ರಾಜ್ಯದ ಬಜೆಟ್‌ ಲೆಕ್ಕಾಚಾರ, ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಯುದ್ಧ ಹೇಗೆ ಪೆಟ್ಟು ನೀಡಲಿದೆ. ಈ ಸ್ಥಿತಿಯಲ್ಲಿ ಯಾವ ರೀತಿಯ ಹೂಡಿಕೆ ಸುರಕ್ಷಿತ? ಚಿನ್ನ, ಬೆಳ್ಳಿಯ ಬೆಲೆಯ ಭವಿಷ್ಯವೇನು? ಎಂಬಿತ್ಯಾದಿ ವಿಷಯಗಳ ಕುರಿತು ಹೂಡಿಕೆ ತಜ್ಞ ರುದ್ರಮೂರ್ತಿ ಅವರು ‘ಕನ್ನಡಪ್ರಭ’ ಜತೆ ಮುಖಾಮುಖಿ ಮಾತನಾಡಿದ್ದಾರೆ.

 ರುದ್ರಮೂರ್ತಿ, ಹೂಡಿಕೆ ತಜ್ಞ

……………………………………………………….

ಶ್ರೀಕಾಂತ್ ಎನ್. ಗೌಡಸಂದ್ರ

ಜಾಗತಿಕ ಅಶಾಂತಿ, ಯುದ್ಧ, ಅಂತರಾಷ್ಟ್ರೀಯ ರಾಜಕೀಯ ತಿಕ್ಕಾಟಗಳು ಕೇವಲ ಆ ದೇಶಗಳ ಗಡಿಗೆ ಸೀಮಿತವಾಗಿಲ್ಲ. ಸಾವಿರಾರು ಕಿ.ಮೀ. ದೂರದಲ್ಲಿರುವ ರಾಜ್ಯಗಳ ಆರ್ಥಿಕತೆಗೂ ತೀವ್ರ ಪೆಟ್ಟು ನೀಡುತ್ತವೆ. ಕಚ್ಚಾ ತೈಲದ ಬೆಲೆ ಏರಿಕೆ, ಸಾಗಣೆ ವೆಚ್ಚ ಹೆಚ್ಚಳ, ಸರಕು ಸರಬರಾಜು ಸರಪಳಿ ವ್ಯತ್ಯಯ, ಬೆಲೆ ಏರಿಕೆ, ಹಣದುಬ್ಬರ, ಷೇರುಪೇಟೆ ಅಸ್ತಿರತೆ, ಹೂಡಿಕೆದಾರರ ಆತಂಕ. ಇವೆಲ್ಲವೂ ರಾಜ್ಯಗಳಿಗೆ ಆರ್ಥಿಕವಾಗಿ ಹೊಸ ಸವಾಲು ಹುಟ್ಟು ಹಾಕುತ್ತವೆ. ಕೇಂದ್ರ ಹಾಗೂ ರಾಜ್ಯದ ಬಜೆಟ್‌ ಲೆಕ್ಕಾಚಾರವೇ ಬದಲಾಗಬಹುದು. ಹೀಗಾಗಿ ಯುದ್ಧದ ಪರಿಸ್ಥಿತಿಯಿಂದ ರಾಜ್ಯದ ಆರ್ಥಿಕ ಚಟುವಟಿಕೆ, ಹೂಡಿಕೆ ವಾತಾವರಣ, ಸಾಮಾನ್ಯ ಜನರ ಬದುಕಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ರಾಜ್ಯದ ಬಜೆಟ್‌ ಲೆಕ್ಕಾಚಾರ, ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಹೇಗೆ ಪೆಟ್ಟು ನೀಡಲಿದೆ. ಈ ಸ್ಥಿತಿಯಲ್ಲಿ ಯಾವ ರೀತಿಯ ಹೂಡಿಕೆ ಸುರಕ್ಷಿತ? ಚಿನ್ನ, ಬೆಳ್ಳಿಯ ಬೆಲೆಯ ಭವಿಷ್ಯವೇನು? ಎಂಬಿತ್ಯಾದಿ ವಿಷಯಗಳ ಕುರಿತು ಹೂಡಿಕೆ ತಜ್ಞ ರುದ್ರಮೂರ್ತಿ ಅವರು ‘ಕನ್ನಡಪ್ರಭ’ ಜತೆ ಮುಖಾಮುಖಿ ಮಾತನಾಡಿದ್ದಾರೆ.

