ರಾಹುಲ್‌ ವಿರುದ್ಧ ಮೋದಿ ಶಕ್ತಿ ಅಸ್ತ್ರ

KannadaprabhaNewsNetwork | Updated : Mar 20 2024, 07:39 AM IST

ಸಾರಾಂಶ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಶಕ್ತಿ’ ಹೇಳಿಕೆಯ ವಿರುದ್ಧ ಸತತ 2ನೇ ದಿನವೂ ಹರಿತ ವಾಗ್ದಾಳಿ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಯಾರು ಶಕ್ತಿಯನ್ನು ನಾಶ ಮಾಡಲು ಹೋಗುತ್ತಾರೋ ಅವರೇ ನಾಶವಾಗಿ ಬಿಡುತ್ತಾರೆ ’ ಎಂದು ಅಬ್ಬರಿಸಿದ್ದಾರೆ.

ಪಿಟಿಐ ಸೇಲಂ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಶಕ್ತಿ’ ಹೇಳಿಕೆಯ ವಿರುದ್ಧ ಸತತ 2ನೇ ದಿನವೂ ಹರಿತ ವಾಗ್ದಾಳಿ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಯಾರು ಶಕ್ತಿಯನ್ನು ನಾಶ ಮಾಡಲು ಹೋಗುತ್ತಾರೋ ಅವರೇ ನಾಶವಾಗಿ ಬಿಡುತ್ತಾರೆ ’ ಎಂದು ಅಬ್ಬರಿಸಿದ್ದಾರೆ. 

ಅಲ್ಲದೆ ಇಂಡಿಯಾ ಮೈತ್ರಿಕೂಟ ಕೇವಲ ಹಿಂದೂಧರ್ಮವನ್ನು ಮಾತ್ರವೇ ಗುರಿ ಮಾಡುತ್ತದೆ ಎಂದು ಕಿಡಿಕಾರಿದ್ದಾರೆ.

ತಮಿಳುನಾಡಿನ ಸೇಲಂನಲ್ಲಿ ಮಂಗಳವಾರ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಡಿಎಂಕೆ ಸೇರಿದಂತೆ ಅವರ ಇಂಡಿಯಾ ಒಕ್ಕೂಟದ ಅಂಗಪಕ್ಷಗಳು ‘ಶಕ್ತಿ’ ವಿರುದ್ಧ ಹೋರಾಡುವುದಾಗಿ ಹೇಳಿವೆ. 

ತಮಿಳುನಾಡಿನ ಜನತೆಗೆ ಹಿಂದೂಧರ್ಮದಲ್ಲಿ ‘ಶಕ್ತಿ’ ಎಂದರೇನು ಗೊತ್ತೇ ಇದೆ’ ಎಂದರು.‘ಇಂಡಿಯಾ ಮೈತ್ರಿಕೂಟದ ಜನರು ಪದೇ ಪದೇ ಉದ್ದೇಶಪೂರ್ವಕವಾಗಿ ಹಿಂದೂ ನಂಬಿಕೆಯನ್ನು ಅವಮಾನಿಸುತ್ತಾರೆ. 

ಅವರು ಇದನ್ನು ಚೆನ್ನಾಗಿ ಯೋಚಿಸಿಯೇ ಹೇಳುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಶಕ್ತಿ ಎಂದರೆ ‘ಮಾತೃ ಶಕ್ತಿ, ನಾರಿ ಶಕ್ತಿ’ ಯಾಗಿದೆ. ಆದರೆ, ಕಾಂಗ್ರೆಸ್ ಮತ್ತು ಡಿಎಂಕೆ ಇರುವ ಇಂಡಿಯಾ ಮೈತ್ರಿಯು ಇದನ್ನು ನಾಶಪಡಿಸುತ್ತದೆ ಎಂದು ಹೇಳುತ್ತದೆ’ ಎಂದು ವಾಗ್ದಾಳಿ ನಡೆಸಿದರು.

‘ಶಕ್ತಿಯು ದೈವಿಕತೆಯನ್ನು ಸೂಚಿಸುತ್ತದೆ ಮತ್ತು ತಮಿಳುನಾಡಿನಲ್ಲಿ ಮಾರಿಯಮ್ಮನ್, ಮದುರೈ ಮೀನಾಕ್ಷಿಯಮ್ಮನ್ ಮತ್ತು ಕಂಚಿ ಕಾಮಾಕ್ಷಿಯಮ್ಮನಂತಹ ವಿವಿಧ ದೇವತೆಗಳ ರೂಪದಲ್ಲಿ ಶಕ್ತಿ ಸ್ವರೂಪಿ ಮಾತೆಯು ಪ್ರಕಟವಾಗುತ್ತಾಳೆ. 

ರಾಷ್ಟ್ರಕವಿ ಸುಬ್ರಮಣ್ಯ ಭಾರತಿ ಅವರೂ ಭಾರತ ಮಾತೆಯನ್ನು ‘ಶಕ್ತಿ’ ಎಂದು ಪೂಜಿಸಿದ್ದರು. ಹಿಂದೂ ಧರ್ಮದಲ್ಲಿ ಶಕ್ತಿ ಎಂದರೆ ಮಾತೃಶಕ್ತಿ, ನಾರಿ ಶಕ್ತಿ. 

ಆದರೆ ಶಕ್ತಿಯನ್ನು ನಾಶಪಡಿಸುವ ಮಾತು ಆಡುವವರನ್ನು ತಮಿಳುನಾಡು ಶಿಕ್ಷಿಸಲಿದೆ. ನಾನು ಶಕ್ತಿ ಉಪಾಸಕ (ಆರಾಧಕ)’ ಎಂದು ಮೋದಿ ಹೇಳಿದರು.

ಮುಂಬೈನಲ್ಲಿ ಭಾನುವಾರ ಮಾತನಾಡಿದ್ದ ರಾಹುಲ್‌ ಗಾಂಧಿ, ‘ಹಿಂದೂ ಧರ್ಮದಲ್ಲಿ ಶಕ್ತಿ ಎಂಬ ಪದವಿದೆ. ನಮ್ಮದು ಶಕ್ತಿ (ಕೇಂದ್ರ ಸರ್ಕಾರದ ಬಲಪ್ರಯೋಗ) ವಿರುದ್ಧ ಹೋರಾಟ’ ಎಂದಿದ್ದರು. 

ಮೋದಿ ಸೋಮವಾರ ತೆಲಂಗಾಣ ಹಾಗೂ ಕರ್ನಾಟಕದ ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಸಮಾವೇಶಗಳಲ್ಲಿ ಈ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್‌ಗೆ ಪ್ರಹಾರ ಮಾಡಿದ್ದರು.

Share this article