ನವದೆಹಲಿ: ರಾಜ್ಯಸಭೆ ಮಂಗಳವಾರ ಸಭಾಪತಿ ಜಗದೀಪ್ ಧನಕರ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವಿನ ವಾಕ್ಸಮರಕ್ಕೆ ಸಾಕ್ಷಿಯಾಯಿತು. ‘ಕಾಂಗ್ರೆಸ್ ಸಂಸದರು ಶಿಸ್ತಿನಿಂದ ವರ್ತಿಸುವಂತಾಗಲು ಜೈರಾಂ ರಮೇಶ್ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಜಾಗವನ್ನು ತುಂಬಬೇಕು’ ಎಂದು ಧನಕರ್ ವ್ಯಂಗ್ಯವಾಡಿದ್ದು ಇಬ್ಬರ ಜಟಾಪಟಿಗೆ ಕಾರಣವಾಯಿತು.
ಇದಕ್ಕೆ ಸಿಟ್ಟಿಗೆದ್ದ ದಲಿತ ಸಮುದಾಯಕ್ಕೆ ಸೇರಿದ ಖರ್ಗೆ,‘ವರ್ಣ ವ್ಯವಸ್ಥೆ ತರಬೇಡಿ. ಅದಕ್ಕಾಗಿಯೇ ಜೈರಾಂ ರಮೇಶ್ ಅವರನ್ನು ತುಂಬಾ ಬುದ್ಧಿವಂತ, ನಾನು ದಡ್ಡ ಎನ್ನುತ್ತಿದ್ದೀರಿ. ನನ್ನನ್ನು ಇಲ್ಲಿ ತಂದು ಕೂರಿಸಿದ್ದು ದೇಶದ ಜನತೆ ಹಾಗೂ ಸೋನಿಯಾ ಗಾಂಧಿ’ ಎಂದರು. ಇದಕ್ಕೆ ಆಕ್ರೋಶಗೊಂಡ ಧನಕರ್,‘ ಖರ್ಗೆ ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ಸಂಸತ್‌ನಲ್ಲಿ ಎಂದೂ ಇಲ್ಲಿಯವರೆಗೆ ಸಭಾಪತಿ ಪೀಠ ಇಷ್ಟು ಅವಮಾನಕ್ಕೆ ಗುರಿ ಆಗಿಲ್ಲ’ ಎಂದು ಆಕ್ರೋಶಭರಿತರಾಗಿ ನುಡಿದರು.
ಜೈರಾಂ ರಮೇಶ್ ಬ್ರಾಹ್ಮಣ ಹಾಗೂ ತಾವು ದಲಿತ ಎಂಬ ಕಾರಣಕ್ಕೆ ಧನಕರ್ ಹೀಗೆ ಹೇಳಿದ್ದಾರೆಂದು ಖರ್ಗೆ ಭಾವಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.