''ದ್ವೇಷ ಭಾಷಣ ಎಂದರೆ ಯಾವುದು ಅಂತ ಹೇಳಿ ''

Published : Dec 22, 2025, 07:50 AM IST
R Ashok

ಸಾರಾಂಶ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಮುಖವಾಡ ಹಾಕಿಕೊಂಡು ನಡೆಸುತ್ತಿರುವ ಸರ್ವಾಧಿಕಾರಿ ಆಡಳಿತಕ್ಕೆ ‘ದ್ವೇಷ ಭಾಷಣ ಪ್ರತಿಬಂಧಕ ಮಸೂದೆ’ ಸ್ಪಷ್ಟ ಸಾಕ್ಷಿ. ಈ ಮಸೂದೆ ಕೇವಲ ಒಂದು ಕಾನೂನಿನ ಕರಡಲ್ಲ; ಇದು ಕಾಂಗ್ರೆಸ್ ಪಕ್ಷದ ಹಳೆಯ, ಪ್ರಜಾಪ್ರಭುತ್ವ ವಿರೋಧಿ ‘ತುರ್ತು ಪರಿಸ್ಥಿತಿ ಮನಸ್ಥಿತಿ

 ಲೇಖಕರು - ಆರ್. ಅಶೋಕ್, ವಿರೋಧ ಪಕ್ಷದ ನಾಯಕರು

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಮುಖವಾಡ ಹಾಕಿಕೊಂಡು ನಡೆಸುತ್ತಿರುವ ಸರ್ವಾಧಿಕಾರಿ ಆಡಳಿತಕ್ಕೆ ‘ದ್ವೇಷ ಭಾಷಣ ಪ್ರತಿಬಂಧಕ ಮಸೂದೆ’ ಸ್ಪಷ್ಟ ಸಾಕ್ಷಿ. ಈ ಮಸೂದೆ ಕೇವಲ ಒಂದು ಕಾನೂನಿನ ಕರಡಲ್ಲ; ಇದು ಕಾಂಗ್ರೆಸ್ ಪಕ್ಷದ ಹಳೆಯ, ಕ್ರೂರ ಮತ್ತು ಪ್ರಜಾಪ್ರಭುತ್ವ ವಿರೋಧಿ ‘ತುರ್ತು ಪರಿಸ್ಥಿತಿ ಮನಸ್ಥಿತಿ’ಯ (Emergency Mentality) ಹೊಸ ಮಜಲು. ವಿಧಾನಸಭೆಯಲ್ಲಿ ಯಾವುದೇ ಚರ್ಚೆಗೆ ಆಸ್ಪದವಿಲ್ಲದೆ, ಪ್ರತಿ ಪಕ್ಷದ ನಾಯಕನಾದ ನನಗೆ ಭಾಷಣವನ್ನೂ ಮುಗಿಸಲು ಅವಕಾಶ ಕೊಡದೆ, ಗದ್ದಲದ ನಡುವೆ ಈ ಮಸೂದೆ ಪಾಸ್ ಆದ ಕರಾಳ ಪ್ರಸಂಗ, ಈ ಕಾಯ್ದೆಯ ನಿಜವಾದ ಉದ್ದೇಶವನ್ನು ಅಣಕಿಸಿ ಹೇಳುವಂತಿತ್ತು.

ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವವನ್ನೇ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದ ಪಕ್ಷದಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ? ಈ ಮಸೂದೆಯ ನಿಜವಾದ ಉದ್ದೇಶ, ಭಿನ್ನಮತ ಹತ್ತಿಕ್ಕುವುದು, ವಿರೋಧ ಪಕ್ಷದ ಧ್ವನಿ ಅಡಗಿಸುವುದು ಮತ್ತು ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುವವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದು. ವಿರೋಧ ಪಕ್ಷದ ನಾಯಕನಾಗಿ ನಾನು ಈ ಮಸೂದೆಯನ್ನು ಅತ್ಯಂತ ಕಟು ಶಬ್ದಗಳಲ್ಲಿ ಖಂಡಿಸುತ್ತೇನೆ ಮತ್ತು ಇದನ್ನು ತಕ್ಷಣ ಹಿಂಪಡೆಯುವಂತೆ ಸರ್ಕಾರವನ್ನು ಆಗ್ರಹಿಸುತ್ತೇನೆ.

