ವಿಜಯ್‌ ಸರ್ಕಾರಕ್ಕೆ ಸುಪ್ರೀಂ ಛೀಮಾರಿ- ಕಾರ್ತಿಕ ದೀಪ ಹಚ್ಚಲು ಬಿಡದ್ದಕ್ಕೆ ತೀವ್ರ ತರಾಟೆ

Published : Nov 28, 2026, 07:24 AM IST
VIJAY

ಸಾರಾಂಶ

ಮದುರೈ ಜಿಲ್ಲೆಯ ತಿರುಪ್ಪರನ್‌ಕುಂದ್ರಂನ ದೇಗುಲದ ದೀಪಸ್ತಂಭದಲ್ಲಿ ಕಾರ್ತಿಕ ದೀಪ ಹಚ್ಚುವಂತೆ ತಾನು ನೀಡಿದ್ದ ಆದೇಶ ಉಲ್ಲಂಘಿಸಿರುವ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್‌ ನೇತೃತ್ವದ ಸರ್ಕಾರವನ್ನು ಸುಪ್ರೀಂಕೋರ್ಟ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ನವದೆಹಲಿ: ಮದುರೈ ಜಿಲ್ಲೆಯ ತಿರುಪ್ಪರನ್‌ಕುಂದ್ರಂನ ದೇಗುಲದ ದೀಪಸ್ತಂಭದಲ್ಲಿ ಕಾರ್ತಿಕ ದೀಪ ಹಚ್ಚುವಂತೆ ತಾನು ನೀಡಿದ್ದ ಆದೇಶ ಉಲ್ಲಂಘಿಸಿರುವ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್‌ ನೇತೃತ್ವದ ಸರ್ಕಾರವನ್ನು ಸುಪ್ರೀಂಕೋರ್ಟ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೊಳ‍ಗಾಗಿ ಕೋರ್ಟ್‌ ಆದೇಶ ಪಾಲಿಸಲು ಹಿಂದೇಟು ಹಾಕಿರುವಂತಿದೆ. ತಮಿಳುನಾಡಿನಲ್ಲಿ ಆಡಳಿತಾತ್ಮಕ ಅವ್ಯವಸ್ಥೆಯ ಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿರುವ ನ್ಯಾಯಾಲಯ ಶನಿವಾರ ಮತ್ತೆ ವಿವಾದಿತ ದೀಪಸ್ತಂಭದಲ್ಲೇ ದೀಪ ಬೆಳಗುವಂತೆ ಸರ್ಕಾರಕ್ಕೆ ಖಡಕ್‌ ನಿರ್ದೇಶನ ನೀಡಿದೆ.

ಅಲ್ಲದೆ ತನ್ನ ಆದೇಶವನ್ನು ಉಲ್ಲಂಘಿಸಿದ ಅರುಲ್ಮಿಗು ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಧರ್ಮದರ್ಶಿ ಮಂಡಳಿಯನ್ನು ಅಮಾನತು ಮಾಡಿ, ದೇಗುಲದ ಉಸ್ತುವಾರಿಯನ್ನು ಇಬ್ಬರು ನಿವೃತ್ತ ನ್ಯಾಯಾಧೀಶರಿಗೆ ವಹಿಸಿದೆ. ಜೊತೆಗೆ ದೇಗುಲ ಹಾಗೂ ಇಡೀ ಬೆಟ್ಟದ ಭದ್ರತೆಯನ್ನು ಹೊಣೆಯನ್ನು ಸಿಆರ್‌ಪಿಎಫ್‌ಗೆ ವಹಿಸಿ ಅಪರೂಪದ ಆದೇಶ ಹೊರಡಿಸಿದೆ.

ಸುಪ್ರೀಂಕೋರ್ಟ್‌ನ ಈ ಆದೇಶ ವಿಜಯ್‌ ಸರ್ಕಾರಕ್ಕೆ ಭಾರೀ ಮುಖಭಂಗ ಉಂಟು ಮಾಡಿದ್ದರೆ, ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಆದೇಶವನ್ನು ಸ್ವಾಗತಿಸಿವೆ.

