‘ಈ ಬಾರಿ ನಾನು ಸಂಪುಟದಲ್ಲಿರಬೇಕು, ಇರ್ತೇನೆ’

Published : Nov 06, 2025, 10:26 AM IST
CS Nadagouda interview

ಸಾರಾಂಶ

ರಾಜ್ಯ ರಾಜಕಾರಣದಲ್ಲಿ ಹಿರಿಯರೂ ಆಗಿರುವ ಕೆಎಸ್‌ಡಿಎಲ್‌ ಅಧ್ಯಕ್ಷ ಹಾಗೂ ಮುದ್ದೇಬಿಹಾಳ ಕ್ಷೇತ್ರದ ಕಾಂಗ್ರೆಸ್‌ನ ಹಿರಿಯ ಶಾಸಕ ಸಿ.ಎಸ್‌.ನಾಡಗೌಡ (ಅಪ್ಪಾಜಿ) ಅವರು ಮುಂಬರಲಿರುವ ಸಂಪುಟ ಪುನಾರಚನೆಯಲ್ಲಿ ಪ್ರಬಲ ಸಚಿವಾಕಾಂಕ್ಷಿಯಾಗಿದ್ದಾರೆ.

ಸಿ.ಎಸ್‌.ನಾಡಗೌಡ (ಅಪ್ಪಾಜಿ),

-ಕೆಎಸ್‌ಡಿಎಲ್‌ ಅಧ್ಯಕ್ಷ, ಮುದ್ದೇಬಿಹಾಳ ಶಾಸಕ

- ಸಂದರ್ಶನ-

ಶಶಿಕಾಂತ ಮೆಂಡೆಗಾರ

ರಾಜ್ಯ ರಾಜಕಾರಣದಲ್ಲಿ ಹಿರಿಯರೂ ಆಗಿರುವ ಕೆಎಸ್‌ಡಿಎಲ್‌ ಅಧ್ಯಕ್ಷ ಹಾಗೂ ಮುದ್ದೇಬಿಹಾಳ ಕ್ಷೇತ್ರದ ಕಾಂಗ್ರೆಸ್‌ನ ಹಿರಿಯ ಶಾಸಕ ಸಿ.ಎಸ್‌.ನಾಡಗೌಡ (ಅಪ್ಪಾಜಿ) ಅವರು ಮುಂಬರಲಿರುವ ಸಂಪುಟ ಪುನಾರಚನೆಯಲ್ಲಿ ಪ್ರಬಲ ಸಚಿವಾಕಾಂಕ್ಷಿಯಾಗಿದ್ದಾರೆ. ಕೆಎಸ್‌ಡಿಎಲ್ ಸಂಸ್ಥೆಯನ್ನು ಇಂದು ನೂರಾರು ಕೋಟಿ ರು. ಲಾಭದತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿರುವ ನಾಡಗೌಡ ಅವರನ್ನು ಈ ಹಿಂದೆ ಸಂಪುಟದಲ್ಲಿ ಅವರ ಹೆಸರಿದ್ದರೂ ಯಾಕೆ ಕೈಬಿಡಲಾಯಿತು? ಈ ಬಾರಿಯಾದರೂ ಅವರಿಗೆ ಸಂಪುಟದಲ್ಲಿ ಅವಕಾಶ ಸಿಗುತ್ತಾ? ಸಚಿವರಾಗಬೇಕಿದ್ದವರು ನಿಗಮ ಮಂಡಳಿಗೆ ಸೀಮಿತರಾಗಿದ್ದಕ್ಕೆ ಬೇಸರವಾಗಿದೆಯೇ ಎಂಬ ಪ್ರಶ್ನೆಗಳಿಗೆ ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದಾರೆ.

ರಾಜ್ಯದ ಹಲವು ನಿಗಮಗಳು ನಷ್ಟದಲ್ಲಿರುವಾಗ ಕೆಎಸ್‌ಡಿಎಲ್‌ ಲಾಭಕ್ಕೆ ತಂದು ನಿಲ್ಲಿಸಿದ್ದೀರಿ. ಅದರ ಗುಟ್ಟೇನು?

