ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು : ಹೆಬ್ಬಾಳದ ಜಿಕೆವಿಕೆಯಲ್ಲಿ ನ.13 ರಿಂದ 16 ರವರೆಗೂ ಆಯೋಜಿಸಲಿರುವ ಬಹುನಿರೀಕ್ಷಿತ ‘ಕೃಷಿ ಮೇಳ’ದಲ್ಲಿ ಉತ್ಕೃಷ್ಟ ‘ನೀಲಿ ತಿರುಳ’ನ್ನು ಹೊಂದಿರುವ ಅರಿಶಿಣ ಸೇರಿದಂತೆ ಐದು ನೂತನ ತಳಿಗಳು ಲೋಕಾರ್ಪಣೆಯಾಗಲಿವೆ.ಕಪ್ಪು ಅರಿಶಿಣದ ಸಿಎಚ್‌ಎನ್‌ಬಿಟಿ-1 ತಳಿಯನ್ನು ವಿವಿ ಸಂಶೋಧಿಸಿದ್ದು ‘ಉತ್ಕೃಷ್ಟ ನೀಲಿ ತಿರುಳ’ನ್ನು ಹೊಂದಿರುವುದು ಇದರ ವಿಶೇಷವಾಗಿದೆ. ದಪ್ಪ ಗೆಡ್ಡೆ ಹೊಂದಿದ್ದು ಹೆಕ್ಟೇರ್‌ಗೆ 8 ರಿಂದ 10 ಟನ್ ಇಳುವರಿ ನೀಡಲಿದೆ. 255 ರಿಂದ 265 ದಿನಗಳಲ್ಲಿ ಕಟಾವಿಗೆ ಬರಲಿದೆ. ಎಲೆಯ ಪ್ರಮಾಣ ಹೆಚ್ಚಾಗಿದ್ದು ಉತ್ತಮ ಹರವನ್ನು ಹೊಂದಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ನೀಲಿ ತಿರುಳನ್ನು ಹೊಂದಿರುವ ಈ ಅರಿಶಿಣದಲ್ಲಿ ಔಷಧೀಯ ಗುಣಗಳು ಹೆಚ್ಚಾಗಿದ್ದು, ಸೇವನೆಯಿಂದ ರಕ್ತ ಪರಿಶುದ್ಧಗೊಳ್ಳುತ್ತದೆ. ಇದರಿಂದ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಸಕ್ಕರೆ ಕಾಯಿಲೆಯನ್ನು ನಿಯಂತ್ರಣಗೊಳಿಸುತ್ತದೆ ಎಂದು ವಿವಿಯ ತೋಟಗಾರಿಕಾ ತಜ್ಞರು ತಿಳಿಸಿದ್ದಾರೆ.
ಅರಿಶಿಣದ ಐಐಎಸ್‌ಆರ್ ಪ್ರತಿಭಾ ತಳಿಯನ್ನೂ ವಿವಿ ಸಂಶೋಧಿಸಿದ್ದು ಕಡಿಮೆ ಅವಧಿಯಲ್ಲಿ ಬೆಳೆ ಬರುವುದು ಇದರ ವಿಶೇಷವಾಗಿದೆ. 240 ರಿಂದ 245 ದಿನಗಳಲ್ಲಿ ಕಟಾವಿಗೆ ಬರಲಿದ್ದು ಉತ್ಕೃಷ್ಟ ಕೆಂಪು ಹಳದಿ ಬಣ್ಣದ ತಿರುಳು ಹೊಂದಿದೆ. ಹೆಕ್ಟೇರ್‌ಗೆ 34 ರಿಂದ 36 ಟನ್ ಇಳುವರಿ ಬರಲಿದೆ. ಉತ್ತಮ ಗುಣಮಟ್ಟವೂ ಇದೆ ಎಂದು ವಿವಿ ತಿಳಿಸಿದೆ.