ಅರ್ಜಿ ವಿಚಾರಣೆ:

ದೀಪ ಬೆಳಗುವ ವಿಷಯದಲ್ಲಿ ಸುಪ್ರೀಂ ಆದೇಶ ಉಲ್ಲಂಘನೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ಅರ್ಜಿ ಮತ್ತು ಮದುರೈ ಜಿಲ್ಲಾಧಿಕಾರಿ ಅವರು ವಿವಾದಿತ ದೀಪಸ್ತಂಭದ ಬದಲು ಉಚ್ಚಿಪಿಳ್ಳೈಯಾರ್‌ ಮಂಟಪದಲ್ಲಿ ದೀಪ ಬೆಳಗಿದ ವಿಚಾರಕ್ಕೆ ಸಂಬಂಧಿಸಿ ವಸ್ತುಸ್ಥಿತಿ ವರದಿ ಸಲ್ಲಿಸಿದ್ದರು. ಇವುಗಳ ವಿಚಾರಣೆಯನ್ನು ನ್ಯಾ. ಅರವಿಂದ್‌ ಕುಮಾರ್‌ ಮತ್ತು ನ್ಯಾ.ವಿಪುಲ್‌ ಎಂ.ಪಾಂಚೋಲಿ ಅವರಿದ್ದ ಪೀಠ ಶುಕ್ರವಾರ ನಡೆಸಿತು.

ನೋಟಿಸ್‌:

ವಿಚಾರಣೆ ವೇಳೆ ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ಹೊರಹಾಕಿದ ಪೀಠ, ತನ್ನ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿರುವ ಆರೋಪದ ಮೇರೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಮದುರೈ ಜಿಲ್ಲಾಧಿಕಾರಿ ಮತ್ತು ಇತರರಿಗೆ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿಗೊಳಿಸಿದೆ. ಮುಂದಿನ ವಿಚಾರಣೆ ವೇಳೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಖುದ್ದು ಹಾಜರಾಗಬೇಕು ಹಾಗೂ ತನ್ನ ಆದೇಶ ಪಾಲನೆ ವಿಚಾರವಾಗಿ ಅಧಿಕಾರಿಗಳ ಜತೆಗೆ ನಡೆಸಿರುವ ಸಂವಹನದ ಪೂರ್ಣ ವಿವರ ಸಲ್ಲಿಸಬೇಕು ಎಂದು ಆದೇಶಿಸಿದೆ.

ಸಿರ್‌ಪಿಎಫ್‌ಗೆ ಭದ್ರತೆ ಹೊಣೆ:

ಇದೇ ವೇಳೆ ದೇವಸ್ಥಾನ ಮತ್ತು ತಿರುಪ್ಪರನ್‌ಕುಂದ್ರಂ ಬೆಟ್ಟದ ಭದ್ರತೆಯನ್ನು ಕೇಂದ್ರೀಯ ಮೀಸಲು ಪೊಲೀಸ್‌ ಪಡೆಗೆ (ಸಿರ್‌ಪಿಎಫ್‌) ಒಪ್ಪಿಸುವಂತೆ ಕೋರ್ಟ್‌ ಸೂಚಿಸಿದೆ. ಜೊತೆಗೆ ಶನಿವಾರದ ದೀಪೋತ್ಸವದ ವೇಳೆ ಎಲ್ಲಾ ಭಕ್ತರಿಗೂ ದೀಪ ಹಚ್ಚಲು ಅವಕಾಶ ನೀಡಬೇಕು. ಆದರೆ ಬೆಟ್ಟದ ಮೇಲಿನ ದರ್ಗಾಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಅಲ್ಲಿಗೆ ಬರುವವರಿಗೂ ರಕ್ಷಣೆ ಕೊಡಬೇಕು ಎಂದು ಸಿಆರ್‌ಪಿಎಫ್‌ಗೆ ಸೂಚಿಸಿದೆ.

