ಸೂತಕದ ಛಾಯೆ ಏಕೆ ಬಂತು? : ಸುರೇಶ್‌ಗೌಡ

KannadaprabhaNewsNetwork |  
Published : Jun 02, 2026, 01:30 AM ISTUpdated : Jun 02, 2026, 04:53 AM IST
Mandya

ಸಾರಾಂಶ

ದೇವೇಗೌಡರ ಪ್ಲಾನ್ ವಿಫಲವಾಯಿತು ಎಂದಿದ್ದಾರೆ. ನಾವೇನು ಪ್ಲಾನ್ ಹಾಕಿಕೊಂಡಿದ್ದೆವು. ಸಿದ್ದರಾಮಯ್ಯನವರನ್ನು ಕೆಳಗಿಳಿಸಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಅದು ಅವರ ಪಕ್ಷಕ್ಕೆ ಸಂಬಂಧಿಸಿದ ವಿಚಾರ. ಅದಕ್ಕೂ ದೇವೇಗೌಡರಿಗೂ ಏನು ಸಂಬಂಧ.

  ಮಂಡ್ಯ :  ಪ್ರಸ್ತುತ ದೇವೇಗೌಡರ ಮನೆಗೆ ಸೂತಕದ ಛಾಯೆ ಬರಲು ಕಾರಣವೇನು ಎಂಬುದನ್ನು ಸಚಿವ ಎನ್.ಚಲುವರಾಯಸ್ವಾಮಿ ಅವರು ಬಹಿರಂಗಪಡಿಸಬೇಕು. ಹಾಗಾದರೆ, ದೇವೇಗೌಡರ ಕುಟುಂಬದಲ್ಲಿ ಯಾರ ಸಾವನ್ನು ಅವರು ಬಯಸುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಸುರೇಶ್‌ಗೌಡ ಪ್ರಶ್ನಿಸಿದರು.

ಸಾಮಾನ್ಯವಾಗಿ ಹಲವು ಕಾರಣಗಳಿಗೆ ಮನೆಗಳಲ್ಲಿ ಸೂತಕದ ಛಾಯೆ ಮೂಡುತ್ತದೆ. ಚಲುವರಾಯಸ್ವಾಮಿ ಅವರು ಯಾವ ಅರ್ಥದಲ್ಲಿ ದೇವೇಗೌಡರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ ಎಂದಿದ್ದಾರೆ. ಒಬ್ಬ ಜನಪ್ರತಿನಿಧಿಯಾಗಿ ಇದು ತಾಲೂಕಿನ ಜನರಿಗೆ ಮಾಡುವ ದೊಡ್ಡ ಅವಮಾನ. ಯಾರನ್ನು ಮೆಚ್ಚಿಸಲು ದೇವೇಗೌಡರ ವಿರುದ್ಧ ಹರಿತ ಮಾತುಗಳನ್ನಾಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ದೇವೇಗೌಡರ ಪ್ಲಾನ್ ವಿಫಲವಾಯಿತು

ದೇವೇಗೌಡರ ಪ್ಲಾನ್ ವಿಫಲವಾಯಿತು ಎಂದಿದ್ದಾರೆ. ನಾವೇನು ಪ್ಲಾನ್ ಹಾಕಿಕೊಂಡಿದ್ದೆವು. ಸಿದ್ದರಾಮಯ್ಯನವರನ್ನು ಕೆಳಗಿಳಿಸಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಅದು ಅವರ ಪಕ್ಷಕ್ಕೆ ಸಂಬಂಧಿಸಿದ ವಿಚಾರ. ಅದಕ್ಕೂ ದೇವೇಗೌಡರಿಗೂ ಏನು ಸಂಬಂಧ. ದೇವೇಗೌಡರ ಕುಟುಂಬವನ್ನು ತೆಗಳಿದರಷ್ಟೇ ತಮ್ಮನ್ನು ಡಿ.ಕೆ.ಶಿವಕುಮಾರ್ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬಹುದು ಎಂದು ಚಲುವರಾಯಸ್ವಾಮಿ ಭಾವಿಸಿದಂತಿದೆ ಎಂದು ಟೀಕಿಸಿದರು.

ಇಳಿ ವಯಸ್ಸಿನಲ್ಲೂ ದೇವೇಗೌಡರು ರಾಜ್ಯ ಸಭೆಯಲ್ಲಿರಬೇಕು ಎಂದು ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಅವರಿಂದಲೇ ರಾಜಕೀಯವಾಗಿ ಬೆಳೆದು, ಅಧಿಕಾರ ಅನುಭವಿಸಿ ಈಗ ಅವರ ವಿರುದ್ಧವೇ ಕತ್ತಿ ಮಸೆಯುತ್ತಿರುವುದು ಮಂಡ್ಯದವರಾಗಿ ಶೋಭೆ ತರುವುದಿಲ್ಲ. ಅಧಿಕಾರ ಎನ್ನುವುದು ಶಾಶ್ವತವಲ್ಲ. ಕೆ.ವಿ.ಶಂಕರಗೌಡ, ಜಿ.ಮಾದೇಗೌಡರು ಅಧಿಕಾರದ ಹಿಂದೆ ಬೀಳಲಿಲ್ಲ. ಅವರ ಮನೆಗೇ ಸಚಿವಗಿರಿ ಹುಡುಕಿಕೊಂಡು ಬರುತ್ತಿತ್ತು. ಅದು ಘನತೆಯ ರಾಜಕಾರಣ ಎಂದು ಹೇಳಿದರು.