-ಇರಾನ್-ಇಸ್ರೇಲ್, ಅಮೆರಿಕ ಸಂಘರ್ಷದಿಂದ ದೇಶ ಹಾಗೂ ರಾಜ್ಯದ ಆರ್ಥಿಕತೆ ಮೇಲೆ ತಕ್ಷಣದ ಪರಿಣಾಮ ಏನು?

ಭಾರತಕ್ಕೆ ಶೇ.20 ರಷ್ಟು ಕಚ್ಚಾತೈಲ ಇರಾನ್‌ನಿಂದ ಬರುತ್ತದೆ. ಜತೆಗೆ ವಿವಿಧ ದೇಶಗಳಿಂದ ಬರುತ್ತಿದ್ದ ಕಚ್ಚಾತೈಲ ಪೂರೈಕೆ ವ್ಯತ್ಯಯ ಆಗಿದೆ. ಹೀಗಾಗಿ ಇರಾನ್‌-ಇಸ್ರೇಲ್‌ ಯುದ್ಧದ ನೇರ ಹೊಡೆತ ದೇಶಕ್ಕೂ ಬೀಳಲಿದೆ. ಪ್ರತಿ ಬ್ಯಾರೆಲ್‌ ಕಚ್ಚಾತೈಲ ಬೆಲೆ ಒಂದು ಡಾಲರ್‌ನಷ್ಟು ಹೆಚ್ಚಾದರೂ ದೇಶದ ಆಮದು ಬಿಲ್‌ 2 ಬಿಲಿಯನ್‌ ಡಾಲರ್‌ನಷ್ಟು ಹೆಚ್ಚಾಗುತ್ತದೆ. ಈಗಾಗಲೇ ಕಚ್ಚಾತೈಲ ಬೆಲೆ ಶೇ.10ರಷ್ಟು ಏರಿಕೆಯಾಗಿದ್ದು, 20 ಬಿಲಿಯನ್‌ ಡಾಲರ್‌ನಷ್ಟು ಆಮದು ಬರೆ ಬಿದ್ದಿದೆ. ನಮ್ಮ ಬಳಿ ಪ್ರಸ್ತುತ 70-75 ದಿನಕ್ಕೆ ಆಗುವಷ್ಟು ಕಚ್ಚಾತೈಲ ದಾಸ್ತಾನು ಇದೆ. ಯುದ್ಧ ಜಾಸ್ತಿ ದಿನ ನಡೆದರೆ ಖಂಡಿತ ನಕಾರಾತ್ಮಕ ಪರಿಣಾಮ ಹೆಚ್ಚುತ್ತಲೇ ಇರುತ್ತದೆ.

- ಕಚ್ಚಾತೈಲ ಬೆಲೆ ಏರಿಕೆ ಮಾತ್ರ ದೇಶದ ಆರ್ಥಿಕತೆ ಮೇಲೆ ಆಗುವ ನಕಾರಾತ್ಮಕ ಪರಿಣಾಮವೇ?

ಇರಾನ್‌ ಕೇವಲ ಇಸ್ರೇಲ್‌, ಅಮೆರಿಕ ಜತೆ ಮಾತ್ರ ಯುದ್ಧ ಮಾಡುತ್ತಿಲ್ಲ. ಮಿಡ್ಲ್‌ ಈಸ್ಟ್‌ ದೇಶಗಳಾದ ದುಬೈ, ಸೌದಿ ಅರೆಬಿಯಾ, ಕತಾರ್‌ ಸೇರಿ 9 ದೇಶಗಳಲ್ಲಿನ ಯುಎಸ್‌ ಎಂಬಸ್ಸಿ, ಸೇನಾ ಸ್ಥಾವರಗಳ ಮೇಲೆ ದಾಳಿ ಮಾಡುತ್ತಿದೆ. ಹೀಗಾಗಿ ಅಲ್ಲಿಂದ ಬರುತ್ತಿದ್ದ ಕಚ್ಚಾತೈಲಕ್ಕೂ ಸಮಸ್ಯೆಯಾಗಲಿದೆ. ಇವುಗಳಿಂದ ಅಲ್ಲಿ ನೆಲೆಸಿದ್ದ ನಮ್ಮವರಿಂದ ಬರುತ್ತಿದ್ದ ಆದಾಯ (ರೆಮಿಟೆನ್ಸ್) ಮೇಲೆ ಪರಿಣಾಮ ಬೀರಲಿದೆ. ಡಾಲರ್‌ ಎದುರು ರುಪಾಯಿ ಮೌಲ್ಯ ಇನ್ನೂ ಕುಸಿತ ಕಾಣುತ್ತದೆ. ವಿಮಾನಯಾನ ಆದಾಯವೂ ಕುಸಿಯಲಿದೆ.

