ಕೋಗಿಲು ಅಕ್ರಮ ವಲಸಿಗರಿಗೆ ಮನೆ ನೀಡಲು ಬಿಡಲ್ಲ: ಅಶೋಕ್‌

Published : Jan 06, 2026, 08:47 AM IST
R Ashok

ಸಾರಾಂಶ

ಅಕ್ರಮ ವಲಸಿಗರಿಗೆ ಒಂದು ಮನೆ ನೀಡಿದರೂ ಅದು ಕೆಟ್ಟ ಪರಂಪರೆಗೆ ನಾಂದಿ ಹಾಡಲಿದೆ. ಕನ್ನಡಿಗರಿಗೆ ಸೇರಿದ ಜಮೀನನ್ನು ಬಾಂಗ್ಲಾ ಜನರಿಗೆ ನೀಡಲು ಅವಕಾಶ ಮಾಡಿಕೊಡುವುದಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಎಚ್ಚರಿಕೆ ನೀಡಿದ್ದಾರೆ.

  ಬೆಂಗಳೂರು :  ಅಕ್ರಮ ವಲಸಿಗರಿಗೆ ಒಂದು ಮನೆ ನೀಡಿದರೂ ಅದು ಕೆಟ್ಟ ಪರಂಪರೆಗೆ ನಾಂದಿ ಹಾಡಲಿದೆ. ಕನ್ನಡಿಗರಿಗೆ ಸೇರಿದ ಜಮೀನನ್ನು ಬಾಂಗ್ಲಾ ಜನರಿಗೆ ನೀಡಲು ಅವಕಾಶ ಮಾಡಿಕೊಡುವುದಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಎಚ್ಚರಿಕೆ ನೀಡಿದ್ದಾರೆ.

ಕೋಗಿಲು ಕ್ರಾಸ್‌ ಬಳಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಕಾರ್ಯಕ್ರಮ

ಸೋಮವಾರ ಕೋಗಿಲು ಕ್ರಾಸ್‌ ಬಳಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರಿಗೆ ಬೇರೆ ಬೇರೆ ಜಿಲ್ಲೆಗಳಿಂದ ಬಡವರು ಬಂದಿದ್ದಾರೆ. ಅನೇಕರು ಮನೆ ಇಲ್ಲದೆ ಪಾದಚಾರಿ ಮಾರ್ಗದಲ್ಲಿ ಮಲಗುತ್ತಿದ್ದಾರೆ. ಇಂತಹವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾಣುವುದಿಲ್ಲ. ಆದರೆ ಬಾಂಗ್ಲಾದೇಶದಿಂದ ಬಂದವರು ಇವರಿಗೆ ಸುಲಭವಾಗಿ ಕಾಣುತ್ತಾರೆ ಎಂದು ಹರಿಹಾಯ್ದರು.

36 ಲಕ್ಷ ಬಡವರು ಮನೆ ಹಾಗೂ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ

ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬಾಂಗ್ಲಾ ಟು ಬೆಂಗಳೂರು ಎಂಬ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಆರಂಭವಾಗಲಿದೆ. ಸರ್ಕಾರದ ದಾಖಲೆ ಪ್ರಕಾರ, ರಾಜ್ಯದಲ್ಲಿ 36 ಲಕ್ಷ ಬಡವರು ಮನೆ ಹಾಗೂ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಂತಹವರಿಗೆ ಮನೆ ನೀಡಿಲ್ಲ. ಇವರೆಲ್ಲರೂ ಗೃಹಮಂಡಳಿ ಬಳಿ ಹೋದರೆ ನಾಳೆ ಬಾ ಎನ್ನುತ್ತಾರೆ ಎಂದರು.