ಕಾಂಗ್ರೆಸ್‌ ಆತ್ಮಾವಲೋಕನ ಮಾಡಿಕೊಳ್ಳಲಿ

ಕಾಂಗ್ರೆಸ್ ಸರ್ಕಾರ ಈ ಕಾನೂನು ಜಾರಿ ಮಾಡುವ ಮೊದಲು, ತನ್ನದೇ ಪಕ್ಷದ ನಾಯಕರ ನಾಲಿಗೆ ಮೇಲೆ ನಿಯಂತ್ರಣ ಹೇರಲು ಸಾಧ್ಯವಾಗಿದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ದ್ವೇಷ ಭಾಷಣಕ್ಕೆ ಉದಾಹರಣೆ ಬೇಕಿದ್ದರೆ, ಅವರು ಬೇರೆಲ್ಲೂ ಹುಡುಕಬೇಕಿಲ್ಲ. ಸ್ವತಃ ಕಾಂಗ್ರೆಸ್ ನಾಯಕರ ವಿವಾದಾತ್ಮಕ ಹೇಳಿಕೆಗಳೇ ಇದಕ್ಕೆ ಕನ್ನಡಿ ಹಿಡಿಯುತ್ತವೆ:

1.ಹಿಂದೂ ಧರ್ಮದ ಅವಹೇಳನ, ವೈಯಕ್ತಿಕ ನಿಂದನೆಗಳು:

ಕೋಟ್ಯಂತರ ಹಿಂದುಗಳ ಶ್ರದ್ಧೆಯ ಭಾಗವಾಗಿರುವ ಗಂಗಾ ಸ್ನಾನದ ಬಗ್ಗೆ ಕಾಂಗ್ರೆಸ್‌ನ ಹಿರಿಯ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಹಿರಂಗವಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ‘ಗಂಗಾ ಸ್ನಾನ ಮಾಡಿದರೆ ಬಡತನ ಹೋಗುತ್ತಾ? ನೀವು ಮತ್ತೆ ಮತ್ತೆ ಮುಳುಗಿ ಸ್ನಾನ ಮಾಡುತ್ತಿದ್ದೀರಿ’ ಎಂದು ವ್ಯಂಗ್ಯವಾಡಿದ್ದಾರೆ. ಇದು ಹಿಂದೂ ಸಮಾಜವನ್ನು ಪ್ರಚೋದಿಸುವಂಥ ದ್ವೇಷ ಭಾಷಣವಲ್ಲವೇ? ಸರ್ಕಾರಕ್ಕೆ ಇಂತಹ ಹೇಳಿಕೆಗಳ ಮೇಲೆ ಕ್ರಮ ಕೈಗೊಳ್ಳುವ ಧೈರ್ಯವಿದೆಯೇ? ಹಿಂದುತ್ವ ಕೊಲೆ, ಹಿಂಸೆ, ತಾರತಮ್ಯಕ್ಕೆ ಪ್ರೋತ್ಸಾಹ ನೀಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿರುವುದು ಧ್ವೇಷ ಭಾಷಣ ಅಲ್ಲವೇ?

ಇನ್ನು ಪ್ರಧಾನಿ ಮೋದಿ ಅವರ ಮೇಲೆ ವೈಯಕ್ತಿಕ ನಿಂದನೆ ಮಾಡುವುದು, ಅವರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡುವುದು ಸೋನಿಯಾ ಗಾಂಧಿ ಆದಿಯಾಗಿ ಇಡೀ ಕಾಂಗ್ರೆಸ್‌ನ ಒಂದು ಹಳೆಯ ಚಾಳಿ.

