ಶಿವಮೊಗ್ಗ : ಪ್ರತಿಭಟನೆ ಮಾಡಬಾರದು ಎಂಬ ರೂಲ್ಸ್ ಇದೆಯೇ? ಬಿಜೆಪಿಯವರ ಜೊತೆ ಎಷ್ಟು ಜನ ಗೂಂಡಾಗಳಿದ್ದಾರೆ ಎಂಬ ಲಿಸ್ಟ್ ಕೊಡಬೇಕೇ? ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಎಷ್ಟು ಜನ ಗೂಂಡಾಗಳು ಬಿಜೆಪಿ ಸೇರ್ಪಡೆಯಾದರು? ಜೈಲಿನಲ್ಲಿ ಯಾರು ಯಾರನ್ನು ಭೇಟಿ ಮಾಡಿದರು? ಪಾರ್ಟಿಗೆ ಯಾರನ್ನು ಸೇರಿಸಿಕೊಂಡರೆಂದು ಹೇಳಬೇಕೆ ಎಂದು ಪ್ರಶ್ನಿಸಿದರು.
ಗೂಂಡಾ ಸಂಸ್ಕೃತಿ ಹಾಗೂ ಬೇರೆ ಸಂಸ್ಕೃತಿ ಬಗ್ಗೆ ಬಿಜೆಪಿಯವರ ಬಾಯಲ್ಲಿ ಬಹಳಷ್ಟು ವಿಚಾರ ಬರುತ್ತದೆ. ಮೊನ್ನೆ ಶಿವಮೊಗ್ಗದ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಹಾಗೂ ವಿಧಾನಸಭೆಯಲ್ಲಿ ಅವರು ಹೇಗೆ ನಡೆದುಕೊಂಡರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರಿಂದ ಪಾಠ ಹೇಳಿಕೊಳ್ಳಬೇಕಾದ ಅಗತ್ಯವಿಲ್ಲ ಟಾಂಗ್ ನೀಡಿದರು.
ಶಾಸಕ ಸಿ.ಟಿ.ರವಿ ಅವರು ಈ ವಿಷಯದಲ್ಲಿ ಬಹಳ ಚೆನ್ನಾಗಿ ಮಾತನಾಡುತ್ತಾರೆ. ಅವರಿಗೆ ಈ ದೇಶದಲ್ಲಿ ಪ್ರತಿಭಟನೆ ಮಾಡಲು ಹಕ್ಕಿದೆ. ಹಾಗಾಗಿ ಅವರು ಪ್ರತಿಭಟನೆ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಇನ್ನೂ ಮೂರು ವರ್ಷ ಹಾಗೂ ನಂತರದ ಐದು ವರ್ಷವೂ ಪ್ರತಿಭಟನೆ ಮಾಡುತ್ತಿರಲಿ ಎಂದು ಲೇವಡಿ ಮಾಡಿದರು.
ಬಿಜೆಪಿಯವರು ಮಾತೆತ್ತಿದರೆ ಪಾಕಿಸ್ತಾನವನ್ನು ತೋರಿಸುವುದು, ಏರೋಪ್ಲೇನ್ ತೋರಿಸುವುದು ಮಾಡುತ್ತಿದ್ದಾರೆ. ಇಲ್ಲಿ ಬಂದು ಕಾಮನ್ ಸೆನ್ಸ್ ವಿಚಾರ ಮಾತನಾಡುತ್ತಾರೆ. ಅಮೆರಿಕದ ಅಧ್ಯಕ್ಷರಿಗೆ ನಾವು ಪುಕ್ಸಟ್ಟೆ ಸಿಕ್ಕಿದ್ದೇವೆಯೇ? ನಾವು ಅಗತ್ಯ ಇದ್ದರೆ ಯುದ್ಧ ಮಾಡಿ ಎಂದು ಹೇಳಿರಲಿಲ್ಲವೇ? ಯುದ್ಧ ಮಾಡಬೇಕಿತ್ತು. ಇದರ ಬಗ್ಗೆ ನಾವು ಇನ್ನೊಮ್ಮೆ ಚರ್ಚೆ ಮಾಡೋಣ ಎಂದರು.
ಕಾಶ್ಮೀರದಲ್ಲಿ ಕಣ್ಣೀರು ಹಾಕಿದ ಹೆಣ್ಣು ಮಕ್ಕಳ ಹೆಸರನ್ನು ಮಾತ್ರ ಇವರು ಬಳಸಿಕೊಂಡರು. ಉಳಿದವರನ್ನು ಬೀದಿ ಪಾಲು ಮಾಡಿ ಹರಾಜು ಹಾಕಿದರು. ಈ ಹಿಂದೆ ಪುಲ್ವಾಮಾ ದಾಳಿ ಸಂದರ್ಭದಲ್ಲಿ ಹೀಗೆ ಮಾಡಿದ್ದರು. ಟೀಕೆ ಟಿಪ್ಪಣಿ ಮಾಡುವುದು ಬಹಳ ಸುಲಭ. ಆದರೆ, ಜನ ಸೇವೆ ಮಾಡುವುದು ಬಹಳ ಮುಖ್ಯ. ಬಿಜೆಪಿ ಅವರಂತೆ ಅಲ್ಲಿ ಚಲಾವೋ, ಇಲ್ಲಿ ಚಲಾವೋ, ರಿಪಬ್ಲಿಕ್ ಎಂಬ ಆಟ ನಡೆಯುವುದಿಲ್ಲ ಎಂದರು.