;Resize=(412,232))
ಬೆಂಗಳೂರು : ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಜಾಹೀರಾತಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಮೌಲ್ಯಗಳ ಹತ್ಯೆಯಾಗಿದೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೇಸರ ವ್ಯಕ್ತಪಡಿಸಿದೆ.
ಗಾಂಧಿ ಅವರನ್ನು ಬಳಸಿಕೊಂಡಿರುವ ರೀತಿ ಅವರ ಅಹಿಂಸಾ ತತ್ವ, ಸತ್ಯಾಗ್ರಹ ಹಾಗೂ ಸರ್ವೋದಯದಂಥ ಮೂಲ ಆದರ್ಶಗಳಿಗೆ ಸಂಪೂರ್ಣ ವಿರುದ್ಧವಾಗಿದ್ದು, ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ ಎಂದು ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ। ವೂಡೇ ಪಿ.ಕೃಷ್ಣ ಹಾಗೂ ಗೌರವ ಕಾರ್ಯದರ್ಶಿ ಎಂ.ಸಿ.ನರೇಂದ್ರ ಪ್ರಕಟಣೆ ಮೂಲಕ ಹೇಳಿದ್ದಾರೆ.
ಗಾಂಧೀಜಿಯವರ ತತ್ವಗಳನ್ನು ಅರಿತಿರುವ ಯಾರಿಗಾದರೂ ಜಾಹೀರಾತಿನಲ್ಲಿ ಗಾಂಧೀಜಿಯವರನ್ನು ಬಳಸಿಕೊಂಡಿರುವ ರೀತಿ ಆಘಾತವನ್ನುಂಟು ಮಾಡುವಂಥದ್ದಾಗಿದೆ. ಜಗತ್ತಿನಾದ್ಯಂತ ಮಹಾತ್ಮ ಎಂದರೆ ಮಹಾತ್ಮಾ ಗಾಂಧೀಜಿಯವರು ಎಂಬ ಗೌರವ ಭಾವನೆ ಇರುವ ಸಂದರ್ಭದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವು ಮಾಧ್ಯಮಗಳು ಗಾಂಧೀಜಿಯವರನ್ನು ಅವಹೇಳನಕಾರಿ ಹಾಗೂ ಪಕ್ಷ ರಾಜಕಾರಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದರಿಂದ ಯುವಜನತೆಗೆ ತಪ್ಪು ಸಂದೇಶ ಹೋಗುವ ಅಪಾಯ ಉಂಟಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಗಾಂಧೀಜಿಯವರ ಈ ರೀತಿಯ ದುರ್ಬಳಕೆಯನ್ನು ತೀವ್ರವಾಗಿ ಖಂಡಿಸಿರುವ ಗಾಂಧಿ ಸ್ಮಾರಕ ನಿಧಿ ಗಾಂಧೀಜಿಯವರ ಆದರ್ಶಗಳನ್ನು ಯುವಜನತೆಗೆ ತಲುಪಿಸಲು ಸಾಧ್ಯವಾಗದಿದ್ದರೂ ಕನಿಷ್ಠ ಅವರ ವ್ಯಕ್ತಿತ್ವ ಹಾಗೂ ತತ್ವಗಳಿಗೆ ಅಪಚಾರವಾಗುವ ರೀತಿಯಲ್ಲಿ ಅವರನ್ನು ಬಳಸಿಕೊಳ್ಳಬಾರದು ಎಂಬುದು ನಮ್ಮ ಸ್ಪಷ್ಟ ಹಾಗೂ ದೃಢವಾದ ಅಭಿಪ್ರಾಯವಾಗಿದೆ ಎಂದಿದ್ದಾರೆ.