ರಾಜಕೀಯ ಪ್ರಭಾವ:

‘ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೊಳ‍ಗಾಗಿ ಕೋರ್ಟ್‌ ಆದೇಶ ಪಾಲಿಸಲು ಹಿಂದೇಟು ಹಾಕಿರುವಂತಿದೆ. ತಮಿಳುನಾಡಿನಲ್ಲಿ ಆಡಳಿತಾತ್ಮಕ ಅವ್ಯವಸ್ಥೆಯ ಸ್ಥಿತಿ ನಿರ್ಮಾಣವಾಗಿದೆ. ನಾವು ನೀಡಿದ ಆದೇಶದ ಪಾಲನೆ ಆಗದಿದ್ದಾಗ ಸುಮ್ಮನೆ ಕೈಕಟ್ಟಿ ಕೂರಲು ಸಾಧ್ಯವಿಲ್ಲ. ನ್ಯಾಯಾಲಯದ ಆದೇಶವು ಸಂಧಾನಕ್ಕೆ ನೀಡುವ ಆಹ್ವಾನ ಅಲ್ಲ, ಬದಲಾಗಿ ಆ ಆದೇಶಕ್ಕೆ ರಾಜ್ಯ, ಅಧಿಕಾರಿಗಳು ಮತ್ತು ಪ್ರತಿ ಧಾರ್ಮಿಕ ಸಂಸ್ಥೆಗಳು ಬದ್ಧರಾಗಿರಬೇಕು. ಆದೇಶ ಉದ್ದೇಶಪೂರ್ವಕವಾಗಿ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಪೀಠ ಖಡಕ್‌ ಎಚ್ಚರಿಕೆ ನೀಡಿದೆ.

ಸರ್ಕಾರದಿಂದ ಉದ್ದೇಶಪೂರ್ವಕ ನ್ಯಾಯಾಂಗ ನಿಂದನೆ: ಎಎಸ್‌ಐ

ಕಾರ್ತಿಕ ದೀಪ ಬೆಳಗುವ ವೇಳೆ ವಿವಾದಿತ ದೀಪ ಸ್ತಂಭದ ಬಳಿ ತೆರಳಲು ತನ್ನ ಅಧಿಕಾರಿಗಳಿಗೆ ಅವಕಾಶ ನೀಡದೆ ತಮಿಳುನಾಡು ಸರ್ಕಾರ ತೀವ್ರ ನ್ಯಾಯಾಂಗ ನಿಂದನೆ ಎಸಗಿದೆ. ಕೋರ್ಟ್‌ನ ಆದೇಶದಲ್ಲಿ ಪರಿವರ್ತನೆ ಮಾಡುವಂತಿಲ್ಲ ಎಂದು ಸ್ಪಷ್ಟ ನಿರ್ದೇಶನವಿದ್ದರೂ ಈ ರೀತಿ ಮಾಡಲಾಗಿದೆ ಎಂದು ಪುರಾತತ್ವ ಇಲಾಖೆ (ಎಎಸ್‌ಐ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಏನಿದು ವಿವಾದ?:

- ಮದುರೈನಿಂದ 7 ಕಿ.ಮೀ. ದೂರದಲ್ಲಿ ತಿರುಪ್ಪರನ್‌ಕುಂದ್ರಂ ಬೆಟ್ಟವಿದೆ. ಅಲ್ಲಿ ಕಾರ್ತಿಕ ದೀಪ ಬೆಳಗಲಾಗುತ್ತೆ

- ಇದಕ್ಕಾಗಿ ದೀಪಸ್ತಂಭವೂ ಇದೆ. ಸ್ತಂಭದ ಬಳಿಯೇ ದರ್ಗಾ ಇರುವ ಕಾರಣ ದೀಪ ಬೆಳಗಲು ನಕಾರ, ವಿವಾದ

- 2025ರಲ್ಲಿ ಭಕ್ತರೊಬ್ಬರಿಂದ ಕಾನೂನು ಸಮರ. 1 ಬಾರಿ ದೀಪ ಬೆಳಗಲು ಅನುಮತಿ ನೀಡಿದ್ದ ಸುಪ್ರೀಂಕೋರ್ಟ್‌