ಕೆಎಸ್‌ಡಿಎಲ್‌ ಸಂಸ್ಥೆ ಎಫ್‌ಎಂಸಿಜಿ ಕಂಪನಿಯಾಗಿದೆ. ನೇರವಾಗಿ ಗ್ರಾಹಕರಿಗೆ ನಮ್ಮ ಉತ್ಪನ್ನಗಳ ಮೇಲೆ ವಿಶ್ವಾಸ ಹುಟ್ಟಿಸುವ ಕೆಲಸ ಮಾಡಬೇಕು. ಮುಖ್ಯವಾಗಿ ಮೈಸೂರ್‌ ಸ್ಯಾಂಡಲ್ ನಾಲ್ವಡಿ ಕೃಷ್ಣರಾಜರು ಸ್ಥಾಪಿಸಿದರು. ವಿಶ್ವೇಶ್ವರಯ್ಯನವರು ಚಾಲನೆ ನೀಡಿದರು, ಶಾಸ್ತ್ರೀಯವರು ಮುನ್ನಡೆಸಿದರು. ಇದು 100 ವರ್ಷ ಪುರಾತನ ಕಂಪನಿ. ಮಧ್ಯದಲ್ಲಿ 15 ವರ್ಷಗಳ ಕಾಲ ಹಾನಿಗೆ ಒಳಗಾಗಿತ್ತು. ನಂತರ 2021-22ರಿಂದ ಚೇತರಿಸಿಕೊಳ್ಳಲು ಆರಂಭವಾಗಿದೆ. ನಂತರದಲ್ಲಿ ನಾನು ಬಂದಮೇಲೆ ಅಲ್ಲಿ ಕೆಲಸದ ವಾತಾವರಣ ಬದಲಾವಣೆ ಮಾಡಿ, ಕಾರ್ಮಿಕರನ್ನು ವಿಶ್ವಾಸಕ್ಕೆ ತೆದುಕೊಂಡು ಉತ್ಸಾಹ ತುಂಬಿದ್ದೇನೆ. ಗುಣಮಟ್ಟ ಕಾಪಾಡಲು, ಕಚ್ಚಾ ವಸ್ತುಗಳ ಖರೀದಿ ವಿಚಾರ, ಎಲ್ಲವನ್ನೂ ಸರಿಯಾದ ರೀತಿಯಲ್ಲಿ ನಿಯಂತ್ರಣ ಮಾಡುವ ಕೆಲಸ ಮಾಡಿದ್ದೇವೆ. ಮುಖ್ಯವಾಗಿ ನಾವು ಕೆಟಿಟಿಪಿ ಆ್ಯಕ್ಟ್ ಪಾಲಿಸಿದ್ದೇವೆ. ಕೆಎಸ್‌ಡಿಎಲ್‌ ಉತ್ಪನ್ನಗಳ ಗುಣಮಟ್ಟದಲ್ಲಿ ಯಾವುದೇ ರೀತಿಯಲ್ಲಿ ಹೊಂದಾಣಿಕೆಯಿಲ್ಲ. ಕಚ್ಚಾ ವಸ್ತುಗಳಲ್ಲಿ ಕಡಿಮೆ ಬೆಲೆಯಿಂದ ಟೆಂಡರ್‌ ಮಾಡುವಲ್ಲೂ ನಾವು ಯಶಸ್ವಿಯಾಗಿದ್ದೇವೆ. ಬೇಡಿಕೆಗೆ ತಕ್ಕಂತೆ ಗಂಧದ ಎಣ್ಣೆ, ಪರ್ಫ್ಯೂಮ್ ವಸ್ತುಗಳ ಉತ್ಪಾದನೆ ಹೆಚ್ಚಿಸಲಾಗಿದೆ. ಕಾರ್ಮಿಕರಿಗೆಲ್ಲ ಉತ್ಪನ್ನಗಳ ಉತ್ಪಾದನೆಗೆ ತಕ್ಕಂತೆ ಪ್ರೋತ್ಸಾಹಧನ ಸಹ ಕೊಡುತ್ತಿದ್ದೇವೆ.