ನಾಗಮಂಗಲ ತಾಲೂಕಿನಲ್ಲಿ ೨ ರಿಂದ ೩ ಸಾವಿರ ಎಕರೆ ಸರ್ಕಾರಿ ಭೂಮಿ ಖಾಸಗಿ ವ್ಯಕ್ತಿಗಳ ಪಾಲಾಗಿದೆ. ಅದರಲ್ಲಿ ಶೇ.೮೫ರಷ್ಟು ಸಚಿವ ಎನ್.ಚಲುವರಾಯಸಾಮಿ ಅವರ ಬೆಂಬಲಿಗರೇ ಆಗಿದ್ದಾರೆ. ನಾನು ಶಾಸಕನಾಗಿದ್ದಾಗಲೂ ಭೂ ಕಬಳಿಕೆ ವಿರುದ್ಧ ಸದನದಲ್ಲಿ ದನಿ ಎತ್ತಿ ಹೋರಾಟ ನಡೆಸಿದ್ದೇವೆ. ನಾನು ಅಧಿಕಾರದಲ್ಲಿದ್ದಾಗ ಅರ್ಜಿ, ಅನುಮೋದನೆ, ಅನುಭವ ಮತ್ತು ಆಧಾರ ಈ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಮೀನು ಮಂಜೂರು ಮಾಡುತ್ತಿದ್ದುದಾಗಿ ಸಮಜಾಯಿಷಿ ನೀಡಿದರು.

ಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ, ಜಿಲ್ಲಾಧ್ಯಕ್ಷ ಡಿ.ಕೆ.ಸುರೇಶ್, ಕಂಸಾಗರ ರವಿ ಇದ್ದರು

ಒಕ್ಕಲಿಗ ನಾಯಕರಾಗಲು ಡಿಕೆಶಿ ಬಿಡುವರೇ?

 ಮಂಡ್ಯ :  ಹಳೇ ಮೈಸೂರು ಪ್ರಾಂತ್ಯದಲ್ಲಿ ದೇವೇಗೌಡರ ಕುಟುಂಬದವರನ್ನು ತೆಗಳುವ ಮೂಲಕ ಚಲುವರಾಯಸ್ವಾಮಿ ಅವರು ಒಕ್ಕಲಿಗ ನಾಯಕರಾಗಲು ಹೊರಟಿದ್ದಾರೆ. ಇವರು ಒಕ್ಕಲಿಗ ನಾಯಕರಾಗಲು ಡಿ.ಕೆ.ಶಿವಕುಮಾರ್ ಸುಲಭಕ್ಕೆ ಬಿಡುವುದಿಲ್ಲ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಹೇಳಿದರು.

ಕಳೆದ ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂದು ಒಮ್ಮೆಯೂ ಹೇಳಲಿಲ್ಲ. ದೇವೇಗೌಡರು ಮತ್ತವರ ಕುಟುಂಬದವರನ್ನು ಬೈಯ್ದರೆ ಸಂಪುಟದಲ್ಲಿ ತಮಗೂ ಅವಕಾಶ ಸಿಗಬಹುದು ಎಂದುಕೊಂಡಿದ್ದಾರೆ. ಅದಕ್ಕಾಗಿ ಈ ಸರ್ಕಸ್ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಜರಿದರು.

ಚಲುವರಾಯಸ್ವಾಮಿ ಅವರು ಹಿಂದೆ ಎಲ್ಲಿದ್ದರು, ಯಾರಿಂದ ರಾಜಕೀಯ ಮಾರ್ಗದರ್ಶನ ಪಡೆದರು, ಅಧಿಕಾರ ಅನುಭವಿಸಿದರೆಂಬುದನ್ನು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿಳಿ ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮಮತಾಗೆ ಶಾಕ್‌ ಮೇಲೆ ಶಾಕ್‌ - ಅಭಿಷೇಕ್‌ ಬಳಿಕ ಮತ್ತೋರ್ವ ಸಂಸದ ಕಲ್ಯಾಣ್ ಮೇಲೆ ಹಲ್ಲೆ
ಮುಂದಿನ ಎಲೆಕ್ಷನ್‌ ಒಳಗೆ ಚೌಟರಿಗೆ ಮದುವೆ!