ಜುಲೈನಲ್ಲಿ ಕೇಂದ್ರ ಸಚಿವ ಸಂಪುಟ ಪುನಾರಚನೆ

Published : Jun 29, 2026, 10:27 AM IST
pm modi

ಸಾರಾಂಶ

ಮೋದಿ ಸರ್ಕಾರದ ಸಚಿವ ಸಂಪುಟ ಪುನಾರಚನೆ ಸನ್ನಿಹಿತವಾಗುತ್ತಿರುವಂತೆ ತೋರುತ್ತಿದ್ದು, ಇದು ಬಹುಶಃ ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು (ಜುಲೈ 3ನೇ ವಾರಕ್ಕೂ ಮುನ್ನ) ನಡೆಸಬಹುದು ಎಂದು ಮೂಲಗಳು ಹೇಳಿವೆ,.

 ನವದೆಹಲಿ :  ಮೋದಿ ಸರ್ಕಾರದ ಸಚಿವ ಸಂಪುಟ ಪುನಾರಚನೆ ಸನ್ನಿಹಿತವಾಗುತ್ತಿರುವಂತೆ ತೋರುತ್ತಿದ್ದು, ಇದು ಬಹುಶಃ ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು (ಜುಲೈ 3ನೇ ವಾರಕ್ಕೂ ಮುನ್ನ) ನಡೆಸಬಹುದು ಎಂದು ಮೂಲಗಳು ಹೇಳಿವೆ,.

ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಪಕ್ಷದಲ್ಲಿ ಹೊಸ ಪದಾಧಿಕಾರಿಗಳ ತಂಡವನ್ನು ಶೀಘ್ರ ರಚಿಸಲಿದ್ದಾರೆ. ಇದರ ಜತೆಗೆ ಕೇಂದ್ರ ಸಚಿವ ಸಂಪುಟದ ಪುನಾರಚನೆಯೂ ನಡೆಯಲಿದೆ. ಏಕೆಂದರೆ ಕೆಲವು ಕೇಂದ್ರ ಸಚಿವರು ಪಕ್ಷ ಸಂಘಟನೆಗೆ ಹೋಗಲಿದ್ದು, ಅವರು ಸಚಿವ ಖಾತೆಗೆ ರಾಜೀನಾಮೆ ಸಲ್ಲಿಸಲಿದ್ದಾರೆ. ಅಂಥ ಸ್ಥಾನಗಳನ್ನು ಭರ್ತಿ ಮಾಡುವ ಜತೆಗೆ ಹಲವು ಸಚಿವರ ಖಾತೆ ಬದಲಾವಣೆ ಕೂಡ ನಡೆಯಲಿವೆ ಎಂದು ಗೊತ್ತಾಗಿದೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಮೇಲೆ ನೀಟ್‌ ಹಾಗೂ ಸಿಬಿಎಸ್‌ಇ ಪರೀಕ್ಷಾ ವೈಫಲ್ಯದ ಆರೋಪಗಳಿದ್ದು, ಅವರ ಭವಿಷ್ಯವು ಅನಿಶ್ಚಿತವಾಗಿದೆ. ಇತ್ತೀಚೆಗೆ ಸಚಿವ ಜಾರ್ಜ್‌ ಕುರಿಯನ್‌ ರಾಜ್ಯಸಭೆಗೆ ಮರುನಾಮಕರಣ ಆಗದ ಕಾರಣ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸಚಿವ ರವನೀತ್‌ ಸಿಂಗ್‌ ಬಿಟ್ಟು ಕೂಡ ರಾಜ್ಯಸಭೆಗೆ ಮರುನಾಮಕರಣಗೊಂಡಿಲ್ಲ. ಅವರನ್ನು ಪಂಜಾಬ್‌ ವಿಧಾನಸಭೆ ಚುನಾವಣೆಗೆ ಗಮನ ಹರಿಸಲು ಪಕ್ಷ ಕಳಿಸಬಹುದು. ಇಂಥ ಕೆಲವು ಬದಲಾವಣೆ ಆಗಬಹುದು ಎಂದು ಮೂಲಗಳು ಹೇಳಿವೆ,

ಇಬ್ಬರು ಕೇಂದ್ರ ಸಚಿವರಾದ ಪಂಕಜ್ ಚೌಧರಿ ಮತ್ತು ಹರ್ಷ ಮಲ್ಹೋತ್ರಾ ಅವರಿಗೆ ಈಗಾಗಲೇ ಉತ್ತರ ಪ್ರದೇಶ ಮತ್ತು ದೆಹಲಿಯ ಪಕ್ಷದ ಘಟಕಗಳ ನೇತೃತ್ವ ವಹಿಸಲಾಗಿದೆ. ಬಿಜೆಪಿ ತನ್ನ ‘ಒಬ್ಬ ವ್ಯಕ್ತಿ, ಒಂದು ಹುದ್ದೆ’ ನಿಯಮವನ್ನು ಅನುಸರಿಸುವ ಸಾಧ್ಯತೆ ಹೆಚ್ಚು, ಇದು ಸರ್ಕಾರದಿಂದ ಸಚಿವರು ಹೊರಬರಲು ಕಾರಣವಾಗಲಿದೆ ಎಂದು ಅವು ವಿವರಿಸಿವೆ.

