ಕಾಂಗ್ರೆಸ್‌ನಿಂದ ಗೆದ್ದಿದ್ದ ಸುಬ್ಬಾರೆಡ್ಡಿ ಶಾಸಕತ್ವಕ್ಕೆ ‘ಸುಪ್ರೀಂ’ ರಕ್ಷಣೆ

Published : Feb 28, 2026, 08:43 AM IST
s n Subba Reddy

ಸಾರಾಂಶ

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಎಸ್.ಎನ್.ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನ ಅಸಿಂಧುಗೊಳಿಸಿ ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆ ನೀಡಿದೆ.

ಚಿಕ್ಕಬಳ್ಳಾಪುರ/ ನವದೆಹಲಿ : ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಎಸ್.ಎನ್.ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನ ಅಸಿಂಧುಗೊಳಿಸಿ ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆ ನೀಡಿದೆ.

2023ರ ವಿಧಾನಸಭಾ ಚುನಾವಣಾ ನಾಮಪತ್ರ ಸಲ್ಲಿಕೆ ವೇಳೆ ಸಂಪೂರ್ಣ ಆಸ್ತಿ ಘೋಷಣೆ ಮಾಡಿಲ್ಲ. ಕ್ರಿಮಿನಲ್ ಕೇಸ್‌ಗಳ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ಅವರು 2023 ಜೂನ್ 24ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಸುಬ್ಬಾರೆಡ್ಡಿ ಅವರ ಶಾಸಕತ್ವವನ್ನು ಅಸಿಂಧುಗೊಳಿಸಿತ್ತು. ಆದರೆ ಮುನಿರಾಜು ಅವರನ್ನು ವಿಜಯಿ ಎಂದು ಘೋಷಿಸಿರಲಿಲ್ಲ. ಈ ನಡುವೆ ಸುಬ್ಬಾರೆಡ್ಡಿ ಅವರು ಸುಪ್ರೀಂಕೋರ್ಟ್‌ ಕದ ತಟ್ಟಿದ್ದರು. ಶುಕ್ರವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ತಡೆ ನೀಡಿ, ವಿಚಾರಣೆಯನ್ನು ಸೆ. 7ಕ್ಕೆ ಮುಂದೂಡಿದೆ.ಅಲ್ಲದೆ ಇದೇ ವೇಳೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಮಧ್ಯಂತರ ಆದೇಶದಲ್ಲಿ ಅರ್ಜಿದಾರರನ್ನು ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ವಿಧಾನಸಭಾ ಸದಸ್ಯರೆಂದು ಪರಿಗಣಿಸಬೇಕೆಂದು ಪೀಠ ನಿರ್ದೇಶಿಸಿದೆ. ಪ್ರತಿವಾದಿಯಾದ ಪರಾಜಿತ ಅಭ್ಯರ್ಥಿ, ಬಿಜೆಪಿಯ ಸಿ.ಮುನಿರಾಜು ಅವರನ್ನು ಪ್ರತಿ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ.

ಇನ್ನು ಸುಪ್ರೀಂ ಕೋರ್ಟ್‌ನಲ್ಲಿ ಸುಬ್ಬಾರೆಡ್ಡಿ ಅವರ ಮೇಲ್ಮನವಿಯನ್ನು ವಿರೋಧಿಸಿದ ಸಿ.ಮುನಿರಾಜು ಪರ ವಕೀಲರು, ಸುಬ್ಬಾರೆಡ್ಡಿ ತಮ್ಮ ಮದ್ಯ ವ್ಯವಹಾರವನ್ನು ಬಹಿರಂಗಪಡಿಸಿಲ್ಲ ಎಂದು ವಾದಿಸಿದರು. ನಂತರ ನ್ಯಾಯಪೀಠ, ನೀವು ಚುನಾವಣೆಯಲ್ಲಿ ಗೆಲ್ಲದಿದ್ದರೆ, ನೀವು ಇಂತಹ ನೆಪಗಳನ್ನು ಹುಡುಕುತ್ತೀರಿ ಎಂದು ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, ಸುಬ್ಬಾರೆಡ್ಡಿ ಅವರು ತಮ್ಮ ಆತಿಥ್ಯ ವ್ಯವಹಾರವನ್ನು ಬಹಿರಂಗಪಡಿಸಿದ್ದಾರೆ. ಆದರೆ ತಮ್ಮ ಮದ್ಯ ವ್ಯವಹಾರವನ್ನು ಬಹಿರಂಗಪಡಿಸಲು ಹಿಂಜರಿದರು ಎಂದು ಸಿ.ಮುನಿರಾಜು ಪರ ವಕೀಲರು ವಾದಿಸಿದರು. ಇದೇ ವೇಳೆ ನ್ಯಾಯಮೂರ್ತಿಗಳು, ಆದಾಯವನ್ನು ಬಹಿರಂಗಪಡಿಸುವುದು ಅಗತ್ಯವಾಗಿದೆಯೇ ಹೊರತು ವ್ಯವಹಾರದ ಸ್ವರೂಪವಲ್ಲ ಎಂದು ಹೇಳಿದರು.

