ರಾಜ್ಯ ಸರ್ಕಾರ ಜನರ ಮೇಲೆ ತೆರಿಗೆ ಹೊರೆ ಹೇರಿದೆ ಎಂದು ಅಪಪ್ರಚಾರ ಮಾಡುವ ಬಿಜೆಪಿ ನಾಯಕರು, ನಿಜವಾಗಿಯೂ ಬೆಲೆ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕಿದ ಕೇಂದ್ರ ಸರ್ಕಾರದ ಕ್ರಮ ಕಣ್ತೆರೆದು ನೋಡಬೇಕು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತಾಕೀತು ಮಾಡಿದ್ದಾರೆ.
ಬೆಳಗಾವಿ : ರಾಜ್ಯ ಸರ್ಕಾರ ಜನರ ಮೇಲೆ ತೆರಿಗೆ ಹೊರೆ ಹೇರಿದೆ ಎಂದು ಅಪಪ್ರಚಾರ ಮಾಡುವ ಬಿಜೆಪಿ ನಾಯಕರು, ನಿಜವಾಗಿಯೂ ಬೆಲೆ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕಿದ ಕೇಂದ್ರ ಸರ್ಕಾರದ ಕ್ರಮ ಕಣ್ತೆರೆದು ನೋಡಬೇಕು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತಾಕೀತು ಮಾಡಿದ್ದಾರೆ.
ನಗರದ ಸಿಪಿಇಡಿ ಮೈದಾನದಲ್ಲಿ ಸೋಮವಾರ ಕಾಂಗ್ರೆಸ್ ಆಯೋಜಿಸಿದ್ದ ಸಂವಿಧಾನ ರಕ್ಷಿಸಿ, ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ಪ್ರತಿ ಕುಟುಂಬಕ್ಕೆ ವಾರ್ಷಿಕ ಸುಮಾರು ₹55 ಸಾವಿರ ನೀಡುತ್ತಿದೆ. ಇದು ಕುಟುಂಬಗಳ ಆರ್ಥಿಕ ಶಕ್ತಿ, ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದೆ. ಇಂತಹ ಒಂದೇ ಒಂದು ಯೋಜನೆಯನ್ನು ಹಿಂದಿನ ಬಿಜೆಪಿ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ನೀಡಿಲ್ಲ ಎಂದು ಆರೋಪಿಸಿದರು.
ಕೆಲವು ಕ್ಷೇತ್ರಗಳಲ್ಲಿ ಮಾತ್ರ ಜನರಿಗೆ ಸ್ವಲ್ಪವೂ ಹೊರೆಯಾಗದಂತೆ ಬೆಲೆ ಪರಿಷ್ಕರಣೆ ಮಾಡಲಾಗಿದೆ. ಹಾಲಿನ ದರ ಹೆಚ್ಚಿಸಿದ್ದರೂ ಉಳಿದ ರಾಜ್ಯಗಳಿಗೆ ಹೋಲಿಸಿದರೆ ನಂದಿನಿ ಹಾಲಿನ ದರ ಈಗಲೂ ಅತಿ ಕಡಿಮೆಯೇ ಇದೆ. ಅದರ ಲಾಭವನ್ನು ರೈತರಿಗೆ ನೀಡಲಾಗುತ್ತಿದೆ. ಇದೇ ವಿಷಯವನ್ನು ಇಟ್ಟುಕೊಂಡು ಜನರ ಮೇಲೆ ತೆರಿಗೆ ಹೊರೆ ಎಂದು ಅಪಪ್ರಚಾರ ಮಾಡುವ ಬಿಜೆಪಿ ನಾಯಕರು, ನಿಜವಾದ ಬೆಲೆ ಏರಿಕೆ ಏನು ಎಂಬುದನ್ನು ಅವರದ್ದೇ ಕೇಂದ್ರ ಸರ್ಕಾರದಲ್ಲಿ ನೋಡಬಹುದು ಎಂದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನ ಸಾಮಾನ್ಯರ ಪಾಲಿಗೆ ಹೊರೆಯಾಗುತ್ತಿದೆ. ಕೇಂದ್ರದ ವಿರುದ್ಧ ಮಾತನಾಡಲು ಆಗದ ರಾಜ್ಯ ಬಿಜೆಪಿ ನಾಯಕರು, ಜನಪರವಾಗಿರುವ ನಮ್ಮ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಸ್ವತಃ ಬಲದ ಮೇಲೆ ಅಧಿಕಾರಕ್ಕೇರಲು ಸಾಧ್ಯವಾಗದ ಬಿಜೆಪಿ ನಾಯಕರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಚಿವರಾದ ಸತೀಶ್ ಜಾರಕಿಹೊಳಿ, ಡಾ। ಎಚ್.ಸಿ.ಮಹದೇವಪ್ಪ, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಆರ್.ಬಿ.ತಿಮ್ಮಾಪುರ್, ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರಿಯಾಂಕಾ ಜಾರಕಿಹೊಳಿ ಉಪಸ್ಥಿತರಿದ್ದರು.
ಜನರ ಆಕ್ರೋಶ ಕೇಂದ್ರದ
ವಿರುದ್ಧ ಇರಲಿ: ಶಿವಕುಮಾರ್
ಡಿಸಿಎಂ ಡಿ.ಕೆ.ಶಿವಕುಮಾರ ಮಾತನಾಡಿ, ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲವಾಗಿದೆ. ಹೀಗಾಗಿ ಜನರ ಆಕ್ರೋಶ ಏನಿದ್ದರೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧವಿರಬೇಕು. ನಮ್ಮ ದೇಶದ ಸಂವಿಧಾನ, ಏಕತೆ, ಸಮಗ್ರತೆ, ಶಾಂತಿ ರಕ್ಷಿಸಿಕೊಂಡು ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರನ್ನು ಕಾಪಾಡಲು ನಾವು ಈ ಹೋರಾಟ ಮಾಡುತ್ತಿದ್ದೇವೆ. ನೀವೆಲ್ಲರೂ ಆಶೀರ್ವಾದ ಮಾಡಿ ನಮಗೆ ಅಧಿಕಾರ ಕೊಟ್ಟಿದ್ದೀರಿ. ಅಧಿಕಾರ ನಶ್ವರ, ನಮ್ಮ ಸರ್ಕಾರದ ಸಾಧನೆ ಅಜರಾಮರ, ಮತದಾರನೇ ನಮ್ಮ ಪಾಲಿನ ಈಶ್ವರ. ನೀವು ಕೊಟ್ಟ ಶಕ್ತಿಗೆ ನಿಮ್ಮ ಋಣ ತೀರಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.