ಬೆಂಗಳೂರು: ವಿಶ್ವಕರ್ಮ ಸಮಾಜ ಬೇಡುವ ಸಮುದಾಯ ಅಲ್ಲ. ಬದಲಾಗಿ ತಮ್ಮ ಕೌಶಲದಿಂದ .ಭಾರತವನ್ನು ವಿಶ್ವಕ್ಕೆ ಪರಿಚಯಿಸಿದ್ದು ವಿಶ್ವಕರ್ಮ ಸಮುದಾಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಶ್ರೀವಿಶ್ವಕರ್ಮ ಸೇವಾ ಪ್ರತಿಷ್ಠಾನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ವಿರಾಟ್ ವಿಶ್ವಕರ್ಮ ಮಹೋತ್ಸವ, ವಿಶ್ವಕರ್ಮ ಶ್ರೀ ಹಾಗೂ ವಿಶ್ವಕರ್ಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಜಕಣಚಾರಿ ಜಯಂತಿ ಆಚರಣೆ ಆರಂಭಿಸಿದರು. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನವನ್ನು ನೀಡಿದರು ಎಂದರು.
ಪ್ರತಿಪಕ್ಷದ ನಾಯಕ ನಾಯಕ ಆರ್. ಅಶೋಕ್ ಮಾತನಾಡಿ, ರಸ್ತೆ ಬದಿಯಲ್ಲಿ ಬಿದ್ದಿರುವ ಕಲ್ಲಿಗೆ ರೂಪ ನೀಡಿ ಅದನ್ನು ದೇವರನ್ನಾಗಿಸುವ ಶಕ್ತಿ ವಿಶ್ವಕರ್ಮ ಸಮುದಾಯಕ್ಕೆ ಇದೆ ಎಂದರು.
ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ.ಬಿ.ಎಂ. ಉಮೇಶ್ ಕುಮಾರ್ ಮಾತನಾಡಿ, ವಿಶ್ವಕರ್ಮ ಸಮುದಾಯ ಇತಿಹಾಸವನ್ನು ರೂಪಿಸಿದೆ. ವಿಶ್ವಕರ್ಮ ಸಮುದಾಯದ ಸಂಸ್ಕೃತಿಯನ್ನು ರಾಜ್ಯ ಸೇರಿದಂತೆ ಇಡೀ ದೇಶದಲ್ಲಿ ಪ್ರಚಾರ ಮಾಡಬೇಕು ಎಂದರು.
ಸಂಸದ ಡಾ.ಸಿ.ಎನ್ ಮಂಜುನಾಥ್ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿದರು.
ಸಮಾರಂಭದ ಸಾನ್ನಿಧ್ಯವನ್ನು ವಿಶ್ವಕರ್ಮ ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ವಹಿಸಿದ್ದರು. ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಶಾಸಕ ಸಿ.ಕೆ.ರಾಮಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ. ಟಿ.ಎ. ಶರವಣ, ಗಡಿನಾಡು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ಸೋಮಶೇಖರ್, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಮೇದಿನಿ ಗರುಡಾಚಾರ್, ಪರಿಷತ್ ಮಾಜಿ ಸದಸ್ಯ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಸಾಧಕರಿಗೆ ಪ್ರಶಸ್ತಿ ಪ್ರದಾನ:ಅಯೋಧ್ಯೆಯ ರಾಮಮಂದಿರದ ಬಾಲ ರಾಮ ವಿಗ್ರಹ ರೂಪಿಸಿದ ಶಿಲ್ಪಿ ಅರುಣ್ ಯೋಗಿರಾಜ್ ಹಾಗೂ ಖ್ಯಾತ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್ ಸಿನಿಮಾ ನಿದೇರ್ಶಕ ಸಾಯಿಪ್ರಕಾಶ್, ಖ್ಯಾತ ನೃತ್ಯಗಾರ ಡಾ. ಸಂಜಯ್ ಶಾಂತರಾಮ್, ಎಚ್.ಎಂ. ಮಂಜುನಾಥ್, ಎಸ್. ಚಂದ್ರಶೇಖರಾಚಾರಿ, ವಿ.ಎಸ್. ರಮೇಶ್, ಮಂಜುನಾಥಾಚಾರ್ಯ, ವಿನಾಯಕ ಸೀತಾರಾಮ ಹಾಗೂ ಸತ್ಯನಾರಾಯಣ ಅವರಿಗೆ ವಿಶ್ವಕರ್ಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಅವರಿಗೆ ವಿದ್ವಾನ್ ರಾಮಚಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.