- ಆಮದು ಮಾರುಕಟ್ಟೆ ಮೇಲೆ ಉಂಟಾಗುವ ದುಷ್ಪರಿಣಾಮವೇನು?

ಪ್ರತಿ ಬಾರಿ ಯುದ್ಧ ಆದಾಗಲೂ ಚಿನ್ನ, ಬೆಳ್ಳಿ ಬೆಲೆ ಏರಿಕೆ ಆಗುತ್ತದೆ. ಭಾರತ ಇದನ್ನು ಆಮದು ಮಾಡಿಕೊಳ್ಳುವುದರಿಂದ ಆರ್ಥಿಕತೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಚಿನ್ನ, ಬೆಳ್ಳಿ, ರುಪಾಯಿ ಮೌಲ್ಯ ಹಾಗೂ ರೆಮಿಟೆನ್ಸ್‌ ಇಷ್ಟರ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಯುದ್ಧ ಹೆಚ್ಚು ದಿನ ನಡೆದರೆ ಆರ್ಥಿಕವಾಗಿ ಹಿಂಜರಿತ ಖಚಿತ.

- ಕಚ್ಚಾ ತೈಲಕ್ಕೆ ಇರಾನ್‌, ಅಮೆರಿಕವನ್ನು ಮಾತ್ರವೇ ನೆಚ್ಚಿಕೊಂಡಿಲ್ಲವಲ್ಲ? ರಷ್ಯಾ ಮತ್ತಿತರ ಕಡೆಯಿಂದ ತರಿಸಬಹುದಲ್ಲಾ?

ಆದರೆ, ಇದಕ್ಕೆ ಟ್ರಂಪ್‌-ಭಾರತದ ನಡುವೆ ತೆರಿಗೆ ಒಪ್ಪಂದ ಅಡ್ಡಿ ಉಂಟು ಮಾಡುತ್ತದೆ. ಮೇ 2025ರ ವೇಳೆಗೆ ನಮ್ಮ ದೇಶವು ಆಮದು ಮಾಡಿಕೊಳ್ಳುತ್ತಿದ್ದ ಒಟ್ಟು ತೈಲದಲ್ಲಿ ಶೇ.35 ರಷ್ಟು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಟ್ರಂಪ್‌ ಅವರು ನಮ್ಮ ಉತ್ಪನ್ನಗಳಿಗೆ ಶೇ.15 ರಷ್ಟಿದ್ದ ತೆರಿಗೆಯನ್ನು ಶೇ.50ಕ್ಕೆ ಹೆಚ್ಚಳ ಮಾಡಿ ಇದನ್ನು ಕಡಿಮೆ ಮಾಡಬೇಕಾದರೆ ರಷ್ಯಾದಿಂದ ಕಚ್ಚಾತೈಲ ತರಿಸಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ. ಈ ಪ್ರಮಾಣವನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ನಮ್ಮ ದೇಶವೂ ಒಪ್ಪಿದ್ದು ಈಗ ಶೇ.35 ರಷ್ಟಿದ್ದ ಆಮದು ಶೇ.10ಕ್ಕಿಂತ ಕಡಿಮೆಯಾಗಿದೆ. ಇದರಿಂದ ಅಮೆರಿಕ, ಇರಾನ್‌, ಸೌದಿ ಅರೇಬಿಯಾ, ಕತಾರ್‌, ಕುವೈತ್‌ ಇಲ್ಲಿಂದ ಆಮದು ಹೆಚ್ಚು ಮಾಡಿಕೊಳ್ಳುತ್ತಿದ್ದೆವು. ಇದೀಗ ಯುದ್ಧ ನಡೆಯುತ್ತಿರುವುದರಿಂದ ಭಾರತ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

