18 ಶಾಸಕರ ಸಸ್ಪೆಂಡ್‌ : ಗವರ್ನರ್‌ಗೆ ಬಿಜೆಪಿ ಮನವಿ

Published : Apr 29, 2025, 11:19 AM IST
Vidhan soudha

ಸಾರಾಂಶ

ವಿಧಾನಸಭೆಯಲ್ಲಿ ಪ್ರತಿಭಟನೆ ವೇಳೆ ಅನುಚಿತವಾಗಿ ವರ್ತನೆ ತೋರಿದ ಆರೋಪದ ಮೇಲೆ ಮಾಡಿರುವ 18 ಬಿಜೆಪಿ ಶಾಸಕರ ಅಮಾನತು ಆದೇಶ ಹಿಂಪಡೆಯುವಂತೆ ಸಭಾಧ್ಯಕ್ಷರಿಗೆ ನಿರ್ದೇಶನ ನೀಡಬೇಕು ಎಂದು ಬಿಜೆಪಿ ನಿಯೋಗ ರಾಜ್ಯಪಾಲರಿಗೆ ಮನವಿ ಮಾಡಿದೆ.

ಬೆಂಗಳೂರು : ವಿಧಾನಸಭೆಯಲ್ಲಿ ಪ್ರತಿಭಟನೆ ವೇಳೆ ಅನುಚಿತವಾಗಿ ವರ್ತನೆ ತೋರಿದ ಆರೋಪದ ಮೇಲೆ ಮಾಡಿರುವ 18 ಬಿಜೆಪಿ ಶಾಸಕರ ಅಮಾನತು ಆದೇಶ ಹಿಂಪಡೆಯುವಂತೆ ಸಭಾಧ್ಯಕ್ಷರಿಗೆ ನಿರ್ದೇಶನ ನೀಡಬೇಕು ಎಂದು ಬಿಜೆಪಿ ನಿಯೋಗ ರಾಜ್ಯಪಾಲರಿಗೆ ಮನವಿ ಮಾಡಿದೆ.

ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ನೇತೃತ್ವದ ಬಿಜೆಪಿ ನಿಯೋಗವು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಿತು.

ಪಕ್ಷದ 18 ಶಾಸಕರನ್ನು ಅಮಾನತು ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಈ ಮೂಲಕ ಶಾಸಕರ ಹಕ್ಕುಗಳನ್ನು ಮೊಟಕುಗಳಿಸಲಾಗಿದೆ. ಇದು ಸಂವಿಧಾನ ವಿರೋಧಿ ಕ್ರಮ. ಹೀಗಾಗಿ ರಾಜ್ಯಪಾಲರು ಮಧ್ಯಪ್ರವೇಶಿಸಿ, ಸಭಾಧ್ಯಕ್ಷರಿಗೆ ಅಮಾನತು ಆದೇಶ ವಾಪಸ್‌ ಪಡೆಯುವಂತೆ ಸೂಚಿಸಬೇಕು ಎಂದು ಕೋರಿದೆ.

ರಾಜ್ಯಪಾಲರಿಗೆ ಮನವಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಭಾಧ್ಯಕ್ಷರು ಆಡಳಿತ ಪಕ್ಷದ ಕೈಗೊಂಬೆಯಾಗಿ ವರ್ತಿಸಬಾರದು. ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಮಾಡುವ ಅಮಾನತು ವಿಷಯದಲ್ಲಿ ಸಂವಿಧಾನ ವಿರೋಧಿ ನಡೆ ಅನುಸರಿಸಲಾಗಿದೆ. ಈ ಸಂಬಂಧ ಆಡಳಿತ ಪಕ್ಷಕ್ಕೆ ಮನವರಿಕೆ ಮಾಡಿ ಸಭಾಧ್ಯಕ್ಷರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.

ರಾಜ್ಯಪಾಲರನ್ನು ಭೇಟಿ ಮಾಡಿ ಮಧ್ಯಸ್ಥಿಕೆ ವಹಿಸಬೇಕು ಮತ್ತು ಸರ್ಕಾರಕ್ಕೆ ಬುದ್ಧಿ ಹೇಳಬೇಕು ಎಂದು ಮನವಿ ಮಾಡಲಾಗಿದೆ. 18 ಶಾಸಕರ ಅಮಾನತು ವಿಷಯದಲ್ಲಿ ಹಲವು ಬಾರಿ ಪ್ರತಿಪಕ್ಷ ನಾಯಕರು ಮತ್ತು ಶಾಸಕರು ಸಭಾಧ್ಯಕ್ಷರನ್ನು ಭೇಟಿ ಮಾಡಿ ಮನವಿ ಮಾಡಿದರೂ ಶಾಸಕರ ಅಮಾನತು ಹಿಂಪಡೆದಿಲ್ಲ ಎಂದು ಕಿಡಿಕಾರಿದರು.