ಕೆಎಸ್‌ಡಿಎಲ್‌ನಲ್ಲಿ ಆಸ್ಟ್ರೇಲಿಯಾ ಮಾದರಿ ಅನುಸರಿಸುವ ಬಗ್ಗೆ ಹಿಂದೊಮ್ಮೆ ಹೇಳಿದ್ದೀರಿ. ಅದು ಯಾವ ರೀತಿಯ ಯೋಜನೆ? ಅದರಿಂದ ನಿಗಮಕ್ಕೆ ಲಾಭವೇನು?

ಆಸ್ಟ್ರೇಲಿಯಾದಲ್ಲಿ ರೈತರಿಗೆ ಭೂಮಿ ಹೆಚ್ಚಿಗೆ ಇರುವುದರಿಂದ ಇಲ್ಲಿನ ಶ್ರೀಗಂಧದ ಸಸಿಗಳನ್ನು ಒಯ್ದು ಅವರು ಪ್ಲಾಂಟೇಷನ್‌ ಮಾಡಿದ್ದಾರೆ. ಒಬ್ಬೊಬ್ಬರು 900 ರಿಂದ 3 ಸಾವಿರ ಹೆಕ್ಟೇರ್‌ವರೆಗೆ ಬೆಳೆದಿದ್ದಾರೆ. ಅದರಂತೆ ನಮ್ಮ ದೇಶದಲ್ಲಿಯೂ ರೈತರನ್ನು ಪ್ರೋತ್ಸಾಹಿಸಲು ನಾವು ಹೆಚ್ಚಿನ ಒತ್ತು ಕೊಡಬೇಕಿದೆ. ಸುಧಾರಿತ ಶ್ರೀಗಂಧದ ತಳಿಗಳನ್ನು ಬೆಳೆಯಲು ಕೆಎಸ್‌ಡಿಎಲ್‌ ಸಾಕಷ್ಟು ಹಣ ಬಿಡುಗಡೆ ಮಾಡಿದೆ. ಇದರಿಂದ ಸಣ್ಣ ರೈತರಿಗೆ ಪ್ರೋತ್ಸಾಹ ಸಿಗಲಿದ್ದು, ನಿಗಮಕ್ಕೂ ಆದಾಯ ಬರಲಿದೆ.

ಕೆಎಸ್‌ಡಿಎಲ್‌ಗೆ ಅಧ್ಯಕ್ಷರಾದ ನಂತರದಿಂದ ಏನೆಲ್ಲ ಬದಲಾವಣೆ ತಂದಿದ್ದೀರಿ?

-ಮೊದಲಿಗೆ ಶಿಸ್ತು ಪಾಲಿಸುತ್ತಿದ್ದೇವೆ, ಅನಗತ್ಯ ಸೋರಿಕೆಗಳನ್ನು ನಿಲ್ಲಿಸಿದ್ದೇವೆ. ಉತ್ಪನ್ನಗಳಲ್ಲಿ ಗುಣಮಟ್ಟ ಕಾಪಾಡಿದ್ದೇವೆ. ಮಶಿನರಿಗಳಲ್ಲಿ ಬದಲಾವಣೆ ಮಾಡಿದ್ದೇವೆ. ತೈಲದ ಗುಣಮಟ್ಟ ಹೆಚ್ಚಿಸಿದ್ದೇವೆ. ತಾಪಮಾನ ನಿಯಂತ್ರಣ ರೂಂ ಮಾಡಿದ್ದೇವೆ. ಇದೀಗ ಹೊಸ ಹೊಸ ಯಂತ್ರಗಳಿಗೆ ಟೆಂಡರ್ ಆಗಿದೆ. ಅವುಗಳು ಶೀಘ್ರದಲ್ಲೇ ಕಾರ್ಯನಿರ್ವಹಿಸಲಿವೆ.

