್ರಕರ್ತ, ಸಂತ್ರಸ್ತೆ ಹಾಗೂ ಮತ್ತೊಬ್ಬ ವ್ಯಕ್ತಿ ಮಾತನಾಡುತ್ತಿದ್ದಾಗ ನಾನು ಸ್ಥಳದಲ್ಲಿದ್ದೆ. ಸುಮಾರು ಅರ್ಧ ಗಂಟೆ ಕಾಲ ಸಂಭಾಷಣೆ ನಡೆದಿರಬಹುದು. ಆದರೆ, ಅದು ರೆಕಾರ್ಡ್ ಮಾಡಲಾಗುತ್ತಿದೆ ಎಂಬುದು ನನಗೆ ತಿಳಿದಿರಲಿಲ್ಲ. ಅಲ್ಲದೆ, ಈ ಹಿಂದೆ ನೀಡಿದ ಹೇಳಿಕೆಯಂತೆ ವಿಡಿಯೋ ಮಾಡಿದ ಉದ್ದೇಶ ಕೂಡ ನನಗೆ ತಿಳಿದಿಲ್ಲ ಎಂದು ಕೃಪಾ ಆಳ್ವ ತಿಳಿಸಿದ್ದಾರೆ. ಹೀಗಾಗಿ ನ.11ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಅವರನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣ ಸಂಬಂಧ ಈ ಹಿಂದೆ ಎರಡು ಬಾರಿ ವಿಚಾರಣೆಗೆ ಹಾಜರಾಗಿದ್ದ ಕೃಪಾ ಆಳ್ವ ಅವರು ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಕೋರ್ಟ್ ಜಾಮೀನು ನೀಡುವ ಮೊದಲೇ ವಿದೇಶಕ್ಕೆ ಪರಾರಿಯಾಗಿದ್ದರು. ಹೀಗಾಗಿ ಪೊಲೀಸರು ಕೂಡ ಆಕೆ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಹೊರಡಿಸಿದ್ದರು.

ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದ ಬೆನ್ನಲ್ಲೇ ನ.7 ರಂದು ಅವರು ಬೆಂಗಳೂರಿಗೆ ವಾಪಸ್ ಆಗಿದ್ದರು. ಆಗ ಏರ್‌ಪೋರ್ಟ್‌ ಅಧಿಕಾರಿಗಳು ಕೃಪಾ ಆಳ್ವರನ್ನು ವಶಕ್ಕೆ ಪಡೆದು ಸಿಸಿಬಿ ಅಧಿಕಾರಿಗಳಿಗೆ ಒಪ್ಪಿಸಿದ್ದರು. ಬಳಿಕ ಅವರನ್ನು ಏರ್‌ಪೋರ್ಟ್‌ ಪೊಲೀಸ್ ಠಾಣೆಗೆ ಕರೆದೊಯ್ದು ಕೆಲಕಾಲ ವಿಚಾರಣೆ ನಡೆಸಲಾಗಿತ್ತು. ಆದರೆ, ಕೃಪಾ ಪರ ವಕೀಲರು ನಿರೀಕ್ಷಣಾ ಜಾಮೀನು ಆದೇಶ ಪ್ರತಿ ತೋರಿಸಿದ್ದರಿಂದ ಬಿಡುಗಡೆ ಮಾಡಲಾಗಿತ್ತು.

ಈ ವೇಳೆ ನ.9ರಂದು ಲ್ಯಾಪ್‌ಟಾಪ್‌, ಮೊಬೈಲ್‌ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅದರಂತೆ ಸೋಮವಾರ ತಮ್ಮ ಪರ ವಕೀಲರ ಜತೆ ಕೃಪಾ ಆಳ್ವ ವಿಚಾರಣೆಗೆ ಹಾಜರಾಗಿದ್ದರು ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಈಗಾಗಲೇ 2 ಬಾರಿ ವಿಚಾರಣೆ ನಡೆದಿದೆ:

ಈ ವೇಳೆ ಕೃಪಾ ಆಳ್ವ ಪರ ವಕೀಲೆ ನಿಖಿತಾ ಮಾತನಾಡಿ, ಕೃಪಾ ಆಳ್ವ ಈಗಾಗಲೇ ಎರಡು ಬಾರಿ ಡಿಸಿಪಿ ಎದುರು ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಮತ್ತೊಮ್ಮೆ ಬರುವುದಕ್ಕೆ ಸೂಚಿಸಿದ್ದರು. ಹಾಗಾಗಿ ಸೋಮವಾರ ಹೇಳಿಕೆ ದಾಖಲಿಸಿದ್ದಾರೆ. ಮೂರು ತಿಂಗಳ ಹಿಂದೆಯೇ ವಿದೇಶ ಪ್ರವಾಸದ ಯೋಜನೆ ಮಾಡಲಾಗಿತ್ತು. ಪ್ರಕರಣ ಸಂಬಂಧ ವಿದೇಶಕ್ಕೆ ಹೋಗಿಲ್ಲ. ಪ್ರಕರಣಕ್ಕೂ ವಿದೇಶ ಪ್ರವಾಸಕ್ಕೂ ಸಂಬಂಧವಿಲ್ಲ. ಅವರು ಮಗಳೊಂದಿಗೆ ವಿದೇಶಕ್ಕೆ ಆಗಾಗ್ಗೆ ಹೋಗುತ್ತಿದ್ದರು. ಅದು ಪೂರ್ವನಿಯೋಜಿತ ಪ್ರವಾಸವೇ ಹೊರತು ಉದ್ದೇಶವಿಲ್ಲ ಎಂದು ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಹಾಸನಾಂಬೆಯ ಮೇಲಾಣೆ-ಡೀಸಿ ವರ್ಗ ತಡೆಗೆ ನಯಾಪೈಸೆ ಹಣ ಪಡೆದಿಲ್ಲ: ಶಿವಲಿಂಗೇಗೌಡ
ಸಿದ್ದರಾಮಯ್ಯ ಜೊತೆ ಸಿಎಂ ಸುದೀರ್ಘ ಮಾತುಕತೆ - ಸಿದ್ದು ಜತೆ ಮುನಿಸಿಲ್ಲ: ಡಿಕೆ