- ಈಗ ಕೊಲ್ಲಿ ರಾಷ್ಟ್ರಗಳಿಂದ ಕಚ್ಚಾತೈಲ ಬರುತ್ತಿಲ್ಲದ ಕಾರಣಕ್ಕಾಗಿ ರಷ್ಯಾದಿಂದ ತರಿಸಬಹುದಲ್ಲವೇ?

ರಷ್ಯಾದಿಂದ ಕಚ್ಚಾತೈಲ ಪಡೆದರೆ ಟ್ರಂಪ್‌ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಇನ್ನು ಪರ್ಯಾಯವಾಗಿ ವೆನಿಜುವೆಲ, ಅಮೆರಿಕದಿಂದ ಕಚ್ಚಾತೈಲ ತರಿಸಲು ಸಾಗಣೆ ವೆಚ್ಚ ಹೆಚ್ಚು. ಹೀಗಾಗಿ ಭಾರತ ಸಂಕಷ್ಟಕ್ಕೆ ಸಿಲುಕಿದೆ.

- ಕಚ್ಚಾ ತೈಲದ ಬೆಲೆ ಏರಿಕೆಯಿಂದ ರಾಜ್ಯದ ಮೇಲೆ ಆಗುವ ಆರ್ಥಿಕ ಪರಿಣಾಮವೇನು?

ಕಚ್ಚಾತೈಲ ಬೆಲೆ ಈಗಾಗಲೇ ಶೇ.10 ರಷ್ಟು ಏರಿಕೆಯಾಗಿದೆ. ಜತೆಗೆ ಹಾರ್ಮಜ್‌ ಜಲಸಂಧಿಯನ್ನು ಬಂದ್ ಮಾಡಿರುವುದಾಗಿ ಇರಾನ್‌ ಹೇಳಿದೆ. ಭಾರತ ದೇಶ ತೆಗೆದುಕೊಳ್ಳುವ ಕಚ್ಚಾತೈಲದ ಶೇ.40 ರಷ್ಟು ಈ ಜಲಸಂಧಿಯ ಮೂಲಕವೇ ಬರಬೇಕು. ಪ್ರತಿ ಬ್ಯಾರೆಲ್‌ಗೆ 82 ಡಾಲರ್ ಇರುವ ಬೆಲೆ ಹಾರ್ಮಜ್‌ ಜಲಸಂಧಿ ಮುಚ್ಚಿದರೆ 100 ಡಾಲರ್‌ವರೆಗೂ ಮುಟ್ಟಬಹುದು. ಇದಾದರೆ ಸಾಗಾಣಿಕೆ ವೆಚ್ಚ ಹೆಚ್ಚಾಗುತ್ತದೆ. ಯೂರಿಯಾ, ರಸ ಗೊಬ್ಬರಬೆಲೆ ಹೆಚ್ಚಾಗಲಿದೆ. ನಿತ್ಯ ಬಳಕೆ ಪದಾರ್ಥಗಳ ಬೆಲೆ ಹೆಚ್ಚಾಗಿ ಹಣದುಬ್ಬರ ಹೆಚ್ಚಾಗಲಿದೆ. ರುಪಾಯಿ ಮೌಲ್ಯ ಮತ್ತಷ್ಟು ಕುಸಿಯುತ್ತದೆ. ಅದು ಆರ್ಥಿಕವಾಗಿ ಪೆಟ್ಟು ನೀಡಲಿದೆ.

- ಕೇಂದ್ರದ ಬಜೆಟ್ ಮೇಲಿನ ದುಷ್ಪರಿಣಾಮವೇನು?