ಪ್ರಧಾನಿ ಮೋದಿಯವರನ್ನು ಖರ್ಗೆ ಅವರು ‘ವಿಷ ಸರ್ಪ’ ಎಂದು ನಿಂದಿಸಿದ್ದು, ‘10 ತಲೆಯ ರಾವಣ’ನಿಗೆ ಹೋಲಿಸಿದ್ದು ದ್ವೇಷ ಭಾಷಣವಲ್ಲವೇ? ಮತ್ತೊಬ್ಬ ಕಾಂಗ್ರೆಸ್ ನಾಯಕ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಬಹಿರಂಗವಾಗಿ ‘ಮೋದಿ ನನ್ನ ಕೈಗೆ ಸಿಕ್ಕರೆ, ಕಾಲಲ್ಲಿರೋದನ್ನ ತೆಗೆದು ಹೊಡೀತೀನಿ’ ಎಂದು ಪ್ರಧಾನಿ ಹುದ್ದೆಗೆ ಅವಮಾನ ಮಾಡಿದ್ದಾರೆ ಮತ್ತು ಹಿಂಸೆಗೆ ಪ್ರಚೋದಿಸಿದ್ದಾರೆ. ಇದು ದ್ವೇಷ ಭಾಷಣ ಅಲ್ಲವೇ?

2.ಹಿಂಸಾಚಾರ ಮತ್ತು ದೇಶದ್ರೋಹದ ಪ್ರಚೋದನೆ:

ವಿಧಾನಸೌಧದ ಮುಂದೆ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ದೇಶದ್ರೋಹಿ ಘೋಷಣೆ ಕೂಗಿದ್ದು ಕಾಂಗ್ರೆಸ್ ರಾಜ್ಯಸಭಾ ಸಂಸದ ನಾಸೀರ್ ಹುಸೇನ್ ಅವರ ಹಿಂಬಾಲಕರು, ಅಂದರೆ ಕಾಂಗ್ರೆಸ್ ಕಾರ್ಯಕರ್ತರು. ಈ ದೇಶದ್ರೋಹಿ ಕೃತ್ಯದ ವಿರುದ್ಧ ಈವರೆಗೂ ಯಾವುದೇ ಗಂಭೀರ ಕಾನೂನು ಕ್ರಮ ಆಗಿಲ್ಲ. ಇಷ್ಟಕ್ಕೂ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗುವುದು ಕಾಂಗ್ರೆಸ್ ಪ್ರಕಾರ ದೇಶಪ್ರೇಮಿಗಳನ್ನು ಕೆರಳಿಸುವ ದ್ವೇಷ ಭಾಷಣವೋ ಅಥವಾ ರಾಹುಲ್ ಗಾಂಧಿ ಅವರ ‘ಮೊಹಬ್ಬತ್ ಕೀ ದುಕಾನ್’ ಸರಕೋ?

ಪ್ರಧಾನಿ ಮೋದಿಯವರ ಮೇಲೆ ಬಾಂಗ್ಲಾದೇಶದ ರೀತಿ ದಾಳಿ ನಡೆಸುವ ಕುರಿತು ಕಾಂಗ್ರೆಸ್ ನಾಯಕರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಐವಾನ್‌ ಡಿಸೋಜಾ ಅವರು ರಾಜ್ಯಪಾಲರ ಮೇಲೆ ಕಲ್ಲು ತೂರಾಟದ ಬೆದರಿಕೆ ಹಾಕಿದ್ದರು. ಕಾಂಗ್ರೆಸ್ ಶಾಸಕರಾದ ಜಿ.ಎಸ್.ಪಾಟೀಲ್ ಅವರು ‘ಸಿದ್ದರಾಮಯ್ಯರನ್ನು ಕೆಳಗಿಳಿಸಿದರೆ ಬಾಂಗ್ಲಾ ರೀತಿ ಜನ ಮೋದಿ ಮನೆಗೆ ನುಗ್ಗುತ್ತಾರೆ’ ಎಂದು ಹೇಳುವ ಮೂಲಕ, ಪ್ರಧಾನಿ ಮೇಲೆ ಹಿಂಸಾತ್ಮಕ ದಾಳಿಯನ್ನು ಪ್ರಚೋದಿಸಿದ್ದರು.