ಸಚಿವರ ಹೇಳಿಕೆಯಲ್ಲಿ ವಿಶೇಷ ಇಲ್ಲ:

ಇದೇ ವೇಳೆ ಮುಖ್ಯಮಂತ್ರಿಗಳೇ ಯುದ್ಧ ಬೇಡ ಎಂದು ಹೇಳಿಕೆ ಕೊಟ್ಟಿದ್ದಾರೆ. ಉಳಿದಂತೆ ಸಚಿವರಾದ ತಿಮ್ಮಾಪುರ, ಸಂತೋಷ್ ಲಾಡ್ ಅವರು ಇದೇ ಧಾಟಿಯಲ್ಲಿ ಮಾತನಾಡುವುದರಲ್ಲಿ ವಿಶೇಷ ಏನೂ ಇಲ್ಲ. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬೆಂಬಲ ಕೊಡುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಪಾಕ್ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಅಗತ್ಯ ಎಂದು ಕಾಂಗ್ರೆಸ್ಸಿನ ಹಿರಿಯ ಸಂಸದ ಶಶಿ ತರೂರ್ ಸಹ ತಿಳಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಸೇರಿ ಸಚಿವರು ರಾಷ್ಟ್ರೀಯ ಕಾಂಗ್ರೆಸ್‌ಗೆ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ. ಅವಿವೇಕದ ಹೇಳಿಕೆ ಬಿಟ್ಟು ದೇಶದ ಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.

ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿ, ಬಿಜೆಪಿಯ 18 ಶಾಸಕರ ಅಮಾನತಿಗೆ ಸಂಬಂಧಿಸಿ ರಾಜ್ಯಪಾಲರ ಜೊತೆ ಚರ್ಚಿಸಲಾಗಿದೆ. ರಾಜ್ಯಪಾಲರು ಈ ಕುರಿತು ಸರ್ಕಾರ ಮತ್ತು ಸಭಾಧ್ಯಕ್ಷರ ಜತೆ ಚರ್ಚಿಸಲಿದ್ದಾರೆ. ಕಳೆದ ಅಧಿವೇಶನದಲ್ಲಿ ಸಹಕಾರ ಸಚಿವ ರಾಜಣ್ಣ ಅವರ ಹನಿಟ್ರ್ಯಾಪ್‌ ಕುರಿತು ಮತ್ತು ಮುಸ್ಲಿಂ ಮೀಸಲಾತಿ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ ನಡೆಸಿತ್ತು. ಈ ವೇಳೆ ಸಭಾಧ್ಯಕ್ಷ ಯು.ಟಿ.ಖಾದರ್‌, ಬಿಜೆಪಿಯ ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ದೇಶದಲ್ಲಿ ಕಾಂಗ್ರೆಸ್‌ ತುರ್ತು ಪರಿಸ್ಥಿತಿ ತಂದಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಅಧಿವೇಶನದಲ್ಲಿ ಮಾತಾಡಿ ಎಂದೇ ಜನ ನಮಗೆ ಮತ ನೀಡಿದ್ದಾರೆ. ನಿತ್ಯದ ಕೆಲಸಗಳಿಗೂ ಈ ಅಮಾನತು ಕ್ರಮ ಅಡ್ಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಕಾಂಗ್ರೆಸ್‌ ಶಾಸಕರು ಸಭಾಧ್ಯಕ್ಷರ ಪೀಠಕ್ಕೆ ನುಗ್ಗಿದ್ದರು. ಆಗ ಪ್ರಜಾಪ್ರಭುತ್ವದ ಆಶಯದಂತೆಯೇ ಬಿಜೆಪಿ ಸರ್ಕಾರ ನಡೆದುಕೊಂಡಿತ್ತು. ಆಡಳಿತ ಪಕ್ಷದಂತೆ ವಿರೋಧ ಪಕ್ಷವೂ ಮುಖ್ಯ. ಕಾನೂನು ಸಚಿವರ ಜತೆಗೆ ಮತ್ತು ಸಭಾಧ್ಯಕ್ಷರ ಜತೆ ಮಾತನಾಡಲಾಗಿದೆ. ಈ ಅಮಾನತು ಆದೇಶ ವಾಪಸ್‌ ಪಡೆಯುವಂತೆ ಆಗ್ರಹಿಸಲಾಗಿದೆ. ಈ ಕುರಿತು ಇದೀಗ ರಾಜ್ಯಪಾಲರ ಗಮನಕ್ಕೂ ತರಲಾಗಿದೆ. ರಾಜ್ಯಪಾಲರು ಸಭಾಧ್ಯಕ್ಷರೊಂದಿಗೆ ಮಾತಾಡುತ್ತೇನೆ ಹಾಗೂ ಪತ್ರ ಬರೆಯುತ್ತೇನೆ ಎಂದಿದ್ದಾರೆ ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು
ಮತಚೋರಿ ಬಗ್ಗೆ ದಿಲ್ಲೀಲಿ ಕೈ ನಾಯಕರ ರಣಕಹಳೆ