ಕೆಎಸ್‌ಡಿಎಲ್‌ನ ಮುಂದಿನ ಗುರಿಯೇನು? ಬೇರೆ ಎಲ್ಲೆಲ್ಲಿ ಉತ್ಪಾದನಾ ಘಟಕ ಸ್ಥಾಪನೆಯಾಗುತ್ತಿದೆ?

-ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳದಲ್ಲಿ ಸ್ಥಾಪಿಸಬೇಕೆಂದು ಈಗಾಗಲೇ ಆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಅಲ್ಲಿ 50 ಎಕರೆ ಜಮೀನು ತೆಗೆದುಕೊಳ್ಳುವ ಅಭಿಪ್ರಾಯವಿತ್ತು. ಬೆಂಗಳೂರಿನಲ್ಲಿ ಹಾಗೂ ಮೈಸೂರಿನಲ್ಲಿಯೂ ಅಷ್ಟು ಭೂಮಿ ನಮ್ಮ ಬಳಿ ಇಲ್ಲ. ಇಟ್ಟಂಗಿಹಾಳದಲ್ಲಿ ಕಡಿಮೆ ದರಕ್ಕೆ ಭೂಮಿ ತೆಗೆದುಕೊಳ್ಳಬಹುದು. ಆದರೆ ಅದು ಕಲ್ಲು ಭೂಮಿ ಆಗಿರುವುದರಿಂದ ಗಂಧದ ಮರ ಬೆಳೆಯುವುದು ಕಷ್ಟವಿದೆ. ಇದರ ಬಗ್ಗೆ ಇನ್ನೊಮ್ಮೆ ಚರ್ಚಿಸಿ ನಿರ್ಧರಿಸಲಾಗುವುದು. ಅದರಂತೆ ರಾಯಚೂರಿನಲ್ಲಿಯೂ ಉಚಿತವಾಗಿ ಭೂಮಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಅಲ್ಲಿಯೂ ಒಂದು ಘಟಕ ಮಾಡುವ ಯೋಜನೆಯಿದೆ.

ಸಚಿವರಾಗ ಬೇಕಾದವರಿಗೆ ಸರ್ಕಾರ ಕೆಎಸ್‌ಡಿಎಲ್‌ ಹೊಣೆ ನೀಡಿದೆ. ನಿಮಗೆ ತೃಪ್ತಿ ತಂದಿದೆಯೇ?

- ತೃಪ್ತಿಯಿಲ್ಲ. ಈಗ ನಾನು ಮ್ಯಾನೇಜರ್‌ ಥರ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಪ್ರತಿಯೊಂದಕ್ಕೂ ಸರ್ಕಾರಕ್ಕೆ ಅನುಮತಿಗೆ ಬರೆಯಬೇಕು. ಬಹುತೇಕ ತೀರ್ಮಾನಗಳು ವಿಳಂಬವಾಗುತ್ತವೆ. ಮಂತ್ರಿ ಸಾಮರ್ಥ್ಯವಿದ್ದವರಿಗೆ ಚಿಕ್ಕ ಸಂಸ್ಥೆ ಸಿಕ್ಕಿದೆ. ನಾವು ಮಾಡುವ ಕೆಲಸದಲ್ಲಿ ತೃಪ್ತಿ ಪಡಬೇಕಿದೆ. ಹತ್ತು ಸಂಸ್ಥೆ ನಡೆಸುವ ಸಾಮರ್ಥ್ಯವಿದ್ದವರಿಗೆ ಒಂದು ಸಂಸ್ಥೆ ಕೊಟ್ಟಂತಾಗಿದೆ. ರಾಜಕೀಯವಾಗಿ ಇದು ತೃಪ್ತಿ ತಂದಿಲ್ಲ.

