ಎಷ್ಟು ಜನ ಬರ್ತೀರಿ ಹೇಳಿ, ಚಹಾ ಕೊಡಿಸ್ತೀನಿ - ಬಟ್ಟೆ ಹರಿದುಕೊಂಡರೂ ರಾಜೀನಾಮೆ ಕೊಡಲ್ಲ : ಖರ್ಗೆ

Published : Dec 31, 2024, 08:08 AM IST
priyank kharge

ಸಾರಾಂಶ

ಗುತ್ತಿಗೆದಾರ ಸಚಿನ್‌ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ನಾಯಕರು ಅನಗತ್ಯವಾಗಿ ನನ್ನ ಹೆಸರು ಎಳೆ ತಂದು ಆರೋಪ ಮಾಡುತ್ತಿದ್ದಾರೆ. ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಅವರು ಎಷ್ಟೇ ಚೀರಾಡಲಿ, ಬಟ್ಟೆ ಹರಿದುಕೊಳ್ಳಲಿ

  ಬೆಂಗಳೂರು : ಗುತ್ತಿಗೆದಾರ ಸಚಿನ್‌ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ನಾಯಕರು ಅನಗತ್ಯವಾಗಿ ನನ್ನ ಹೆಸರು ಎಳೆ ತಂದು ಆರೋಪ ಮಾಡುತ್ತಿದ್ದಾರೆ. ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಅವರು ಎಷ್ಟೇ ಚೀರಾಡಲಿ, ಬಟ್ಟೆ ಹರಿದುಕೊಳ್ಳಲಿ. ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಜತೆಗೆ, ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕರು ಕಲಬುರಗಿಯ ತಮ್ಮ ಮನೆಗೆ ಜ.4ರಂದು ಮುತ್ತಿಗೆ ಹಾಕುವುದಾದರೆ ಮೊದಲೇ ಎಷ್ಟು ಜನ ಬರುತ್ತಾರೆಂದು ಹೇಳಲಿ. ಅವರೆಲ್ಲರಿಗೂ ಕಾಫಿ-ಟೀ ವ್ಯವಸ್ಥೆ ಮಾಡುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿಯವರು ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದ ಬಗ್ಗೆ ಸಂಶಯ ಮೂಡುವಂತಹ ಹಲವು ವಿಷಯಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು, ಸತ್ಯಾಂಶ ತಿಳಿಯಲು ಸಿಐಡಿ ತನಿಖೆಗೆ ವಹಿಸುವಂತೆ ಡಿ.27ರಂದೇ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ. ಭಾನುವಾರ ಇಬ್ಬರನ್ನೂ ಭೇಟಿಯಾಗಿ ನನ್ನ ಬಳಿ ಇರುವ ಮಾಹಿತಿಯನ್ನೂ ನೀಡಿದ್ದೇನೆ ಎಂದರು.

ಬಿಜೆಪಿಯವರಿಗೆ ಸಿಬಿಐ ಮೇಲೆ ಪ್ರೀತಿ ಜಾಸ್ತಿ. ಅದಕ್ಕೆ ಈಗ ಸಿಬಿಐ ತನಿಖೆ ಕೇಳುತ್ತಿದ್ದಾರೆ. ಈ ಪ್ರಕರಣದಲ್ಲಿ ಬಿಜೆಪಿಯವರು ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಅವರು ಮಾಡುತ್ತಿರುವ ಆರೋಪಕ್ಕೆ ಒಂದಾದರೂ ದಾಖಲೆ ಇದೆಯಾ? ಇದ್ದರೆ ತೋರಿಸಲಿ. ಒಂದಾದರೂ ತಲೆದಂಡ ಆಗಬಹುದು ಎಂದು ಅವರು ಹಗಲುಗನಸು ಕಾಣುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಬಿಜೆಪಿಯವರು ತಮ್ಮದೇ ಪಕ್ಷದ ಶಾಸಕ ಮುನಿರತ್ನ ಪ್ರಕರಣ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣಗಳ ಬಗ್ಗೆ ಮಾತನಾಡಲಿ ಎಂದು ಪ್ರಿಯಾಂಕ್‌ ಖರ್ಗೆ ಕಿಡಿಕಾರಿದರು.