ನಿರ್ಮಲಾ ಸೀತಾರಾಮನ್‌ ಅವರು ಫೆ.1 ಮಂಡಿಸಿರುವ ಬಜೆಟ್‌ನ್ನು ಕಚ್ಚಾತೈಲ 70-75 ಡಾಲರ್‌ನಷ್ಟಿದ್ದರೆ ನಿಭಾಯಿಸುವ ಆಧಾರದ ಮೇಲೆ ಮಾಡಿದ್ದರು.ಪ್ರತಿ ಒಂದು ಡಾಲರ್‌ನಷ್ಟು ಕಚ್ಚಾತೈಲ ಬೆಲೆ ಹೆಚ್ಚಾದರೆ ಎರಡು ಬಿಲಿಯನ್‌ ಡಾಲರ್‌ನಷ್ಟು ದೇಶಕ್ಕೆ ಹೊರೆಯಾಗಲಿದೆ. ಹೀಗಾಗಿ ಬಜೆಟ್‌ ಮೇಲೆ ಹೊರೆಯಾಗುತ್ತದೆ.

- ಈ ಪರಿಣಾಮ ರಾಜ್ಯದ ಬಜೆಟ್‌ ಮೇಲೆ ಹೇಗೆ ಆಗುತ್ತದೆ?

ದೇಶಾದ್ಯಂತ ಎಲ್ಲಾ ಕ್ಷೇತ್ರಗಳ ಮೇಲೂ ಇದರ ದುಷ್ಪರಿಣಾಮ ಬೀರುತ್ತದೆ. ರುಪಾಯಿ ಮೌಲ್ಯ ಕಳೆದುಕೊಂಡು ಆಮದು ಉತ್ಪನ್ನಗಳಿಗೆ ಹೆಚ್ಚು ಬೆಲೆ ತೆರಬೇಕು. ಬೆಲೆ ಏರಿಕೆ ಜತೆಗೆ ದೇಶದ ವ್ಯಾಪಾರ ಚಟುವಟಿಕೆ ಕಡಿಮೆಯಾಗಿ ಆದಾಯ ಕಡಿಮೆ ಆಗುತ್ತದೆ. ಕೇಂದ್ರದ ತೆರಿಗೆ ಪಾಲು ಹಂಚಿಕೆ ವೇಳೆ ರಾಜ್ಯಕ್ಕೂ ಹಣಕಾಸು ಕೊರತೆ ಉಂಟಾಗುತ್ತದೆ. ಜತೆಗೆ ಕೇಂದ್ರದ ಅನುದಾನ, ಸಹಾಯಧನ ಕಡಿಮೆಯಾಗಲಿದೆ. ರಾಜ್ಯದಲ್ಲಿನ ಜಿಎಸ್‌ಟಿ ಸಂಗ್ರಹವೂ ಕುಸಿಯಬಹುದು.

- ಈಗಾಗಲೇ ಸಾಲಭಾರ ಎದುರಿಸುತ್ತಿರುವ ರಾಜ್ಯದ ಮೇಲೆ ಆರ್ಥಿಕ ಒತ್ತಡದ ಪರಿಣಾಮವೇನು? ಇದನ್ನು ಹೇಗೆ ನಿಭಾಯಿಸಬೇಕು?

ಪರಿಣಾಮ ಖಂಡಿತ ಇರಲಿದೆ. ಇದನ್ನು ನಿಭಾಯಿಸಲು ರಾಜ್ಯ ಸರ್ಕಾರ ನೀಡುತ್ತಿರುವ ಪಂಚಗ್ಯಾರಂಟಿ, ಉಚಿತ ಕೊಡುಗೆಗಳಿಗೆ ಆದಾಯ ಬೇಕಾಗುತ್ತದೆ. ಆದಾಯ ಕಡಿಮೆಯಾಗುವುದರಿಂದ ಖಂಡಿತ ಹೊಡೆತ ಬೀಳಲಿದೆ. ಹೀಗಾಗಿ ಗ್ಯಾರಂಟಿಗಳನ್ನು ಕಡಿತ ಮಾಡಬೇಕು ಅಥವಾ ಮುಂದೂಡಬೇಕು.

- ರಾಜ್ಯಕ್ಕೆ ವಿದೇಶಿ ಬಂಡವಾಳ ಹರಿದು ಬರುವುದು ನಿಲ್ಲಲಿದೆಯೇ?