ಅಪ್ಪಾಜಿ ನಾಡಗೌಡ ಅವರಿಗೆ ಸರ್ಕಾರ, ಪಕ್ಷದ ಮೇಲೆ ಅಸಮಾಧಾನ ಇದೆಯೇ?

- ನನಗೆ ಪಕ್ಷದ ಮೇಲೆ ಅಸಮಾಧಾನವಿಲ್ಲ. ಪಕ್ಷದಲ್ಲಿ ಹಿರಿಯ ನಾಯಕರಿದ್ದಾರೆ, ಅವರ ತೀರ್ಮಾನ ಸರಿಯಿರುತ್ತವೆ. ಕೆಲವೊಮ್ಮೆ ಕೈ ಮೀರಿದ ನಿರ್ಧಾರ ಆಗುತ್ತವೆ. ಆದರೆ ನಾನು ಶಿಸ್ತಿನ ಸಿಪಾಯಿ ಆಗಿ ಅವುಗಳನ್ನು ಗೌರವಿಸುತ್ತೇನೆ.

ಪಕ್ಷ ಮತ್ತು ಸರ್ಕಾರದಲ್ಲಿ ಹಿರಿಯರಿಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ ಎಂದು ಹಿಂದೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದೀರಿ. ಅದು ನಿಜವೇ?

- ನಾನು ಅಸಮಾಧಾನ ವ್ಯಕ್ತಪಡಿಸಿಲ್ಲ. ಅದನ್ನು ಅಸಮಾಧಾನ ಎನ್ನುವ ಬದಲು ನನ್ನ ಸಲಹೆ ಎಂದುಕೊಳ್ಳಬೇಕು. ನಾನು ಸಲಹೆ ಕೊಟ್ಟಿದ್ದೇನೆ. ವಾಕ್ ಸ್ವಾತಂತ್ರ್ಯ ಬಹಳ ಮುಖ್ಯ. ನನಗೆ ಇಷ್ಟೂ ಸ್ವಾತಂತ್ರ್ಯವಿಲ್ಲವೇ? ಹಾಗಾದರೆ ನಾವು ಸೀನಿಯರ್‌ ಎಂದು ಹೇಳಿಕೊಳ್ಳುವುದರಲ್ಲಿ ಏನು ಅರ್ಥವಿದೆ? ನಾವು ಸಲಹೆ ಕೊಟ್ಟಿದ್ದೇವೆ, ನಮ್ಮ ಸಲಹೆಗಳನ್ನು ಸ್ವೀಕಾರ ಮಾಡುವುದು ಬಿಡುವುದು ಮೇಲಿನವರಿಗೆ ಬಿಟ್ಟ ತೀರ್ಮಾನ.

ಸಚಿವ ಸಂಪುಟ ಪುನಾರಚನೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಒಂದೊಮ್ಮೆ ಸಂಪುಟ ಪುನಾರಚನೆಯಾದರೆ ನಿಮ್ಮ ನಿರೀಕ್ಷೆ ಏನಿರಲಿದೆ?

- ನನ್ನನ್ನು ಸಚಿವ ಸಂಪುಟದಲ್ಲಿ ತೆಗೆದುಕೊಳ್ಳಬೇಕು ಎಂಬ ನಿರೀಕ್ಷೆಯಲ್ಲಿದ್ದೇನೆ. ಈ ಹಿಂದೆ ಎರಡ್ಮೂರು ಬಾರಿ ಲಿಸ್ಟ್‌ನಲ್ಲಿ ನನ್ನ ಹೆಸರು ಬಂದು ಮತ್ತೆ ಹಿಂದೆ ಹೋಗಿದೆ. ಲಿಂಗಾಯತರಲ್ಲೂ ಒಳ ಮೀಸಲಾತಿ ಎನ್ನುವಾಗ, ಯಾವಾಗಲೂ ನಮ್ಮವರಿಗೆ ಮೂರ್ನಾಲ್ಕು ಜನಕ್ಕೆ ಸ್ಥಾನ ಸಿಕ್ಕಿದೆ. ನಾವು ನಮ್ಮ ಕೋಟಾದಲ್ಲಿ ಕೇಳುತ್ತೇವೆ, ಇದರಿಂದ ಇನ್ನೊಬ್ಬರಿಗೆ ತೊಂದರೆ ಎಂಬುವುದಿಲ್ಲ.

