ವಿಜಯಪುರದಲ್ಲಿ ರೇಷ್ಮೆ ಉತ್ಪಾದಕ ಕಂಪನಿಯ ಮಾರಾಟ ಮಳಿಗೆ ಉದ್ಘಾಟನೆ । ರೇಷ್ಮೆ ಉಪನಿರ್ದೇಶಕ ಎಂ.ಕೆ.ಪ್ರಭಾಕರ್ ಭರವಸೆ ಕನ್ನಡಪ್ರಭ ವಾರ್ತೆ ವಿಜಯಪುರ ರೇಷ್ಮೆ ಬೆಳೆಗಾರರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ಉದ್ದೇಶದಿಂದ ಸ್ಥಳೀಯವಾಗಿ ರೇಷ್ಮೆ ರೈತ ಉತ್ಪಾದಕ ಕಂಪನಿಗಳನ್ನು ತೆರೆದು, ಅವರಿಗೆ ಅಗತ್ಯವಾಗಿರುವ ಮಾರ್ಗದರ್ಶನದ ಜೊತೆಗೆ ಸೌಲಭ್ಯಗಳನ್ನು ಒದಗಿಸುವಂತಹ ಕಾರ್ಯವಾಗಲಿದೆ ಎಂದು ಜಿಲ್ಲಾ ಪಂಚಾಯತ್ ರೇಷ್ಮೆ ಉಪನಿರ್ದೇಶಕ ಎಂ.ಕೆ.ಪ್ರಭಾಕರ್ ಹೇಳಿದರು. ವಿಜಯಪುರ ಪಟ್ಟಣದಲ್ಲಿ ತಾಲೂಕು ರೇಷ್ಮೆ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ನ ನೂತನ ಮಾರಾಟ ಮಳಿಗೆ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ಅವರ ಆದಾಯದ ಪ್ರಮಾಣವನ್ನು ಹೆಚ್ಚಿಸಬೇಕು, ಅವರೆಲ್ಲರನ್ನೂ ಸಂಘಟಿತರನ್ನಾಗಿ ಮಾಡಬೇಕು. ಇದು ಸರ್ಕಾರದ ಉದ್ದೇಶವೂ ಆಗಿದ್ದು, ರೈತರು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಇಲಾಖೆಯ ಅಧಿಕಾರಿಗಳು ನೀಡುವಂತಹ ಉತ್ತಮ ಮಾರ್ಗದರ್ಶನಗಳನ್ನು ಪಡೆದುಕೊಂಡು ಕಂಪನಿಯನ್ನು ಸರಿಯಾಗಿ ಮುನ್ನಡೆಸಬೇಕು. ಈ ಕಂಪನಿಯಲ್ಲಿ ಒಂದು ವರ್ಷದಲ್ಲಿ ನೋಂದಣಿ ಮುಗಿದಿದ್ದು, ೧೦೦೭ ಷೇರುದಾರರಿದ್ದಾರೆ. ರೈತರು ಸಂಘಟಿತರಾಗಿ ಸದುಪಯೋಗ ಮಾಡಿಕೊಳ್ಳಬೇಕು ಎಂದರು. ದೇವನಹಳ್ಳಿ ತಾಲೂಕು ರೇಷ್ಮೆ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಆರ್.ಎನ್.ಜನಾರ್ಧನ್ ಮಾತನಾಡಿ, ನಮ್ಮ ಕಂಪನಿಯಲ್ಲಿ ರೈತರಿಗೆ ಅಗತ್ಯವಾಗಿರುವ ಸಾಮಾಗ್ರಿಗಳನ್ನು ಬೇರೆ ಕಡೆಯಲ್ಲಿ ಸಿಗುವ ಬೆಲೆಗಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತದೆ. ಬಂದ ಲಾಭಾಂಶವನ್ನು ಷೇರುದಾರರಿಗೆ ವರ್ಗಾವಣೆ ಮಾಡಲಾಗುತ್ತದೆ. ನಮ್ಮ ಕಂಪನಿಯಲ್ಲಿ ಕೇವಲ ರೇಷ್ಮೆಗೆ ಮಾತ್ರ ಒತ್ತು ನೀಡದೇ ಕೃಷಿ, ತೋಟಗಾರಿಕೆಯ ಬೆಳೆಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದರು. ಕರ್ನಾಟಕ ರಾಜ್ಯ ಕೃಷಿ ರೇಷ್ಮೆ ಹಿತರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಮಳ್ಳೂರು ಶಿವಣ್ಣ ಮಾತನಾಡಿ, ರೇಷ್ಮೆ ಉತ್ಪಾದಕರಿಗೆ ಇರುವ ತೊಂದರೆಗಳು ನಿವಾರಣೆಯಾಗಬೇಕು. ಆಗ ಮಾತ್ರ ರೈತರು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ. ವೈಜ್ಞಾನಿಕವಾಗಿ ರೈತರು ಮುಂದುವರೆಯಬೇಕು. ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬೇಕು.ರೈತ ಉತ್ಪಾದಕ ಸಂಸ್ಥೆಗಳು ಬಲಿಷ್ಟವಾದಾಗ ರೈತರಿಗೆ ನ್ಯಾಯ ಸಿಗುತ್ತದೆ ಎಂದರು. ರೇಷ್ಮೆಗೂಡು ಮಾರುಕಟ್ಟೆ ಉಪನಿರ್ದೇಶಕ ಎಸ್.ಸುಂದರರಾಜ್, ದೇವನಹಳ್ಳಿ ವಿಭಾಗದ ರೇಷ್ಮೆ ಸಹಾಯಕ ನಿರ್ದೇಶಕ ಟಿ.ಆರ್.ನರೇಂದ್ರಬಾಬು, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಂಜಿತ್.ಆರ್, ಕೋಲಾರ ರೇಷ್ಮೆ ಉತ್ಪಾದಕರ ಸಂಘದ ಅಧ್ಯಕ್ಷ ಶಂಕರೇಗೌಡ. ಬಿ.ಎಂ, ಚೇತನ್ ನಂದಿಬಟ್ಟಲು, ಮುನಿಸ್ವಾಮಿರೆಡ್ಡಿ, ಹೊಸಕೋಟೆ ಚಂದ್ರಣ್ಣ, ಸಂಘದ ಉಪಾಧ್ಯಕ್ಷ ಜಿ.ಪಿ.ಮುನಿರಾಜು, ನಿರ್ದೇಶಕರಾದ ವೆಂಕಟೇಶಪ್ಪ, ಶ್ರೀನಿವಾಸ್.ಸಿ.ಎಂ, ಕೆ.ಎಂ.ರವಿಶಂಕರ್, ಅಶ್ವಥ್ ಕುಮಾರ್, ನಾಗೇಶ್.ಎಂ, ಸುರೇಶ್.ಎಂ.ಪಿ, ಮೋಹನ್ ಕುಮಾರ್, ವಸಂತ್ ಕುಮಾರ್, ಹರೀಶ್.ವೈ.ಸಿ, ಹಾಜರಿದ್ದರು.