ಈಗಾಗಲೇ ವಿದೇಶಿ ನೇರ ಬಂಡವಾಳ ಹೂಡಿಕೆ ಹಿಂಪಡೆಯುತ್ತಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಸೋಮವಾರ ಒಂದೇ ದಿನ 7,500 ಕೋಟಿ ರು. ಒಂದೇ ದಿನ ವಾಪಸು ಪಡೆದಿದ್ದಾರೆ. ಯುದ್ಧ ಹೆಚ್ಚು ದಿನ ಮುಂದುವರೆದಿದರೆ ವಿದೇಶಿಗರು ತಮ್ಮ ಹೂಡಿಕೆ ವಾಪಸು ಎತ್ತಿಕೊಳ್ಳುತ್ತಾರೆ. ಯುದ್ಧ ಇಲ್ಲದಿದ್ದರೂ ಕಳೆದ 5 ವರ್ಷದಿಂದ ವಾಪಸ್ಸು ಪಡೆಯುತ್ತಲೇ ಇದ್ದಾರೆ. ಯುದ್ಧದ ಸ್ಥಿತಿಯಲ್ಲಿ ಹಣದುಬ್ಬರ ಹೆಚ್ಚಾಗಿ ಸಾಲ ಹೆಚ್ಚಾಗಿ ಬಡ್ಡಿ ದರಗಳು ಹೆಚ್ಚಾಗಲಿವೆ.

- ಈ ಸಮಯದಲ್ಲಿ ಜನರಿಗೆ ಯಾವ ಕ್ಷೇತ್ರಗಳಲ್ಲಿನ ಹೂಡಿಕೆ ಸುರಕ್ಷಿತ?

ಯುದ್ಧದ ವಾತಾವರಣ, ಭಯದಿಂದ ಸೋಮವಾರ ಹಾಗೂ ಮಂಗಳವಾರ ಸೆನ್ಸೆಕ್ಸ್, ನಿಫ್ಟಿ ಸಾಕಷ್ಟು ಕುಸಿದಿದೆ. ಯುದ್ಧ ಮುಗಿಯಲು ಕನಿಷ್ಠ 4-5 ವಾರ ಬೇಕು ಎಂದು ಟ್ರಂಪ್‌ ಹೇಳಿದ್ದಾರೆ. ಯುದ್ಧ ಹೆಚ್ಚು ದಿನ ನಡೆದಂತೆಲ್ಲಾ ಷೇರು ಮಾರುಕಟ್ಟೆ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಹೀಗಾಗಿ ಷೇರು ಮಾರುಕಟ್ಟೆ ಈಗ ಅಪಾಯದ ಆಯ್ಕೆಯಾಗಲಿದೆ.

- ಹಾಗಾದರೆ, ಚಿನ್ನ, ಬೆಳ್ಳಿಯಲ್ಲಿ ಹೂಡಿಕೆ ಉತ್ತಮವೇ?

ಯುದ್ಧ ಇಲ್ಲದಿದ್ದರೂ ಚಿನ್ನ, ಬೆಳ್ಳಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಎಐ ಉತ್ಪಾದನೆಗೆ ಹಾಗೂ ಕಾರ್ಖಾನೆ ಬಳಕೆಯಲ್ಲಿ ಬೆಳ್ಳಿ ಇದೆ. ಸೆಂಟ್ರಲ್‌ ಬ್ಯಾಂಕ್‌ಗಳು ಹೆಚ್ಚಾಗಿ ಚಿನ್ನ ಖರೀದಿಸುತ್ತಿದ್ದರಿಂದ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಈಗ ಯುದ್ಧದ ಹಿನ್ನೆಲೆ ಚಿನ್ನ, ಬೆಳ್ಳಿ ಮತ್ತಷ್ಟು ಏರಿಕೆಯಾಗುತ್ತದೆ. ಭಾರತವು ಚಿನ್ನವು ಆಮದು ಮಾಡಿಕೊಳ್ಳುವುದರಿಂದ ಇದೂ ಸಹ ಭಾರತಕ್ಕೆ ನಕಾರಾತ್ಮಕ ಬೆಳವಣಿಗೆ.