ಒಂದು ವೇಳೆ ಪುನಾರಚನೆ ನಡೆದರೆ, ಸಾಮಾನ್ಯವಾಗಿ ಜುಲೈ 3ನೇ ವಾರ ಆರಂಭ ಆಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೂ ಮುನ್ನ ನಡೆಯಬಹುದು. ಪ್ರಧಾನಿಯವರ ಕಾರ್ಯದ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ಪುನಾರಚನೆ ದಿನಾಂಕ ನಿಗದಿ ಆಗುವ ನಿರೀಕ್ಷೆಯಿದೆ ಎಂದು ಗೊತ್ತಾಗಿದೆ.

ಸಚಿವ ಸಂಪುಟವನ್ನು ಸಮತೋಲನಗೊಳಿಸಲು ಯತ್ನ

ಪ್ರಾದೇಶಿಕತೆ, ರಾಜ್ಯ, ಜಾತಿ ಮತ್ತು ನಿಷ್ಠೆಯ ಅಂಶಗಳ ಆಧಾರದ ಮೇಲೆ ಸಚಿವ ಸಂಪುಟವನ್ನು ಸಮತೋಲನಗೊಳಿಸಲು ಯತ್ನಿಸಲಾಗುತ್ತಿದೆ. ಮುಂದಿನ ವರ್ಷ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ, ಆ ರಾಜ್ಯಗಳಿಂದ ಹೆಚ್ಚಿನ ಪ್ರತಿನಿಧಿಗಳು ಮೋದಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಭರ್ಜರಿ ಗೆಲುವು ಕಂಡ ಕಾರಣ ರಾಜ್ಯದ ಕೆಲವು ಬಿಜೆಪಿ ಸಂಸದರನ್ನು ಕೇಂದ್ರ ಸಚಿವಾಲಯಕ್ಕೆ ಸೇರಿಸಿಕೊಳ್ಳಬಹುದು. ಬಂಡಾಯ ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ) ಗುಂಪುಗಳ ಕೆಲವು ಪ್ರತಿನಿಧಿಗಳು, ಆಪ್‌ ತೊರೆದು ಬಿಜೆಪಿ ಸೇರಿದ 7 ರಾಜ್ಯಸಭಾ ಸದಸ್ಯರಲ್ಲಿ ಕೆಲವರು ಸಚಿವ ಸ್ಥಾನ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಕೇಂದ್ರ ಸಚಿವರಾದ ಹರ್ದೀಪ್ ಪುರಿ ಮತ್ತು ಬಿ.ಎಲ್. ವರ್ಮಾ ಅವರ ರಾಜ್ಯಸಭಾ ಅವಧಿ ನವೆಂಬರ್‌ನಲ್ಲಿ ಕೊನೆಗೊಳ್ಳಲಿದ್ದು, ಮೇಲ್ಮನೆಗೆ ಅವರನ್ನು ಮರುನಾಮಕರಣ ಮಾಡುವ ಬಗ್ಗೆ ಹೈಕಮಾಂಡ್‌ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

3 ರಾಜ್ಯಪಾಲರು ನಿವೃತ್ತಿ:

ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋತ್‌ (ಕರ್ನಾಟಕ), ಮಂಗುಭಾಯಿ ಪಟೇಲ್ (ಮಧ್ಯಪ್ರದೇಶ) ಮತ್ತು ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ (ಉತ್ತರಾಖಂಡ) - ಮುಂಬರುವ ತಿಂಗಳುಗಳಲ್ಲಿ ತಮ್ಮ ಅವಧಿ ಪೂರ್ಣಗೊಳಿಸಲಿದ್ದಾರೆ. ಗೆಹಲೋತ್‌ ಮತ್ತು ಪಟೇಲ್ ಜುಲೈನಲ್ಲಿ ಮತ್ತು ಸಿಂಗ್ ಸೆಪ್ಟೆಂಬರ್‌ನಲ್ಲಿ ಅಧಿಕಾರ ಮುಗಿಸಲಿದ್ದಾರೆ. ಹೀಗಾಗಿ ಸರ್ಕಾರದಿಂದ ಹೊರಬರುತ್ತಿರುವ ಕೆಲವು ಸಚಿವರಿಗೆ ಖಾಲಿ ಆಗಲಿರುವ ಈ ರಾಜ್ಯಪಾಲರ ಹುದ್ದೆಗಳನ್ನು ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಆದಾಗ್ಯೂ, ‘ಮೋದಿ ಯಾವಾಗಲೂ ಪ್ರಮುಖ ನಿರ್ಧಾರಗಳನ್ನು ಕೊನೆಯ ಕ್ಷಣದವರೆಗೂ ರಹಸ್ಯವಾಗಿಡುತ್ತಾರೆ ಮತ್ತು ಔಪಚಾರಿಕ ಘೋಷಣೆಯಾದಾಗ ಮಾತ್ರ ಸ್ಪಷ್ಟ ಚಿತ್ರಣ ಹೊರಬರುತ್ತದೆ’ ಎಂದು ಬಲ್ಲ ಮೂಲಗಳು ಹೇಳಿವೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನಾಳೆಯಿಂದ ಮನೆಮನೆಗೆ SIR - ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ
ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ಅನಿಶ್ಚಿತತೆಯ ವಾತಾವರಣ