ಸಿಎಂ ಅಸಹಾಯಕರಾಗಿದ್ದಾರೆ ಎಂಬ ಬೇಸರವಿದೆ : ರಾಜಣ್ಣ

Published : Apr 18, 2026, 07:54 AM IST
KN Rajanna

ಸಾರಾಂಶ

‘ರಾಜ್ಯ ಕಾಂಗ್ರೆಸ್‌ನಲ್ಲಿ ಯಾರೆಲ್ಲಾ ಪಕ್ಷ ನಿಷ್ಠೆಯಿಂದ ಇರುತ್ತಾರೆ ಅವರ ವಿರುದ್ಧ ಕ್ರಮ ಆಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಸಂದರ್ಭದಲ್ಲಿ ಗಟ್ಟಿಯಾಗಿ ನಿಲ್ಲದೆ ಅಸಹಾಯಕರಾಗಿದ್ದಾರೆ ಎಂಬ ಬೇಸರವಿದೆ’ ಎಂದು ಶಾಸಕ ಕೆ.ಎನ್‌.ರಾಜಣ್ಣ ಹೇಳಿದ್ದಾರೆ.

  ಬೆಂಗಳೂರು :  ‘ರಾಜ್ಯ ಕಾಂಗ್ರೆಸ್‌ನಲ್ಲಿ ಯಾರೆಲ್ಲಾ ಪಕ್ಷ ನಿಷ್ಠೆಯಿಂದ ಇರುತ್ತಾರೆ ಅವರ ವಿರುದ್ಧ ಕ್ರಮ ಆಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಸಂದರ್ಭದಲ್ಲಿ ಗಟ್ಟಿಯಾಗಿ ನಿಲ್ಲದೆ ಅಸಹಾಯಕರಾಗಿದ್ದಾರೆ ಎಂಬ ಬೇಸರವಿದೆ’ ಎಂದು ಶಾಸಕ ಕೆ.ಎನ್‌.ರಾಜಣ್ಣ ಹೇಳಿದ್ದಾರೆ.

ಸಚಿವ ಸತೀಶ್ ಜಾರಕಿಹೊಳಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಆಪ್ತರ ಮೇಲೆ ಕ್ರಮ ಕೈಗೊಳ್ಳುವ ಮೂಲಕ ಅವರನ್ನು ಕಟ್ಟಿ ಹಾಕಲಾಗುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಮುಖ್ಯಮಂತ್ರಿ ಅವರನ್ನು ಕಟ್ಟಿ ಹಾಕುವ ಪ್ರಶ್ನೆ ಬರಲ್ಲ. ಅವರು ಕುರಿನಾ ಅಥವಾ ಕೋಣಾನಾ ಕಟ್ಟಿ ಹಾಕೋಕೆ? ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಸಂದರ್ಭದಲ್ಲಿ ಗಟ್ಟಿಯಾಗಿ ನಿಲ್ಲುತ್ತಿಲ್ಲ ಎಂಬ ಬೇಸರವಿದೆ. ಸಿದ್ದರಾಮಯ್ಯ ಅವರಿಂದ ಇಂತಹ ಅಸಹಾಯಕತೆ ನಿರೀಕ್ಷಿಸಿರಲಿಲ್ಲ. ಸಿದ್ದರಾಮಯ್ಯ ಪರವಾಗಿ ಇರುವವರನ್ನು ಸತತವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅವರು ಯಾಕೆ ತಟಸ್ಥರಾಗಿದ್ದಾರೆ ಎಂಬುದು ನಮಗೆ ತಿಳಿಯುತ್ತಿಲ್ಲ ಎಂದು ಹೇಳಿದರು.

ಅವರ ಧ್ವನಿ ಕುಗ್ಗಿದಾಗ ನಮಗೂ ಅಸಹಾಯಕತೆ ಎನಿಸುತ್ತದೆ. ಸಿದ್ದರಾಮಯ್ಯ ಅವರಿಗೆ ಯಾವುದಾದರೂ ಕಂಪಲ್ಷನ್‌ (ಒತ್ತಡ) ಇದೆಯೋ ಗೊತ್ತಿಲ್ಲ ಎಂದು ರಾಜಣ್ಣ ಹೊಸ ಪ್ರಶ್ನೆ ಎತ್ತಿದರು.

ಹೆಸರೇಳದೆ ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿ:

ಪರೋಕ್ಷವಾಗಿ ಡಿ.ಕೆ. ಶಿವಕುಮಾರ್‌ ಅವರ ವಿಚಾರಗಳನ್ನು ಮುಂದಿಟ್ಟುಕೊಂಡು ಪಕ್ಷದಲ್ಲಿ ಶಿಸ್ತು ಕೇವಲ ಕೆಲವರಿಗೆ ಮಾತ್ರ ಸೀಮಿತವೇ ಎಂದು ಪ್ರಶ್ನಿಸಿದ್ದಾರೆ.

ಹಿಂದೆ ‘ರಾಹುಲ್‌ಗಾಂಧಿ ಯಾರು ಎಂಬುದು ಗೊತ್ತಿಲ್ಲ’ ಎಂದಿದ್ದ ವ್ಯಕ್ತಿಯ ಜತೆಗೆ ಹೋಗಿ ಇವರು ವೇದಿಕೆ ಹಂಚಿಕೊಂಡಿದ್ದಾರೆ. ಇದು ಪಕ್ಷದ ಶಿಸ್ತೇ? ಎಂದು ಪರೋಕ್ಷವಾಗಿ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಸದ್ಗುರು ಜಗ್ಗಿ ವಾಸುದೇವ್‌ ಜತೆ ವೇದಿಕೆ ಹಂಚಿಕೊಂಡಿದ್ದನ್ನು ಪ್ರಸ್ತಾಪಿಸಿ ಟೀಕಿಸಿದರು.

ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ

ಜತೆಗೆ ‘ಪ್ರಯಾಗ್‌ರಾಜ್‌ನಲ್ಲಿ ಹೋಗಿ ಮುಳುಗಿದರೆ ಬಡತನ ಹೋಗುತ್ತಾ?’ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದರು. ಆದರೆ ಇವರು ಅಲ್ಲಿಗೂ ಹೋಗಿ ಮುಳುಗಿ ಬಂದರು ಎನ್ನುವ ಮೂಲಕ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಲೋಕಸಭೆ ಚುನಾವಣೆ ವೇಳೆ ಶಾಮನೂರು ಶಿವಶಂಕರಪ್ಪ ಅವರು ಶಿವಮೊಗ್ಗದಲ್ಲಿ ಹೋಗಿ ಬಿ.ವೈ. ರಾಘವೇಂದ್ರ ಅವರಿಗೆ ಮತ ನೀಡುವಂತೆ ಬಹಿರಂಗ ಹೇಳಿಕೆ ನೀಡಿದ್ದರು ಎಂದು ಪ್ರಸ್ತಾಪಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಜಿಬಿಎ ಚುನಾವಣೆ ಮುಂದೂಡಲು ಸರ್ಕಾರ ಮನವಿ
ಮೋದಿ ಸರ್ಕಾರದ ಮೊದಲ ಮಸೂದೆ ಮಹಿಳಾ ಮೀಸಲಿಗೆ ಸೋಲು