ಸಂಪುಟ ಪುನಾರಚನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಅಥವಾ ಹೈಕಮಾಂಡ್ ನಾಯಕರ ಮುಂದೆ ಹಿರಿತನದ ಹಕ್ಕೊತ್ತಾಯ ಮಂಡಿಸುತ್ತೀರಾ?

- ನಾನು ಹಿರಿಯನಿದ್ದೇನೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾನೇನು ಹೇಳುವ ಅಗತ್ಯವಿಲ್ಲ. ನನ್ನ ಹಿಸ್ಟರಿ ನೋಡಿದರೆ ತಿಳಿಯುತ್ತದೆ. 1981-83ರಿಂದ ಯಾರು ಪಕ್ಷದಲ್ಲಿದ್ದಾರೆ. ಅವರೇ ನೋಡಿಕೊಳ್ಳಲಿ. ಪಕ್ಷಕ್ಕಾಗಿ ದುಡಿದಿದ್ದೇನೆ. ಸಾಕಷ್ಟು ಕಡೆ ಕಷ್ಟಕರ ಪ್ರದೇಶಗಳಲ್ಲಿ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದ್ದೇನೆ.

ಸಂಪುಟಕ್ಕೆ ಸೇರ್ಪಡೆಯಾಗುವ ಅವಕಾಶ ಬಂದರೆ, ಇಂತಹದ್ದೇ ಖಾತೆ ಬೇಕು ಎನ್ನುವ ಬೇಡಿಕೆ ಏನಾದರೂ ಇರಲಿದೆಯೇ?

- ಇದು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದಂತಾಗುತ್ತದೆ. ಈಗ ಈ ಚರ್ಚೆ ಬೇಡ, ನನಗೆ ಯಾವುದೇ ಖಾತೆ ಕೊಟ್ಟರೂ ನನ್ನ ಅನುಭವದ ಆಧಾರದಲ್ಲಿ ಸಮರ್ಥವಾಗಿ ನಿಭಾಯಿಸುತ್ತೇನೆ.

ನಾಯಕತ್ವ ಬದಲಾವಣೆ ಬಗ್ಗೆಯೂ ಚರ್ಚೆಯಿದೆ. ಇದು ನಿಜವೇ?

- ಇಲ್ಲ, ಅದು ನಮಗೂ ಗೊತ್ತಿಲ್ಲ. ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಹೈಕಮಾಂಡ್ ತೀರ್ಮಾನವೇ ನಮ್ಮ ತೀರ್ಮಾನ. ಇದು ವದಂತಿ ಇದ್ದರೂ ಇರಬಹುದು.

ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆಯಂತಹ ಚರ್ಚೆಗಳು ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆಯೇ, ಕೆಎಸ್‌ಡಿಎಲ್‌ನಲ್ಲಿ ಅದರ ಪರಿಣಾಮ ಎದುರಾಗಿದೆಯೇ?

- ಆಡಳಿತದಲ್ಲಿ ಕೆಎಸ್‌ಡಿಎಲ್‌ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮದು ರಾಜಕೀಯ ರಹಿತವಾದ ಆಡಳಿತವಿದೆ. ನಮ್ಮ ನಿಗಮದಲ್ಲಿ ಸಿಎಂ, ಡಿಸಿಎಂ ಅವರು ಎಂದೂ ಮಧ್ಯಪ್ರವೇಶಿಸಿಲ್ಲ.