- ನಿಮ್ಮ ಪ್ರಕಾರ ಚಿನ್ನ, ಬೆಳ್ಳಿಯ ದರಗಳ ಭವಿಷ್ಯವೇನು? ಚಿನ್ನ 20,000 ಗಡಿ ದಾಟುತ್ತದೆ ಎಂಬ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಚಿನ್ನ, ಬೆಳ್ಳಿ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಹಣದುಬ್ಬರ ಹೆಚ್ಚಾದಾಗ, ಜಾಗತಿಕ ರಾಜಕೀಯ ತಿಕ್ಕಾಟ ಬಂದಾಗಲೆಲ್ಲಾ ಚಿನ್ನ, ಬೆಳ್ಳಿ ದರ ಹೆಚ್ಚಾಗುತ್ತದೆ. ಯುದ್ಧದ ಭೀತಿಯಿಂದ ಇನ್ನೂ ಹೆಚ್ಚಾಗುವ ಸಾಧ್ಯವಿದೆ. ಚಿನ್ನ ಪ್ರತಿ ಗ್ರಾಂ.ಗೆ 1.8 ಲಕ್ಷ ರು.ಗಳಿಂದ 2 ಲಕ್ಷ ರು.ವರೆಗೆ ಹೋಗುವ ಸಾಧ್ಯತೆಯಿದೆ. ಬೆಳ್ಳಿ ವಾಪಸು ಕೆ.ಜಿಗೆ. 3.5 ಲಕ್ಷ ರು.ವರೆಗೂ ಹೋಗುವ ಸಾಧ್ಯತೆಯಿದೆ.

- ಹಾಗಾದರೆ ಷೇರು ಮಾರುಕಟ್ಟೆ ದೀರ್ಘಾವಧಿ ಹೂಡಿಕೆಗೂ ಉತ್ತಮವಲ್ಲವೇ?

ಮುಂದಿನ 5 ವರ್ಷಕ್ಕೆ ಹೂಡಿಕೆ ಮಾಡುವುದಾದರೆ ಉತ್ತಮ ಆಯ್ಕೆ. ಅಲ್ಪಾವಧಿಗೆ ಹೂಡಿಕೆ ಮಾಡುವವರಿಗೆ ಇದು ಉತ್ತಮವಲ್ಲ. ಇಂದಿನಿಂದ 5 ವರ್ಷಕ್ಕೆ ಮಾಡುವವರು ಖಂಡಿತವಾಗಿಯೂ ಮಾಡಬಹುದು. ಅದು ಲಾರ್ಜ್‌ ಕ್ಯಾಪ್‌ನಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ. ಸ್ಮಾಲ್‌ ಹಾಗೂ ಮಿಡ್ಲ್‌ ಕ್ಯಾಪ್‌ ಹೂಡಿಕೆ ಸುರಕ್ಷಿತವಲ್ಲ.

- ಈಗಾಗಲೇ ಹೂಡಿಕೆ ಮಾಡುವವರು ನಷ್ಟದಿಂದ ಪಾರಾಗುವುದು ಹೇಗೆ?

ಅವರು ಪುಟ್ ಆಪ್ಷನ್‌ ಖರೀದಿ ಮಾಡಬಹುದು.

- ಎಐ, ಆ್ಯಂಥ್ರೋಪಿಕ್‌ ಹೊಡೆತದ ನಡುವೆ ರಾಜ್ಯದ ಐಟಿ ಮತ್ತು ಸ್ಟಾರ್ಟ್‌ಅಪ್ ಕ್ಷೇತ್ರದ ಭವಿಷ್ಯವೇನು?

ಎಐ ಸೇವಾ ಪೂರೈಕೆದಾರರಾಗಿದ್ದೇವೆಯೇ ಹೊರತು ನಾವು ಕ್ರಿಯೇಟರ್ಸ್‌ ಆಗಿಲ್ಲ. ಅದಕ್ಕೆ ಬೇಕಿರುವ ಸರ್ಕಾರದ ಸಹಾಯ ನಮಗೆ ಸಿಕ್ಕಿಲ್ಲ. ನಾಳೆ ಬೆಳಗ್ಗೆಯೇ ಎಐ ಸೇವಾ ಪೂರೈಕೆದಾರರಿಂದ ಎಐ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಸೇವಾ ಪೂರೈಕೆಯನ್ನೇ ನೆಚ್ಚಿಕೊಂಡರೆ ನಮಗೆ ಎಐಯಿಂದ ಉಳಿಗಾಲವಿಲ್ಲ.

