ಬೆಂಗಳೂರು ನಗರದಲ್ಲಿ ವರ್ಷಕ್ಕೆ 20000 ನಾಯಿ ದಾಳಿ ಪ್ರಕರಣ ದಾಖಲು

KannadaprabhaNewsNetwork |  
Published : Jul 31, 2025, 01:48 AM ISTUpdated : Jul 31, 2025, 09:37 AM IST
stray dog attack

ಸಾರಾಂಶ

 ನಗರದ ಬೀದಿ ನಾಯಿಗಳ ಹಾವಳಿ ಇತ್ತೀಚೆಗೆ ಮೇರೆ ಮೀರುತ್ತಿದ್ದು, ವೃದ್ಧರು, ಮಕ್ಕಳು, ಮಹಿಳೆಯರು ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ. ಪ್ರತಿ ವರ್ಷ ಸರಾಸರಿ 20 ಸಾವಿರಕ್ಕೂ ಅಧಿಕ ಮಂದಿ ಬೀದಿ ನಾಯಿಗಳ ದಾಳಿಗೆ ತುತ್ತಾಗುವ ಭಯಾನಕ ಸ್ಥಿತಿ ಸೃಷ್ಟಿಯಾಗಿದೆ.

 ಬೆಂಗಳೂರು :  ಬಿಬಿಎಂಪಿ ಅಧಿಕಾರಿಗಳು ಬಿರಿಯಾನಿ ದಾಸೋಹಕ್ಕೆ ಸಜ್ಜಾಗಿರುವ ನಗರದ ಬೀದಿ ನಾಯಿಗಳ ಹಾವಳಿ ಇತ್ತೀಚೆಗೆ ಮೇರೆ ಮೀರುತ್ತಿದ್ದು, ವೃದ್ಧರು, ಮಕ್ಕಳು, ಮಹಿಳೆಯರು ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ. ಪ್ರತಿ ವರ್ಷ ಸರಾಸರಿ 20 ಸಾವಿರಕ್ಕೂ ಅಧಿಕ ಮಂದಿ ಬೀದಿ ನಾಯಿಗಳ ದಾಳಿಗೆ ತುತ್ತಾಗುವ ಭಯಾನಕ ಸ್ಥಿತಿ ಸೃಷ್ಟಿಯಾಗಿದೆ.