ವಿಜಯಪುರಕ್ಕೆ ಹಣ ಕೊಟ್ಟಿಲ್ಲ. ತೊಂದರೆಯಾಗಿದೆ, ಅಭಿವೃದ್ಧಿ ಆಗುತ್ತಿಲ್ಲ ಎಂದು ಸರ್ಕಾರದ ವಿರುದ್ಧವೇ ಧ್ವನಿ ಎತ್ತಿದ್ದೀರಲ್ಲಾ?

- ನಾನು ಮೊದಲೂ ಹೇಳಿದ್ದೇನೆ ಈಗಲೂ ಹೇಳಿದ್ದೇನೆ. ಸಚಿವರಿದ್ದಲ್ಲಿ ಹೆಚ್ಚಿನ ಹಣ ಬರುತ್ತಿದೆ. ಸಚಿವರಿಲ್ಲದೆ ಕೇವಲ ಶಾಸಕರಿದ್ದಲ್ಲಿ ಹಣ ಬರ್ತಿಲ್ಲ. ನಾನು ಹೇಳಿದ್ದು ಶಿಸ್ತಿನ ವಿರುದ್ಧವಿಲ್ಲ. ಇದು ನಮ್ಮ ಮನದಾಳದ ಮಾತು. ಸಿಎಂ ಅವರು ₹50 ಕೋಟಿ ಅನುದಾನ ಕೊಟ್ಟಿದ್ದಾರೆ. ಅದಕ್ಕೆ ಅಭಿನಂದಿಸುತ್ತೇನೆ. ಆದರೆ ಮಂತ್ರಿಗಳಿದ್ದಲ್ಲಿ ಹೆಚ್ಚಾಗಿ ಹಣ ಬರುತ್ತಿದೆ.

ನಿಜಕ್ಕೂ ಹಣಕಾಸಿಗೆ ತೊಂದರೆ ಇದೆಯೇ? ಕಾರಣವೇನು?

- ನಾನು ಹಣಕಾಸು ಸಚಿವನಲ್ಲ, ಅದರಲ್ಲಿ ನಾನು ಭಾಗಿಯಾಗಿಲ್ಲ. ಆದರೆ ಬಜೆಟ್ ಅನುಮೋದನೆ ವೇಳೆ ಹಣಕಾಸು ತೊಂದರೆ ಇದೆ ಎಂದು ಎನಿಸಿಲ್ಲ. ಸಿಎಂ ಅವರು ಕೋಟಿಗಟ್ಟಲೆ ಬಜೆಟ್ ಮಂಡಿಸಿದ್ದಾರೆ. ಗ್ಯಾರಂಟಿ ಪಡೆಯಬೇಕಿದ್ದವರು ಗಿವ್ ಅಪ್ ಮಾಡಿದರೆ ಉಳಿದವರಿಗೆ ಅನುಕೂಲವಾಗಿದೆ. ಅದರಿಂದ ಸರ್ಕಾರಕ್ಕೆ ಸಹಾಯ ಆಗಲಿದೆ. ಮೊದಲಿನವರು 1 ಲಕ್ಷ 20 ಸಾವಿರ ಕೋಟಿ ಹಣ ಬಿಲ್‌ ಪಾವತಿ ಮಾಡಿಟ್ಟು ಹೋಗಿದ್ಧಾರೆ.ಅದು ನಮ್ಮ ಸರ್ಕಾರಕ್ಕೆ ಭಾರವಾಗಿದೆ.

ಸೀನಿಯರ್ ಮೋಸ್ಟ್ ಶಾಸಕರಲ್ಲಿ ಒಬ್ಬರು. ಆರು ಬಾರಿ ಗೆದ್ದಿದ್ದೀರಿ. ಆದರೂ ಯಾಕೆ ಸಂಪುಟದಿಂದ‌ ಹೊರಗಿದ್ದೀರಿ?

