ಭ್ರಷ್ಟ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ತೆಗೆಯಬೇಕು

KannadaprabhaNewsNetwork | Published : Feb 27, 2024 1:30 AM

ಸಾರಾಂಶ

ಕುಡಿಯುವ ನೀರಿನ ಎತ್ತಿನ ಹೊಳೆ ಯೋಜನೆಗೆ ಕುಮಾರಸ್ವಾಮಿ ವಿರೋಧ ಮಾಡಿಲ್ಲವಂತೆ, ಕೋಲಾರ ಜನತೆಗೆ ಟೋಪಿ ಹಾಕಬೇಡಿ ಎಂದು ಹೇಳಿದ್ದರಂತೆ, ಏಕೆಂದರೆ ಅರಸೀಕೆರೆಗೆ ಎತ್ತಿನ ಹೊಳೆ ಯೋಜನೆ ತರಲು ಎರಡು ವರ್ಷ ಕಾಲವಕಾಶಬೇಕಂತೆ

ಕನ್ನಡಪ್ರಭ ವಾರ್ತೆ ಕೋಲಾರ

ಮುಂಬರಲಿರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಎನ್‌ಡಿಎ ಎಲ್ಲ ೨೮ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ. ಇದರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸ್ಪರ್ಧಿಸುವ ಕ್ಷೇತ್ರಗಳು ಅಂತಿಮವಾಗಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಬ್ರಾಹ್ಮಣ ಬೀದಿಯಲ್ಲಿ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್‌ ಮಾಲೀಕತ್ವದ ಸಿರಿಸಮೃದ್ಧಿ ಗೋಲ್ಡ್ ಪ್ಯಾಲೇಸ್ ಮಳಿಗೆ ಉದ್ಘಾಟಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ ಮೀಸಲು ಕ್ಷೇತ್ರಕ್ಕೆ ಜೆಡಿಎಸ್ ಆಕಾಂಕ್ಷಿಗಳಲ್ಲಿ ಸಮೃದ್ಧಿ ಮಂಜುನಾಥ್ ಇದ್ದಾರೆ, ಅದೇ ರೀತಿ ಬಿಜೆಪಿಯಲ್ಲಿ ಎಸ್.ಮುನಿಸ್ವಾಮಿ ಸಹ ಸಮರ್ಥರಿದ್ದಾರೆ. ಅಂತಿಮವಾಗಿ ಅಭ್ಯರ್ಥಿಯನ್ನು ಎರಡು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ ಎಂದರು. ಕಾಂಗ್ರೆಸ್‌ ಸರ್ಕಾರ ಹೋಗಬೇಕು

ನನಗೆ ಚುನಾವಣೆಗಿಂತ ಮುಖ್ಯವಾಗಿ ರಾಜ್ಯದಲ್ಲಿ ಭ್ರಷ್ಟಚಾರದ, ರೈತ ವಿರೋಧಿ ಕೆಟ್ಟ ಕಾಂಗ್ರೆಸ್ ಸರ್ಕಾರವನ್ನು ತೆಗೆಯುವಂತಾಗಬೇಕು, ರಾಜ್ಯದಲ್ಲಿ ಅಭಿವೃದ್ದಿಯೆಂಬುವುದು ಮರೀಚೆಕೆಯಾಗಿದೆ. ಕಾಂಗ್ರೆಸ್ ಸರ್ಕಾರವು ತನ್ನ ೫ ಗ್ಯಾರಂಟಿಗಳ ಕುರಿತು ಮಾಧ್ಯಮಗಳಿಗೆ ಧಾರಾವಾಹಿಗಳ ಮಾದರಿಯಲ್ಲಿ ಜಾಹೀರಾತುಗಳನ್ನು ನೀಡುತ್ತಿದ್ದು, ಇದಕ್ಕಾಗಿ ೨೦೦ ಕೋಟಿ ರು.ಗಳನ್ನು ಮೀಸಲಿಟ್ಟಿದ್ದಾರೆ, ಇದು ಯಾರಪ್ಪನ ದುಡ್ಡು ಎಂದು ಪ್ರಶ್ನಿಸಬಹುದಲ್ಲವೇ ಎಂದರು.

