ಬೇರೆ ರಾಜ್ಯದಿಂದ ದೇವೇಗೌಡ ರಾಜ್ಯಸಭೆಗೆ?

Published : Jun 04, 2026, 07:45 AM IST
HD Devegowda

ಸಾರಾಂಶ

ಮಾಜಿ ಪ್ರಧಾನಿ, ಮಿತ್ರ ಪಕ್ಷ ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿರುವ ಎಚ್‌.ಡಿ.ದೇವೇಗೌಡ ಅವರನ್ನು ಮತ್ತೊಂದು ಅವಧಿಗೆ ರಾಜ್ಯಸಭೆಗೆ ಕಳುಹಿಸುವ ಕುರಿತು ಬಿಜೆಪಿ ಅಕ್ಷರಶಃ ಧರ್ಮ ಸಂಕಟದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದೆ.

  ಬೆಂಗಳೂರು :  ಮಾಜಿ ಪ್ರಧಾನಿ, ಮಿತ್ರ ಪಕ್ಷ ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿರುವ ಎಚ್‌.ಡಿ.ದೇವೇಗೌಡ ಅವರನ್ನು ಮತ್ತೊಂದು ಅವಧಿಗೆ ರಾಜ್ಯಸಭೆಗೆ ಕಳುಹಿಸುವ ಕುರಿತು ಬಿಜೆಪಿ ಅಕ್ಷರಶಃ ಧರ್ಮ ಸಂಕಟದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದೆ.

ಕರ್ನಾಟಕ ವಿಧಾನಸಭೆಯಿಂದ ತನಗೆ ಲಭ್ಯವಾಗುವ ಒಂದು ರಾಜ್ಯಸಭಾ ಸ್ಥಾನವನ್ನು ದೇವೇಗೌಡರಿಗೆ ಬಿಟ್ಟು ಕೊಡುವ ಬಗ್ಗೆ ಮೀನ ಮೇಷ ಎಣಿಸುತ್ತಿರುವ ಬಿಜೆಪಿ ನಾಯಕರು ಹಾಗೊಂದು ವೇಳೆ ಕೊಡುವುದೇ ಆದಲ್ಲಿ ಬೇರೊಂದು ರಾಜ್ಯದಿಂದ ಆಯ್ಕೆ ಮಾಡಬಹುದು ಎಂಬ ಮಾತು ಕೇಳಿಬರುತ್ತಿದೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬೀಳಲಿದೆ.

 ಬಿಜೆಪಿಗೆ ರಾಜ್ಯಸಭೆಯ ಒಂದೊಂದು ಸ್ಥಾನವೂ ಮುಖ್ಯ

ಸದ್ಯದ ಸ್ಥಿತಿಯಲ್ಲಿ ಬಿಜೆಪಿಗೆ ರಾಜ್ಯಸಭೆಯ ಒಂದೊಂದು ಸ್ಥಾನವೂ ಮುಖ್ಯ. ಹೀಗಿರುವಾಗ 94ರ ವಯಸ್ಸಿನ ಗೌಡರನ್ನು ಕರ್ನಾಟಕದಿಂದ ಆಯ್ಕೆ ಮಾಡಿ ಕಳುಹಿಸಿದಲ್ಲಿ ಮುಂದೆ ಹಲವು ದಿನಗಳ ಬಳಿಕ ಆರೋಗ್ಯದಲ್ಲಿ ಹೆಚ್ಚೂ ಕಡಮೆ ಆದಲ್ಲಿ ಮತ್ತೆ ಆ ಸ್ಥಾನ ಕೈಬಿಟ್ಟು ಹೋಗುತ್ತದೆ ಎಂಬ ಆತಂಕ ಬಿಜೆಪಿ ಪಾಳೆಯದಲ್ಲಿ ಕಂಡು ಬರುತ್ತಿದೆ. ವಿಧಾನಸಭೆ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್‌ಗೆ ಗೆಲುವು ಸುಲಭವಾಗುತ್ತದೆಯೇ ಹೊರತು ಬಿಜೆಪಿಗಲ್ಲ. ಹೀಗಾಗಿ, ಕರ್ನಾಟಕದಿಂದ ಬಿಜೆಪಿಯವರೊಬ್ಬರನ್ನು ರಾಜ್ಯಸಭೆಗೆ ಕಳುಹಿಸಿ, ದೇವೇಗೌಡರನ್ನು ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಿಂದ ಆಯ್ಕೆ ಮಾಡಿ ಕಳುಹಿಸಬಹುದು ಎಂಬ ಚರ್ಚೆ ನಡೆದಿದೆ.

ತಮ್ಮ ಪಕ್ಷಕ್ಕೆ ಸಂಖ್ಯಾಬಲ ಇಲ್ಲದಿದ್ದರೂ ದೇವೇಗೌಡರಾಗಲಿ ಅಥವಾ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಾಗಲಿ ರಾಜ್ಯಸಭೆ ಸ್ಥಾನ ಬೇಡ ಎಂದು ಹೇಳಿಲ್ಲ. ಬಿಜೆಪಿಯವರಿಗೆ ಬೇಕಾದರೆ ಗೌಡರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಿ ಎಂದು ಕುಮಾರಸ್ವಾಮಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿರುವುದು ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಇಳಿವಯಸ್ಸಲ್ಲಿ ಆಯ್ಕೆ ಆಸಕ್ತಿ ಇಲ್ಲ:

ಹಾಗೆ ನೋಡಿದರೆ ದೇವೇಗೌಡರನ್ನು ಈ ಇಳಿ ವಯಸ್ಸಿನಲ್ಲಿ ರಾಜ್ಯಸಭೆಗೆ ಆಯ್ಕೆ ಮಾಡುವ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಅಷ್ಟೇನೂ ಒಲವಿಲ್ಲ. ಆದರೆ, ಪ್ರಧಾನಿ ಮೋದಿ ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಇದುವರೆಗೆ ಗೊತ್ತಾಗಿಲ್ಲ. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಸಂಸದೆ ಸುಮಲತಾ ಅಂಬರೀಶ್‌ ಹಾಗೂ ಮಾಜಿ ಶಾಸಕ ನಿರ್ಮಲಕುಮಾರ್ ಸುರಾನ ಅವರ ಹೆಸರುಗಳು ಬಿಜೆಪಿ ಪಾಳೆಯದಿಂದ ಪ್ರಬಲವಾಗಿ ಪ್ರಸ್ತಾಪವಾಗಿವೆ. ದೇವೇಗೌಡರ ಬಗ್ಗೆ ಏನೇ ನಿರ್ಧಾರ ಕೈಗೊಳ್ಳುವುದಿದ್ದರೂ ಅದನ್ನು ವರಿಷ್ಠರೇ ಕೈಗೊಳ್ಳಲಿ ಎಂಬ ನಿಲವಿಗೆ ಬಂದು ಕಾಯುತ್ತಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬಂಗಾಳದಲ್ಲಿ ಮಹಿಳೆಯರಿಗೆ ಗೃಹಲಕ್ಷ್ಮಿ ರೀತಿ ಮಾಸಿಕ 3000 ರು.
ಬೆಳಗಾವಿ ರಾಜಕೀಯ ಹಿಡಿತಕ್ಕಾಗಿ ಕೆಪಿಸಿಸಿ ಪಟ್ಟ ಬಿಟ್ಟ ಜಾರಕಿಹೊಳಿ