- ನಮ್ಮನ್ನು ಯಾರು ಕೈ ಬಿಟ್ಟಿದ್ಧಾರೆ ಅವರನ್ನೇ ಕೇಳಬೇಕು. ಅದಕ್ಕೊಂದು ರೀಜಿನಲ್ ಕಾರಣ ಕೊಡ್ತಾರೆ. ಒಳ ಮೀಸಲಾತಿ ಕಾರಣ ಕೊಡ್ತಾರೆ. ಎಲ್ಲೋ ಒಂದುಕಡೆ ಪಕ್ಷದಲ್ಲಿ ಇಂಥದ್ದು ಆಗಬಾರದು ಎಂದು ನನಗೆ ಅನಿಸಿದೆ.

ಈ ಬಾರಿ ಸಂಪುಟ ಪುನಾರಚನೆ ವೇಳೆಯಾದರೂ ನಿಮಗೆ ಅವಕಾಶ ಸಿಗುತ್ತಾ?

- ನಾನು ಸಂಪುಟದಲ್ಲಿ ಇರಲೇಬೇಕು, ಇರುತ್ತೇನೆ ಎಂದು ವಿಶ್ವಾಸವಿದೆ. ನನಗೆ ಸಾಕಷ್ಟು ಸಲ ಭರವಸೆ ಕೊಟ್ಟಿದ್ದಾರೆ. ಹಿಂದೆ ಧರ್ಮಸಿಂಗ್‌ ಅವರೂ ಹೇಳಿದ್ದರು. ಆದರೆ ಕೊನೆ ಕ್ಷಣದಲ್ಲಿ ಸಂಪುಟಕ್ಕೆ ತೆಗೆದುಕೊಳ್ಳಲಿಲ್ಲ. ನನ್ನ ಬದಲು ಬೇರೆಯವರನ್ನು ತೆಗೆದುಕೊಳ್ಳುವ ಕಾರಣ ಕೊಟ್ಟರು. 2013ರಲ್ಲೂ ಲಿಸ್ಟ್‌ನಲ್ಲಿದ್ದ ಹೆಸರನ್ನು ಕೈ ಬಿಡಲಾಯಿತು. ನಂತರ ಮತ್ತೆ ಅವಕಾಶ ನೀಡುವ ಭರವಸೆಯಿತ್ತು. ಕಳೆದ ಬಾರಿಯೂ ವಿಶ್ವಾಸದಲ್ಲಿದ್ದೆ. ನನಗೆ ಸಿಎಂ ಅವರೂ ಹೇಳಿದ್ದರು. ಆದರೆ ಅದು ಕೂಡ ನಿಜವಾಗಲಿಲ್ಲ. ರಾಜಕಾರಣದಲ್ಲಿ ಯಾವ ಲೆಕ್ಕಾಚಾರದ ಮೇಲೆ ನನ್ನನ್ನು ಬಿಡ್ತಾರೋ ಗೊತ್ತಿಲ್ಲ.

ನೀವು ಆಕಾಂಕ್ಷಿ ಹೌದು. ಆದರೆ, ನಿಮಗೆ ಸಚಿವ ಸ್ಥಾನ ಕೇಳುವ ಹಕ್ಕಿಲ್ಲ ಎಂದು ನಿಮ್ಮದೇ ಪಕ್ಷದ ಶಾಸಕ ಯಶವಂತರಾಯ ಗೌಡ ಪಾಟೀಲ್ ಹೇಳಿದ್ದಾರಲ್ಲ?

- ಅದರ ಬಗ್ಗೆ ನಾನು ಗಂಭೀರವಾಗಿಲ್ಲ. ಅದನ್ನು ನಾನು ತಪ್ಪು ಎಂದೂ ಭಾವಿಸಿಲ್ಲ.

PREV
Read more Articles on

Recommended Stories

ಸಿದ್ದು ಎಷ್ಟು ಸಿಎಂ ಆಗಿರ್ತಾರೋ ಅಷ್ಟೂ ದಿನ ಅವ್ರೇ ಸಿಎಂ : ಡಿಕೆಸು
ರಾಹುಲ್‌ ಜೊತೆ ಸಿಎಂ, ಡಿಸಿಎಂ ಭೇಟಿ ವಿಳಂಬ?