ರಾಜ್ಯ ಬಿಜೆಪಿಯಿಂದ ಜಿಲ್ಲೆಯಲ್ಲಿ ಬರ ಅಧ್ಯಯನ । ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ ಶಾಸಕ ಯತ್ನಾಳ್
ರಾಜ್ಯ ಸರ್ಕಾರಕ್ಕೆ ಬರಗಾಲದ ಬಗ್ಗೆ ಚರ್ಚೆನೂ ಇಲ್ಲ, ಚಿಂತನೆಯೂ ಇಲ್ಲ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ತಾಲೂಕಿನಲ್ಲಿ ಬರ ಅಧ್ಯಯನಕ್ಕಾಗಿ ಆಗಮಿಸಿದ್ದ ವೇಳೆ ಸೀಗೇವಾಡಿ ಗ್ರಾಮದ ರೈತ ಮರಿದಾಸನಾಯಕ ಅವರ ಜಮೀನಿನಲ್ಲಿ ಬರ ವೀಕ್ಷಣೆ ಮಾಡಿ, ಮಾದ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಯಾವುದರಲ್ಲಿ ಎಷ್ಟು ಪರ್ಸೆಂಟ್ ಬರುತ್ತದೆ, ಯಾವುದರಲ್ಲಿ ದುಡ್ಡು ಮಾಡಿಕೊಳ್ಳಬೇಕು ಎಂಬ ಚಿಂತೆಯಲ್ಲಿ ಸರ್ಕಾರ ತೊಡಗಿದೆ. ಇನ್ನೊಂದೆಡೆ ಶಾಸಕರು, ಮುಖ್ಯಮಂತ್ರಿಯ ಬದಲಾವಣೆಯ ಚಿಂತನೆ ಮಾಡುತ್ತಿದ್ದಾರೆ.ಇವರಿಗೆ ಬರಗಾಲದ ಬಗ್ಗೆ ಚರ್ಚೆನೂ ಇಲ್ಲ, ಚಿಂತನೆಯೂ ಇಲ್ಲ ಎಂದು ಸರ್ಕಾರವನ್ನು ಆರೋಪಿಸಿದರು.ಲೋಕಸಭೆಗೂ ಮುನ್ನವೇ ಮುಖ್ಯಮಂತ್ರಿ ಸ್ಥಾನದ ಬದಲಾವಣೆಯಾದರೂ ಅಚ್ಚರಿಯಿಲ್ಲ. ಆದ್ದರಿಂದ ಮುಖ್ಯಮಂತ್ರಿಯವರು ತಮ್ಮ ಕುರ್ಚಿ ಕಾಪಾಡುವುದರಲ್ಲಿ ನಿರತರಾಗಿದ್ದಾರೆ. ಉಪಮಖ್ಯಮಂತ್ರಿಯವರು ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುವ ಗದ್ದಲದಲ್ಲಿದ್ದಾರೆ. ಇನ್ನು ಮಾತನಾಡಬಾರದೆಂಬ ಎಚ್ಚರಿಕೆ ಕೊಟ್ಟರೂ ಸಹ ಡಿಕೆಶಿ ಸಿಎಂ ಆಗುತ್ತಾರೆಂದು ಅವರದೇ ಪಕ್ಷದ ಶಾಸಕರೊಬ್ಬರು ಹೇಳಿಕೆ ನೀಡಿದ್ದಾರೆ.ಈಗ ಅವರನ್ನು ಉಚ್ಚಾಟನೆಗೊಳಿಸಲಿ ನೋಡೋಣ ಎಂದು ಹೊಸ ಬಾಂಬ್ ಸಿಡಿಸಿದರು.
113 ತಾಲೂಕುಗಳ ಬರ ಘೋಷಿಸಿದವರು, ಈಗ 216 ತಾಲೂಕು ಎಂದು ಹೇಳುತ್ತಿದ್ದು, ಕೇಂದ್ರಕ್ಕೂ ಸರಿಯಾದ ವರದಿಯನ್ನು ಕೊಟ್ಟಿಲ್ಲ, ಬರಗಾಲ ಘೋಷಣೆಗೆ 3 ತಿಂಗಳು ತಡ ಮಾಡಿದ್ದಾರೆ ಎಂದರು. ಜಿಲ್ಲಾಧಿಕಾರಿ ಅವರ ಬಳಿ ಇರುವ ಹಣವನ್ನು ಉಪಯೋಗಿಸುತ್ತಿಲ್ಲ, ಎಸ್ಸಿಎಸ್ಟಿ ಹಣ ತೆಗೆದುಕೊಂಡು ಗ್ಯಾರಂಟಿಗೆ ಹಾಕಿಕೊಂಡು ಆ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇವರಿಗೆ ಯಾವುದೇ ರೀತಿಯ ರೈತರ ಕಾಳಜಿ ಇಲ್ಲ. ಒಂದು ಕಡೆ ಗ್ಯಾರಂಟಿ ಕೊಡುತ್ತೀರಾ, ಇನ್ನೊಂದು ಕಡೆ ರೈತರಿಗೆ 2 ತಿಂಗಳಾದರೂ ಟಿಸಿ ಕೊಡಲ್ಲ. ತಮ್ಮ ವೈಫಲ್ಯ ಮುಚ್ಚಲಿಕೆ ಮಹಿಷಾಸುರಾನ ಜಾತ್ರೆ ಮಾಡುತ್ತಾರೆ, ಹುಲಿ ಉಗುರು ಚರ್ಚೆ ಮಾಡುತ್ತಾರೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಿಂದ ರೈತರು ಕಣ್ಣೀರು ಹಾಕುತ್ತಿದ್ದಾರೆ ಎಂದು ಅವರು ಸರ್ಕಾರದ ವಿರುದ್ದ ಕಿಡಿ ಕಾರಿದರು.
ಕರ್ನಾಟಕದಲ್ಲಿ ಭೀಕರ ಬರಗಾಲವಿದ್ದು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದಿಂದ ಬರ ಅಧ್ಯಯನವನ್ನು ಕೈಗೊಂಡಿದ್ದೇವೆ. ಸೋಮವಾರ ಚಾಮರಾಜನಗರ, ಮಂಗಳವಾರ ಮೈಸೂರಿನಲ್ಲಿ ಬರ ಅಧ್ಯಯನ ನಡೆಸಿ ವರದಿಯನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸುತ್ತೇವೆ ಎಂದು ತಿಳಿಸಿದರು.
-------------------