ರೈತರಿಗೆ ಬರ ಪರಿಹಾರದ ಹಣ ಎಂದು ತಲಾ ೨ ಸಾವಿರ ರೂ.ಗಳಂತೆ ೬೪೦ ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಬೇಕಾಗಿದೆ, ರಾಜ್ಯ ಸರ್ಕಾರದ ಪಾಲು ಶೇ.೨೫ ಮತ್ತು ಕೇಂದ್ರ ಸರ್ಕಾರದ ಪಾಲು ಶೇ.೭೫ರಷ್ಟು ಆಗಿದೆ. ಇದನ್ನು ಸಹ ಸಮರ್ಪಕವಾಗಿ ಫಲಾನುಭವಿಗಳಿಗೆ ನೀಡುತ್ತಿಲ್ಲ ಎಂದು ಕಿಡಿಕಾರಿದರು. ಸೆಟ್ಲ್‌ಮೆಂಟ್‌ ರಾಜಕೀಯ ಸಾಧ್ಯವೇ?

ಶಾಸಕರು ಬೇರೆ ಪಕ್ಷಗಳಿಗೆ ಹೋಗುವುದು ಬರುವುದು ಸಾಮಾನ್ಯ ವಿಷಯವಾಗಿದೆ, ಆದರೆ ನಾವು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಹಣ ಮತ್ತು ಧಮ್ಕಿಯಲ್ಲಿ ಅಥವಾ ಸೆಟ್ಲ್‌ಮೆಂಟ್ ರಾಜಕಾರಣದಲ್ಲಿ ಪೈಪೋಟಿ ನೀಡಲು ಸಾಧ್ಯವೇ ಎಂದ ಅವರು ನಾವುಗಳು ಬೇರೆ ಪಕ್ಷದವರನ್ನು ಮತ ಕೇಳಲು ಹೋಗಿದ್ದೇವೆ ಅದನ್ನು ತಪ್ಪು ಎನ್ನಲಾಗದು ಎಂದು ಪ್ರತಿಪಾದಿಸಿದರು,

ಏಕ ವಚನದ ಪ್ರಯೋಗ ಮಾಡುವುದು ಅಸಹನೀಯ. ಗಿಫ್ಟ್ ಹಂಚೋರು ಎಲ್ಲ ಬಿಟ್ಟಿದ್ದಾರೆ. ಚೀನಾದಿಂದ ಖರೀದಿ ಮಾಡಿರುವ ಕುಕ್ಕರ್ ಹಾಗೂ ಡೈನಿಂಗ್ ಸೆಟ್ ಹಂಚುತ್ತಿದ್ದಾರೆ, ಈ ಗಿಫ್ಟ್‌ಗಳೆಲ್ಲಾ ಲೂಟಿ ಮಾಡಿದ ಹಣವಾಗಿದೆ, ಜನರ ತೆರಿಗೆ ಹಣ ಎಂದು ಕಟುಕಿದರು.

ನಾವು ಸಹ ಡಿಕೆಶಿ ತರಹ ಚರ್ಚೆಗೆ ಮುಂದಾದರೆ ಅಲದಹಳ್ಳಿಯಿಂದ ನೆನಪು ಮಾಡಿಕೊಳ್ಳಬೇಕಾಗುತ್ತದೆ, ಅಂತಹ ರೀಲ್‌ಗಳನ್ನು ನಾನು ತೋರಿಸುವುದಿಲ್ಲ, ಇವರ ತರ ನಾನು ಸರ್ಕಾರಿ ಭೂಮಿ ಕಬಳಿಕೆ ಮಾಡಿಲ್ಲ ಎಂದು ನುಡಿದರು.ಎತ್ತನಹೊಳೆಗೆ ವಿರೋಧ ಇಲ್ಲಕುಡಿಯುವ ನೀರಿನ ಎತ್ತಿನ ಹೊಳೆ ಯೋಜನೆಗೆ ನಾನು ಎಂದೂ ವಿರೋಧ ಮಾಡಿಲ್ಲ, ಕೋಲಾರ ಜನತೆಗೆ ಟೋಪಿ ಹಾಕಬೇಡಿ ಎಂದು ಹೇಳಿದ್ದೇ, ಏಕೆಂದರೆ ಅರಸೀಕೆರೆಗೆ ಎತ್ತಿನ ಹೊಳೆ ಯೋಜನೆ ತರಲು ಎರಡು ವರ್ಷ ಕಾಲವಕಾಶಬೇಕೆಂದು ತಿಳಿಸಿದ್ದಾರೆ, ಇದೇ ರೀತಿ ಕಳೆದ ೨೦೧೪ರಲ್ಲಿ ಚಿಕ್ಕಬಳ್ಳಾಪುರದಲ್ಲಿ ತುರಾತುರಿಯಲ್ಲಿ ಎತ್ತಿನಹೊಳಿ ಯೋಜನೆಯ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ, ೨ ವರ್ಷದಲ್ಲಿ ಜಿಲ್ಲೆಗೆ ನೀರು ಕೊಡುವುದಾಗಿ ಘೋಷಿಸಿದ್ದರು, ಆದರೆ ಗುದ್ದಲಿ ಪೂಜೆಯಾಗಿ ೧೦ ವರ್ಷ ಕಳೆದರೂ ಸಾಧ್ಯವಾಗಿಲ್ಲ ಎಂದರು.