ಅಷ್ಟೇ ಅಲ್ಲ ರಾತ್ರಿ ವೇಳೆ ದ್ವಿಚಕ್ರವಾಹನ ಚಾಲಕರನ್ನು ಅಟ್ಟಾಡಿಸುವ ಈ ಶ್ವಾನ ಸಂಕುಲದ ಬಗ್ಗೆ ಹಲವು ಬಡಾವಣೆಗಳಲ್ಲಿ ಭಯದ ವಾತಾವರಣವಿದೆ. ಒಂದು ಲೆಕ್ಕಾಚಾರದ ಪ್ರಕಾರ ಕಳೆದ ಐದು ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಶ್ವಾನ ದಾಳಿಗೆ ಒಳಗಾಗಿದ್ದಾರೆ.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಾಯಿ ಕಾಟವಿದ್ದರೂ ಅದರ ಬಗ್ಗೆ ಚಕಾರವೆತ್ತದ ಬಿಬಿಎಂಪಿಯ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಉತ್ತರ ಭಾರತೀಯರ ಪ್ರಭಾವಕ್ಕೆ ಸಿಲುಕಿ ಬೀದಿ ನಾಯಿಗಳಿಗೆ ಮಾಂಸದ ಆಹಾರ ಕೊಟ್ಟು ಮತ್ತಷ್ಟು ಪೋಷಿಸುವ ಕಾರ್ಯಕ್ಕೆ ಮುಂದಾಗಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ರಸ್ತೆ, ಪಾರ್ಕ್‌, ಆಟದ ಮೈದಾನ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಜನರು ನಿರ್ಭಯವಾಗಿ ಓಡಾಡುವುದು ಕಷ್ಟವಾಗಿದ್ದು, ಎಲ್ಲಿ ಯಾವಾಗ ನಾಯಿಗಳು ದಾಳಿ ನಡೆಸುತ್ತವೆ ಎಂಬ ಆತಂಕದಲ್ಲಿಯೇ ಓಡಾಡಬೇಕಿದೆ. ಕೇವಲ ನಡೆದುಕೊಂಡು ಓಡಾಡುವವರಿಗೆ ಮಾತ್ರವಲ್ಲ. ಬೈಕ್‌, ಸೈಕಲ್‌ನಲ್ಲಿ ಸಂಚರಿಸುವವರ ಮೇಲೆಯೂ ಬೀದಿ ನಾಯಿಗಳು ಬೆನ್ನಟ್ಟಿ ದಾಳಿ ನಡೆಸಿ ಅಪಾಯ ಉಂಟು ಮಾಡುತ್ತಿರುವ ಹಲವು ಪ್ರಕರಣ ಕಣ್ಮುಂದಿವೆ. ಕೆಲವರ ಪ್ರಾಣಕ್ಕೂ ಬೀದಿ ನಾಯಿಗಳ ಕಂಟಕ ತಂದೊಡ್ಡಿವೆ. ಆದರೂ ಬಿಬಿಎಂಪಿಯ ಅಧಿಕಾರಿಗಳು ಬೀದಿ ನಾಯಿಗಳಿಗೆ ಚಿಕನ್‌ ರೈಸ್‌ ನೀಡುವ ಯೋಜನೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಅಧಿಕಾರ ಶಾಹಿ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಐದು ವರ್ಷದಲ್ಲಿ 1 ಲಕ್ಷ ಮಂದಿ ಮೇಲೆ ದಾಳಿ:ಬಿಬಿಎಂಪಿಯ ವ್ಯಾಪ್ತಿಯಲ್ಲಿ 2020-21ರಿಂದ 2024-25ನೇ ಸಾಲಿನ ಸೆಪ್ಟಂಬರ್‌ ಅಂತ್ಯದವರೆಗೆ ಬರೋಬ್ಬರಿ 1.01 ಲಕ್ಷ ಮಂದಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಇನ್ನು ಪ್ರಸಕ್ತ 2025ರ ಮೊದಲ ಆರು ತಿಂಗಳಲ್ಲಿ 13,831 ಬೀದಿ ನಾಯಿ ದಾಳಿ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಬಿಬಿಎಂಪಿಯ ಪೂರ್ವ ಮತ್ತು ಪಶ್ಚಿಮ ವಲಯದ ವಾರ್ಡ್‌ಗಳಲ್ಲಿಯೇ ಹೆಚ್ಚಾಗಿ ದಾಳಿ ಕಂಡು ಬಂದಿವೆ.

ನಿಯಂತ್ರಣ ಹೆಸರಿನಲ್ಲಿ ಕೋಟಿಗಟ್ಟಲೇ ವೆಚ್ಚ:ನಗರದಲ್ಲಿ ಬರೋಬ್ಬರಿ 2.79 ಲಕ್ಷ ಬೀದಿ ನಾಯಿಗಳಿದ್ದು, ಪ್ರತಿ ವರ್ಷ ನಗರದಲ್ಲಿರುವ ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ 9 ಕೋಟಿ ರು. ಹಾಗೂ ಆ್ಯಂಟಿ ರೇಬಿಸ್‌ ಲಸಿಕೆ ಹಾಕುವುದಕ್ಕೆ 5.18 ಕೋಟಿ ರು. ವರೆಗೆ ವೆಚ್ಚ ಮಾಡಲಾಗುತ್ತಿದೆ. ಆದರೂ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಒಂದು ಕಡೆ ಬೀದಿ ನಾಯಿಗಳ ನಿಯಂತ್ರಣ ಹೆಸರಿನಲ್ಲಿ ವೆಚ್ಚ ಮಾಡುತ್ತಿರುವ ಬಿಬಿಎಂಪಿಯು ಮತ್ತೊಂದು ಕಡೆ ಬೀದಿ ನಾಯಿಗಳಿಗೆ ಮಾಂಸ ಆಹಾರ ನೀಡುವ ಮೂಲಕ ಫೋಷಣೆ ಮಾಡುವ ಕೆಲಸಕ್ಕೆ ಕೈ ಹಾಕಿದೆ.