ಕೋಗಿಲು ಕ್ರಾಸ್‌ನಲ್ಲಿ ಇಡೀ ಸರ್ಕಾರ ಬಂದು ನಿಂತಿದೆ. ಕಂದಾಯ ಅಧಿಕಾರಿಗಳು, ಪೊಲೀಸರು ಎಲ್ಲರೂ ಇಲ್ಲೇ ಇದ್ದು ಆ ಜನರಿಗೆ ರಕ್ಷಣೆ ನೀಡುತ್ತಿದ್ದಾರೆ. ಕೇವಲ ಮತಕ್ಕಾಗಿ ಇವರಿಗೆ ಸರ್ಕಾರ ಪ್ರೀತಿ ತೋರಿಸುತ್ತಿದೆ. ಬಾಂಗ್ಲಾದೇಶದಲ್ಲಿರುವ 16 ಕೋಟಿ ಜನರ ಪೈಕಿ, 3 ಕೋಟಿ ಜನರು ಕಾಣೆಯಾಗಿ ಭಾರತಕ್ಕೆ ಬಂದಿದ್ದಾರೆ. ಬೆಂಗಳೂರು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮೊದಲಾದ ಕಡೆಗಳಲ್ಲಿ ಅವರು ವಾಸಿಸುತ್ತಿದ್ದಾರೆ. ಇಂದು ಕಾಶ್ಮೀರದಲ್ಲಿ ಸಾಮಾನ್ಯ ಜನರು ಓಡಾಡಲು ಭಾರತೀಯ ಸೇನೆಯ ರಕ್ಷಣೆ ಬೇಕಾಗಿದೆ. ಜಮ್ಮು ಕಾಶ್ಮೀರವನ್ನು ಉಳಿಸಲು ಅತ್ಯಧಿಕ ಹಣ ಖರ್ಚು ಮಾಡಲಾಗುತ್ತಿದೆ. ಬೆಂಗಳೂರಿಗೆ ಇಂತಹ ಸ್ಥಿತಿ ಬರಬಾರದು ಎಂದು ಬೇಸರ ವ್ಯಕ್ತಪಡಿಸಿದರು.

ಇಲ್ಲಿ 150 ಅಕ್ರಮ ಮನೆಗಳನ್ನು ಒಡೆದು ಹಾಕಲಾಗಿದೆ. ಆದರೆ ಈಗ 280 ನಿವಾಸಿಗಳು ಬಂದಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇಷ್ಟಾದರೂ ಬ್ಯಾಟರಾಯನಪುರ ಶಾಸಕರು ಪತ್ತೆಯೇ ಇಲ್ಲ. ಪ್ರತಿಭಟನೆ ಮಾಡಲು ಬಂದರೆ ಪೊಲೀಸರು 60 ಕ್ಕೂ ಅಧಿಕ ಬಸ್‌ಗಳನ್ನು ತಡೆದಿದ್ದಾರೆ. ಈ ಸರ್ಕಾರ ಎರಡು ವರ್ಷವೂ ಇರುವುದಿಲ್ಲ. ಪ್ರತಿಭಟನಾಕಾರರನ್ನು ತಡೆದರೆ ಇನ್ನಷ್ಟು ಉಗ್ರವಾಗಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜೀವ್‌ ಗಾಂಧಿ ವಸತಿ ನಿಗಮದಲ್ಲಿ ಮನೆಗಾಗಿ ಆನ್‌ಲೈನ್‌ ಅರ್ಜಿ ಸಲ್ಲಿಸಬೇಕು. ಅರ್ಜಿ ಅಂತಿಮವಾಗಲು ಎರಡು ವರ್ಷ ಬೇಕಾಗುತ್ತದೆ. ಆದರೆ ಇಲ್ಲಿನ ನಿವಾಸಿಗಳಿಗೆ ಎರಡೇ ದಿನದಲ್ಲಿ ಮನೆ ಮಂಜೂರು ಮಾಡುತ್ತಿದ್ದಾರೆ. ಇದು ಇಡೀ ಕನ್ನಡಿಗರ ಪ್ರಶ್ನೆ. ಬಾಂಗ್ಲಾದವರು ಬಂದು ಇಲ್ಲಿಯೇ ಇದ್ದರೆ ಕಳ್ಳತನ, ದರೋಡೆ, ಡ್ರಗ್ಸ್‌ ಮಾಫಿಯಾ ಹೆಚ್ಚಲಿದೆ. ಆದ್ದರಿಂದ ಕರ್ನಾಟಕವನ್ನು ಕನ್ನಡಿಗರಿಗೆ ಉಳಿಸಿ ಎಂಬ ಸಂದೇಶ ನೀಡುತ್ತಿದ್ದೇವೆ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಅಧಿಕಾರಕ್ಕಾಗಿ ಅಪವಿತ್ರ ರಾಜಕೀಯ ಮೈತ್ರಿ - ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವೈರಿಗಳ ಮಿಲನ
ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ವಿವಾದ