ಬಿಜೆಪಿಯವರು ಪ್ರಕರಣದ ಪ್ರಮುಖ ಆರೋಪಿ ತಮ್ಮ ಜೊತೆಗಿರುವ ಫೋಟೋ ಬಿಡುಗಡೆ ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ, ನಾನು ಮೊದಲಿನಿಂದಲೂ ಅವರು ನಮ್ಮ ಕಾರ್ಪೋರೇಟರ್ ಸಹೋದರರು ಅಂತ ಹೇಳುತ್ತಾ ಬಂದಿದ್ದೇನೆ. ಹಾಗಾಗಿ ಫೋಟೋಗಳು ಇರಬಹುದು. ಬಿಜೆಪಿಯವರ ಬಗ್ಗೆ ಎಷ್ಟು ಫೋಟೋ ಸಾಕ್ಷಿ ಗಳು ಇಲ್ಲ. ಡ್ರಗ್ ಕೇಸಿನಲ್ಲಿ ನಟಿಯೊಬ್ಬಳ ಹೆಸರು ಕೇಳಿ ಬಂತಲ್ವಾ, ಆಕೆಯ ಫೋಟೋ ಯಾರ ಜೊತೆ ಇತ್ತು‌ ಹೇಳಿ? ಫೋಟೋ ಇದ್ದ ಮಾತ್ರಕ್ಕೆ ಏನಾಯಿತು? ಎಂದು ಪ್ರಶ್ನಿಸಿದರು.

ಕನಿಷ್ಠ ನೀರನ್ನೂ ಕೊಡಲಿಲ್ಲ ಅಂತ ಹೇಳಬಾರದಲ್ವಾ?: ಪ್ರಿಯಾಂಕ್‌

ಬಿಜೆಪಿ ನಾಯಕರು ಕಲಬುರಗಿಯ ನಮ್ಮ ಮನೆಗೆ ಮುತ್ತಿಗೆ ಹಾಕುವುದಾದರೆ ಮೊದಲೇ ಎಷ್ಟು ಜನ ಬರುತ್ತಾರೆ ಎಂದು ಹೇಳಲಿ. ಅವರೆಲ್ಲರಿಗೂ ಕಾಫಿ-ಟೀ ವ್ಯವಸ್ಥೆ ಮಾಡುತ್ತೇವೆ ಎಂದು ಪ್ರಿಯಾಂಕ್‌ ಖರ್ಗೆ ಇದೇ ವೇಳೆ ವ್ಯಂಗ್ಯವಾಡಿದರು.

ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ತಮ್ಮ ರಾಜೀನಾಮೆ ಪಡೆಯದಿದ್ದರೆ ಜ.4ರಂದು ಬೃಹತ್‌ ಪ್ರತಿಭಟನೆ ನಡೆಸಿ ಕಲಬುರಗಿಯಲ್ಲಿ ನಿಮ್ಮ ನಿವಾಸಕ್ಕೂ ಮುತ್ತಿಗೆ ಹಾಕುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ನಮ್ಮ ಮನೆಗೆ ಬರುವುದಾದರೆ ಎಷ್ಟು ಜನ ಬರುತ್ತಾರೆಂದು ಮೊದಲೇ ಹೇಳಲಿ. ಎಲ್ಲರಿಗೂ ಟೀ-ಕಾಫಿ ವ್ಯವಸ್ಥೆ ಮಾಡುತ್ತೇವೆ. ಆ ಮೇಲೆ ಮನೆವರೆಗೂ ಬಂದವರಿಗೆ ಕನಿಷ್ಠ ನೀರು, ಚಹಾ ಕೊಡಲಿಲ್ಲ ಅಂತ ಹೇಳಬಾರದು ಅಲ್ವಾ ಎಂದರು.

ಬಿಜೆಪಿಗರಿಗೆ ಸಿಬಿಐ ಮೇಲೆ ಪ್ರೀತಿ ಜಾಸ್ತಿ

ಬಿಜೆಪಿಯವರಿಗೆ ಸಿಬಿಐ ಮೇಲೆ ಪ್ರೀತಿ ಜಾಸ್ತಿ. ಅದಕ್ಕೆ ಈಗ ಸಿಬಿಐ ತನಿಖೆ ಕೇಳುತ್ತಿದ್ದಾರೆ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಅವರು ಮಾಡುತ್ತಿರುವ ಆರೋಪಕ್ಕೆ ಒಂದಾದರೂ ದಾಖಲೆ ಇದೆಯಾ? ಇದ್ದರೆ ತೋರಿಸಲಿ.

- ಪ್ರಿಯಾಂಕ್‌ ಖರ್ಗೆ, ಸಚಿವ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

40 ಲಕ್ಷ ಮಹಿಳೆಯರಿಗೆ 9000 ರು. ಗ್ಯಾರಂಟಿ ! ಎಲೆಕ್ಷನ್‌ ಮುನ್ನ ಬಂಪರ್‌
ಡಿಕೆ ರಾಜಕೀಯ ಹೋರಾಟ ಎಲ್ಲರಿಗೂ ಸ್ಪೂರ್ತಿ : ಸಿಎಂ ಸಿದ್ದರಾಮಯ್ಯ