ಶಾಸಕರಾದ ಸಮೃದ್ದಿ ಮಂಜುನಾಥ್, ಜಿ.ಕೆ.ವೆಂಕಟಶಿವಾರೆಡ್ಡಿ, ಎಂಎಲ್‌ಸಿ ಇಂಚರ ಗೋವಿಂದರಾಜು, ಮಾಜಿ ಎಂ.ಎಲ್.ಸಿ ತೂಪಲ್ಲಿ ಚೌಡರೆಡ್ಡಿ, ಮಾಜಿ ಶಾಸಕ ಜೆ.ಕೆ.ಕೃಷ್ಣರೆಡ್ಡಿ ಜೆ.ಡಿ.ಎಸ್ ಮುಖಂಡರಾದ ಸಿ.ಎಂ.ಆರ್.ಶ್ರೀನಾಥ್, ಮಲ್ಲೇಶ್ ಬಾಬು, ವಡಗೂರು ರಾಮು, ವಕ್ಕಲೇರಿ ರಾಮು, ಬಣಕನಹಳ್ಳಿ ನಟರಾಜ್, ವಡಗೂರು ಹರೀಶ್, ಜಿಪಂ ಅಧ್ಯಕ್ಷೆ ಚೌಡೇಶ್ವರಿ ರಾಮು, ನಗರಸಭೆ ಸದಸ್ಯ ರಾಕೇಶ್ ಇದ್ದರು.

ಬಾಕ್ಸ್:

ನಿಖಿಲ್ ಸ್ಪರ್ಧಿಸೋಲ್ಲ

ಮಂಡ್ಯದಲ್ಲಿ ನಿಖಿಲ್ ಸ್ಪರ್ಧೆ ಮಾಡುವುದಿಲ್ಲ ಎಂದು ಎಷ್ಟು ಬಾರಿ ಸ್ಪಷ್ಟನೆ ನೀಡಬೇಕು. ಇದನ್ನು ಅವನೇ ಸ್ಪಷ್ಟನೆ ನೀಡಿದ್ದಾನೆ, ಭಾನುವಾರ ರಾತ್ರಿ ೧.೩೦ ರವರೆಗೂ ಮಂಡ್ಯ ಚುನಾವಣೆ ಬಗ್ಗೆ ಸಭೆ ಮಾಡಿದ್ದೇನೆ, ಈ ಮಧ್ಯೆ ಏನೇನೋ ಬೆಳವಣಿಗೆ ಆಗ್ತಿದೆ. ಸುಮಲತಾ ಮಂಡ್ಯದಲ್ಲಿ ಸ್ಪರ್ಧೆ ಮಾಡುವುದು ಅವರಿಗೆ ಬಿಟ್ಟ ವಿಚಾರ, ಅವರ ಬಗ್ಗೆ ನಾವು ಮಾತನಾಡಲ್ಲ, ನಮ್ಮದು ಸಣ್ಣ ಪಕ್ಷ, ನಾವು ಏನೂ ಮಾಡಬೇಕೋ ಅದನ್ನು ಮಾಡ್ತೀವಿ ಎಂದು ಕುಮಾರಸ್ವಾಮಿ ಹೇಳಿದರು.

Share this article