)
ಬೆಂಗಳೂರು : ಶಾಲಾ ಕೊಠಡಿ ಮಂಜೂರಾತಿಗಾಗಿ ಪ್ರತಿಭಟನೆ ನಡೆಸಿದ ಬೆಳಗಾವಿ ಜಿಲ್ಲೆ ನಿಡಗುಂದಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನನ್ನು ಅಮಾನತು ಮಾಡಿರುವ ಶಿಕ್ಷಣ ಇಲಾಖೆ ನಡೆಗೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸರ್ಕಾರ ಕೂಡಲೇ ಅಮಾನತು ಆದೇಶ ಹಿಂಪಡೆಯಬೇಕೆಂದು ಆಗ್ರಹ ವ್ಯಕ್ತವಾಗುತ್ತಿದೆ.
ಈ ಸಂಬಂಧ ಡಾ.ಕೆ.ಮರುಳಸಿದ್ಧಪ್ಪ, ಎಸ್.ಜಿ.ಸಿದ್ದರಾಮಯ್ಯ, ಡಾ.ವಸುಂದರಾ ಭೂಪತಿ, ಮಾವಳ್ಳಿ ಶಂಕರ್, ವಿ.ಪಿ.ನಿರಂಜನಾರಾಧ್ಯ ಸೇರಿ ನಾಡಿನ ಸುಮಾರು 20 ಮಂದಿ ಸಾಹಿತಿಗಳು, ಶಿಕ್ಷಣ ತಜ್ಞರು, ಲೇಖಕರು, ಹೋರಾಟಗಾರರು ಹಾಗೂ ಕ್ಯಾಮ್ಸ್ ಮತ್ತಿತರ ಖಾಸಗಿ ಶಾಲಾ ಸಂಘಟನೆಗಳು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದು ಶಿಕ್ಷಕನ ಅಮಾನತು ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ಹಿಂಪಡೆಯಲು ಆಗ್ರಹಿಸಿದ್ದಾರೆ.
ನಿಷ್ಠಾವಂತ ಶಿಕ್ಷಕರ ದನಿ:
ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್, ಶಿಕ್ಷಕ ವೀರಣ್ಣ ಅವರು ವ್ಯಕ್ತಪಡಿಸಿದ ಸಂಕಟವು ಅವರ ಶಾಲೆಯ ಸಮಸ್ಯೆ ಅಷ್ಟೇ ಅಲ್ಲ, ಲಕ್ಷಾಂತರ ನಿಷ್ಠಾವಂತ ಶಿಕ್ಷಕರ ದನಿಯಾಗಿದೆ. ಶಿಕ್ಷಕರ ಸಂಘದ ನಾಯಕರು ಅನೇಕ ಬಾರಿ ಇದೇ ವಿಷಯದ ಬಗ್ಗೆ ದನಿ ಎತ್ತಿದ್ದಾರೆ. ನಮ್ಮೊಡನೆ ವಿಷಾಧವ್ಯಕ್ತಪಡಿಸಿದ್ದಾರೆ. ಆದರೆ, ಬಹುಪಾಲು ಶಿಕ್ಷಕರು ನೀತಿ ಸಂಹಿತೆ, ಶಿಸ್ತುಕ್ರಮದ ಭೀತಿಯಿಂದ ದನಿ ಎತ್ತಲಾಗದೆ ಸುಮ್ಮನಿದ್ದಾರೆ. ಅಮಾನತುಗೊಂಡ ಶಿಕ್ಷಕರ ವಿರುದ್ಧ ಕ್ರಮವನ್ನು ಪುನರ್ ಪರಿಶೀಲಿಸಿ ಗೌರವ ಪೂರ್ವಕವಾಗಿ ಮರಳಿ ಸೇವೆ ಕರೆತರಬೇಕು ಎಂದು ಮನವಿ ಮಾಡಿದ್ದಾರೆ.