ನ್ಯಾಯಕ್ಕೆ ಸಿಕ್ಕ ಜಯ:

ಈ ವೇಳೆ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಎನ್.ಸುಬ್ಬಾರೆಡ್ಡಿ, ಇದು ನ್ಯಾಯಕ್ಕೆ ಸಂದ ಜಯವಾಗಿದೆ. ಯಾವುದೇ ಷರತ್ತು ಇಲ್ಲದೆ ತಡೆಯಾಜ್ಞೆ ಸಿಕ್ಕಿದೆ. ಸೋತಿರುವವರೆಲ್ಲರೂ ಈ ರೀತಿ ರಾಜಕೀಯ ದ್ವೇಷ ತೀರಿಸಿಕೊಳ್ಳಲು ಮುಂದಾದರೆ, ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಕಷ್ಟವಾಗುತ್ತದೆ ಎಂದು ಕೋರ್ಟ್‌ ಹೇಳಿದೆ. ಇವತ್ತು ಜಯ ಸಿಕ್ಕಿದೆ. ನಾಮಪತ್ರ ಸಲ್ಲಿಕೆ ವೇಳೆ ಅಫಿಡವಿಟ್‌ನಲ್ಲಿ ಬರೆಯುವಾಗ ಸಣ್ಣ ತಪ್ಪಾಗಿದೆ. ಆದರೆ ಟೋಟಲ್ ಸರಿ ಇದೆ. ನಾನು ಟೋಟಲ್ ಅಮೌಂಟ್ ತೋರಿಸಿದ್ದೇನೆ. ಅಬಕಾರಿ ಬಿಜಿನೆಸ್ ಕೂಡ ತೋರಿಸಿದ್ದೇನೆ. ನಾನು ಯಾವುದು ಮುಚ್ಚಿಟ್ಟಲ್ಲ. ನಾನು ತಪ್ಪು ಮಾಡಿಲ್ಲ. ಈ ತಡೆಯಾಜ್ಞೆಯಿಂದ ನಮ್ಮ ಭಾಗದ ಜನರಿಗೂ ಖುಷಿ ಆಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ನನಗೆ ಜಯ ಸಿಗುತ್ತೆ ಅಂತಾ ಬಂದಿದ್ದೆ, ಜಯಸಿಕ್ಕಿದೆ ಎಂದರು.

ಬೆಂಬಲಿಗರಿಂದ ಸಂಭ್ರಮಾಚರಣೆ:

ಸುಬ್ಬಾರೆಡ್ಡಿಗೆ ಸುಪ್ರೀಂ ಕೋರ್ಟ್​​ನಲ್ಲಿ ರಿಲೀಫ್ ಸಿಕ್ಕ ಹಿನ್ನೆಲೆಯಲ್ಲಿ ಬಾಗೇಪಲ್ಲಿಯಲ್ಲಿ ಅವರ ಬೆಂಬಲಿಗರು ಸಂಭ್ರಮಾಚರಣೆ ಮಾಡಿದರು. ಪಟ್ಟಣದಲ್ಲಿ ಪಟಾಕಿ ಸಿಡಿಸಿ, ಜೈಕಾರ ಕೂಗಿ ಸಂತಸ ವ್ಯಕ್ತಪಡಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ರಾಜಕಾರಣ ಪ್ರವೇಶಕ್ಕೆ 50 ವರ್ಷ । ಬಿಎಸ್‌ವೈ ಉತ್ಸವಕ್ಕೆ ಸಿದ್ಧತೆ
ಅನಂತಕುಮಾರ ಹೆಗಡೆ ಮತ್ತೆ ಸಕ್ರಿಯ ರಾಜಕಾರಣ ಪ್ರವೇಶ?