- ಇದರ ಪರಿಣಾಮವೇನು?

ಪ್ರಸ್ತುತದ ಆರ್ಥಿಕ ಸ್ಥಿತಿ ರಫ್ತಿಗೆ ಉತ್ತಮವಾಗಿದೆ. ಐಟಿ, ಸೇವಾಪೂರೈಕೆದಾರರಿಗೆ ಇದು ಉತ್ತಮ ಸ್ಥಿತಿ. ಆದರೆ ಎಐ ಹೊಡೆತ ಇದರಿಂದ ಆಗಬೇಕಾದ ಲಾಭ ನಮ್ಮ ಐಟಿ ಕಂಪೆನಿಗಳಿಗೆ ಆಗಿಲ್ಲ. ಪರಿಣಾಮ ಇನ್ಫೋಸಿಸ್‌ ಸೇರಿ ಎಲ್ಲಾ ಕಂಪೆನಿಗಳ ಷೇರುಗಳು ಶೇ.20 ರಿಂದ 25 ರಷ್ಟು ಕುಸಿತ ಕಂಡಿದೆ.

- ಉದ್ಯೋಗ ಅವಕಾಶಗಳ ಮೇಲೆ ಯುದ್ಧದ ಕಾರ್ಮೋಡ ಇರಲಿದೆಯೇ?

ಉದ್ಯೋಗ ನಷ್ಟದ ಬಗ್ಗೆ ಈಗಾಗಲೇ ಸರ್ಕಾರದ ವಿರುದ್ಧ ದೂಷಣೆ ಶುರುವಾಗಿದೆ. ಎಐಯಿಂದ ಶೇ.20 ರಿಂದ ಶೇ.25 ರಷ್ಟು ಸಾಮಾನ್ಯವಾಗಿಯೇ ಉದ್ಯೋಗ ನಷ್ಟ ಆಗಲಿದೆ. ಎಐಗೆ ಹೊಂದಿಕೊಳ್ಳುವ ಕೌಶಲ್ಯಭರಿತ ಉದ್ಯೋಗ ಮಾತ್ರ ಉಳಿಯುತ್ತದೆ. ಇದಲ್ಲದಿದ್ದರೆ ಉದ್ಯೋಗ ನಷ್ಟ ಖಚಿತ.

- ಕೊನೆಯದಾಗಿ ಈ ಯುದ್ಧ ಪರಿಣಾಮ ತಾತ್ಕಾಲಿಕವೇ ಅಥವಾ ದೀರ್ಘಕಾಲಿಕವೇ?

ನನ್ನ ವೈಯಕ್ತಿಕ ಅಭಿಪ್ರಾಯ ಎಂದರೆ ಯುದ್ಧ ಬೇಗ ನಿಲ್ಲುವ ಸೂಚನೆ ಇಲ್ಲ. 4-5 ವಾರಗಳ ಕಾಲ ಇರಲಿದೆ ಎಂದು ಟ್ರಂಪ್‌ ಹೇಳಿದ್ದಾರೆ. ಒಂದು ತಿಂಗಳ ಮೇಲೆ ಯುದ್ದ ನಡೆದರೆ ಆರ್ಥಿಕ ಪರಿಣಾಮ ತುಂಬಾ ನಕಾರಾತ್ಮಕವಾಗಿ ಇರುತ್ತದೆ. ಎರಡು ತಿಂಗಳವರೆಗೆ ಯುದ್ಧ ನಡೆದರೆ ಭಾರಿ ಹೊಡೆತ ನೀಡಲಿದೆ. ಚೀನಾ, ರಷ್ಯಾ ಇರಾನ್‌ಗೆ ಬೆಂಬಲ ನೀಡಿದರಂತೂ ಯುದ್ಧದ ಭೀಕರತೆ ಹಾಗೂ ಅವಧಿ ಹೆಚ್ಚಾಗಿ ಅಂದಾಜಿಗೂ ಸಿಗದಷ್ಟು ಹೊಡೆತ ನಮ್ಮ ದೇಶಕ್ಕೂ ಬೀಳಲಿದೆ.