ಆಹಾರ ವಿತರಣೆಗಿರುವಷ್ಟು ಕಾಳಜಿ ಪರಿಹಾರಕ್ಕಿಲ್ಲ?:

ಬೀದಿ ನಾಯಿಗಳ ದಾಳಿಗೆ ಒಳಗಾದವರಿಗೆ ಬಿಬಿಎಂಪಿಯಿಂದ ಪರಿಹಾರ ನೀಡಬೇಕೆಂದು ಹೈಕೋರ್ಟ್‌ ನಿರ್ದೇಶಿಸಿದೆ. ಆದರೆ, ಈ ಬಗ್ಗೆ ಬಿಬಿಎಂಪಿಯ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಿಲ್ಲ. ಹಾಗಾಗಿ, ಕಳೆದ ಎರಡು ವರ್ಷದಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ಬೀದಿ ನಾಯಿಗಳ ದಾಳಿಗೆ ತುತ್ತಾಗಿದ್ದರೂ ಈವರೆಗೆ ಕೇವಲ 20 ಮಂದಿಗೆ ಮಾತ್ರ ಬಿಬಿಎಂಪಿಯಿಂದ ಪರಿಹಾರ ನೀಡಲಾಗಿದೆ.

ಮತ್ತೊಂದು ಕಡೆ ಸುಪ್ರೀಂ ಕೋರ್ಟ್‌ ಆದೇಶವಿಟ್ಟುಕೊಂಡು ಬೀದಿ ನಾಯಿಗಳಿಗೆ ಮಾಂಸದ ಆಹಾರ ನೀಡುವುದಕ್ಕೆ ಮುಂದಾಗಿದೆ. ಆದರೆ, ಅಷ್ಟೇ ಕಾಳಜಿ ನಾಯಿ ದಾಳಿಯ ಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕಿಲ್ಲ ಎಂಬುದು ವಾಸ್ತವ ಸಂಗತಿಯಾಗಿದೆ.

ನಾಯಿ ದಾಳಿಗೆ ಪರಿಹಾರ ಎಷ್ಟು ಗೊತ್ತಾ?:

ನಾಯಿ ಕಡಿತದಿಂದ ತರಚಿದ ಗಾಯವಾದರೆ ಪ್ರತಿ ಗಾಯಕ್ಕೆ ತಲಾ 2 ಸಾವಿರ ರು. ಆಳವಾದ ಗಾಯವಾದರೆ ತಲಾ 3 ಸಾವಿರ ರು. ಗಾಯಗಳ ಸಂಖ್ಯೆ ಹೆಚ್ಚಾಗಿದ್ದರೆ 10 ಸಾವಿರ ರು. ಹಾಗೂ ಬಿಬಿಎಂಪಿಯಿಂದ ವೈದ್ಯಕೀಯ ಚಿಕಿತ್ಸೆ ವೆಚ್ಚ ಭರಿಸುವುದಕ್ಕೆ ಅವಕಾಶವಿದೆ. ಒಂದು ವೇಳೆ ನಾಯಿ ದಾಳಿಯಿಂದ ಮಕ್ಕಳು ಮೃತಪಟ್ಟರೆ 50 ಸಾವಿರ ರು., ವಯಸ್ಕರು ಮೃತಪಟ್ಟರೆ 1 ಲಕ್ಷ ರು. ಪರಿಹಾರ ನೀಡುವುದಕ್ಕೆ ಅವಕಾಶವಿದೆ.

PREV
Read more Articles on

Recommended Stories

100 ರೊಟ್ಟಿಯಿಂದ ಶುರುವಾದ ವ್ಯಾಪಾರ 10 ದೇಶಗಳಲ್ಲಿ ವಿಸ್ತರಣೆ
'ವಕೀಲರ ಅಂಕಪಟ್ಟಿ ಪರಿಶೀಲನೆ ಅಧಿಕಾರ ಇದೆ'