ಚುನಾಯಿತ ಜನಪ್ರತಿನಿಧಿಗಳು, ಯಾವುದೇ ರಾಗ-ದ್ವೇಷವಿಲ್ಲದೆ ಕೆಲಸ ಮಾಡುತ್ತೇವೆ ಎಂದು ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ನಾಯಕರೇ ಈ ರೀತಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು ಎಷ್ಟು ಸರಿ? ದ್ವೇಷ ಭಾಷಣ ನಿಯಂತ್ರಣ ಮಸೂದೆ ಜಾರಿಗೆ ಮೊದಲು, ನಿಮ್ಮದೇ ಪಕ್ಷದ ನಾಯಕರ ಈ ಪ್ರಚೋದನಾಕಾರಿ ಹೇಳಿಕೆಗಳ ಮೇಲೆ ಕ್ರಮ ಜರುಗಿಸಿ ಎಂದು ನಾನು ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕುತ್ತೇನೆ.

ಮಸೂದೆ ಏಕೆ ಪ್ರಜಾಪ್ರಭುತ್ವ ವಿರೋಧಿ?

ಭಾರತದ ಸಂವಿಧಾನದ ಆರ್ಟಿಕಲ್ 19(1)(a) ಅಡಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ. ಆದರೆ, ಈ ಮಸೂದೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿರುವ ಈ ಮೂಲಭೂತ ಹಕ್ಕನ್ನು ದಮನಿಸಲು ಹೊರಟಿದೆ:

-ಅಸ್ಪಷ್ಟ ವ್ಯಾಖ್ಯಾನಗಳು: ಮಸೂದೆಯಲ್ಲಿ ‘ದ್ವೇಷ ಭಾಷಣ’ ಎಂದು ಯಾವುದನ್ನು ಪರಿಗಣಿಸಬೇಕು ಎಂಬುದಕ್ಕೆ ಯಾವುದೇ ಸ್ಪಷ್ಟ ಮತ್ತು ವಸ್ತುನಿಷ್ಠ ಮಾನದಂಡಗಳಿಲ್ಲ. ಈ ಅಸ್ಪಷ್ಟತೆ ಅಧಿಕಾರಸ್ಥರಿಗೆ ಅತಿಯಾದ ವಿವೇಚನಾಧಿಕಾರ ನೀಡುತ್ತದೆ, ಇದು ಪ್ರಜಾಪ್ರಭುತ್ವದ ಮುಕ್ತ ಚರ್ಚೆಯ ವಾತಾವರಣವನ್ನು ಶೂನ್ಯವಾಗಿಸುವ ಪ್ರಯತ್ನ.

- ಕಾನೂನಿನ ದುರುಪಯೋಗ: ಈ ಮಸೂದೆ ಜಾರಿಯಾದರೆ, ಸರ್ಕಾರದ ನೀತಿಗಳನ್ನು ಟೀಕಿಸುವ ಹೇಳಿಕೆಗಳು, ಧಾರ್ಮಿಕ, ಸಾಮಾಜಿಕ ಸುಧಾರಣೆ ಕುರಿತ ಬೌದ್ಧಿಕ ಚರ್ಚೆಗಳು, ವಿಮರ್ಶೆಗಳು ಅಥವಾ ಪತ್ರಿಕಾ ಸ್ವಾತಂತ್ರ್ಯದ ಭಾಗವಾಗಿರುವ ರಾಜಕೀಯ ವಿಡಂಬನೆಗಳನ್ನೂ ಅಧಿಕಾರದಲ್ಲಿರುವವರು ಬಯಸಿದರೆ ಸುಲಭವಾಗಿ ದ್ವೇಷ ಭಾಷಣದ ವ್ಯಾಪ್ತಿಯೊಳಗೆ ತರಬಹುದು.

