;Resize=(412,232))
ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಆರೋಪಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಮಳೆಗಾಲದ ಅಧಿವೇಶನದ ವೇಳೆ ಉಭಯ ಸದನಗಳ ಹೊರಗೆ ಮತ್ತು ಒಳಗೆ ಸಂಘಟಿತ ಹೋರಾಟ ಮಾಡಿದ್ದ ಎನ್‌ಡಿಎ ಮೈತ್ರಿ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಕೊನೆಗೂ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿವೆ.
ಇದು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಸಂಘಟಿತ ಪ್ರಬಲ ಹೋರಾಟಕ್ಕೆ ಸಿಕ್ಕ ಗೆಲುವು ಹಾಗೂ ಪ್ರಮುಖ ಪ್ರತಿಪಕ್ಷ ಬಿಜೆಪಿ ನಾಯಕರಲ್ಲಿನ ಒಗ್ಗಟ್ಟಿಗೆ ಲಭಿಸಿದ ಗೆಲುವು ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಆಡಳಿತರೂಢ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ-ಜೆಡಿಎಸ್ ಬಲವಾದ ಸಂದೇಶ ನೀಡಿವೆ. ಮುಂದಿನ ದಿನಗಳಲ್ಲಿ ವಿರೋಧ ಪಕ್ಷಗಳನ್ನು ಲಘುವಾಗಿ ಪರಿಗಣಿಸಬಾರದು ಎಂಬ ಎಚ್ಚರಿಕೆ ರವಾನಿಸಿದಂತಾಗಿದೆ.
ಅಧಿವೇಶನ ಆರಂಭಕ್ಕೂ ಮುನ್ನವೇ ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನ ಪ್ರಮುಖ ನಾಯಕರು ಸಮನ್ವಯ ಸಭೆ ನಡೆಸಿದ್ದರು. ಈ ಸಭೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಕುರಿತು ಉಭಯ ಸದನಗಳಲ್ಲಿ ಪ್ರಸ್ತಾಪಿಸಬೇಕು. ಹಗರಣದ ಆರೋಪಿಯಾಗಿರುವ ಸಚಿವ ಬಿ.ನಾಗೇಂದ್ರ ವಿರುದ್ಧ ಸಂಘಟಿತ ಹೋರಾಟ ಮಾಡಿ ರಾಜೀನಾಮೆ ಕೊಡಿಸಲು ತೀರ್ಮಾನಿಸಿದ್ದರು. ಅದರಂತೆ ಅಧಿವೇಶನ ಆರಂಭದ ದಿನದಿಂದಲೇ ಈ ವಿಚಾರ ಕೈಗೆತ್ತಿಕೊಂಡು ಸದನದ ಒಳಗೆ ಮತ್ತು ಹೊರಗೆ ಪ್ರಬಲ ಹೋರಾಟ ನಡೆಸಿದ್ದರು.
ಅಧಿವೇಶನದಲ್ಲಿ ಚರ್ಚಿಸಲು ಹಲವು ವಿಚಾರಗಳು ಇದ್ದವು. ರಾಜ್ಯದಲ್ಲಿ ಬರಗಾಲ, ಕೆಪಿಎಸ್ಸಿ, ಹಗರಣ, ಬಿಡದಿ ಟೌನ್‌ಶಿಪ್ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ, ಬಿಜೆಪಿ-ಜೆಡಿಎಸ್ ಸಚಿವ ಬಿ.ನಾಗೇಂದ್ರ ರಾಜೀನಾಮೆ ವಿಚಾರವನ್ನಷ್ಟೇ ಪ್ರಸ್ತಾಪಿಸಿ ಉಭಯ ಸದನಗಳಲ್ಲಿ ಹೋರಾಟ ಮಾಡಿದವು. ಉಭಯ ಪಕ್ಷಗಳ ಸದಸ್ಯರು ಕಪ್ಪು ಪಟ್ಟಿ ಧರಿಸಿ ಹೋರಾಟ, ಕಪ್ಪು ಟೀ ಶರ್ಟ್ ಧರಿಸಿ ಹೋರಾಟ, ವಿಧಾನಸೌಧದ ಆವರಣದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ, ಶಾಸಕರ ಭವನದ ಆವರಣದ ಮಹರ್ಷಿ ವಾಲ್ಮೀಕಿ ಪ್ರತಿಮೆ ಬಳಿ ಪ್ರತಿಭಟನೆ ಹಾಗೂ ವಿಧಾನಸೌಧದ ವರೆಗೆ ಪಾದಯಾತ್ರೆ ಸೇರಿದಂತೆ ಪ್ರತಿ ದಿನವೂ ಸದನ ಹೊರಗೆ ಮತ್ತು ಒಳಗೆ ಹೋರಾಟ ಮಾಡಿದ್ದರು.
