ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ನಡೆದಿಲ್ಲ. ಊಹಾಪೋಹಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದರು.
ಮೈಸೂರು : ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ನಡೆದಿಲ್ಲ. ಊಹಾಪೋಹಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಸಚಿವರೊಂದಿಗೆ ಡಿನ್ನರ್ ಮೀಟಿಂಗ್ ಸಂಬಂಧ ಬುಧವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಒಟ್ಟಿಗೆ ಊಟ ಮಾಡಿದ್ರೆ ತಪ್ಪೇನು? ದಸರಾ ಅಂದ ಮೇಲೆ ಸಚಿವರು ಒಂದಿಲ್ಲೊಂದು ಕಾರ್ಯಕ್ರಮಕ್ಕೆ ಬರ್ತಾರೆ. ಮೈಸೂರು ಅತಿಥಿ ಸತ್ಕಾರಕ್ಕೆ ಹೆಸರುವಾಸಿ ಎಂದರು.
ಸುನಿಲ್ ಬೋಸ್ ಮೊದಲ ಬಾರಿಗೆ ಸಂಸದರಾಗಿದ್ದಾರೆ. ಪಕ್ಷದ ಹಿರಿಯರಿಗೆ ಊಟೋಪಚಾರ ಏರ್ಪಡಿಸಿದ್ದರು. ನಾನು, ನನ್ನ ಸಹೋದ್ಯೋಗಿ ಮಿತ್ರರು ಊಟ ಮಾಡಿದ್ದೇವೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಡಾ. ಪರಮೇಶ್ವರ್ ಪೊಲೀಸ್ ಬ್ಯಾಂಡ್ ಕಾರ್ಯಕ್ರಮಕ್ಕೆ ಬಂದಿದ್ದರು. ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಸಚಿವರು. ಹೀಗಾಗಿ, ರಸ್ತೆ, ಕುಡಿಯುವ ನೀರು ಅಂತ ಬೇರೆ ಬೇರೆ ಕೆಲಸಕ್ಕೆ ಶಾಸಕರು ಭೇಟಿ ಆಗಿದ್ದಾರೆ ಎಂದು ಅವರು ತಿಳಿಸಿದರು.
ಮಾಧ್ಯಮಗಳ ವಿರುದ್ಧ ಕೆಂಡ
ಮಾಧ್ಯಮ ಪ್ರತಿನಿಧಿಗಳು ಸಿಎಂ ಬದಲಾವಣೆ ಸಂಬಂಧ ಕೇಳಿದ ಪ್ರಶ್ನೆಗಳಿಗೆ ಕೆರಳಿ ಕೆಂಡಾಮಂಡಲವಾದ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು, ಸಿಎಂ ಬದಲಾವಣೆ ಆಗ್ತಾರೆ ಅಂತ ನಿಮಗ್ಯಾರು ಹೇಳಿದ್ದು? ಬಿಜೆಪಿಯವರಿಗೂ, ಜೆಡಿಎಸ್ ನವರಿಗೂ ರಾಜ್ಯ ಸರ್ಕಾರಕ್ಕೂ ಏನ್ ಸಂಬಂಧ? ಸಿಎಂ ಬದಲಾವಣೆ ಆಗ್ತಾರೆ ಅಂತ ಹೇಳೋಕೆ ವಿಜಯೇಂದ್ರ ಯಾರು? ವಿಜಯೇಂದ್ರ ಅವರಿಗೆ ಕಾಂಗ್ರೆಸ್ ಪಕ್ಷದ ಜಿಪಿಎ ಕೊಟ್ಟವರು ಯಾರು ಎಂದು ಕಿಡಿಕಾರಿದರು.
ಅಲ್ಲದೆ, ಬಿಜೆಪಿಯರಿಗೆ ಮಾಡೋಕೆ ಕೆಲಸ ಇಲ್ಲ. ದಿನ ಬೆಳಗಾದ್ರೆ ಏನೇನೋ ಹೇಳ್ತಾರೆ. ಅದಕ್ಕೆಲ್ಲ ನೀವ್ಯಾಕೆ ಪ್ರಾಮುಖ್ಯತೆ ಕೊಡ್ತೀರಿ? ನಿಮಗೆ ಏನ್ ಬೇಕು, ನಿಮ್ಮ ಉದ್ದೇಶವೇನು? ಎಂದು ಸುದ್ದಿಗಾರರಿಗೆ ಮರು ಪ್ರಶ್ನೆ ಹಾಕಿದರು.