-ಪೊಲೀಸರಿಗೆ ಅನಿಯಮಿತ ಅಧಿಕಾರ: ಈ ಮಸೂದೆ ಪೊಲೀಸರಿಗೆ ನ್ಯಾಯಾಂಗದ ಪರಿಶೀಲನೆಗೂ ಮುನ್ನವೇ ವ್ಯಕ್ತಿಗಳನ್ನು ಬಂಧಿಸುವ ಅಧಿಕಾರ ನೀಡುತ್ತದೆ. ಇದು ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ಹಸ್ತಕ್ಷೇಪ ಮಾಡುವುದಲ್ಲದೆ, ಪೊಲೀಸ್ ವ್ಯವಸ್ಥೆಯನ್ನು ರಾಜಕೀಯ ಪ್ರತೀಕಾರದ ಸಾಧನವಾಗಿ ಮಾರ್ಪಡಿಸುತ್ತದೆ.

ನಮ್ಮ ಹೋರಾಟ ನಿಲ್ಲದು:

ದ್ವೇಷ ಭಾಷಣವು ಪ್ರಜಾಪ್ರಭುತ್ವಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ಆರೋಗ್ಯಕರ ಸಂವಾದಕ್ಕೆ ಮಾರಕ ಎಂಬುದು ನಮ್ಮ ಪಕ್ಷದ ಸ್ಪಷ್ಟ ನಿಲುವು. ಈಗಾಗಲೇ ಜಾರಿಯಲ್ಲಿರುವ ಭಾರತೀಯ ನ್ಯಾಯ ಸಂಹಿತೆ (BNSS) ಯಲ್ಲಿ ದ್ವೇಷ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ಮಾತುಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನುಗಳಿವೆ. BNSS ಕಲಂ 195 ಮತ್ತು ಕಲಂ 298 ರಂಥ ವಿಭಾಗಗಳು ಸೌಹಾರ್ದತೆಗೆ ಭಂಗ ತರುವವರ ವಿರುದ್ಧ ಕ್ರಮ ಕೈಗೊಳ್ಳಲು ಸಾಕಷ್ಟು ಬಲ ನೀಡಿವೆ.

ಈಗಾಗಲೇ ಬಲವಾದ ಕಾನೂನುಗಳಿದ್ದರೂ, ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಗಮನ ನೀಡದೆ, ಹೊಸದಾಗಿ ಮತ್ತೊಂದು ಅಸ್ಪಷ್ಟ ಮಸೂದೆ ತರುವ ಹಿಂದಿನ ಉದ್ದೇಶ ಕೇವಲ ಕಾನೂನಿನ ದುರ್ಬಳಕೆ ಮಾತ್ರ. ಅಧಿಕಾರ ಯಾರೊಬ್ಬರ ಸ್ವತ್ತಲ್ಲ, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನುಗಳನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಅಂತಹ ಪ್ರಯತ್ನಗಳು ಸಂವಿಧಾನಕ್ಕೆ ಎಸಗುವ ಅಪಚಾರ ಹಾಗೂ ವಿಧಾನಸಭೆಯಂಥ ಶಾಸನ ರಚನಾ ಸಂಸ್ಥೆಗಳಿಗೆ ಮಾಡುವ ಅಪಮಾನ.

ಸರ್ಕಾರ ತಕ್ಷಣ ಈ ಮಸೂದೆ ಹಿಂಪಡೆಯಬೇಕು. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಾವು ಈ ಅಪಾಯಕಾರಿ ನಡೆಯನ್ನು ವಿಧಾನಮಂಡಲದ ಒಳಗೂ, ಹೊರಗೂ ಪ್ರಬಲವಾಗಿ ವಿರೋಧಿಸುತ್ತೇವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಕಾಪಾಡಲು ನಮ್ಮ ಹೋರಾಟ ಮುಂದುವರಿಯುತ್ತದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬಾಕಿ ಲಕ್ಷ್ಮಿ ಶನಿವಾರದೊಳಗೆ ಮಹಿಳೆಯರ ಬ್ಯಾಂಕ್‌ ಖಾತೆಗೆ
ರಾಜಣ್ಣ ಸಿಎಂಗಷ್ಟೇ ಅಲ್ಲ, ನನಗೂ ಪರಮಾಪ್ತ: ಡಿಕೆಶಿ