;Resize=(412,232))
ಬೆಂಗಳೂರು : ‘ರಾಜ್ಯ ಮಟ್ಟದಲ್ಲೇ ಬಗೆಹರಿಸಿಕೊಳ್ಳಲು ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದು ಮಾಧ್ಯಮಗಳು ಮಾತ್ರ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ರಾಜ್ಯದ ಸ್ಥಳೀಯ ಸಮಸ್ಯೆಯನ್ನು ಸ್ಥಳೀಯ ನಾಯಕರೇ ಇತ್ಯರ್ಥ ಮಾಡಿಕೊಳ್ಳಬೇಕು ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಈ ಹೇಳಿಕೆ ಕುತೂಹಲ ಮೂಡಿಸಿದೆ.
ಈ ಬಗ್ಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ‘ನಮ್ಮಲ್ಲಿ ಸಮಸ್ಯೆಯೇ ಇಲ್ಲ. ಇನ್ನು ಬಗೆಹರಿಸಿಕೊಳ್ಳುವುದು ಏನಿದೆ? ನಾನೇನು ಹೇಳಬೇಕೋ ಹೇಳಿದ್ದೇನೆ. ಮುಖ್ಯಮಂತ್ರಿಗಳಿಗೆ ಏನು ಹೇಳಬೇಕೋ ಹೇಳಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೆ ಏನು ಹೇಳಬೇಕೋ ಹೇಳಿದ್ದೇನೆ. ಸಮಸ್ಯೆಯನ್ನೆಲ್ಲಾ ಸೃಷ್ಟಿ ಮಾಡುತ್ತಿರುವುದು ನೀವೇ (ಮಾಧ್ಯಮ)’ ಎಂದು ಹೇಳಿದರು.
ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಅಧಿಕಾರ ಹಸ್ತಾಂತರ, ಕುರ್ಚಿ ಕಿತ್ತಾಟದ ಬಗ್ಗೆ ಉಭಯ ಬಣಗಳ ನಡುವೆ ಹೇಳಿಕೆ, ಪ್ರತಿ ಹೇಳಿಕೆಗಳು ವ್ಯಕ್ತವಾಗುತ್ತಲೇ ಇವೆ. ಕೊನೆಗೆ ಸದನದಲ್ಲೂ ಇದು ಪ್ರತಿಧ್ವನಿಸಿದ್ದು, ಹೈಕಮಾಂಡ್ ಹೇಳುವವರೆಗೂ ನಾನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಹೈಕಮಾಂಡ್‌ನತ್ತ ಬೊಟ್ಟು ಮಾಡುತ್ತಿರುವಾಗಲೇ ಮಲ್ಲಿಕಾರ್ಜುನ ಖರ್ಗೆ ಅವರು, ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳುವಂತೆ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ ಮೇಲೆ ಅದಕ್ಕೆ ನಾವೆಲ್ಲಾ ಗೌರವ ಕೊಡುತ್ತೇವೆ. ಗೊಂದಲವನ್ನು ಇಲ್ಲೇ ಬಗೆಹರಿಸಿಕೊಳ್ಳಬೇಕೆಂದು ಹೇಳಿದ ಮೇಲೆ ಇಲ್ಲೇ ಬಗೆಹರಿಸಿಕೊಳ್ಳಬೇಕು’ ಎಂದು ಗೃಹ ಸಚಿವ ಡಾ. ಪರಮೇಶ್ವರ್ ಹೇಳಿದ್ದಾರೆ.
ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಅವರು ಅದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದರು. ಮಲ್ಲಿಕಾರ್ಜುನ ಖರ್ಗೆ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ, ಯಾವ ಸೂಚನೆ ಕೊಟ್ಟಿದ್ದಾರೋ ಗೊತ್ತಿಲ್ಲ. ಆದರೆ ಅವರು ಇಲ್ಲೇ ಗೊಂದಲ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಹಾಗೆ ಹೇಳಿದ ಮೇಲೆ ಇಲ್ಲೇ ಗೊಂದಲ ಬಗೆಹರಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.
ನನ್ನ ದೃಷ್ಟಿಯಲ್ಲಿ ಗೊಂದಲ ಇರಬಾರದು. ಗೊಂದಲ ಇದ್ದರೆ ಅದನ್ನು ಬಗೆಹರಿಸಿಕೊಂಡು ಆಡಳಿತ ಕೊಡಬೇಕು. ಸರ್ಕಾರದ ಗೊಂದಲ ಆಡಳಿತದ ಮೇಲೂ ಪರಿಣಾಮ ಬೀರಬಹುದು. ಪಕ್ಷದ ಒಳಗಿನ ಗೊಂದಲದಿಂದ ಅಧಿಕಾರಿಗಳಿಗೆ ಗೊಂದಲ ಆಗೋದು ಸಹಜ. ಗೊಂದಲ ಬಗೆಹರಿಸಿ ಅಧಿಕಾರಿಗಳಿಗೂ ಸಂದೇಶ ಕೊಡಬೇಕು. ಗೊಂದಲ ಬಗೆಹರಿಸಿ ಜನರಿಗೂ ನಾವು ಕೊಟ್ಟಿರುವ ಭರವಸೆ ಈಡೇರಿಸುವತ್ತ ಗಮನ ಕೊಡಬೇಕು ಎಂದು ಡಾ.ಜಿ. ಪರಮೇಶ್ವರ್ ತಿಳಿಸಿದರು.