- ದೀಪಸ್ತಂಭದ ಬದಲು ಬೇರೆ ಮಂಟಪವೊಂದರಲ್ಲಿ ದೀಪ ಬೆಳಗಲು ಅವಕಾಶ ನೀಡಿದ್ದ ರಾಜ್ಯ ಸರ್ಕಾರ, ದೇಗುಲ

- ಈ ಬಗ್ಗೆ ತೀವ್ರ ಆಕ್ರೋಶ. ಸುಪ್ರೀಂಕೋರ್ಟ್‌ ಆದೇಶ ಉಲ್ಲಂಘಿಸಿದ ಕಾರಣ ನ್ಯಾಯಾಂಗ ನಿಂದನೆ ವಿಚಾರಣೆ

- ತಮಿಳುನಾಡು ಕ್ರಮಕ್ಕೆ ಸುಪ್ರೀಂಕೋರ್ಟ್‌ ತೀವ್ರ ತರಾಟೆ. ಶನಿವಾರ ದೀಪ ಬೆಳಗಲು ಭಕ್ತರಿಗೆ ಅವಕಾಶ

ನಾವು ಕೊಟ್ಟಿದ್ದು ಆದೇಶ, ಸಂಧಾನದ ಆಫರ್‌ ಅಲ್ಲ

- ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಕೋರ್ಟ್‌ ಆದೇಶ ಪಾಲಿಸಲು ಹಿಂಜರಿದಿರುವಂತಿದೆ

- ಸುಪ್ರೀಂಕೋರ್ಟ್‌ ಆದೇಶವನ್ನು ಬೇಕಂತಲೇ ಉಲ್ಲಂಘಿಸಲಾಗಿದೆ. ಆಡಳಿತಾತ್ಮಕ ವ್ಯವಸ್ಥೆ ಇದ್ದಂತಿಲ್ಲ

- ನ್ಯಾಯಾಂಗದ ಆದೇಶಗಳನ್ನು ಪಾಲಿಸಬೇಕೇ ಎಂದು ತಮಿಳುನಾಡಿನ ಕಾರ್ಯಾಂಗ ನಿರ್ಧರಿಸಲಾಗದು

- ನ್ಯಾಯಾಲಯದ ಆದೇಶ ಎಂದರೆ ಅದೇನು ರಾಜಿ ಸಂಧಾನಕ್ಕೆ ನೀಡುವ ಆಹ್ವಾನವಲ್ಲ. ಪಾಲಿಸಲೇಬೇಕು

- ದೇಶದ ಕಾನೂನು ಪರಮ ಶ್ರೇಷ್ಠ. ಸುಪ್ರೀಂಕೋರ್ಟ್‌ ಸೂಚನೆಯಂತೆ ಎಲ್ಲರೂ ಇದನ್ನು ಪಾಲಿಸಲೇಬೇಕು

- ಯಾರೇ ಆಗಲಿ, ನ್ಯಾಯದಾನದ ಹರಿವನ್ನು ಕಲುಷಿತಗೊಳಿಸಲು ಯತ್ನಿಸಿದರೆ ಸಹಿಸಲು ಆಗದು: ಸುಪ್ರೀಂ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಲೋಕಸಭೆ, ವಿಧಾನಸಭೆ ಸೀಟು 50% ಹೆಚ್ಚಿಸಿ ಮಹಿಳಾ ಮೀಸಲು
ಮಹಿಳೆ, ಹಿಂದುಳಿದ ವರ್ಗಕ್ಕೆ ಮಂತ್ರಿ ಸ್ಥಾನ ಬೇಕು : ಸಿದ್ದರಾಮಯ್ಯ