ಅಧಿಕ ಇಳುವರಿಯ ಹರಳು:
ಒಣ ಬೇಸಾಯಕ್ಕೆ ಸೂಕ್ತವಾದ ಅಧಿಕ ಇಳುವರಿ ನೀಡುವ ಬಿಸಿಎಚ್-162 ಹರಳು ತಳಿಯನ್ನೂ ವಿವಿ ಸಂಶೋಧಿಸಿದೆ. ಹೆಕ್ಟೇರ್‌ಗೆ 15 ರಿಂದ 20 ಕ್ವಿಂಟಲ್ ಇಳುವರಿ ನೀಡಲಿದ್ದು ಶೇ.47 ರಿಂದ 48 ರಷ್ಟು ಎಣ್ಣೆ ಅಂಶವನ್ನು ಹೊಂದಿದೆ. ಪ್ರಥಮ ಗೊಂಚಲು ಮಾಗಲು ಸುಮಾರು 95 ದಿನಗಳನ್ನು ತೆಗೆದುಕೊಳ್ಳುತ್ತದೆ. ಕಾಳು ಸಿಡಿಯುವಿಕೆಗೆ ನಿರೋಧಕತೆಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿ ನೀಡಿದ ತಳಿ ವಿಜ್ಞಾನಿ ಡಾ.ಯಮನೂರ, ಈ ಹಿಂದಿನ ಐಸಿಎಚ್-66 ತಳಿಯು ಎಕರೆಗೆ 5 ರಿಂದ 6 ಕ್ವಿಂಟಲ್ ಇಳುವರಿ ನೀಡುತ್ತಿತ್ತು. ಗಂಡು ಹೂವುಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಕಾಳುಗಳು ಗೊನೆಯಲ್ಲಿ ಪೂರ್ಣವಾಗಿ ಕಟ್ಟುತ್ತಿರಲಿಲ್ಲ. ಆದರೆ ಬಿಸಿಎಚ್-162 ಹರಳು ತಳಿಯಲ್ಲಿ ಗಂಡು ಹೂವುಗಳ ಸಂಖ್ಯೆ ಕಡಿಮೆ ಇರಲಿದ್ದು ಕಾಯಿಗಳು ಹೆಚ್ಚಾಗಲಿವೆ. ಆದ್ದರಿಂದ ಎಕರೆಗೆ 6 ರಿಂದ 8 ಕ್ವಿಂಟಲ್ ಇಳುವರಿ ಬರಲಿದೆ ಎಂದು ಸ್ಪಷ್ಟಪಡಿಸಿದರು.
ಅಧಿಕ ಇಳುವರಿ ನೀಡುವ ಜೋಳ, ಸೂರ್ಯಕಾಂತಿ
ಹೆಚ್ಚು ಇಳುವರಿ ನೀಡುವ ಜೋಳ, ಸೂರ್ಯಕಾಂತಿಯ ತಳಿಗಳನ್ನೂ ಸಹ ಕೃಷಿ ವಿವಿ ಸಂಶೋಧಿಸಿದೆ. ಮಧ್ಯಮ ಎತ್ತರದ ಮಧ್ಯಮಾವಧಿಯ ಜೋಳದ ಸಿಎನ್‌ಜಿಎಸ್-1 ತಳಿಯನ್ನು ಸಂಶೋಧಿಸಿದ್ದು 100 ರಿಂದ 105 ದಿನಗಳಲ್ಲಿ ಕಟಾವಿಗೆ ಬರಲಿದೆ. ಪ್ರತಿ ಹೆಕ್ಟೇರ್‌ಗೆ ಸುಮಾರು 39 ರಿಂದ 42 ಕ್ವಿಂಟಲ್ ಜೋಳ ಮತ್ತು 30 ರಿಂದ 33 ಟನ್ ಮೇವಿನ ಇಳುವರಿ ಪಡೆಯಬಹುದು. ಕಟಾವಿನ ಸಮಯದಲ್ಲೂ ಗಿಡ ಹಸಿರಿನಿಂದ ಕೂಡಿರುವುದು ಇದರ ವಿಶೇಷವಾಗಿದೆ.
84 ರಿಂದ 86 ದಿನಗಳಲ್ಲಿ ಕಟಾವಿಗೆ ಬರುವ ಸೂರ್ಯಕಾಂತಿಯ ಕೆಬಿಎಸ್‌ಎಚ್-88 ತಳಿಯನ್ನು ಲೋಕಾರ್ಪಣೆ ಮಾಡುತ್ತಿದ್ದು ಕೇದಿಗೆ ರೋಗಕ್ಕೆ ನಿರೋಧಕ ಶಕ್ತಿಯನ್ನು ಇದು ಒಳಗೊಂಡಿದೆ. ಹೆಕ್ಟೇರ್‌ಗೆ 22 ರಿಂದ 24 ಕ್ವಿಂಟಲ್ ಇಳುವರಿ ಬರಲಿದ್ದು ಎಣ್ಣೆಯೂ ಅಧಿಕವಾಗಿ ಬರಲಿದೆ ಎಂದು ಕೃಷಿ ವಿವಿ ತಿಳಿಸಿದೆ.
ಔಷಧೀಯ ಗುಣದ ಅರಿಶಿಣಕಪ್ಪು ಅರಿಶಿಣದ ಸಿಎಚ್‌ಎನ್‌ಬಿಟಿ-1 ತಳಿಯು ಔಷಧೀಯ ಗುಣಗಳನ್ನು ಒಳಗೊಂಡಿದೆ. ನೀಲಿ ತಿರುಳನ್ನು ಹೊಂದಿರುವುದು ಇದರ ವಿಶೇಷವಾಗಿದೆ. ಕೃಷಿ ಮೇಳದಲ್ಲಿ ಈ ತಳಿ ಲೋಕಾರ್ಪಣೆಯಾಗಲಿದೆ.- ಡಾ.ಎ.ಬಿ. ಮೋಹನ್‌ಕುಮಾರ್, ತೋಟಗಾರಿಕಾ ತಜ್ಞ