ಎಂಟು ದಿನಗಳ ಕಾಲ ಉಭಯ ಸದನಗಳಲ್ಲಿ ಈ ರಾಜೀನಾಮೆ ವಿಚಾರವೇ ಮಾರ್ದನಿಸಿ ಗದ್ದಲ ಉಂಟಾಯಿತು. ಆದರೂ ಸಚಿವ ನಾಗೇಂದ್ರ ರಾಜೀನಾಮೆ ಕೊಡಿಸಲು ಸರ್ಕಾರ ಒಪ್ಪಲಿಲ್ಲ. ಬಿಜೆಪಿ-ಜೆಡಿಎಸ್‌ನ ಈ ಸಂಘಟಿತ ಹೋರಾಟ ತೀವ್ರಗೊಂಡು ಸದನದಲ್ಲಿ ಅಹೋರಾತ್ರಿ ಧರಣಿ ಆರಂಭಿಸುವ ಘೋಷಣೆ ಹಿನ್ನೆಲೆಯಲ್ಲಿ ಕಂಗೆಟ್ಟ ಆಡಳಿತರೂಢ ಕಾಂಗ್ರೆಸ್ ಸರ್ಕಾರವು ಅನ್ಯ ಮಾರ್ಗ ಇಲ್ಲದೆ ಮೂರು ದಿನ ಮುಂಚಿತವಾಗಿ ಅಧಿವೇಶನ ಮುಗಿಸಿತು.
ಅಷ್ಟಕ್ಕೆ ಸುಮ್ಮನಾಗದ ಬಿಜೆಪಿ-ಜೆಡಿಎಸ್ ಪಕ್ಷಗಳು ಅಧಿವೇಶನ ಮುಗಿದರೂ ಬಿ.ನಾಗೇಂದ್ರ ರಾಜೀನಾಮೆ ಕೊಡುವವರೆಗೂ ಹೋರಾಟ ಮುಂದುವರೆಸಲಾಗುವುದು. ಜನತಾ ನ್ಯಾಯಾಲಯದ ಎದುರು ಈ ವಿಚಾರ ತೆಗೆದುಕೊಂಡು ಹೋಗುವುದಾಗಿ ಘೋಷಿಸಿದವು. ಬಳಿಕ ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆ ಘೋಷಿಸಿತು. ಸೆ.1ರಿಂದ ರಾಯಚೂರಿನ ಗುರಗುಂಟಾದಿಂದ ಬಳ್ಳಾರಿ ವರೆಗೆ 10 ದಿನಗಳ ಕಾಲ 170 ಕಿ.ಮೀ. ಪಾದಯಾತ್ರೆ ಮಾಡುವುದಾಗಿ ರಾಜ್ಯ ಬಿಜೆಪಿ ನಾಯಕರು ಘೋಷಿಸಿದರು. ಈ ಪಾದಯಾತ್ರೆ ಘೋಷಣೆ ಬೆನ್ನಲ್ಲೇ ಸಚಿವ ನಾಗೇಂದ್ರ ಅವರ ತಲೆದಂಡವಾಗಿದೆ. ಸದನ ಒಳಗೆ ಸತತ ಧರಣಿ, ಪ್ರತಿಭಟನೆ ನಡೆಸಿದರೂ ರಾಜೀನಾಮೆ ಪಡೆಯಲಾಗದ ಬಿಜೆಪಿ-ಜೆಡಿಎಸ್ ಪಕ್ಷಗಳು ಈಗ ಸದನ ಮುಗಿದ ಬಳಿಕ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿವೆ.
- ಇತ್ತೀಚಿನ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ತೀವ್ರ ಹೋರಾಟ ನಡೆಸಿದ್ದ ಬಿಜೆಪಿ- ದಳ
- ಬಳಿಕ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಳ್ಳಾರಿ ಚಲೋ ಪಾದಯಾತ್ರೆ ಘೋಷಿಸಿದ್ದ ಬಿಜೆಪಿ
- ಈ ಮೂಲಕ ಆಡಳಿತಾರೂಢ ಕಾಂಗ್ರೆಸ್‌ಗೆ ಇಕ್ಕಟ್ಟು ಸೃಷ್ಟಿಸಲೆತ್ನ. ಪರಿಣಾಮ ನಾಗೇಂದ್ರ ತಲೆದಂಡ